ಲಂಡನ್: ಕೋವಿಡ್ ಲಾಕ್‌ಡೌನ್ ಕಾರಣದಿಂದಾಗಿ ಮಾರ್ಚ್ ತಿಂಗಳಿಗೆ ಹೋಲಿಕೆ ಮಾಡಿದರೆ ಇಂಗ್ಲಂಡ್‌ನ ಆರ್ಥಿಕತೆಯು ಎಪ್ರಿಲ್‌ನಲ್ಲಿ ಶೇ. 20.4ರಷ್ಟು ಕುಸಿತ ಕಂಡಿದೆ. ಇದರಿಂದಾಗಿ ಲಾಕ್‌ಡೌನ್ ತೆರವು ಮಾಡಿ ಆರ್ಥಿಕತೆಯ ಚೇತರಿಕೆಗೆ ಪೂರಕ ಕ್ರಮಗಳನ್ನು ಕೈಗೊಳ್ಳಲು ಸಂಸದರು ಪ್ರಧಾನಿ ಬೋರಿಸ್ ಜಾನ್ಸಸ್ ಮೇಲೆ ಒತ್ತಡ ಹಾಕುವ ಸಾಧ್ಯತೆಯಿದೆ ಎಂದು ಅಲ್ಲಿನ ತಜ್ಞರು ಹೇಳುತ್ತಿದ್ದಾರೆ.
ಶುಕ್ರವಾರ ಈ ಬಗ್ಗೆ ಮಾಹಿತಿ ನೀಡಿದ ನೇಶನಲ್ ಸ್ಟಾಟಿಸ್ಟಿಕ್ಸ್ ಅಧಿಕಾರಿಗಳು, ಮುಖ್ಯವಾಗಿ ಪಬ್, ಶಿಕ್ಷಣ, ಆರೋಗ್ಯ ಮತ್ತು ಕಾರು ಮಾರಾಟ ಕ್ಷೇತ್ರಕ್ಕೆ ದೊಡ್ಡ ಏಟು ಬಿದ್ದಿದೆ ಎಂದು ತಿಳಿಸಿದ್ದಾರೆ.
ಎಪ್ರಿಲ್ ತಿಂಗಳ ಆರ್ಥಿಕ ಕುಸಿತವು ಇಂಗ್ಲಂಡ್ ಈವರೆಗೆ ಕಂಡಿರುವ ಅತಿದೊಡ್ಡ ಕುಸಿತವಾಗಿದೆ ಎಂದು ಹೇಳಿರುವ ಆರ್ಥಿಕ ಅಂಕಿಅಂಶಗಳ ಡೆಪ್ಯುಟಿ ನೇಶನಲ್ ಸ್ಟಾಟಿಸ್ಟಿಶಿಯನ್ ಆಗಿರುವ ಜೋನಾಥನ್ ಅಥೋ ಅವರು, ಎಪ್ರಿಲ್ ಸ್ಥಿತಿಯು ಕೋವಿಡ್ ಪೂರ್ವದಲ್ಲಿ ದೇಶ ಕಂಡಿದ್ದ ಆರ್ಥಿಕ ಕುಸಿತದ 10 ಪಟ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಮಾರ್ಚ್ ತಿಂಗಳಲ್ಲಿ ಶೇ. 5.8 ಕುಸಿತಕ್ಕೆ ಇಂಗ್ಲಂಡ್ ಸಾಕ್ಷಿಯಾಗಿತ್ತು.
ಇಂಗ್ಲಂಡ್‌ನಲ್ಲಿ ಮಾರ್ಚ್ 23ರಿಂದ ಕೋವಿಡ್ ಲಾಕ್‌ಡೌನ್ ಜಾರಿಯಲ್ಲಿತ್ತು. ಈಗ ನಿಧಾನವಾಗಿ ಸಡಿಲಿಕೆಯಾಗುತ್ತಿದ್ದು, ಕಳೆದ ಸೋಮವಾರದಿಂದ ಅತ್ಯಾವಶ್ಯಕ ವರ್ಗದಲ್ಲಿ ಸೇರದ ಅಂಗಡಿಗಳು, ಡಿಪಾರ್ಟ್‌ಮೆಂಟರ್ ಸ್ಟೋರ್ ಮತ್ತು ಎಲೆಕ್ಟ್ರಾನಿಕ್ ರಿಟೇಲರ್ ಅಂಗಡಿಗಳು ಕಾರ್ಯಾರಂಭ ಮಾಡಿವೆ.