Advertisement

ವಿಕಾಸಸೌಧದಲ್ಲಿಯೇ ಲಂಚದ ಡೀಲ್‌: ಆರೋಪಿಗಳ ಬಂಧನ

06:25 AM Jan 16, 2019 | Team Udayavani |

ಬೆಂಗಳೂರು: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ವಂಚನೆ ಮಾಡಿರುವ ಸಂಬಂಧ ವಿಧಾನಸೌಧ ಪೊಲೀಸರು ಬಂಧಿಸಲಾಗಿರುವ ಮೂವರು ಆರೋಪಿಗಳು ವಿಕಾಸಸೌಧದಲ್ಲಿಯೇ ಡೀಲ್‌ ಕುದುರಿಸುತ್ತಿದ್ದರು ಎಂಬುದು ವಿಚಾರಣೆಯಲ್ಲಿ ತಿಳಿದು ಬಂದಿದೆ.

Advertisement

ಬಂಧನಕ್ಕೊಳಗಾಗಿರುವ ಆರೋಗ್ಯ ಇಲಾಖೆ ಉಪಕಾರ್ಯದರ್ಶಿ ರಾಮಚಂದ್ರಯ್ಯ, ಅನುದಾನಿತ ಪಿಯು ಕಾಲೇಜಿನ ಉಪನ್ಯಾಸಕ ದೇವರಾಜ್‌, ಖಾಸಗಿ ಶಾಲಾ ಶಿಕ್ಷಕ ಲಕ್ಷ್ಮೀನಾರಾಯಣ, ಚನ್ನಪಟ್ಟಣದ ಶ್ರೀಕಂಠಯ್ಯ ಸೇರಿ ನಾಲ್ವರಿಗೆ ವಂಚಿಸಿದ್ದಾರೆ.

ದೂರುದಾರ ಶ್ರೀಕಂಠಯ್ಯ ಅವರಿಗೆ 2016ರಲ್ಲಿ ಸ್ನೇಹಿತರೊಬ್ಬರ ಮೂಲಕ ಲಕ್ಷ್ಮೀನಾರಾಯಣ್‌ ಪರಿಚಯವಾಗಿದೆ. ಪದವಿ ಪೂರೈಸಿದ್ದ ಶ್ರೀಕಂಠಯ್ಯ ಅವರ ಸಹೋದರಿ ಅಂಜನಾ ಅವರು ಸರ್ಕಾರಿ ಹುದ್ದೆ ಆಕಾಂಕ್ಷಿಯಾಗಿದ್ದು, ಸ್ಫರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು.

ಈ ಮಾಹಿತಿ ತಿಳಿದುಕೊಂಡಿದ್ದ ಲಕ್ಷ್ಮೀನಾರಾಯಣ್‌, ಆರೋಗ್ಯ ಇಲಾಖೆ ಉಪಕಾರ್ಯದರ್ಶಿ ರಾಮಚಂದ್ರಯ್ಯ ಅವರ ಮೂಲಕ, ಅಂಬೇಡ್ಕರ್‌ ಅಭಿವೃದ್ಧಿ ನಿಗಮ ಹಾಗೂ ದೇವರಾಜು ಅರಸು ನಿಗಮದಲ್ಲಿ ಪ್ರಥಮ ದರ್ಜೆ ಸಹಾಯಕ (ಎಫ್ಡಿಎ) ಹುದ್ದೆ ಕೊಡಿಸುವುದಾಗಿ ಹೇಳಿದ್ದರು. ಇದೇ ವಿಚಾರಕ್ಕೆ ರಾಮಚಂದ್ರಯ್ಯ, ದೇವರಾಜ್‌ ಹಾಗೂ ಲಕ್ಷ್ಮೀನಾರಾಯಣ್‌ ಜತೆ ವಿಧಾನಸೌಧದಲ್ಲಿ ಮಾತುಕತೆ ನಡೆದು 12 ಲಕ್ಷ ರೂ. ನೀಡಿದರೆ ಆರು ತಿಂಗಳಲ್ಲಿ ಹುದ್ದೆ ಕೊಡಿಸುವುದಾಗಿ ಭರವಸೆ ನೀಡಿದ್ದರು.

ಕರಾರು: ಮೊದಲಹಂತದ ಅಡ್ವಾನ್ಸ್‌ ರೂಪದಲ್ಲಿ 2016ರ ಅ. 10ರಂದು ವಿಕಾಸಸೌಧದ ಕೆಳಮಹಡಿಯಲ್ಲಿ ಶ್ರೀಕಂಠಯ್ಯ ಅವರಿಂದ ಆರೋಪಿಗಳು 6 ಲಕ್ಷ ರೂ. ಪಡೆದಿದ್ದರು. ಬಳಿಕ ಅದೇ ರೀತಿ ಸತೀಶ್‌, ಪುಟ್ಟತಾಯಮ್ಮ, ಅಭಿಷೇಕ್‌ ಅವರಿಂದಲೂ ತಲಾ ಆರು ಲಕ್ಷ ರೂ. (18 ಲಕ್ಷ ರೂ.) ಪಡೆದುಕೊಂಡಿದ್ದರು.

Advertisement

ಉದ್ಯೋಗ ಕೊಡಿಸದಿದ್ದರೆ ಹಣ ವಾಪಸ್‌ ಕೊಡುವುದಾಗಿ ಆರೋಪಿಗಳು ಕರಾರು ಮಾಡಿಕೊಂಡಿದ್ದರು. ಆದರೆ,ಆರು ತಿಂಗಳಾದರೂ ಹುದ್ದೆ ಕೊಡಿಸದೆ ಸಬೂಬು ಹೇಳುತ್ತಿದ್ದರು. ಕಡೆಗೆ ಹುದ್ದೆಯೂ ಕೊಡಿಸದೇ ಹಣವೂ ವಾಪಸ್‌ ನೀಡದೆ ವಂಚಿಸಿರುವುದಾಗಿ ದೂರುದಾರರು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  

ಹಣ ಪಡೆದಿರುವುದು ಸಾಬೀತು: 24 ಲಕ್ಷ ರೂ.ಹಣದಲ್ಲಿ ರಾಮಚಂದ್ರಯ್ಯ 10 ಲಕ್ಷ ರೂ, ಲಕ್ಷ್ಮೀನಾರಾಯಣ 6 ಲಕ್ಷ ರೂ, ದೇವರಾಜು 8 ಲಕ್ಷ ರೂ. ಪಡೆದುಕೊಂಡಿರುವುದು ತನಿಖೆಯಿಂದ ಸಾಬೀತಾಗಿದೆ. ಸದ್ಯ ಲಕ್ಷ್ಮೀನಾರಾಯಣ ಹಾಗೂ ದೇವರಾಜು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು.

ಪ್ರಮುಖ ಆರೋಪಿ ರಾಮಚಂದ್ರಯ್ಯ ಅವರನ್ನು ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯದಿಂದ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಈ ಹಿಂದೆಯೂ ಹಲವರಿಗೆ ಸರ್ಕಾರಿ ಹುದ್ದೆ ಕೊಡಿಸುವ ಆಮಿಷವೊಡ್ಡಿ ಹಣ ಪಡೆದು ವಂಚಿಸಿರುವ ಆರೋಪ ಪ್ರಕರಣದಲ್ಲಿ ಉಪ್ಪಾರಪೇಟೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. 

ಮನವಿಗೆ ಸ್ಪಂದಿಸಿದ ಸಿಎಂ: 24 ಲಕ್ಷ ರೂ. ಕಳೆದುಕೊಂಡು ಕಂಗಾಲಾಗಿದ್ದ ಶ್ರೀಕಂಠಯ್ಯ ಹಾಗೂ ಮತ್ತಿತರರು ಈ ಕುರಿತು ಸಿಎಂ ಎಚ್‌.ಡಿ ಕುಮಾರಸ್ವಾಮಿ ಅವರನ್ನು ಜೆ.ಪಿ ನಗರದ ನಿವಾಸದಲ್ಲಿ ಜ.11ರಂದು ಬೆಳಗ್ಗೆ ಭೇಟಿಯಾಗಿ ಮನವಿಪತ್ರ ಸಲ್ಲಿಸಿದ್ದು, ಅಳಲು ತೋಡಿಕೊಂಡಿದ್ದಾರೆ. ಮನವಿ ಸ್ವೀಕರಿಸಿದ ಸಿಎಂ ಕೂಡಲೇ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸುವಂತೆ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ದೂರುದಾರರು ತಿಳಿಸಿದರು.

ಕುದುರೆ ರೇಸ್‌ನಲ್ಲಿ ಹಣ ಕಳೆದರು?: ಆರೋಪಿ ರಾಮಚಂದ್ರ, ಕುದುರೆ ರೇಸ್‌ ಹಾಗೂ ಜೂಜು ಪ್ರಿಯನಾಗಿದ್ದು, ವಂಚಿಸಿದ ಹಣವನ್ನೂ ಕುದುರೆ ರೇಸ್‌ನಲ್ಲಿ ಕಳೆದಿರುವುದಾಗಿ ಹೇಳುತ್ತಿದ್ದಾನೆ. ವಂಚನೆ ಹಣ ಏನು ಮಾಡಿದ ಎಂಬುದು ಖಚಿತವಾಗಿ ಹೇಳುತ್ತಿಲ್ಲ, ಆತನ ಪೂರ್ವಾಪರ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next