Advertisement

ಗಾದಿಗಾಗಿ ಗುದ್ದಾಟ: ವಿಶ್ವಾಸವೋ, ಅವಿಶ್ವಾಸವೋ..18ಕ್ಕೆ ನಿರ್ಣಯ

12:46 PM May 10, 2017 | |

ಹರಿಹರ: ನಗರಸಭೆ ಮೀಸಲಾತಿಯ ಎರಡನೇ ಅವಧಿಗೆ ಏಕೈಕ ಅರ್ಹ ಅಭ್ಯರ್ಥಿಯಾಗಿ ಅಧ್ಯಕ್ಷಗಾದಿ ಅಲಂಕರಿಸಿದ್ದ ಆಶಾ ಮರಿಯೋಜಿರಾವ್‌ ಅವರ ಕುರ್ಚಿ ಅಲುಗಾಡಲಾರಂಭಿಸಿದೆ. 18ನೇ ವಾರ್ಡ್‌ ಸದಸ್ಯ ಜಿ. ಸುರೇಶ್‌ಗೌಡರ ಮರಣದಿಂದ ತೆರವಾದ ಸ್ಥಾನಕ್ಕೆ ಅದೇ ಹಿಂದುಳಿದ ಬಿ ವರ್ಗದ ಸುಜಾತಾ ಆಯ್ಕೆಯಾದಾಗಲೆ ಆಶಾಗೆ ತಮಗೊಬ್ಬ ಪ್ರತಿಸ್ಪರ್ಧಿ ಸೃಷ್ಟಿಯಾದರೆಂಬ ಸಣ್ಣ ಆತಂಕ ಉಂಟಾಗಿತ್ತು.

Advertisement

ಅಂದುಕೊಂಡಂತೆ ಏ. 24ರಂದು ಒಟ್ಟು 31 ಸದಸ್ಯಬಲದ ನಗರಸಭೆಯಲ್ಲಿ 24 ಸದಸ್ಯರು ಆಶಾ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಆಧರಿಸಿ ಮೇ 18ಕ್ಕೆ ಅವಿಶ್ವಾಸ ನಿರ್ಣಯ ಮಂಡನಾ ಸಭೆ ನಿಗಧಿ ದಿಯಾಗಿದ್ದು, ಅಂದು ಆಶಾ ಅವರ ಅಧ್ಯಕ್ಷ ಗಾದಿಯ ಭವಿಷ್ಯ ನಿರ್ಧಾರವಾಗಲಿದೆ. 

ಕೊನೆಗಳಿಗೆಯಲ್ಲಿ ಸಭೆ: ಕಾಂಗ್ರೆಸ್‌ನ 9, ಜೆಡಿಎಸ್‌ನ ಎಲ್ಲಾ 10, ಕೆಜೆಪಿಯ 2, ಬಿಜೆಪಿ-1, ಪಕ್ಷೇತರ 2 ಸೇರಿ ಒಟ್ಟು 24 ಸದಸ್ಯರು ಏ. 24ರಂದು ಅಧ್ಯಕ್ಷೆ ಆಶಾ ವಿರುದ್ಧ ಅವಿಶ್ವಾಸ ಮಂಡನೆ ಕೋರಿ ಅರ್ಜಿ ಸಲ್ಲಿಸಿದ್ದರು. ಅದರಂತೆ ನಿರ್ಣಯ ಮಂಡನೆಗೆ ಸಭೆ ಕರೆಯಲು ತಮಗಿದ್ದ 15 ದಿನಗಳ ಕಾಲಾವಕಾಶದಲ್ಲಿ ಕೊನೆಯ ದಿನವಾದ ಮೇ 8ರ ಸಂಜೆ 4ಕ್ಕೆ ತಮ್ಮ ಕಚೇರಿಯಲ್ಲಿ ಹಿತೈಷಿಗಳೊಂದಿಗೆ ಚರ್ಚಿಸಿ ಮೇ 18ರ ಬೆಳಗ್ಗೆ 11ಕ್ಕೆ ಸಭೆ ಆಯೋಜಿಸಲು ಪೌರಾಯುಕ್ತರಿಗೆ ಆಶಾ ಸೂಚಿಸಿದರು. 

ಮ್ಯಾಜಿಕ್‌ ಸಂಖ್ಯೆಗೆ ಪೈಪೋಟಿ: ನಗರಸಭೆಯಲ್ಲಿ ಜೆಡಿಎಸ್‌ 10, ಕಾಂಗ್ರೆಸ್‌ 14, ಕೆಜೆಪಿ 4, ಬಿಜೆಪಿಯ ಒಬ್ಬ ಹಾಗೂ ಪಕ್ಷೇತರ ಇಬ್ಬರು ಸೇರಿ ಒಟ್ಟು 31 ಸದಸ್ಯರಿದ್ದು, ಸಂಸದರು ಮತ್ತು ಶಾಸಕರನ್ನು ಸೇರಿಸಿದರೆ ಅವಿಶ್ವಾಸ ಮಂಡನೆಗೆ ಒಟ್ಟು 33 ಮತದಾರರಿದ್ದಾರೆ. ಅವಿಶ್ವಾಸಕ್ಕೆ ಜಯ ಸಿಗಲು ಮೂರನೇ ಎರಡು ಭಾಗ ಅಂದರೆ 22 ಮತಗಳು ಅಗತ್ಯ. ಕನಿಷ್ಠ 22 ಜನರನ್ನು ಸೆಳೆಯಲು ಆಶಾ ವಿರೋಧಿ ಗುಂಪು ಕಸರತ್ತು ನಡೆಸಿದ್ದರೆ, ಅವಿಶ್ವಾಸಕ್ಕೆ 22 ಜನ ಬೆಂಬಲಿಸದಂತೆ ತಡೆಯಲು ಆಶಾ ಬೆಂಬಲಿಗರು ಶತಪ್ರಯತ್ನ ನಡೆಸಿದ್ದಾರೆ. 

ಸ್ವಪಕ್ಷಿಯರೇ ಶತ್ರುಗಳು: ಕಾಂಗ್ರೆಸ್‌ ಪಕ್ಷದಿಂದ ನಗರಸಭೆ ಸದಸ್ಯರಾಗಿ ಆಯ್ಕೆಯಾಗಿರುವ ಆಶಾ ಮರಿಯೋಜಿರಾವ್‌ ಅವರಿಗೆ ಸ್ವಪಕ್ಷಿಯರೇ ಶತ್ರುಗಳಾಗಿದ್ದಾರೆ. ತಮ್ಮನ್ನು ಹೊರತುಪಡಿಸಿ ಕಾಂಗ್ರೆಸ್‌ನ 13 ಸದಸ್ಯರ ಪೈಕಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರೂ ಆಗಿರುವ ಡಿ.ಜಿ. ರಘುನಾತ್‌, ಶಂಕರ್‌ ಖಟಾವಕರ್‌ ಸೇರಿದಂತೆ 9 ಸದಸ್ಯರು ಅಧ್ಯಕ್ಷರ ವಿರುದ್ಧ ಕಹಳೆಯೂದಿದ್ದಾರೆ.

Advertisement

ಇನ್ನುಳಿದ ಬಿ.ರೇವಣಸಿದ್ದಪ್ಪ, ಶಹಜಾದ್‌ ಸನಾವುಲ್ಲಾ, ಮಹಮ್ಮದ್‌ ಸಿಗ್ಬತ್‌ಉಲ್ಲಾ, ವಸಂತ್‌ ಎಸ್‌.ಎಂ. ಅಧ್ಯಕ್ಷರ ಪರವಾಗಿ ನಿಲ್ಲುವ ಸಾಧ್ಯತೆ ಇದೆ. ಕಾಂಗ್ರೆಸ್‌ನ ಒಳಜಗಳದಿಂದ ಬಂಡಾಯವೆದ್ದು, ಸ್ವಪಕ್ಷೀಯರಿಂದ ಅಂತರ ಕಾಯ್ದುಕೊಂಡಿದ್ದ ಐವರು ಕಾಂಗ್ರೆಸ್‌ ಸದಸ್ಯರ ಪೈಕಿ ಮೂವರು ಅವಿಶ್ವಾಸ ಅರ್ಜಿಗೆ ಸಹಿ ಹಾಕಿದ್ದರೂ ಆಶಾ ಪರ ಮತ ಚಲಾಯಿಸಲು ಸಿದ್ಧರಾಗಿದ್ದಾರೆಂದು ತಿಳಿದುಬಂದಿದೆ.

ತಾವು ಸೇರಿದಂತೆ ಕಾಂಗ್ರೆಸ್‌ನ 8, ಜೆಡಿಎಸ್‌ನ 2, ಕೆಜೆಪಿಯ 2 ಸೇರಿ ಒಟ್ಟು 12 ಜನರನ್ನು ತಮ್ಮತ್ತ ಸೆಳೆದುಕೊಂಡು ಅಧ್ಯಕ್ಷೆ ಆಶಾ ತಮ್ಮ ಮೇಲಿನ ತೂಗುಕತ್ತಿಯಿಂದ ಪಾರಾಗುವ ತಂತ್ರ ಹೆಣೆದಿದ್ದಾರೆನ್ನಲಾಗಿದೆ. ಈ 12 ಸದಸ್ಯರಲ್ಲಿ ಈಗಾಗಲೇ ಅವಿಶ್ವಾಸಕ್ಕೆ ಸಹಿ ಮಾಡಿರುವ ಜೆಡಿಎಸ್‌ ಗುಲಾ°ಜ್‌ ಬಾನು ಹಾಗೂ ಗಂಗಮ್ಮ ಕೋಡಿಹಳ್ಳಿ ಅಧ್ಯಕ್ಷೆ ಆಶಾ ಮರಿಯೋಜಿರಾವ್‌ ಪರವಾಗಿ ಪ್ರವಾಸದಲ್ಲಿದ್ದು, ಉಳಿದ ಕೆಲವರೂ ಸಹ ಸದ್ಯದಲ್ಲೇ ರೆಸಾರ್ಟ್‌ ಸೇರಿಕೊಂಡು ಮೇ 18ರಂದು ಸೀದಾ ನಗರಸಭೆ ಆಗಮಿಸುವ ಸಾಧ್ಯತೆ ಇದೆ.

ಕಂಗಾಲಾದ ಅರ್ಜಿದಾರರು: ಅವಿಶ್ವಾಸ ಅರ್ಜಿಗೆ ಸಹಿ ಮಾಡಿದ್ದವರ ಪೈಕಿ ಈಗಾಗಲೇ ಐವರು ಉಲ್ಟಾ ಹೊಡೆದಿರುವುದರಿಂದ ಕಂಗಾಲಾಗಿರುವ ಅವಿಶ್ವಾಸ ಅರ್ಜಿ ರೂವಾರಿಗಳು ಶಾಸಕ, ಸಂಸದರನ್ನೂ ಮತದಾನಕ್ಕೆ ಆಗಮಿಸಲೇಬೇಕು ಎಂದು ಒತ್ತಾಯಿಸುತ್ತಿದ್ದಾರೆ ಎನ್ನ ಲಾಗಿದೆ.

ಸ್ವಪಕ್ಷ ಹಾಗೂ ವಿಪಕ್ಷದವರು ಏನಾದರೂ ಮಾಡಿ ಆಶಾರನ್ನು ಇಳಿಸಿ ಸುಜಾತಾರನ್ನು ಅಧ್ಯಕ್ಷೆ ಮಾಡಬೇಕೆಂದು ಕಸರತ್ತು ನಡೆಸಿದ್ದು, ಸುಜಾತಾ ಪರವಾಗಿ ಕೆಜೆಪಿಯ ಅಂಬುಜಾ ರಾಜೊಳ್ಳಿ, ಬಿಜೆಪಿಯ ಮಂಜುಳಾ ಪ್ರವಾಸದಲ್ಲಿದ್ದಾರೆನ್ನಲಾಗಿದೆ. ಸದಸ್ಯದಲ್ಲೇ ಇವರೊಂದಿಗೆ ಇನ್ನೂ ಹಲವರು ಸಹ ಸೇರಿಕೊಳ್ಳುವ ಸಾಧ್ಯತೆಯಿದೆ.  

Advertisement

Udayavani is now on Telegram. Click here to join our channel and stay updated with the latest news.

Next