ಬೆಂಗಳೂರು: ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿ ಹೊಸದಾಗಿ ವೈನ್ ಶಾಪ್ ಗಳಿಗೆ ಸನ್ನದುಗಳನ್ನು ನೀಡುವುದರಿಂದ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಬೆಂಗಳೂರು ನಗರ ಜಿಲ್ಲಾ ಮದ್ಯ ವ್ಯಾಪಾರಿಗಳ ಸಂಘ ದೂರಿದೆ.
ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆ ಬಳಿಕ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಲೋಕೇಶ್, ಗೌರವಾಧ್ಯಕ್ಷ ಎಂ.ರಾಮಚಂದ್ರಪ್ಪ, ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿ ಹೊಸದಾಗಿ ವೈನ್ ಶಾಪ್ ಗಳಿಗೆ ಸನ್ನದುಗಳನ್ನು ನೀಡುವುದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಸರ್ಕಾರ ಹೊಸ ಕಾನೂನುಗಳನ್ನು ಜಾರಿ ಮಾಡಿರುವುದರಿಂದ ವ್ಯಾಪಾರಕ್ಕೆ ಮತ್ತಷ್ಟು ತೊಂದರೆ ಉಂಟಾಗಿದೆ ಎಂದು ತಿಳಿಸಿದರು.
ಹೊಸ ನಿಯಮದ ಪ್ರಕಾರ 36 ಸಾವಿರ ಕೋಟಿ ರೂ. ಆದಾಯ ಸಂಗ್ರಹದ ಗುರಿ ಹಮ್ಮಿಕೊಂಡಿದೆ. ಅಬಕಾರಿ ಇಲಾಖೆ ಅಧಿಕಾರಿಗಳ ಭ್ರಷ್ಟಾಚಾರದ ಉಪಟಳ ಕೂಡ ಹೆಚ್ಚಾಗಿದೆ. ನಾವು ನಮ್ಮ ಅಂಗಡಿಗಳನ್ನು ನಡೆಸುವುದು ಕಷ್ಟವಾಗುತ್ತಿದೆ. ಸಿಎಲ್ 2, ಬಾರ್‌ಗಳಲ್ಲಿ ಪಾರ್ಸಲ್‌ಗಳಿಗೆ ಅವಕಾಶ ನೀಡಬೇಕಿದೆ. ಜೊತೆಗೆ ಆರ್‌ಟಿಐ ಹಾವಳಿ ತಡೆಗಟ್ಟಬೇಕಾಗಿದೆ ಎಂದು ಹೇಳಿದರು.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ಅಬಕಾರಿ ಇಲಾಖೆಯಲ್ಲಿನ ಲಂಚಾವತಾರಕ್ಕೆ ಕಡಿವಾಣ ಹಾಕುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಅಬಕಾರಿ ಇಲಾಖೆಯಲ್ಲಿ ಲಂಚಾವತಾರ ಮಿತಿ ಮೀರಿದೆ. ಲೈಸೆನ್ಸ್ ಶುಲ್ಕವನ್ನು ಕಾಲಕ್ಕೆ ಸರಿಯಾಗಿ ಪಾವತಿಸಿದರೂ ಅಧಿಕಾರಿಗಳಿಗೆ ಲಂಚ ಕೊಡಲೇಬೇಕಿದೆ. ಹೊರ ರಾಜ್ಯಗಳಿಂದ ಪಾರ್ಸಲ್ ಮದ್ಯ ಪೂರೈಕೆಗೂ ಕಡಿವಾಣ ಹಾಕಬೇಕಿದೆ ಎಂದು ಆಗ್ರಹಿಸಿದರು.