Advertisement

ಟೆಸ್ಟ್‌  ಕ್ರಿಕೆಟಿಗೆ ತುಂಬಿತು 140 ವರ್ಷ

11:15 AM Mar 15, 2017 | Team Udayavani |

ಮಾರ್ಚ್‌ 15, 1877…
ಇಂದಿಗೆ ಸರಿಯಾಗಿ 140 ವರ್ಷಗಳ ಹಿಂದೆ ಕ್ರೀಡಾಲೋಕ ದಲ್ಲೊಂದು ಸಂಭ್ರಮದ ವಾತಾವರಣ ಮೇಳೈಸಿತ್ತು. ಅದು ಟೆಸ್ಟ್‌ ಕ್ರಿಕೆಟ್‌ ಜನ್ಮವೆತ್ತಿದ ಐತಿಹಾಸಿಕ ಗಳಿಗೆ. ಸ್ಥಳ-“ಮೆಲ್ಬರ್ನ್ ಕ್ರಿಕೆಟ್‌ ಗ್ರೌಂಡ್‌’ (ಎಂಸಿಜಿ). ಆತಿಥೇಯ ಆಸ್ಟ್ರೇಲಿಯ ಹಾಗೂ ಕ್ರಿಕೆಟ್‌ ಜನಕರೆಂದೇ ಖ್ಯಾತಿ ಪಡೆದಿರುವ ಇಂಗ್ಲೆಂಡ್‌ ನಡುವೆ ಚೆಂಡು-ದಾಂಡಿನ ಹಣಾಹಣಿಗೆ ಮುಹೂರ್ತ. ಅದು ಕ್ರಿಕೆಟ್‌ ಇತಿಹಾಸದ ಪ್ರಪ್ರಥಮ ಟೆಸ್ಟ್‌ ಪಂದ್ಯ…

Advertisement

ಈ ಮೊದಲ ಟೆಸ್ಟ್‌ ಪಂದ್ಯದ ಕೆಲವು ಸ್ವಾರಸ್ಯಗಳನ್ನು ಗಮನಿಸಿ. ಇದೊಂದು “ಟೈಮ್‌ ಲೆಸ್‌’ ಪಂದ್ಯವಾಗಿತ್ತು. ಈಗಿನಂತೆ 5 ದಿನಗಳ ಅವಧಿ ಇರಲಿಲ್ಲ. ಸ್ಪಷ್ಟ ಫ‌ಲಿತಾಂಶ ಬರುವ ತನಕ ಆಡಬಹುದಾಗಿದ್ದ ಪಂದ್ಯವದು. ಆದರೆ ಈ ಪಂದ್ಯ ಮಾ. 15ಕ್ಕೆ ಆರಂಭಗೊಂಡು ಮಾ. 19ಕ್ಕೆ ಮುಗಿಯಿತು. ಒಟ್ಟು 5 ದಿನಗಳ ಕಾಲ ಸಾಗಿದರೂ ನಡುವೆ ಒಂದು ದಿನ (ಮಾ. 18) ಪಂದ್ಯಕ್ಕೆ ವಿರಾಮವಾಗಿತ್ತು. ನಾಯಕರಾಗಿದ್ದವರು ಡೇವ್‌ ಗ್ರೆಗರಿ (ಆಸ್ಟ್ರೇಲಿಯ) ಮತ್ತು ಜೇಮ್ಸ್‌ ಲಿಲ್ಲಿವೈಟ್‌ ಜೂ. (ಇಂಗ್ಲೆಂಡ್‌). ಮೊದಲ ಟಾಸ್‌ ಗೆದ್ದ ನಾಯಕ ಗ್ರೆಗರಿ. 

ಅಂದಿನದು 4 ಎಸೆತಗಳ ಓವರ್‌ ಆಗಿತ್ತು. ಇಂಗ್ಲೆಂಡಿನ ಆಲ್‌ಫ್ರೆಡ್‌ ಶಾ ಟೆಸ್ಟ್‌ ಇತಿಹಾಸದ ಪ್ರಪ್ರಥಮ ಎಸೆತವನ್ನು ಆಸ್ಟ್ರೇಲಿಯದ ಆರಂಭಕಾರ ಚಾರ್ಲ್ಸ್‌ ಬ್ಯಾನರ್‌ಮನ್‌ ಅವರಿಗೆ ಎಸೆದರು. ಬ್ಯಾನರ್‌ಮನ್‌ ಪಾಲಿಗೆ ಈ ಪಂದ್ಯ ಹೆಚ್ಚು ಸ್ಮರಣೀಯ. ಕಾರಣ, ಟೆಸ್ಟ್‌ ಚರಿತ್ರೆಯ ಮೊದಲ ಶತಕ ಬಾರಿಸಿದ ಕೀರ್ತಿಗೆ ಅವರು ಭಾಜನರಾಗಿದ್ದರು. ಈ ಶತಕ ಮೊದಲ ಇನ್ನಿಂಗ್ಸಿನಲ್ಲೇ ಬಂತು. ಆಸ್ಟ್ರೇಲಿಯ 245 ರನ್ನಿನಲ್ಲಿ ಬ್ಯಾನರ್‌ಮನ್‌ ಪಾಲೇ 165 ರನ್‌! 

ಮೊದಲ ಬೌಂಡರಿ ಹೊಡೆದ ಹೆಗ್ಗಳಿಕೆಯೂ ಬ್ಯಾನರ್‌ಮನ್‌ಗೆà ಸಲ್ಲುತ್ತದೆ. ಆಸೀಸ್‌ ಸರದಿಯಲ್ಲಿ ದಾಖಲಾದ ಎಲ್ಲ 18 ಬೌಂಡರಿಗಳನ್ನು ಬ್ಯಾನರ್‌ಮನ್‌ ಒಬ್ಬರೇ ಬಾರಿಸಿದ್ದರು. ಹಾಗೆಯೇ, ಗಾಯಾಳಾಗಿ ನಿವೃತ್ತನಾದ ಮೊದಲ ಟೆಸ್ಟ್‌ ಆಟಗಾರ ಕೂಡ ಬ್ಯಾನರ್‌ಮನ್‌ ಅವರೇ ಅಗಿದ್ದಾರೆ. 285 ಎಸೆತಗಳಿಂದ 165 ರನ್‌ ಬಾರಿಸಿದ ಬಳಿಕ ಅವರು ಬೆರಳಿನ ಗಾಯದಿಂದ ಕ್ರೀಸ್‌ ತೊರೆದಿದ್ದರು. ಡಬ್ಲ್ಯು. ನ್ಯೂಯಿಂಗ್‌ ಮೊದಲ ಬದಲಿ ಆಟಗಾರ. ಗಾಯಾಳು ಬ್ಯಾನರ್‌ಮನ್‌ ಬದಲು ನ್ಯೂಯಿಂಗ್‌ ಕ್ಷೇತ್ರರಕ್ಷಣೆಗಾಗಿ ಅಂಗಳಕ್ಕಿಳಿದಿದ್ದರು. 

ಟೆಸ್ಟ್‌ ಕ್ರಿಕೆಟಿನ ಮೊದಲ ವಿಕೆಟ್‌, ಮೊದಲ ಕ್ಯಾಚ್‌ ಪಡೆದದ್ದು ಇಂಗ್ಲೆಂಡಿನ ಅಲೆನ್‌ ಹಿಲ್‌. ಆಸ್ಟ್ರೇಲಿಯದ ಬಿಲ್ಲಿ ಮಿಡ್‌ವಿಂಟರ್‌ ಇನ್ನಿಂಗ್ಸ್‌ ಒಂದರಲ್ಲಿ 5 ವಿಕೆಟ್‌ ಕಿತ್ತ ಮೊದಲ ಬೌಲರ್‌ ಎನಿಸಿದರೆ, ಅದೇ ತಂಡದ ಕೀಪರ್‌ ಜಾಕ್‌ ಬ್ಲ್ಯಾಕ್‌ಹ್ಯಾಮ್‌ ಮೊದಲ ಸ್ಟಂಪಿಂಗ್‌ ನಡೆಸಿದರು. 

Advertisement

ಈ ಪಂದ್ಯದಲ್ಲಿ ಆಡಿದ ಇಂಗ್ಲೆಂಡಿನ ಜೇಮ್ಸ್‌ ಸದರ್ಟನ್‌ ಟೆಸ್ಟ್‌ ಕ್ಯಾಪ್‌ ಧರಿಸಿದ ಅತೀ ಹಿರಿಯ ಆಟಗಾರನೆಂಬ ದಾಖಲೆ ಈಗಲೂ ಉಳಿದುಕೊಂಡಿದೆ. ಆಗ ಸದರ್ಟನ್‌ ವಯಸ್ಸು 49 ವರ್ಷ, 119 ದಿನ!

ಈ ಪಂದ್ಯದ ಸ್ಕೋರ್‌ ಹೀಗಿತ್ತು: ಆಸ್ಟ್ರೇಲಿಯ-245 ಮತ್ತು 104. ಇಂಗ್ಲೆಂಡ್‌-196 ಮತ್ತು 108. ಆಸ್ಟ್ರೇಲಿಯದ 45 ರನ್‌ ಜಯದೊಂದಿಗೆ ಟೆಸ್ಟ್‌ ಇತಿಹಾಸದ ಪ್ರಥಮ ಟೆಸ್ಟ್‌ ಸುಸಂಪನ್ನಗೊಳ್ಳುತ್ತದೆ. ಸಾಗುತ್ತ ಸಾಗುತ್ತ ಇಂದಿಗೆ ಟೆಸ್ಟ್‌ ಪಂದ್ಯಗಳ ಸಂಖ್ಯೆ 2,253ಕ್ಕೆ ಬಂದು ನಿಂತಿದೆ. ಟೆಸ್ಟ್‌ ಕ್ರಿಕೆಟಿಗೆ 140 ವರ್ಷ ತುಂಬಿದ ದಿನದಂದೇ ಬಾಂಗ್ಲಾದೇಶ ತನ್ನ 100ನೇ ಟೆಸ್ಟ್‌ ಆಡುತ್ತಿರುವುದು ವಿಶೇಷ!

ರಾಂಚಿಯಲ್ಲಿ ಆಸೀಸ್‌ ಇತಿಹಾಸ
ಟೆಸ್ಟ್‌ ಇತಿಹಾಸದಲ್ಲಿ ಅತ್ಯಧಿಕ 377 ಗೆಲುವು ದಾಖಲಿಸಿದ ಹೆಗ್ಗಳಿಕೆ ಆಸ್ಟ್ರೇಲಿಯದ್ದಾಗಿದೆ. ಇನ್ನೊಂದು ವಿಶೇಷವೆಂದರೆ, ಗುರುವಾರ ಆರಂಭವಾಗಲಿರುವ ರಾಂಚಿ ಟೆಸ್ಟ್‌ ಆಸೀಸ್‌ ಪಾಲಿಗೆ ನೂತನ ಮೈಲುಗಲ್ಲಾಗಿರುವುದು. ಇದು ಆಸ್ಟ್ರೇಲಿಯ ಆಡುತ್ತಿರುವ 800ನೇ ಟೆಸ್ಟ್‌!

ಈತನಕ ಅತೀ ಹೆಚ್ಚು ಟೆಸ್ಟ್‌ ಆಡಿರುವ (983), ಅತ್ಯಧಿಕ ಸೋಲನುಭವಿಸಿದ (289), ಅತ್ಯಧಿಕ ಡ್ರಾ ಸಾಧಿಸಿದ (343) ದಾಖಲೆಗಳೆಲ್ಲ ಇಂಗ್ಲೆಂಡ್‌ ಹೆಸರಲ್ಲಿದೆ.ಈವರೆಗೆ 2 ಟೆಸ್ಟ್‌ಗಳಷ್ಟೇ ಟೈ ಆಗಿದ್ದು, ಎರಡರಲ್ಲೂ ಆಸ್ಟ್ರೇಲಿಯ ಕಾಣಿಸಿಕೊಂಡಿದೆ. ಎದುರಾಳಿ ತಂಡಗಳೆಂದರೆ ವೆಸ್ಟ್‌ ಇಂಡೀಸ್‌ ಮತ್ತು ಭಾರತ. 

ಉಳಿದಂತೆ ಟೆಸ್ಟ್‌ ದಾಖಲೆಗಳಿಗೆ ಮಿತಿ ಇಲ್ಲ…!

ಇಂದಿಗೆ ಟೆಸ್ಟ್‌ ಕ್ರಿಕೆಟ್‌ ಮೊದಲ್ಗೊಂಡು 140 ವರ್ಷ ಪೂರ್ತಿಯಾಗುತ್ತದೆ. ಈ ಸಂದರ್ಭದಲ್ಲಿ ಮೊದಲ ಪಂದ್ಯದ ಇತಿಹಾಸ ಸಾರುವ ಹಾಗೂ ಟೆಸ್ಟ್‌ ಕ್ರಿಕೆಟಿನ ಭವಿಷ್ಯದತ್ತ ಬೆಳಕು ಚೆಲ್ಲುವ 2 ವಿಭಿನ್ನ ಬರಹಗಳು ಇಲ್ಲಿ ಮೂಡಿಬಂದಿವೆ.

– ಎಚ್‌. ಪ್ರೇಮಾನಂದ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next