ಸಾಗರ: ಚಿಕನ್ ಅಂಗಡಿ ಮಾಲೀಕನಿಂದ 50 ಸಾವಿರ ರೂ. ಲಂಚ ಪಡೆಯುವ ವೇಳೆಯಲ್ಲಿ ಜೋಗ ಕಾರ್ಗಲ್ ಪಟ್ಟಣ ಪಂಚಾಯ್ತಿಯ ವಾರ್ಡ್ ಎಂಟರ ಸದಸ್ಯ ಕೆ.ಸಿ ಹರೀಶ್ ಅವರ ಮನೆಯ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ಜೋಗದ ಬಜಾರ್ ಲೈನ್‌ನಲ್ಲಿರುವ ಚಿಕನ್ ಅಂಗಡಿ ಮಾಲಿಕ ಅಹಮದ್ ಬಾಕಿ ಅವರಿಗೆ ತ್ಯಾಜ್ಯವನ್ನು ಪಕ್ಕದ ಮೋರಿಗೆ ಎಸೆಯುತ್ತಿದ್ದ ಕಾರಣ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯ್ತಿಯು ಅಂಗಡಿ ಮುಚ್ಚುವಂತೆ ಕೆಲ ದಿನಗಳ ಹಿಂದೆ ನೋಟಿಸ್ ನೀಡಿತ್ತು. ಆಗ ಅದೇ ವಾರ್ಡ್‌ನ ಸದಸ್ಯರಾಗಿರುವ ಹರೀಶ್ ಅವರು ಮಾಲೀಕನನ್ನು ಸಂಪರ್ಕಿಸಿ ಒಂದು ಲಕ್ಷ ರೂ.ಗೆ ಬೇಡಿಕೆ ಇಟ್ಟು ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು ಎನ್ನಲಾಗಿದೆ. ಮಾತುಕತೆ ನಡೆದು 50 ಸಾವಿರ ರೂ. ಕೊಡುವುದಾಗಿ ಚಿಕನ್ ಅಂಗಡಿ ಮಾಲಿಕ ಒಪ್ಪಿಕೊಂಡಿದ್ದರು. ನಂತರ ಅವರು ಲೋಕಾಯುಕ್ತ ಪೊಲೀಸರನ್ನು ಸಂಪರ್ಕಿಸಿ ಈ ಬಗ್ಗೆ ದೂರು ನೀಡಿದ್ದರು.
ಸೋಮವಾರ ಮಧ್ಯಾಹ್ನ ಎರಡರ ಸಮಯದಲ್ಲಿ ಕೆ.ಸಿ. ಹರೀಶ್ ಮನೆಯಲ್ಲಿ ಹಣ ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದರು. ಅಹಮದ್ ಬಾಕಿ ಹಣವನ್ನು ಹರೀಶ್‌ರಿಗೆ ನೀಡಿದರು. ಪೊಲೀಸರು ದಾಳಿ ಕಂಡಾಕ್ಷಣ ಆರೋಪಿ ಅಡುಗೆ ಮನೆಯ ಗ್ಯಾಸ್ ಒಲೆಯ ಬೆಂಕಿಯಿಂದ ನೋಟುಗಳನ್ನು ಸುಡಲು ಪ್ರಯತ್ನಿಸಿದರು.
ಚಿತ್ರದುರ್ಗ ಲೋಕಾಯುಕ್ತ ಎಸ್‌ಪಿ ಎನ್.ವಾಸುದೇವರಾಮ ಅವರ ಮಾರ್ಗದರ್ಶನದಲ್ಲಿ ಶಿವಮೊಗ್ಗ ಲೋಕಾಯುಕ್ತ ಡಿಎಸ್ಪಿ ಮೃತ್ಯುಂಜಯ, ಪೊಲೀಸ್ ನಿರೀಕ್ಷಕರಾದ ಎಚ್.ಎಂ.ಜಗನ್ನಾಥ್ ಅವರ ನೇತೃತ್ವದಲ್ಲಿ ಪ್ರಸನ್ನ, ಬಿ.ಲೋಕೇಶಪ್ಪ, ಮಹಾಂತೇಶ, ಬಿ.ಟಿ.ಚನ್ನೇಶ, ಪ್ರಶಾಂತಕುಮಾರ್, ಅರುಣ್‌ಕುಮಾರ್, ಪುಟ್ಟಮ್ಮ, ಸಾವಿತ್ರಮ್ಮ, ಗಂಗಾಧರ, ತರುಣ್, ಪ್ರದೀಪ್ ಮೊದಲಾದವರು ಈ ದಾಳಿಯನ್ನು ನಡೆಸಿದ್ದಾರೆ.