ನ್ಯೂಯಾರ್ಕ್: 2015, 16,17ರಲ್ಲಿ ಇಡೀ ಫುಟ್ ಬಾಲ್ ಜಗತ್ತನ್ನು ಭೂತಾಕಾರವಾಗಿ ಕಾಡಿದ್ದ ಲಂಚದ ಹಗರಣ ಈಗ ಮತ್ತೆ ಮೇಲೆದ್ದಿದೆ. 2018ರ ವಿಶ್ವಕಪ್ ಆತಿಥ್ಯ ಪಡೆಯಲು ರಷ್ಯಾ, 2022ರ ವಿಶ್ವಕಪ್ ಆತಿಥ್ಯ ಪಡೆಯಲು ಕತಾರ್ ಲಂಚ ನೀಡಿವೆ ಎಂದು ಅಮೆರಿಕ ನೇರವಾಗಿ ಹೇಳಿದೆ. ಇದುವರೆಗೆ ತನಿಖೆ, ಆರೋಪ ಮಾಡುತ್ತಿದ್ದ ಅಮೆರಿಕದ ಕಾನೂನು ಸಚಿವಾಲಯ ಇದೇ ಮೊದಲ ಬಾರಿಗೆ ಬಹಿರಂಗವಾಗಿಯೇ ತೀರ್ಪಿನ ರೀತಿಯಲ್ಲಿ ಮಾತನಾಡಿದೆ.
ಇದೇನು ಹೊಸ ಪ್ರಕರಣವಲ್ಲ. 2015ರಲ್ಲೇ ತಾರಕಕ್ಕೇರಿ,ಅಂದು ಫಿಫಾ (ಫುಟ್‌ಬಾಲ್ ಜಾಗತಿಕ ಸಂಸ್ಥೆ) ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದ ಸೆಪ್ ಬ್ಲೇಟರ್ ರಾಜೀನಾಮೆ ನೀಡಲು ಕಾರಣವಾಗಿತ್ತು.
ಆಗಲೇ ಇಂಗ್ಲೆಂಡ್, ಅಮೆರಿಕದ ತನಿಖಾಸಂಸ್ಥೆಗಳು ನೇರವಾಗಿ ಕತಾರ್, ರಷ್ಯಾ ಫುಟ್‌ಬಾಲ್ ಸಂಸ್ಥೆಗಳ ಮೇಲೆ ಆರೋಪ ಮಾಡಿದ್ದವು. ಪರಿಣಾಮ ಜಾಗತಿಕವಾಗಿ ಹಲವಾರು ಫುಟ್‌ಬಾಲ್ ಸಂಸ್ಥೆಗಳ ಮುಖ್ಯಸ್ಥರ ಪದಚ್ಯುತಿಯಾಗಿತ್ತು. ಕೆಲವರು ಈಗಲೂ ಬಂಧನದಲ್ಲಿದ್ದಾರೆ. ಕೆಲವರ ಮೇಲೆ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಲಾಗಿದೆ.
ಆರೋಪವೇನು: 2018ರ ಫುಟ್‌ಬಾಲ್ ವಿಶ್ವಕಪ್ ಆಯೋಜಿಸುವ ಅವಕಾಶವನ್ನು ರಷ್ಯಾ ಪಡೆಯಿತು. ಇಂಗ್ಲೆಂಡ್, ಹಾಲೆಂಡ್-ಬೆಲ್ಜಿಯಂ ಅನ್ನು ಸೋಲಿಸಿ ರಷ್ಯಾ ಈ ಅವಕಾಶ ಪಡೆಯಿತು. ಪುಟ್ಟ ರಾಷ್ಟ್ರ ಕತಾರ್, ಅಮೆರಿಕವನ್ನು ಪೈಪೋಟಿಯಲ್ಲಿ ಸೋಲಿಸಿ 2022ರ ವಿಶ್ವಕಪ್‌ಆತಿಥ್ಯ ಗಳಿಸಿತು. ಇಲ್ಲಿಂದ ಅಮೆರಿಕಕ್ಕೆ ಅನುಮಾನ ಶುರುವಾಯಿತು. ಮುಂದಿನ ಎಲ್ಲ ಬೆಳವಣಿಗೆಗಳಲ್ಲಿ ಇದೇ ಪ್ರಮುಖ ಪಾತ್ರ ವಹಿಸಿದ್ದು ಇದೆ. 2010ರಲ್ಲಿ ಈ ಎರಡು ರಾಷ್ಟ್ರಗಳಿಗೆ ಆತಿಥ್ಯದ ಅವಕಾಶ ನೀಡುವ ಮುಂಚೆಯೇ, ಫಿಫಾದ ಅಗ್ರ ಐವರ ಮಂಡಳಿ ಲಂಚ ಪಡೆದಿತ್ತು ಎಂದು ಅಮೆರಿಕ ಈಗ ನೇರವಾಗಿ ಆಪಾದಿಸಿದೆ.
ತಮ್ಮ ಪರ ಮತ ಹಾಕಲು ಜಗತ್ತಿನ ಪ್ರಮುಖ ಫುಟ್‌ಬಾಲ್ ಸಂಸ್ಥೆಗಳ ಪದಾಧಿಕಾರಿಗಳಿಗೆ ಲಂಚ ನೀಡಿದ್ದು, ಅಕ್ರಮ ಹಣ ಸಾಗಣೆ, ಮಾಧ್ಯಮ ಹಕ್ಕು ಪಡೆಯಲು ಲಂಚ ನೀಡಿದ್ದು ಈ ಆರೋಪಗಳಲ್ಲಿ ಸೇರಿದೆ. ದ.ಅಮೆರಿಕ ದೇಶಗಳ ಮೂವರು ಪದಾಧಿಕಾರಿಗಳು ಕತಾರ್ ಪರವಾಗಿ ಮತ ಚಲಾಯಿಸಲು ಹಣ ಪಡೆದಿದ್ದಾರೆಂಬ ಆರೋಪವಿದೆ. ಈ ಪೈಕಿ\ಅರ್ಜೆಂಟೀನದ ಜುಲಿಯೊ ಗ್ರಾಂಡೊನ 2014ರಲ್ಲೇ ಸಾವನ್ನಪ್ಪಿದ್ದಾರೆ. ಇನ್ನೊಬ್ಬರು ಪರಗ್ವೆಯಲ್ಲಿ ಕಳೆದವರ್ಷ ಸಾವನ್ನಪ್ಪಿದ್ದಾರೆ. ಇನ್ನೊಬ್ಬರು ಬ್ರೆಜಿಲ್‌ನ ರಿಕಾರ್ಡೊ ಟೀಕ್ಸಿರಾ ತಮ್ಮ ದೇಶದಲ್ಲೇ ಉಳಿದುಕೊಂಡಿದ್ದಾರೆ.
ಟ್ರಿನಿಡಾಡ್-ಟೊಬ್ಯಾಗೊ ಫುಟ್‌ಬಾಲ್ ಮಂಡಳಿ
ಮಾಜಿ ಮುಖ್ಯಸ್ಥ ಜ್ಯಾಕ್ ವಾರ್ನರ್ 5 ಮಿಲಿಯನ್ ಡಾಲರ್, ಗ್ವಾಟೆಮಾಲದ ರಫಾಯೆಲ್ ಸಾಲ್‌ಗೆರೊ 1 ಮಿಲಿಯನ್ ಡಾಲರ್ ಅನ್ನು ರಷ್ಯಾ ಪರವಾಗಿ ಮತ ಚಲಾಯಿಸಲು ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಇದೆಲ್ಲದರ ಪರಿಣಾಮ ಫಿಫಾ ಆಗಲೇ ಪುನರ್ರಚನೆಯಾಯಿತು. ಗಿಯಾನಿ ಇನ್‌ಫ್ಯಾಂಟಿನೊ ನೂತನ ಅಧ್ಯಕ್ಷರಾದರು.
ಇನ್ನೊಂದು ಮುಖ
ಈ ಪ್ರಕರಣದಲ್ಲಿ ಇನ್ನೊಂದು ಮುಖವೂ ಇದೆ. 2018ರ ವಿಶ್ವಕಪ್ ಆತಿಥ್ಯ ಪಡೆಯಲು ವಿಫಲವಾದ ಇಂಗ್ಲೆಂಡ್, 2022ರ ಆತಿಥ್ಯ ಪಡೆಯಲು ವಿಫಲವಾದ ಅಮೆರಿಕ ಸೇರಿಕೊಂಡು ಈ ಮೋಸದ ಕಥೆ ಕಟ್ಟಿವೆ. ತಮ್ಮಂತ ಬಲಿಷ್ಠರಿಗೆ ಸೋಲಾಗಿದ್ದಕ್ಕೇ ಅವು ಹೀಗೆ ಮಾಡುತ್ತಿವೆ ಎಂದು ಮಾಜಿ ಫಿಫಾ ಅಧ್ಯಕ್ಷ ಸೆಪ್ ಬ್ಲೇಟರ್ ಆರೋಪಿಸಿದ್ದಾರೆ.