Advertisement

Breastfeeding: ಸ್ತನ್ಯಪಾನದಿಂದ ಕಂದಮ್ಮಗಳ ಸಶಕ್ತ ಬೆಳವಣಿಗೆ

10:18 AM Aug 02, 2023 | Team Udayavani |

ಸ್ತನ್ಯಕೇವಲ ಶಿಶುವಿಗೆ ಮಾತ್ರ ಅಮೃತವಲ್ಲ. ಮಗುವಿಗೆ ಎದೆಹಾಲು ಉಣಿಸುವ ತಾಯಂದಿರೆಲ್ಲರಿಗೂ ಈ ಪ್ರಕ್ರಿಯೆ ಸಂಜೀವಿನಿ ಇದ್ದಂತೆ. ಸ್ತನ್ಯಪಾನ ಮಾಡಿದ ಶಿಶು ಹೇಗೆ ದಷ್ಟಪುಷ್ಟವಾಗಿ ಬೆಳೆದು ಮನೆಮಂದಿಯ ಮುದ್ದಿನ ಕಂದಮ್ಮನಾಗಿ ಬೆಳೆದು ನಿಲ್ಲುತ್ತದೆಯೋ ಹಾಗೆಯೇ ತನ್ನ ಕಂದನಿಗೆ ಹಾಲೂಡಿಸಿದ ಆ ತಾಯಿ ಕೂಡ ಹಲವಾರು ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ದೂರವಿದ್ದು ಸಶಕ್ತ ಮಾತೆಯಾಗಿ ರೂಪುಗೊಳ್ಳಬಲ್ಲಳು.

Advertisement

ತಾಯಿಯ ಎದೆಹಾಲು ಮಕ್ಕಳಿಗೆ ಅಮೃತ. ಇದರಲ್ಲಿ ಮಗುವಿಗೆ ಬೇಕಾದ ಎಲ್ಲ ಪೋಷ ಕಾಂಶಗಳು ಇವೆ. ಸಸ್ತನಿಗಳು ತಮ್ಮ ಮರಿಗಳಿಗೆ ತಮ್ಮ ಎದೆ ಹಾಲನ್ನು ಉಣಿಸುವುದು ನಿಸರ್ಗ ದತ್ತವಾಗಿದೆ. ಆದರೆ ಬುದ್ಧಿವಂತನಾದ ಮನುಷ್ಯ ಜೀವಿಗೆ ಮಾತ್ರ ಸ್ತನ್ಯ ಪಾನದ ಬಗೆಗೆ ಹಲವು ತರದ ಸಂಶಯಗಳು. ನವಜಾತ ಶಿಶುವಿಗೆ ತಾಯಿ ಎದೆ ಹಾಲು ಉಣಿಸಬಹುದೋ, ಮಗುವಿಗೆ ಎದೆ ಹಾಲು ಸಾಕಾಗುತ್ತದೋ ಇಲ್ಲವೋ? ಎಂಬ ಸಂಶಯ ಸಾಮಾನ್ಯವಾಗಿ ಬಹುತೇಕರನ್ನು ಕಾಡು ತ್ತದೆ.

ಇನ್ನು ಇಂದಿನ ಆಧುನಿಕ ದಿನಗಳಲ್ಲಿ ಮಗು ವಿಗೆ ಎದೆಹಾಲು ಉಣಿಸುವುದರಿಂದ ತಮ್ಮ ದೇಹ ಸೌಂದರ್ಯ ಕೆಡುತ್ತದೋ ಎಂಬ ಆತಂಕ ಈಗಿನ ತಾಯಂ ದಿರನ್ನು ಕಾಡುವುದು ಕೂಡ ಸಾಮಾನ್ಯ.

ಇತ್ತೀಚಿನ ದಿನಗಳಲ್ಲಿ ತಾಯಂದಿರು ಎಚ್ಚೆತ್ತುಕೊಳ್ಳ ಲಾರಂಭಿಸಿದ್ದು ಎದೆಹಾಲಿನ ಮಹತ್ವದ ಕುರಿತಂತೆ ಅವರಲ್ಲಿ ಅರಿವು ಮೂಡತೊಡಗಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ಎದೆಹಾಲು ಕೊಡಲು ಮಗು ಗರ್ಭಾವಸ್ಥೆಯಲ್ಲಿರುವಾಗಲೇ ಮುಂದಾಲೋಚನೆ ಮಾಡುತ್ತಾರೆ. ಶಿಶುವಿಗೆ ಎದೆಹಾಲು ಉಣಿಸುವುದರಿಂದ ತಾಯಂದಿರ ಆರೋಗ್ಯಕ್ಕೂ ಬಹಳಷ್ಟು ಪ್ರಯೋಜನಗಳಿವೆ. ಇವುಗಳಲ್ಲಿ ಪ್ರಮುಖವಾದವುಗಳೆಂದರೆ ಬಾಣಂತಿಯರ ತೂಕದಲ್ಲಿ ಇಳಿಕೆ ಹಾಗೂ ಸ್ತನ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳು ಈ ಮಹಿಳೆಯರನ್ನು ಕಾಡುವ ಸಾಧ್ಯತೆ ತೀರಾ ಕಡಿಮೆ ಇರುತ್ತದೆ. ಗರ್ಭಾವಸ್ಥೆಯಲ್ಲಿ ದೊಡ್ಡದಾದ ಗರ್ಭಕೋಶವು ತನ್ನ ಮೊದಲಿನ ಗಾತ್ರಕ್ಕೆ ಬರಲು ಮಗುವಿಗೆ ಎದೆಹಾಲು ಉಣಿಸುವುದು ತುಂಬಾ ಸಹಕಾರಿ.

ಶಿಶುಗಳಿಗೆ ಸ್ತನ್ಯ ಊಡಿಸುವ ಸಮಯದಲ್ಲಿ ತಾಯಂದಿರು ಪೌಷ್ಟಿಕಾಂಶಭರಿತ ಆಹಾರ ಸೇವಿಸಬೇಕು. ಆಹಾರದಲ್ಲಿ 500 ಕ್ಯಾಲರಿ ಮತ್ತು 15 ಗ್ರಾಂ ಪ್ರೊಟೀನ್‌ ಅಂಶ ಹೆಚ್ಚು ಸೇವಿಸ ಬೇಕು. ತಾಯಿ ಹಾಲಿನಲ್ಲಿ ಉತ್ತಮ ವಿಟಮಿನ್‌ ಹಾಗೂ ಮಿನರಲ್‌ಗ‌ಳು ಇರುತ್ತವೆ. ಆದ ಕಾರಣ ತಾಯಂದಿರು ಕಬ್ಬಿಣ ಸತ್ವದ ಮಾತ್ರೆಗಳು, ಕ್ಯಾಲ್ಸಿಯಂ ಮಾತ್ರೆಗಳನ್ನು ದಿನನಿತ್ಯ ಸೇವನೆ ಮಾಡಬೇಕು. ನೀರಿನ ಸೇವನೆ 750 ಮಿ. ಲೀಟರ್‌ ಹಾಗೂ ಹಸುವಿನ ಹಾಲನ್ನು 500-750 ಮಿ. ಲೀಟರ್‌ ಸೇವನೆ ಮಾಡಬೇಕು. ಮಗುವಿಗೆ ಎದೆ ಹಾಲು ಉಣಿಸುವ ತಾಯಂದಿರು ತಮ್ಮ ಆಹಾರದಲ್ಲಿ ಹಣ್ಣು, ತರಕಾರಿಗಳನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ಕಬ್ಬಿಣ ಸತ್ವ ಹಾಗೂ ವಿಟಮಿನ್‌ಗಳನ್ನು ಪಡೆದುಕೊಳ್ಳಬಹುದು. ಇದರಿಂದ ಮಗುವಿಗೆ ಎಲ್ಲ ಪೌಷ್ಠಿಕಾಂಶಗಳು ದೊರಕುವುದಲ್ಲದೇ, ಅನೇಕ ರೋಗ ನಿರೋಧಕ ಅಂಶಗಳು ತಾಯಿ ಹಾಲಿನಲ್ಲಿ ದೊರಕುತ್ತದೆ.

Advertisement

ತಾಯಿಯ ಹಾಲಿನಲ್ಲಿ ಮಗು ವಿನ ಬೆಳವಣಿಗೆಗೆ ಅಗತ್ಯವಾದ ಎಲ್ಲ ಪೌಷ್ಟಿಕಾಂಶಗಳು ಇವೆ. ಬಾಟಲ್‌ ಹಾಲು ಕುಡಿದ ಮಕ್ಕಳು ತೂಕದಲ್ಲಿ ಜಾಸ್ತಿ ಇದ್ದರೂ, ತಾಯಿಯ ಎದೆ ಹಾಲು ಕುಡಿದ ಮಕ್ಕಳು ಹೆಚ್ಚು ಆರೋಗ್ಯದಿಂದ ಕೂಡಿರುತ್ತಾರೆ. ವಿಟಮಿನ್‌ “ಡಿ’ ಅಂಶವು ತಾಯಿ ಹಾಲಿನಲ್ಲಿ Water Solable ಆಗಿ ಮಗುವಿಗೆ ದೊರಕುತ್ತದೆ. ಕಬ್ಬಿಣ ಸತ್ವವು ಹಸು ಹಾಲಿಗಿಂತ ಕಮ್ಮಿ ಇದ್ದರೂ ಸಹ, ತಾಯಿ ಹಾಲಿ ನಲ್ಲಿ ಇರುವ ಕಬ್ಬಿಣ ಅಂಶವು, ಮಗುವಿನ ಕರುಳಿನಲ್ಲಿ ಚೆನ್ನಾಗಿ ಜೀರ್ಣವಾಗುತ್ತದೆ. ಇದರಿಂದಾಗಿ ಮಗುವಿಗೆ ಅಗತ್ಯ ವಿರುವಷ್ಟು ಪ್ರಮಾಣದಲ್ಲಿ ಕಬ್ಬಿಣ ಅಂಶವು ಲಭಿಸುತ್ತದೆ.

ಮಗುವಿನ ದೇಹ ಹಾಗೂ ಬುದ್ಧಿಯ ಬೆಳವಣಿಗೆಗೆ ತಾಯಿ ಹಾಲು ಸಮಗ್ರ ಆಹಾರ. ಪ್ರಿ-ಮೆಚೂರ್‌ ಮಗು ವಿಗೂ ಸಹ ತಾಯಿ ಹಾಲು ಸರ್ವಶ್ರೇಷ್ಠ. ಅವಳಿ ಮಕ್ಕಳಿಗೂ ಸಹ ತಾಯಿ ಹಾಲು 6 ತಿಂಗಳ ತನಕ ಸಾಕಾಗುತ್ತದೆ. ಮುಖ್ಯವಾಗಿ ಶಿಶುವಿಗೆ ಸ್ತನ್ಯ ಊಡಿಸುವ ತಾಯಂದಿರು ಉತ್ತಮ ಆಹಾರ, ನೀರು ಸೇವನೆ ಹಾಗೂ ಕಬ್ಬಿಣ ಸತ್ವದ ಗುಳಿಗೆ ಮತ್ತು ಕ್ಯಾಲ್ಸಿಯಂ ಗುಳಿಗೆಗಳನ್ನು ಕ್ಲಪ್ತ ಸಮಯಕ್ಕೆ ಸೇವನೆ ಮಾಡುವ ರೂಢಿ ಮಾಡಿಕೊಳ್ಳಬೇಕು.

ಸ್ತನ್ಯಪಾನ ಮಾಡಿದ ಶಿಶುವಿಗೆ ಭೇದಿ, ಕಫ‌, ಕೆಮ್ಮುವಿನಂತಹ ಆರೋಗ್ಯ ಸಮಸ್ಯೆಗಳು ಬಾಧಿಸುವ ಸಾಧ್ಯತೆ ಕಡಿಮೆ ಹಾಗೂ ತಾಯಿಗೆ ವೈರಲ್‌ ಜ್ವರದಂತಹ ಸಾಮಾನ್ಯ ಆರೋಗ್ಯ ಸಮಸ್ಯೆಗಳು ಬಾಧಿಸಿದಲ್ಲಿ ಅವು ಮಗುವಿನ ಆರೋಗ್ಯದ ಮೇಲೆ ಅಷ್ಟೇನೂ ಪ್ರತಿಕೂಲವಾಗಿ ಪರಿಣಮಿಸದು.

ಗಮನಿಸಬೇಕಾದ ಇನ್ನೊಂದು ಮಹತ್ತರ ಅಂಶ ಎಂದರೆ ತಾಯಿ ಹಾಲು ಕುಡಿದ ಮಗುವಿನ ಬುದ್ಧಿ ಉತ್ತಮ ರೀತಿ ಯಲ್ಲಿ ಬೆಳವಣಿಗೆ ಹೊಂದುತ್ತದೆ. ಸ್ತನ್ಯಪಾನ ಮಾಡಿ ಬೆಳೆದವರನ್ನು ಭವಿಷ್ಯದಲ್ಲಿ ಕೊರೊನರಿ ಹಾರ್ಟ್‌ ಕಾಯಿಲೆಗಳು, ಕೊಲೆಸ್ಟ್ರಾಲ್‌ ಸಂಬಂಧಿತ ಕಾಯಿಲೆಗಳು ಬಾಧಿಸುವುದು ಕಡಿಮೆ.

ಎಲ್ಲ ದೃಷ್ಟಿಯಿಂದಲೂ ತಾಯಿ ಹಾಲು ನವಜಾತ ಶಿಶುವಿಗೆ ಸಮಗ್ರ ಆಹಾರ. ಮಗು ಹುಟ್ಟಿದ ಮೊದಲ ಆರು ತಿಂಗಳು ಸ್ತನ್ಯವನ್ನು ಉಣಿಸುವುದು ತಾಯಿಯಾದವಳ ಕರ್ತವ್ಯ. ಈ ಆರು ತಿಂಗಳ ಅವಧಿಯಲ್ಲಿ ಮಗುವಿಗೆ ಸಮರ್ಪಕವಾಗಿ ಎದೆ ಹಾಲು ಉಣಿಸಿದಲ್ಲಿ ಮಗು ವಿಗೆ ಬಾಯಾರಿಕೆ ಆಗುತ್ತದೆ ಎಂದು ಪ್ರತ್ಯೇಕವಾಗಿ ನೀರನ್ನು ಕುಡಿಸುವ ಆವಶ್ಯ ಕತೆ ಇಲ್ಲ. ಯಾಕೆಂದರೆ ತಾಯಿ ಹಾಲಿನಲ್ಲಿ ಮಗುವಿಗೆ ಬೇಕಾ ದಷ್ಟು ನೀರಿನ ಅಂಶ ಸಿಗುತ್ತದೆ.

ಎಲ್ಲ ಬಾಣಂತಿಯರು ತಮ್ಮ ನವಜಾತ ಶಿಶುವಿಗೆ ತಮ್ಮ ಎದೆ ಹಾಲನ್ನು ಮೊದಲ ಆರು ತಿಂಗಳು ಕೊಡುವ ದೃಢ ನಿರ್ಧಾರ ಮಾಡಬೇಕು. ಹಾಗೆಯೇ ಗರ್ಭಿಣಿಯರು ಕೂಡ ಮುಂದೆ ಹುಟ್ಟಲಿರುವ ತನ್ನ ಶಿಶುವಿಗೆ ಸ್ತನ್ಯ ಉಣಿಸುವ ಸಂಕಲ್ಪ ತೊಡಬೇಕು. ಇದು ತಾಯಿಯಾದವಳು ಮಗುವಿಗೆ ಕೊಡುವ ಬಲುದೊಡ್ಡ ಉಡುಗೊರೆ.

ಸ್ತನ್ಯಪಾನ ಎಂಬುದು ಸಸ್ತನಿ ವರ್ಗಕ್ಕೆ ಸೇರಿದ ಎಲ್ಲ ಜೀವಿಗಳ ಪಾಲಿಗೆ ನಿಸರ್ಗದತ್ತ ಪ್ರಕ್ರಿಯೆ. ನವಜಾತ ಶಿಶುಗಳಿಗೆ ತಾಯಂದಿರ ಎದೆಹಾಲೇ ಆಹಾರ. ಮಕ್ಕಳಿಗೆ ಹಾಲೂಡಿಸುವ ಬಗೆಗೆ ಈಗಲೂ ಜನರಲ್ಲಿ ಅದರಲ್ಲೂ ಮುಖ್ಯವಾಗಿ ತಾಯಂದಿರಲ್ಲಿ ವಿಭಿನ್ನ ಅಭಿಪ್ರಾಯಗಳಿವೆ. ಸ್ತನ್ಯಪಾನದ ಮಹತ್ವ, ಅದರ ಅಗತ್ಯ ಮತ್ತು ಅನಿವಾರ್ಯತೆಯ ಬಗೆಗೆ ನಿರಂತರವಾಗಿ ವೈದ್ಯಕೀಯ ತಜ್ಞರು ಹೇಳುತ್ತಲೇ ಬಂದಿದ್ದರೂ ಸ್ತನ್ಯಪಾನದ ಕುರಿತಂತೆ ಮಹಿಳೆಯರಲ್ಲಿನ ಸಂಶಯಗಳು ಇನ್ನೂ ನಿವಾರಣೆಯಾಗಿಲ್ಲ. ಇತ್ತೀಚಿನ ವರ್ಷಗಳಲ್ಲಿ ಈ ಬಗ್ಗೆ ಮಹಿಳೆಯರಲ್ಲಿ ಒಂದಿಷ್ಟು ಅರಿವು ಮೂಡತೊಡಗಿದ್ದು, ಸ್ತನ್ಯಪಾನದ ಮಹತ್ವವನ್ನು ಅರಿತುಕೊಳ್ಳತೊಡಗಿದ್ದಾರೆ. ಮಗುವಿನ ಸದೃಢ ಬೆಳವಣಿಗೆಗೆ ಸ್ತನ್ಯಪಾನ ಅತ್ಯಗತ್ಯ ಮಾತ್ರವಲ್ಲದೆ ಮಗುವಿಗೆ ಎದೆಹಾಲು ಕುಡಿಸುವುದರಿಂದ ತಾಯಂದಿರಿಗೂ ಆರೋಗ್ಯ ಸಂಬಂಧಿ ಹಲವಾರು ಪ್ರಯೋಜನಗಳಿವೆ. ಮಗುವಿಗೆ ಸ್ತನ್ಯಪಾನ ಮಾಡಿಸುವುದು ತನ್ನ ಕರ್ತವ್ಯ ಎಂಬುದನ್ನು ತಾಯಿಯಾದವಳು ಎಂದಿಗೂ ಮರೆಯಬಾರದು.

ಡಾ| ಪುಷ್ಪಾ ಕಿಣಿ, ಪ್ರಾಧ್ಯಾಪಕರು, ಮಕ್ಕಳ ವಿಭಾಗ, ಕೆಎಂಸಿ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next