Advertisement

ಚನ್ನಣ್ಣನವರ್ ವಿರುದ್ಧ ಲಂಚದ ಆರೋಪ : ನಿಷ್ಕಳಂಕವಾಗಿ ಬರುತ್ತಾರೆ ಎಂದ ಶಶಿಕುಮಾರ್

05:35 PM Jan 15, 2022 | Team Udayavani |

ಮಂಗಳೂರು : ಲಂಚ ಪಡೆದ ಆರೋಪಕ್ಕೆ ಸಿಲುಕಿರುವ ಪೊಲೀಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಅವರ ಬೆಂಬಲಕ್ಕೆ ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿ ಕುಮಾರ್ ಅವರು ಬಂದಿದ್ದು, ನಿಷ್ಕಳಂಕಿತರಾಗಿ ಹೊರ ಬರುತ್ತಾರೆ ಎಂದು ಫೇಸ್ ಬುಕ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

Advertisement

”ಆರೋಪದ ಸತ್ಯಾಸತ್ಯತೆ ತಿಳಿಯುವ ಮುನ್ನ ಈ ರೀತಿ ತೀರ್ಮಾನಕ್ಕೆ ಬರುವುದು ತಪ್ಪು, ರವಿ ಚೆನ್ನಣ್ಣನವರ್ ಓರ್ವ ಜನಪ್ರಿಯ ಅಧಿಕಾರಿಯಾಗಿದ್ದು, ಅವರ ಬಗ್ಗೆ ಏನೇ ಮಾತನಾಡಿದರೂ ಸುದ್ದಿಯಾಗುವುದು ಹೌದು. ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಯುವಜನತೆಗೆ ಸ್ಪೂರ್ತಿಯಾಗಿರುವ ಅವರನ್ನು ನೇರವಾಗಿ ತಪ್ಪಿತಸ್ಥನ ಸ್ಥಾನದಲ್ಲಿ ನಿಲ್ಲಿಸುವುದು ಸರಿಯಲ್ಲ. ಸಾರ್ವಜನಿಕ ವಲಯದಲ್ಲಿ ಈ ರೀತಿ ಕೆಲಸ ಮಾಡುವಾಗ ಅಧಿಕಾರಿಗಳ ಮೇಲೆ ಆರೋಪಗಳು ಸಾಮಾನ್ಯ. ಅವೆಲ್ಲವೂ ನಿಜವಾಗಿರಬೇಕು ಎಂದೇನೂ ಇಲ್ಲ. ನಾನೂ ಸೇರಿದಂತೆ ಯಾವ ಅಧಿಕಾರಿಗಳು ಇದಕ್ಕೆ ಹೊರತಾಗಿ ಇಲ್ಲ. ಕಾಮೆಂಟ್ ಮಾಡುವಾಗ ಯಾರೂ ಲಕ್ಷ್ಮಣ ರೇಖೆ ದಾಟುವುದು ಸರಿಯಲ್ಲ. ಸತ್ಯ ಹೊರ ಬರಲಿದೆ ಹಾಗೂ ರವಿ ಚೆನ್ನಣ್ಣನವರ್ ಇವೆಲ್ಲದರಿಂದ ನಿಷ್ಕಳಂಕರಾಗಿ ಹೊರ ಬರುತ್ತಾರೆ ಎಂದು ಆಶಿಸುತ್ತೇನೆ” ಎಂದು ಬರೆದಿದ್ದಾರೆ.

ಖಡಕ್ ಪೊಲೀಸ್ ಅಧಿಕಾರಿ, ವಾಗ್ಮಿಯಾಗಿ ಖ್ಯಾತಿ ಪಡೆದಿರುವ ಸಿಐಡಿ ಎಸ್ ಪಿ ರವಿ ಡಿ. ಚನ್ನಣ್ಣನವರ್ ಸೇರಿದಂತೆ ನಾಲ್ವರು ಪೊಲೀಸ್ ಅಧಿಕಾರಿಗಳ ಮೇಲೆ ಆರೋಪಿಗಳಿಂದ 50 ಲಕ್ಷ ರೂ.ಲಂಚ ಪಡೆದಿರುವ ಗಂಭೀರ ಅರೋಪ ಕೇಳಿ ಬಂದಿದ್ದು,ಸಂತ್ರಸ್ತ ವ್ಯಕ್ತಿ ಸರ್ಕಾರದ ಮುಖ್ಯ ಕಾರ್ಯದರ್ಶಿ ದೂರು ಸಲ್ಲಿಸಿದ್ದು, ತನಿಖೆ ನಡೆಸುವಂತೆ ಒಳಾಡಳಿತ ಇಲಾಖೆಗೆ ಈಗಾಗಲೇ ಆದೇಶ ಮಾಡಲಾಗಿದೆ.

ಜಲ್ಲಿ ಕ್ರಷರ್ ವ್ಯವಹಾರದಲ್ಲಿ ವಂಚನೆ ಮಾಡಿದ್ದ ವ್ಯಕ್ತಿಯ ವಿರುದ್ಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಹಣ ಪಡೆದು ವಂಚನೆ ಮಾಡಿರುವ ಕುರಿತಾಗಿ ನೀಡಿದ ದೂರಿಗೆ ನ್ಯಾಯ ದೊರಕಿಸಿ ಕೊಡದೆ ಆರೋಪಿಗಳಿಂದ 50 ಲಕ್ಷ ರೂ. ಹಣ ಪಡೆದು ದೂರು ನೀಡಿದ ವ್ಯಕ್ತಿಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next