ಲಂಡನ್: ಬ್ರೆಕ್ಸಿಟ್‌ಗೆ ಸಂಬಂಧಿಸಿದ ಒಪ್ಪಂದ ವನ್ನು ಅಂತಿಮಗೊಳಿಸುವ ಪ್ರಕ್ರಿಯೆ ಈಗ ಬ್ರಿಟನ್ ಸರಕಾರಕ್ಕೇ ಸಂಚಕಾರ ತರುವ ಹಂತ ತಲುಪಿದೆ. ಇಂಗ್ಲೆಂಡ್‌ನ ಬ್ರೆಕ್ಸಿಟ್ ಕಾರ್ಯದರ್ಶಿ ಡೊಮಿನಿಕ್ ರಾಬ್, ಪ್ರಧಾನಿ ಥೆರೆಸಾ ಮೇ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ರಾಜೀನಾಮೆ ನೀಡಿದ್ದಾರೆ. ಬ್ರೆಕ್ಸಿಟ್ ಪ್ರಕ್ರಿಯೆಯಲ್ಲಿ ಮುಂದಿನ ಹಂತವಾಗಿರುವ, ಕರಾರು ಮಂಡಿಸುವುದಕ್ಕೂ ಮುನ್ನ ನಡೆದ ಸಭೆಯಲ್ಲಿ ಕರಡು ಒಪ್ಪಂದದ ಬಗ್ಗೆ ಚರ್ಚೆ ನಡೆದಿತ್ತು. ಒಪ್ಪಂದದಲ್ಲಿ ಪ್ರಸ್ತಾಪಿಸಲಾಗಿರುವ ಕೆಲವು ವಿಷಯಗಳಿಗೆ ಡೊಮಿನಿಕ್ ಆಕ್ಷೇಪ ಎತ್ತಿದ್ದಾರೆ. ಇತರ ಸಂಸದರು ಕರಾರಿಗೆ ಸಮ್ಮತಿಸಿದ್ದರೂ, ಡೊಮಿನಿಕ್ ಅಸಮಾಧಾನದಿಂದಾಗಿ ರಾಜೀನಾಮೆ ನೀಡಿದ್ದಾರೆ. ಇದು ಥೆರೆಸಾ ಮೇ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಕಳೆದ ಜುಲೈನಿಂದಲೂ ರಾಬ್ ಈ ಹುದ್ದೆಯನ್ನು ನಿರ್ವಹಿಸುತ್ತಿದ್ದರು.
ರಾಬ್ ರಾಜೀನಾಮೆ ನೀಡುವುದಕ್ಕೂ ಮುನ್ನ ಭಾರತೀಯ ಮೂಲದ ಸಚಿವ ಶೈಲೇಶ್ ಕೂಡ ಇದೇ ಕಾರಣಕ್ಕೆ ರಾಜೀನಾಮೆ ನೀಡಿದ್ದರು. ಈ ಘಟನೆ ಗಳಿಂದಾಗಿ ಪೌಂಡ್ ಮೌಲ್ಯ ಭಾರಿ ಕುಸಿತ ಕಂಡಿದ್ದು, ಇಂಗ್ಲೆಂಡ್ ಆರ್ಥಿಕತೆ ಕುಸಿಯುವ ಆತಂಕವೂ ವ್ಯಕ್ತವಾಗಿದೆ.
ಬುಧವಾರ ಸುಮಾರು ಐದು ತಾಸುಗಳವರೆಗೆ ಸಭೆ ನಡೆದಿದ್ದು, ನವೆಂಬರ್ 25 ರಂದು ಈ ಕರಡು ಪ್ರತಿಯನ್ನು ಐರೋಪ್ಯ ಒಕ್ಕೂಟದ ಸಭೆಯಲ್ಲಿ ಮಂಡಿಸಲಾಗುತ್ತದೆ. ಇದಕ್ಕೂ ಮುನ್ನ ಮುಂದಿನ ವಾರದಿಂದ ಬ್ರೆಕ್ಸಿಟ್ ಒಪ್ಪಂದಕ್ಕೆ ಸಹಿ ಹಾಕುವ ಪ್ರಕ್ರಿಯೆಗೆ ಸಮ್ಮೇಳನ ಇಂಗ್ಲೆಂಡ್‌ನಲ್ಲಿ ನಡೆಯಲಿದೆ. ಐರೋಪ್ಯ ಒಕ್ಕೂಟದಿಂದ ಇಂಗ್ಲೆಂಡ್ ಹೊರಹೋಗುವ ಪ್ರಕ್ರಿಯೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಇತರ ಅಂಶಗಳು ಈ ಒಪ್ಪಂದದಲ್ಲಿವೆ.