ಬಾಗೇಪಲ್ಲಿ: ಕ್ಷೇತ್ರದಲ್ಲಿ ಪಿಡಿಒಗಳ ಲಂಚ ಪ್ರಕರಣದಲ್ಲಿ ಅಮಾನತ್ತುಗೊಂಡಿರುವ ಅಧಿಕಾರಿಗಳು ಶಾಸಕರ ಮತ್ತು ಅವರ ಹೆಸರು ಪ್ರಸ್ತಾಪಿಸಿರುವ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ದ ಬಗ್ಗೆ ಶಾಸಕರು ನೈತಿಕ ಹೊಣೆಹೊತ್ತು ಉತ್ತರಿಸಬೇಕಿದೆ ಎಂದು ಒತ್ತಾಯಿಸಿ ತಾಪಂ ಕಚೇರಿ ಮುಂಭಾಗದಲ್ಲಿ ಸಿಪಿಐ ಪಕ್ಷ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಗ್ರೇಡ್ -2 ತಹಶೀಲ್ದಾರ್ ಸುಬ್ರಮಣಿಗೆ ಮನವಿ ಸಲ್ಲಿಸಿದರು.
ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಜೆಸಿಬಿ ಮಂಜುನಾಥರೆಡ್ಡಿ ಮಾತನಾಡಿ, ಭ್ರಷ್ಟಾಚಾರ ನಿಲ್ಲಿಸ ಬೇಕೆಂದು ವೇದಿಕೆಗಳಲ್ಲಿ ಬಾಷಣ ಮಾಡುವ ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಟಾರೆಡ್ಡಿ ವಿರುದ್ಧವೇ ಪಿಡಿಒಗಳ ಲಂಚ ಪ್ರಕರಣದಲ್ಲಿ ಭ್ರಷ್ಟಾಚಾರದ ಆರೋಪ ಕೇಳಿ ಬರುತ್ತಿದೆ.
13 ಕೋಟಿ ರೂ.ಗಳ ವಿವಿಧ ಸರ್ಕಾರಿ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ 2018ರಲ್ಲಿ ಶಾಸಕರು ಕೊಟ್ಟಿರುವ ದೂರಿನನ್ವಯ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿದಾಗ ಭ್ರಷ್ಟಾಚಾರ ನಡೆದಿರುವ ಬಗ್ಗೆ ಸಾಬೀತಾಯಿತು. ಅದರೆ, ನಾಲ್ಕು ವರ್ಷಗಳು ಕಳೆದರೂ ತನಿಖಾ ವರದಿ ಬಹಿರಂಗಗೊಂಡಿಲ್ಲ, ಬಾಗೇಪಲ್ಲಿಯ ತೋಟಗಾರಿಕೆ ಇಲಾಖೆಯಲ್ಲಿ ನಡೆದಿರುವ ಕೋಟ್ಯಾಂತರ ರೂಗಳ ಅವ್ಯವಹಾರದ ಬಗ್ಗೆ ಶಾಸಕರು ದಾಖಲೆ ಸಮೇತ ಚಿಕ್ಕಬಳ್ಳಾಪುರ ಜಿಪಂನ ದಿಶಾ ಸಭೆಯಲ್ಲಿ ಪ್ರಸ್ತಾಪ ಮಾಡಿ ನ್ಯಾಯ ಸಿಗದಿದ್ದರೇ ಮುಂದಿನ ಸಭೆಗೆ ಹಾಜರಾಗುವುದಿಲ್ಲ ಎಂದು ಹೇಳಿಕೆ ಕೊಟ್ಟು ನಂತರದ ದಿನಗಳಲ್ಲಿ ಮೌನಕ್ಕೆ ಶರಣಾದರು.
ಎರಡು ವರ್ಷಗಳ ಹಿಂದೇ ರಾಗಿ ಖರೀ ಕೇಂದ್ರದಲ್ಲಿ ನಡೆದಿರುವ ಗೋಲ್ ಮಾಲ್ ಪ್ರಕರಣವನ್ನು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿ ವರದಿ ಬಹಿರಂಗವಾಗದಂತೆ ತಡೆದಿದ್ದೀರ. ಲಂಚ ಪ್ರಕರಣದ ಹಿನ್ನೆಲೆ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಸೂಕ್ತ ತನಿಖೆಗೆ ಒತ್ತಾಯಿಸಿದರು.
ಸಿಪಿಎಂ ತಾಲೂಕು ಕಾರ್ಯದರ್ಶಿ ಮಹಮ್ಮದ್ ಆಕ್ರಂ, ಸಿಐಟಿಯು ಬಿ.ಆಂಜನೇಯರೆಡ್ಡಿ, ಡಿವೈಎಫ್‌ಐ ಹೇಮಚಂದ್ರ, ಡಾ.ಅನಿಲ್‌ಕುಮಾರ್, ಎಂ.ಪಿ.ಮುನಿ ವೆಂಕಟಪ್ಪ, ಸಾವಿತ್ರಮ್ಮ, ಶ್ರೀರಾಮನಾಯಕ, ಎ.ಎನ್. ಶ್ರೀರಾಮಪ್ಪ, ಅಶ್ವತ್ಥಪ್ಪ, ಪಾತೀಮಾ ಇತರರಿದ್ದರು.