Advertisement

ಎದೆಹಾಲಿನ ಸಿಂಗಾರ!

02:54 PM Sep 20, 2017 | Team Udayavani |

ಎದೆಹಾಲಿನ ರಚನೆಗಳನ್ನು ಜ್ಯುವೆಲ್ಲರಿಗಳಲ್ಲಿ ಅಳವಡಿಸಿ, ಗಮನ ಸೆಳೆಯುತ್ತಿದ್ದಾರೆ ಪ್ರೀತಿ ಎಂಬ ಗೃಹಿಣಿ. ಅಷ್ಟಕ್ಕೂ ಎದೆಹಾಲಿನಿಂದ ಕಲೆ ಹೇಗೆ ರೂಪುಗೊಳ್ಳುತ್ತದೆ? ಆ ಗುಟ್ಟು ಇಲ್ಲಿದೆ ನೋಡಿ…

Advertisement

ಎಳೆಮಕ್ಕಳಿಗೆ ಎದೆಹಾಲೇ ಸರ್ವಸ್ವ. ನವಜಾತ ಶಿಶು ಹಾಲು ಕುಡಿದಷ್ಟು ಆರೋಗ್ಯವಂತವಾಗಿ, ದಷ್ಟಪುಷ್ಟವಾಗಿ, ಕಳೆತುಂಬಿಕೊಂಡು ಬೆಳೆಯುತ್ತದೆ. ಮಗು ಹಾಲು ಕುಡಿಯುವ ಘಳಿಗೆ, ತಾಯಿಗೆ ಅದೊಂದು ರೀತಿಯ ತಪಸ್ಸು. ಆದರೆ, ಕೆಲವು ಸಲ ಮಕ್ಕಳು ಎದೆಹಾಲನ್ನು ಕುಡಿಯಲು ನಿರಾಕರಿಸುವ ಪ್ರಸಂಗಗಳೂ ಇವೆ. ಮತ್ತೆ ಕೆಲವರಿಗೆ ಎದೆಹಾಲು ಹೆಚ್ಚಾಗಿ, “ಮಗುವಿಗೆ ಹಾಲು ಸಾಕಾಯ್ತು. ಎದೆಯಲ್ಲಿರುವ ಹಾಲು ವೇಸ್ಟ್‌ ಆಗುತ್ತಲ್ಲ!’ ಎಂಬ ಬೇಸರವೂ ಬರುತ್ತದೆ.

ಆ ಬೇಸರವೇ ಇಲ್ಲೊಬ್ಬಕೆಗೆ ಕಲಾವಿದೆಯನ್ನಾಗಿ ರೂಪಿಸಿದೆ! ಆ ಕಲೆಯಿಂದಲೇ ಆಕೆ ಮಾರುಕಟ್ಟೆ ಕಂಡುಕೊಂಡಿದ್ದಾಳೆ. ಹಾಗಂತ, ಅವಳು ಎದೆಹಾಲನ್ನು ಮಾರಿ ದುಡ್ಡು ಮಾಡುತ್ತಾಳಾ? ಖಂಡಿತಾ ಇಲ್ಲ! ಈ ಜಾಣೆಯ ಆಲೋಚನೆಗಳೇ ಬೇರೆ. ಎದೆಹಾಲಿಗೆ ಆಕೆ ವಿಶೇಷ ರೂಪ ಕೊಟ್ಟು, ಅದರಿಂದ ಅಂದದ ಆಭರಣ ತಯಾರಿಸುತ್ತಾಳೆ. ಕಿವಿಯೋಲೆ, ಉಂಗುರ, ಕುತ್ತಿಗೆಗೆ ಸರ, ಪದಕಗಳಲ್ಲಿ ಎದೆಹಾಲಿನ ರಚನೆಗಳನ್ನು ಬಳಸಿಕೊಂಡು, ನೆನಪಿನಲ್ಲಿ ಉಳಿಯುವಂಥ ಕಲಾಕೃತಿಯಾಗಿಸುತ್ತಿದ್ದಾಳೆ.

ಎದೆಹಾಲಿಗೆ ಹೀಗೆಲ್ಲ ವಿಶೇಷವಾಗಿ ಆಕಾರ ನೀಡಿರುವುದು, ಚೆನ್ನೈನ 30 ವರ್ಷದ “ಪ್ರೀತಿ’ ಎಂಬಾಕೆ. ಈ ಮೊದಲು ಪಾಲಿಮರ್‌- ಜೇಡಿಮಣ್ಣಿನಿಂದ ಜ್ಯುವೆಲರಿ ಮಾದರಿ ತಯಾರಿಸಿ ಯಶಸ್ವಿಯಾಗಿದ್ದ ಪ್ರೀತಿ, ಎದೆಹಾಲಿನ ಗುಣಗಳನ್ನು ಅಧ್ಯಯನಿಸಿದರಂತೆ. ಮನುಷ್ಯನ ಎದೆಹಾಲಿಗೆ ಒಂದು ವಿಶೇಷ ಶಕ್ತಿಯಿದೆ. ಎದೆಹಾಲು ವಾತಾವರಣಕ್ಕೆ ತೆರೆದುಕೊಂಡ ತಕ್ಷಣ ಅದನ್ನು ವಿಶೇಷವಾಗಿ ಸಂರಕ್ಷಿಸಬೇಕು.ತಿಂಗಳ ನಂತರ, ಅದರ ಬಣ್ಣವೇ ಬದಲಾಗುತ್ತದೆ. ಆ ಬಣ್ಣ ಒಂದೇ ರೀತಿ ಇರುವುದಿಲ್ಲ; ಮನುಷ್ಯನ ಜೀನ್‌ಗೆ ತಕ್ಕಂತೆ, ಆರೋಗ್ಯ ಲಕ್ಷಣಕ್ಕೆ ತಕ್ಕಂತೆ ಬದಲಾಗುತ್ತದೆ. ಈ ಗುಣವನ್ನು ಆಧರಿಸಿಯೇ ಅವರು ಮೊದಲ ಬಾರಿಗೆ ಕಿವಿಯೋಲೆಯನ್ನು ಸಿದ್ಧಪಡಿಸಿ, “ವ್ಹಾವ್‌’ ಎಂಬ ಅಚ್ಚರಿ ಹೊರಹಾಕಿದರು.

ಎದೆಹಾಲಿನಿಂದ ಪುಟ್ಟ ಕಾಲುಗಳು, ಕಣ್ಣು, ತುಟಿಗಳನ್ನು ರಚಿಸಿ, ಆಭರಣಗಳಲ್ಲಿ ಅದನ್ನು ಅಳವಡಿಸಿದರು. ಪ್ರೀತಿ ಅವರ ಈ ಕಲೆ ದಿನದಿಂದ ದಿನಕ್ಕೆ ಜನಪ್ರಿಯತೆ ಪಡೆಯಿತು. ಈಗ ಅವರಿಗೆ ಫೇಸ್‌ಬುಕ್‌ ಮುಖಾಂತರವಾಗಿಯೇ ವಾರಕ್ಕೆ ಕನಿಷ್ಠ 12 ಆರ್ಡರ್‌ಗಳು ಬರುತ್ತಿವೆ. 4-5 ರಚನೆಗಳನ್ನು ಇವರು ಒಂದು ವಾರದಲ್ಲಿ ಸಿದ್ಧಪಡಿಸುತ್ತಾರೆ. ಅದರ ದರಗಳೂ 4 ಸಾವಿರ ರೂ. ಮಿತಿಯೊಳಗೆ ಇವೆ.

Advertisement

ಪ್ರೀತಿ ತಮ್ಮನ್ನು ಸಂಪರ್ಕಿಸಿದ ಗ್ರಾಹಕರಿಗೆ, ಎದೆಹಾಲನ್ನು ಕಳುಹಿಸಬೇಕಾದ ಸುರಕ್ಷಿತ ವಿಧಾನವನ್ನು ಮೊದಲು ತಿಳಿಸುತ್ತಾರೆ. ಅದರಂತೆಯೇ ಎದೆಹಾಲನ್ನು ಅವರಿಗೆ ಕಳುಹಿಸಿ, ಮೋಡಿಗೈಯ್ಯುವ ಜ್ಯುವೆಲ್ಲರಿಗಳನ್ನು ಪಡೆಯಬಹುದು.

ಅಂದಹಾಗೆ, ಪ್ರೀತಿ ಅವರು ಕೇವಲ ಎದೆಹಾಲಿನಿಂದ ಮಾತ್ರ ಆಭರಣ ತಯಾರಿಸುವುದಿಲ್ಲ. “ಮಗುವಿನ ಹುಟ್ಟನ್ನು ಅನೇಕರು ಸಂಭ್ರಮಿಸುತ್ತಾರೆ. ಆದ ಕಾರಣ ನಾನು, ಮಗುವಿನ ತಲೆಕೂದಲು, ಬಿದ್ದುಹೋದ ಪುಟ್ಟ ಹಲ್ಲುಗಳನ್ನು ಅಳವಡಿಸಿಯೂ ಆಭರಣ ತಯಾರಿಸುತ್ತೇನೆ. ಇಂಥ ಆಭರಣಗಳು ನಮ್ಮ ನೆನಪಿನಲ್ಲಿ ಶಾಶ್ವತವಾಗಿ ದಾಖಲಾಗುತ್ತವೆ. ನಾಲ್ಕು ಜನರ ಮುಂದೆ ಇವುಗಳನ್ನು ಪ್ರದರ್ಶಿಸುವಾಗಲೂ ಏನೋ ಹೆಮ್ಮೆಯಾಗುತ್ತದೆ’ ಎನ್ನುತ್ತಾರೆ ಪ್ರೀತಿ.

ಪ್ರೀತಿ ಅವರ ಫೇಸ್‌ಬುಕ್‌ ಪುಟ: @BreastmilkJewelleryandKeepsakes

Advertisement

Udayavani is now on Telegram. Click here to join our channel and stay updated with the latest news.

Next