ಬೆಂಗಳೂರು: ಖಾಸಗಿ ರಿಯಲ್ ಎಸ್ಟೇಟ್ ಕಂಪನಿಯ ಖಾತಾ ವಿಚಾರಕ್ಕೆ ಸಂಬಂಧಿಸಿದಂತೆ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಬಿಬಿಎಂಪಿ ಕಂದಾಯ ನಿರೀಕ್ಷಕ (ರೆವಿನ್ಯೂ ಇನ್‌ಸ್ಪೆಕ್ಟರ್-ಆರ್‌ಐ) ಹಾಗೂ ಮಧ್ಯವರ್ತಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದಿದ್ದಾರೆ. ಕಂದಾಯ ನಿರೀಕ್ಷಕನ ಮನೆಯಲ್ಲಿ ದೊಡ್ಡ ಮೊತ್ತದ ಅಘೋಷಿತ ಆಸ್ತಿ ಪತ್ತೆಯಾಗಿದೆ.
ಮಹದೇಪುರ ವಲಯದ ರೆವಿನ್ಯೂ ಇನ್‌ಸ್ಪೆಕ್ಟರ್ ನಟರಾಜ್, ಮಧ್ಯವರ್ತಿ ಪವನ್ ಬಂಧಿತರು.
ಮುಕ್ತ ಡೆವಲಪರ್ಸ್ ರಿಯಲ್ ಎಸ್ಟೇಟ್ ಕಂಪನಿ ಕೊಡಿಗೆಹಳ್ಳಿಯಲ್ಲಿ ಬೃಂದಾವನ್ ಅಪಾರ್ಟ್‌ಮೆಂಟ್ ನಿರ್ಮಿಸಿದ್ದು, ಕಂಪನಿ ಮಾಲೀಕ 79 ಫ್ಲ್ಯಾಟ್‌ಗಳ ಖಾತೆಗಾಗಿ ಅರ್ಜಿ ಸಲ್ಲಿಸಿದ್ದರು. ಆರೋಪಿ ನಟರಾಜ್ ಪ್ರತಿ ಖಾತಾಗೆ 10 ಸಾವಿರ ರೂ.ನಂತೆ ಒಟ್ಟು 7.90 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಕುರಿತು ಮುಕ್ತ ಡೆವಲಪರ್ಸ್ ಮಾಲೀಕ ಮಂಜುನಾಥ್ ಲೋಕಾ ಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಲೋಕಾಯುಕ್ತ ಪೊಲೀಸರು ಶುಕ್ರವಾರ ಮಹದೇವಪುರ ಬಿಬಿಎಂಪಿ ಕಚೇರಿಯಲ್ಲೇ 5 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ನಟರಾಜ್ ಹಾಗೂ ಪವನ್‌ನನ್ನು ವಶಕ್ಕೆ ಪಡೆದಿ¨ªಾರೆ. ನಟರಾಜ್ ಪರ ಮಧ್ಯವರ್ತಿ ನವೀನ್ ದೂರುದಾರರಿಂದ ದುಡ್ಡು ತೆಗೆದುಕೊಂಡಿರುವ ವೇಳೆ ಲೋಕಾಯುಕ್ತ ಪೊಲೀಸರು ಮಹದೇವಪುರ ಬಿಬಿಎಂಪಿ ಕಚೇರಿಗೆ ತೆರಳಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.
ಚಿನ್ನ, ಬೆಳ್ಳಿ, 3 ಕಾರು, ಮನೆ, ಸೈಟ್ ಪತ್ತೆ:
ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಪರಿಶೀಲಿಸಿದಾಗ ರೆವಿನ್ಯೂ ಇನ್‌ಸ್ಪೆಕ್ಟರ್ ನಟರಾಜ್ ಹಲವರಿಂದ ಇದೇ ಮಾದರಿಯಲ್ಲಿ ಲಂಚ ಪಡೆದಿರುವ ಶಂಕೆ ವ್ಯಕ್ತವಾಗಿತ್ತು. ನಟರಾಜ್ ಮನೆಯಲ್ಲಿ ಶೋಧಿಸಿದಾಗ 900 ಗ್ರಾಂ ಚಿನ್ನಾಭರಣ, 7 ಕೆ.ಜಿ. ಬೆಳ್ಳಿ ವಸ್ತುಗಳು, ಇನ್ನೋವಾ ಕ್ರಿಸ್ಟಾ , ಕಿಯಾ ಸೋನೆಟ್, ಹುಂಡೈ, ಆಡಿ ಕ್ಯೂ 3 ಕಾರುಗಳು ಪತ್ತೆಯಾಗಿವೆ. ಜತೆಗೆ ಮನೆಯಲ್ಲಿದ್ದ 80 ಸಾವಿರ ರೂ. ನಗದು, ಗಿರಿನಗರದ ಆವಲಳ್ಳಿ ಬಳಿ 30×40 ನಿವೇಶನದಲ್ಲಿ ಜಿ +2ನಲ್ಲಿ ಮನೆ, ಕೊಡಿಗೇಹಳ್ಳಿಯಲ್ಲಿರುವ ನಟರಾಜ್ ಪತ್ನಿ ಹೆಸರಿನಲ್ಲಿ 40×60 ನಿವೇಶನದ ದಾಖಲೆಗಳು ಪತ್ತೆಯಾಗಿವೆ. ಇನ್ನಷ್ಟು ಕಡೆಗಳಲ್ಲಿ ನಟರಾಜ್ ಆಸ್ತಿ ಹೊಂದಿರುವ ಶಂಕೆ ವ್ಯಕ್ತವಾಗಿದ್ದು, ಲೋಕಾಯುಕ್ತ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.