ಪ್ರಸ್ತುತ ಸಂದರ್ಭದಲ್ಲಿ ಅರ್ಥವ್ಯವಸ್ಥೆಯನ್ನು ಸರಿದಾರಿಗೆ ತರಬಲ್ಲ ಸೂತ್ರಗಳಲ್ಲಿ ಬ್ರಿಕ್ & ಕ್ಲಿಕ್ ಮಾಡೆಲ್ ಕೂಡಾ ಒಂದು. ಬ್ರಿಕ್ & ಕ್ಲಿಕ್ ಮಾಡೆಲ್ ಹೆಸರಿನಲ್ಲಿರುವ (ಬ್ರಿಕ್) ಇಟ್ಟಿಗೆ, ಭೌತಿಕ ಅಂಗಡಿ ಮಳಿಗೆಯನ್ನು ಸೂಚಿಸಿದರೆ, “ಕ್ಲಿಕ್’ ಆನ್‌ಲೈನ್ ಅವಲಂಬನೆಯನ್ನು ಸೂಚಿಸುತ್ತದೆ.
ಅರ್ಥವ್ಯವಸ್ಥೆಯನ್ನು ಸರಿದಾರಿಗೆ ತರುವ ಉದ್ದೇಶದಿಂದ ಲಾಕ್‌ಡೌನ್ ಸಡಿಲಿಸಲಾಗಿದೆ. ಮುಂದಿನ ದಿನಗಳಲ್ಲಿ, ಮಾರುಕಟ್ಟೆ ನಿಧಾನವಾಗಿ ತೆರೆದುಕೊಳ್ಳಲಿದೆ. ಸ್ಥಗಿತಗೊಂಡಿದ್ದ ವ್ಯಾಪಾರ ವಹಿವಾಟು, ಸಾಂಗವಾಗಿ ಶುರುವಾಗಲಿದೆ. ಅಂಗಡಿ, ಮಳಿಗೆ, ವ್ಯಾಪಾರ ಕೇಂದ್ರಗಳು ಈಗ ಸಂದರ್ಭಕ್ಕೆ ತಕ್ಕಂತೆ ಬದಲಾಗಬೇಕಿದೆ. ಅವುಗಳಲ್ಲೊಂದು, “ಬ್ರಿಕ್ & ಕ್ಲಿಕ್’ ಮಾಡೆಲ್ ಅನ್ನು ಅಳವಡಿಸಿಕೊಳ್ಳುವುದು. ಇದರಲ್ಲಿ, ಯಾವುದೇ ಒಂದು ವ್ಯಾಪಾರ ವಹಿವಾಟು, ಭೌತಿಕ ಮಳಿಗೆ ಮತ್ತು ಆನ್‌ಲೈನ್, ಎರಡೂ ಕಡೆಗಳಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ.
ಬದಲಾವಣೆ ಸನ್ನಿಹಿತ: ಲಾಕ್‌ಡೌನ್‌ನಿಂದಾಗಿ ಅಂಗಡಿ ಮಳಿಗೆಗಳು ಮಾತ್ರವಲ್ಲ; ಆನ್‌ಲೈನ್ ಬಿಝಿನೆಸ್ಸುಗಳು ಕೂಡಾ ನಲುಗಿಹೋಗಿವೆ. ಮಾರುಕಟ್ಟೆ ತಜ್ಞರು ಹೇಳುವಂತೆ, ಮಾರ್ಚ್ 25 ಮತ್ತು ಏಪ್ರಿಲ್ 14ರ ನಡುವೆಯೇ, ಭಾರತದ ಆರ್ಥಿಕತೆಗೆ ಏನಿಲ್ಲವೆಂದರೂ 7- 8 ಲಕ್ಷ ಕೋಟಿ ನಷ್ಟವಾಗಿದೆ. ಕೊರೊನಾ ವೈರಸ್ಸಿನ ಅಟ್ಟಹಾಸಕ್ಕೆ ಕೊನೆಯೇ ಇಲ್ಲವಾಗಿದೆ. ವೈರಸ್ಸಿನಿಂದ ಗುಣಮುಖರಾ ದವರು ಮತ್ತೆ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವ ಬಗ್ಗೆ ಈಗಾಗಲೇ ವರದಿಗಳು ಬರುತ್ತಿವೆ. ಹಾಗಾಗಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಲಾಕ್ ಡೌನ್‌ನಂಥ ಕ್ರಮಗಳು ಮುಂದೆಯೂ ಅನಿವಾರ್ಯ ಆಗಲಿವೆ. ಇವೆಲ್ಲಾ ಕಾರಣಗಳಿಂದಾಗಿ, ಬ್ರಿಕ್ ಮತ್ತು ಕ್ಲಿಕ್‌ನಂಥ ಮಾಡೆಲ್ ಅನ್ನು ಅನುಸರಿಸಬೇಕಾಗಿ ಬರುವುದು. ಅಂದರೆ ಬಿಝಿನೆಸ್ ಉಳಿವಿಗಾಗಿ ಇಂಟರ್‌ನೆಟ್ ಅನ್ನೇ ಪೂರ್ಣ ಪ್ರಮಾಣದಲ್ಲಿ ನೆಚ್ಚಿಕೊಳ್ಳಬೇಕಾಗಿ ಬರುವುದು.
ಬಿಝಿನೆಸ್ ಉಳಿವಿಗೆ: ಬ್ರಿಕ್ & ಕ್ಲಿಕ್ ಅಂದರೆ, ಹೆಸರೇ ಸೂಚಿಸುವಂತೆ ಇಟ್ಟಿಗೆ ಮತ್ತು ಇಂಟರ್ ನೆಟ್ ಇಟ್ಟಿಗೆ, ಅಂಗಡಿ ಮಳಿಗೆಗಳನ್ನು ಸೂಚಿಸುತ್ತದೆ. ಕ್ಲಿಕ್-ಆನ್‌ಲೈನ್ ಅನ್ನು ಸೂಚಿಸುತ್ತದೆ. ಬ್ರಿಕ್ & ಕ್ಲಿಕ್ ಮಾಡೆಲ್ ಯಾವುದೇ ಬ್ರ್ಯಾಂಡ್‌ಗೆ, ಗ್ರಾಹಕರ ಜೊತೆ ಸಂಪರ್ಕ ಸಾಧಿಸಲು ಮೂರು ಆಯ್ಕೆಗಳನ್ನು ನೀಡುತ್ತದೆ. ಆನ್‌ಲೈನ್, ಆಫ್ ಲೈನ್ ಮತ್ತು ಇವೆರಡೂ. ನಮ್ಮಲ್ಲಿ ಅನೇಕರು, ಆನ್‌ಲೈನಿನಲ್ಲಿ ವಸ್ತುಗಳನ್ನು ಬ್ರೌಸ್ ಮಾಡಿದರೂ, ಅಂಗಡಿಗೇ ಬಂದು ಖರೀದಿಸುತ್ತಾರೆ. ಫ್ಯಾಷನ್ ಉತ್ಪನ್ನಗಳು, ಎಲೆಕ್ಟ್ರಾನಿಕ್ ವಸ್ತುಗಳು, ಆಟೊಮೊಬೈಲ್, ಪೀಠೊಪಕರಣಗಳು ಇವೆಲ್ಲಾ, ಆ ರೀತಿಯಾಗಿ ಖರೀದಿಸಲ್ಪಡುವ ವಸ್ತುಗಳಲ್ಲಿ ಸೇರಿವೆ.
ಉದ್ಯೋಗಾವಕಾಶ ಸೃಷ್ಟಿ: ಇ ಕಾಮರ್ಸ್ ಕ್ಷೇತ್ರದ ಬೆಳವಣಿಗೆಯೇ ಇರಬಹುದು. ಸಣ್ಣ ಹಾಗೂ ಮಧ್ಯಮ ವರ್ಗದ ವ್ಯಾಪಾರಿಗಳ ಜೊತೆಗಿನ ಒಪ್ಪಂದವೇ ಇರಬಹುದು. ಬ್ರಿಕ್ & ಕ್ಲಿಕ್ ಮಾಡೆಲ್ ಅನುಸರಿಸುವುದರಿಂದ, ದೇಶದಲ್ಲಿ ಉದ್ಯೋಗ ಸೃಷ್ಟಿ ಆಗಲಿದೆ. ಕಾಲಕ್ಕೆ ತಕ್ಕಂತೆ ನಾವೂ ಬದಲಾಗಬೇಕು.