Advertisement

ಸ್ತನ ಕ್ಯಾನ್ಸರ್‌; ನಿಯಮಿತ ಸರಳ ಪರೀಕ್ಷೆಗಳ ಅಗತ್ಯ

12:05 PM Oct 23, 2022 | Team Udayavani |

ಭಾರತದಲ್ಲಿ 2020ರ ರಾಷ್ಟ್ರೀಯ ಕ್ಯಾನ್ಸರ್‌ ನೊಂದಣಿಯ ದಾಖಲೆಗಳ ಪ್ರಕಾರ ಪ್ರತಿ ಒಂದು ಲಕ್ಷ ಗಂಡಸರಲ್ಲಿ 94 ಮಂದಿ ಹಾಗೂ ಹೆಂಗಸರಲ್ಲಿ 103 ಮಂದಿ ಕ್ಯಾನ್ಸರ್‌ಗೆ ಒಳಗಾಗುತ್ತಿದ್ದಾರೆ. ಗಂಡಸರಲ್ಲಿ ಶ್ವಾಸಕೋಶ, ಬಾಯಿ, ಗಂಟಲು, ನಾಲಗೆ, ಪ್ರಾಸ್ಟೇಟ್‌, ಹೊಟ್ಟೆ ಹಾಗೂ ಹೆಂಗಸರಲ್ಲಿ ಸ್ತನಗಳು, ಗರ್ಭಕಂಠ, ಅಂಡಾಶಯ, ಗರ್ಭಕೋಶ ಮತ್ತು ಶ್ವಾಸಕೋಶ ಕ್ಯಾನ್ಸರ್‌ಗಳು ಹೆಚ್ಚಾಗಿ ಕಂಡು ಬರುತ್ತಿವೆ. ದೇಶದಲ್ಲಿ ಸರಾಸರಿ ಪ್ರತಿ 4 ನಿಮಿಷಗಳಿಗೆ ಒಬ್ಬ ಮಹಿಳೆಯರಲ್ಲಿ ಕ್ಯಾನ್ಸರ್‌ ಪತ್ತೆಯಾಗುತ್ತದೆ ಹಾಗೂ ಪ್ರತಿ 13 ನಿಮಿಷಗಳಿಗೆ ಒಬ್ಬರು ಇದರಿಂದ ಸಾವನ್ನಪ್ಪುತ್ತಿದ್ದಾರೆ.

Advertisement

ಭಾರತದಲ್ಲಿ ಸ್ತನಗಳ ಕ್ಯಾನ್ಸರ್‌ ಪ್ರಕರಣಗಳು ಮಹಿಳೆಯರಲ್ಲಿ 30 ವರ್ಷಗಳ ಅನಂತರ ಕಂಡು ಬರುತ್ತಿದೆ ಹಾಗೂ 50 ರಿಂದ 65 ವರ್ಷ ವಯೋಮಾನದವರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಸ್ತನದ ಕ್ಯಾನ್ಸರ್‌ ಅಲ್ಲಿನ ಜೀವಕೋಶಗಳ ಅಸಹಜ ವಿಭಜನೆ, ಬೆಳವಣಿಗೆಯಿಂದ ಉಂಟಾಗುವ ಗಡ್ಡೆಯಾಗಿದೆ. ದೇಹದಲ್ಲಿ ಜೀವಕೋಶಗಳ ವಿಭಜನೆ ಒಂದು ಸಾಮಾನ್ಯ ಪ್ರಕ್ರಿಯೆ. ಆದರೆ ಕೆಲವು ಕ್ಯಾನ್ಸರ್‌ ಪ್ರಚೋದಕ ಅಂಶಗಳಿಂದ ಈ ಕ್ರಿಯೆ ವ್ಯತ್ಯಯಗೊಂಡು ಜೀವಕೋಶಗಳು ಅಸ್ವಾಭಾವಿಕವಾಗಿ, ಅಸಹಜವಾಗಿ ಬೆಳವಣಿಗೆಗೊಂಡು ಗಡ್ಡೆಗಳು (ಕ್ಯಾನ್ಸರ್‌) ಕಾಣಿಸಿಕೊಳ್ಳುತ್ತದೆ. ಈ ಗಡ್ಡೆಗಳು ಮೊದಲು ಸ್ತನಗಳಿಗೆ ಅಷ್ಟೇ ಸೀಮಿತವಾಗಿದ್ದರೆ ಕ್ರಮೇಣ ಸಮೀಪದ ನಿರ್ನಾಳ ಗ್ರಂಥಿಗಳು, ಶ್ವಾಸಕೋಶ, ಹಾಗೂ ದೇಹದ ಇತರ ಅಂಗಗಳಿಗೂ ಹರಡಬಲ್ಲದು.

ಈ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸಲು ಪ್ರತೀ ವರ್ಷ ಅಕ್ಟೋಬರ್‌ ಮಾಸವನ್ನು ಪ್ರಪಂಚದಾದ್ಯಂತ ಸ್ತನಗಳ ಕ್ಯಾನ್ಸರ್‌ ಬಗ್ಗೆ ಅರಿವು ಮೂಡಿಸುವ ಮಾಸ ಎಂದು ಆಚರಿಸಲಾಗುತ್ತದೆ. ಗುಲಾಬಿ (ಪಿಂಕ್‌) ಬಣ್ಣದ ರಿಬ್ಬನ್‌ ಅನ್ನು ಆ ಬಗ್ಗೆ ಸೂಚಕವಾಗಿ ಬಳಸಲಾಗುತ್ತದೆ. ಆದ್ದರಿಂದ ಅಕ್ಟೋಬರ್‌ ತಿಂಗಳನ್ನು ʼಪಿಂಕ್ಟೋಬರ್‌’ ಎಂದು ಕೂಡ ಕರೆಯಲಾಗುತ್ತದೆ.

ಈ ಕ್ಯಾನ್ಸರ್‌ ಹರಡುತ್ತಿರುವ ರೀತಿ, ಗಡ್ಡೆಯ ಗಾತ್ರ, ಹರಡಿರುವ ಇತರ ಅಂಗಗಳ ಅನುಸಾರವಾಗಿ ರೋಗವನ್ನು ನಾಲ್ಕು ಹಂತವಾಗಿ ವಿಂಗಡಿಸಲಾಗುತ್ತದೆ. ಶೂನ್ಯ ಹಂತ ಎಂದರೆ ಗಡ್ಡೆ ಇನ್ನೂ ಕೇವಲ ಸ್ತನ ಭಾಗದಲ್ಲಿ ಇದ್ದು, ಇತರ ಭಾಗಗಳಿಗೆ ಹರಡದೇ ಇರುವ ಹಂತ. ಈ ಹಂತದಲ್ಲಿ ಪತ್ತೆಯಾದಲ್ಲಿ ಅದರ ಚಿಕಿತ್ಸೆ ಸುಲಭವಾಗುತ್ತದೆ. ಅದು ಅಲ್ಲಿಂದ ಹರಡಲು ಪ್ರಾರಂಭವಾದ ಮೇಲೆ ಅದು ಎಷ್ಟು ಹರಡಿದೆ ಎಂಬ ಆಧಾರದಲ್ಲಿ ಶಸ್ತ್ರಚಿಕಿತ್ಸೆ, ರೇಡಿಯೋಥೆರಪಿ, ಕೀಮೋಥೆರಪಿ ಚಿಕಿತ್ಸಾ ವಿಧಾನಗಳನ್ನು ನಿರ್ಧರಿಸಲಾಗುವುದು. ಮೊದಲ ಹಂತದಲ್ಲಿ ಸರಳ ವಿಧಾನಗಳಿಂದ ಪತ್ತೆ (ಸ್ಕ್ರೀನಿಂಗ್‌ ಪರೀಕ್ಷೆ) ಮಾಡಿದಲ್ಲಿ ಪರಿಣಾಮಕಾರಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ.

ಸ್ತನ ಕ್ಯಾನ್ಸರ್‌ಗೆ ಅಪಾಯಕಾರಿ ಅಂಶಗಳು

Advertisement

„ ಸ್ತನದ ಗಡ್ಡೆಗಳು- ಸ್ತನದಲ್ಲಿ ಗಡ್ಡೆಗಳನ್ನು ಹೊಂದಿರುವ ಮಹಿಳೆಯರು ಅನಂತರ ಕ್ಯಾನ್ಸರ್‌ಗೊಳಗಾಗುವ ಅಪಾಯ ಅಧಿಕ

„ ಯಾವ ಮಹಿಳೆಯ ಸಮೀಪ ಸಂಬಂಧಿಕರಲ್ಲಿ ತಾಯಿ ಅಥವಾ ಸಹೋದರಿ ಸ್ತನದ ಕ್ಯಾನ್ಸರ್‌ಗೆ ತುತ್ತಾಗಿದ್ದರೆ ಅಂಥವರಲ್ಲಿ ಕಂಡುಬರುವ ಸಾಧ್ಯತೆ ಹೆಚ್ಚಿರುತ್ತದೆ. „ವಯಸ್ಸು ಹೆಚ್ಚಾದಂತೆ ಅವರಲ್ಲಿ ಸ್ತನ ಕ್ಯಾನ್ಸರ್‌ ಕಂಡು ಬರುವ ಅಪಾಯಗಳು ಹೆಚ್ಚಾಗುತ್ತದೆ.

„ ಮುಂಚಿತವಾಗಿ ಆರಂಭವಾದ ಮುಟ್ಟಿನ ಅವಧಿ (12 ವರ್ಷಕ್ಕಿಂತಲೂ ಮೊದಲು).

„ ತಡವಾಗಿ ಋತುಬಂಧ (55 ವರ್ಷಗಳ ಅನಂತರ).

„ಋತುಬಂಧ ಸಮಯದಲ್ಲಿ ಅಥವಾ ಅನಂತರ 5 ವರ್ಷಗಳಲ್ಲಿ ಹಾರ್ಮೋನ್‌ ಚಿಕಿತ್ಸೆ ಪಡೆದುಕೊಂಡಿರುವುದು ಕ್ಯಾನ್ಸರ್‌ ಅಪಾಯವನ್ನು ಹೆಚ್ಚಿಸುತ್ತದೆ.

„ದೈಹಿಕ ಚಟುವಟಿಕೆಗಳ ಕೊರತೆ (ಬೊಜ್ಜು ದೇಹ)

„ ಸ್ತನ್ಯಪಾನ ಮಾಡಿಸದೇ ಇರುವುದು ಅಥವಾ ಕಡಿಮೆ ಅವಧಿಯ ಸ್ತನ್ಯಪಾನ.

„ ಬಸಿರಾಗದೇ ಇರುವುದು ಅಥವಾ 30 ವರ್ಷಗಳ ಅನಂತರ ಮೊದಲ ಬಸಿರು.

ಈ ಅಪಾಯಕಾರಿ ಅಂಶಗಳು ಸ್ತನ ಕ್ಯಾನ್ಸರ್‌ನ ಸಂಭವತೆಯನ್ನು ಹೆಚ್ಚಿಸುವುದಾದರೂ ಈ ಅಪಾಯ ಲಕ್ಷಣಗಳನ್ನು ಹೊಂದಿರುವ ಎಲ್ಲ ಮಹಿಳೆಯರು ಈ ರೋಗಕ್ಕೆ ತುತ್ತಾಗುವುದಿಲ್ಲ.

ಸ್ತನ ಕ್ಯಾನ್ಸರ್‌ಸಾಮಾನ್ಯ ಎಚ್ಚರಿಕೆ ಚಿಹ್ನೆಗಳು

„ಸ್ತನ ಅಥವಾ ಕಂಕುಳ ಪ್ರದೇಶದಲ್ಲಿ ಗಡ್ಡೆ ಕಾಣಿಸಿಕೊಳ್ಳುವುದು.

„ ಸ್ತನದ ಯಾವುದೇ ಭಾಗದಲ್ಲಿ ಗಡುಸಾಗುವುದು ಅಥವಾ ಉರಿಯೂತ.

„ ಸ್ತನದ ಚರ್ಮದಲ್ಲಿ ಕಿರಿ ಕಿರಿ ಅಥವಾ ಟೊಳ್ಳಾಗುವುದು.

„ ಮೊಲೆ ತೊಟ್ಟಿನ ಜಾಗದಲ್ಲಿ ಕೆಂಪಾಗುವಿಕೆ ಅಥವಾ ಅಲ್ಲಿ ಚರ್ಮ ಸುಲಿದಂತಾಗುವುದು.

„ ಮೊಲೆ ತೊಟ್ಟಿನ ಒಳ ಎಳೆಯುವಿಕೆ (retract), ಸ್ಥಾನ ಅಥವಾ ಆಕಾರದಲ್ಲಿ ಬದಲಾವಣೆ ಮತ್ತು ನೋವು ಕಾಣಿಸಿಕೊಳ್ಳುವುದು.

„ ಮೊಲೆ ತೊಟ್ಟಿನಲ್ಲಿ ರಕ್ತ ಸೇರಿದಂತೆ ಇತರೆ ಸ್ರಾವಗಳು.

„ ಸ್ತನ ಆಕಾರ ಅಥವಾ ಗಾತ್ರದಲ್ಲಿ ಯಾವುದೇ ಬದಲಾವಣೆ.

„ ಸ್ತನದ ಯಾವುದೇ ಭಾಗದಲ್ಲಿ ಅಥವಾ ಕಂಕುಳದಲ್ಲಿ ನಿರಂತರ ನೋವು.

ಮಹಿಳೆಯರಿಗೆ ಈ ತೆರನಾದ ಯಾವುದೇ ಬದಲಾವಣೆ ಕಾಣಿಸಿದರೆ ಅವರು ತಪ್ಪದೇ ಕೂಡಲೇ ಸಮೀಪದ ವೈದ್ಯರಲ್ಲಿ/ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳಬೇಕು.

ಸ್ತನ ಕ್ಯಾನ್ಸರ್‌ ತಪಾಸಣೆಗಾಗಿ ನಿಯಮಿತ ಸ್ಕ್ರೀನಿಂಗ್‌ ಪರೀಕ್ಷೆಗಳನ್ನು ಮಾಡುವುದರಿಂದ ಅದರ ಆರಂಭ ಹಂತದಲ್ಲಿಯೇ ಪತ್ತೆ ಹಚ್ಚಲು ಸಹಾಯಕವಾಗುವುದು. ಇತ್ತೀಚೆಗೆ ಹೊಸದಾಗಿ ಕಂಡು ಹಿಡಿದ ಸರಳವಾದ ಕೈಯಲ್ಲಿ ಹಿಡಿದು ಪರೀಕ್ಷೆ ಮಾಡಲು ಸಾಧ್ಯವಾಗುವಂತಹ ಸಣ್ಣ ಸಾಧನದ ಸಹಾಯದಿಂದ ನೋವಿಲ್ಲದೇ ಸ್ತನಗಳ ಪರೀಕ್ಷೆ ಮಾಡಿ ಗಡ್ಡೆಗಳು ಇರುವುದನ್ನು ಮೊದಲ ಹಂತದಲ್ಲಿಯೇ ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ.

ಇದನ್ನು ನರ್ಸಿಂಗ್‌ ಹೋಂಗಳಲ್ಲಿ, ಆಸ್ಪತ್ರೆಗಳಲ್ಲಿ, ಆರೋಗ್ಯ ಶಿಬಿರಗಳಲ್ಲಿ ತರಬೇತಿ ಪಡೆದ ವೈದ್ಯರು, ದಾದಿಯರು ಮಾಡಬಹುದಾಗಿದ್ದು ಪರೀಕ್ಷೆಯಲ್ಲಿ ಗಡ್ಡೆಗಳು ಇರುವುದು ಕಂಡು ಬಂದರೆ, ಅಗತ್ಯಬಿದ್ದಲ್ಲಿ ಮುಂದಿನ ಹಂತದ ಮ್ಯಾಮೊಗ್ರಾಮ್‌ ಹಾಗೂ ಬಯಾಪ್ಸಿ ಪರೀಕ್ಷೆಗಳಿಂದ ದೃಢಪಡಿಸಿಕೊಳ್ಳಬಹುದಾಗಿದೆ. 30 ವರ್ಷ ವಯಸ್ಸಿನ ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರು ಪ್ರತೀ ಐದು ವರ್ಷಗಳಿಗೆ ಒಮ್ಮೆಯಾದರೂ ಇಂತಹ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು.

ಇದಲ್ಲದೆ ಪ್ರತೀ ಮಹಿಳೆಗೆ ಸ್ವಯಂ ಸ್ತನ ಪರೀಕ್ಷೆ ಮಾಡಿಕೊಳ್ಳಲು ವೈದ್ಯರು/ತರಬೇತಿ ಹೊಂದಿದ ನರ್ಸ್‌ಗಳು ಹೇಳಿಕೊಡಬೇಕು. ಇದು ಮಹಿಳೆಯರಿಗೆ ಅವರ ಆರೋಗ್ಯ ಕುರಿತಂತೆ ಹೆಚ್ಚು ಜವಾಬ್ದಾರಿ ತೆಗೆದುಕೊಳ್ಳಲು ಪ್ರೇರಣೆ ನೀಡುವುದು. ಸ್ತನಗಳಲ್ಲಿ ಆಗಬಹುದಾದ ಯಾವುದೇ ಬದಲಾವಣೆಗಳನ್ನು ಗುರುತಿಸಲು ಈ ಪರೀಕ್ಷೆಯನ್ನು ಮನೆಯಲ್ಲಿಯೇ ಮಹಿಳೆಯರು ತಿಂಗಳಿಗೆ ಒಮ್ಮೆ ಮಾಡಿಕೊಳ್ಳಬೇಕು. ಋತುಚಕ್ರದ ಮೊದಲ ಏಳರಿಂದ ಹತ್ತು ದಿನಗಳ ಅನಂತರ ಸ್ತನಗಳ ಸ್ವ-ಪರೀಕ್ಷೆ ಮಾಡುವುದು ಹಾಗೂ ಮುಟ್ಟಿನ ಅವಧಿ ನಿಂತ ಮೇಲೆ ಸಹ ಪ್ರತೀ ತಿಂಗಳು ಒಂದು ನಿಗದಿತ ಸ್ವ ಪರೀಕ್ಷೆ ಮಾಡಿಕೊಳ್ಳುವುದು ಉತ್ತಮ.

ಸಂಘ-ಸಂಸ್ಥೆಗಳ ನೆರವಿನಿಂದ ನಮ್ಮ ವಿಭಾಗವು ಸಮುದಾಯದಲ್ಲಿ ಅಲ್ಲಲ್ಲಿ ಸ್ತನ, ಗರ್ಭಕೋಶದ ಕಂಠ (cervix)ಹಾಗೂ ಬಾಯಿಯಲ್ಲಿ ಕಂಡುಬರಬಹುದಾದ ಕ್ಯಾನ್ಸರ್‌ಗಳ ಉಚಿತ ತಪಾಸಣ ಶಿಬಿರ (Screening camp)ಗಳನ್ನು ಆಯೋಜಿಸುತ್ತಲಿದೆ.

-ಡಾ| ರಂಜಿತಾ ಶೆಟ್ಟಿ, ಅಸೋಸಿಯೇಟ್‌ ಪ್ರೊಫೆಸರ್‌, ಕಮ್ಯುನಿಟಿ ಮೆಡಿಸಿನ್‌ ವಿಭಾಗ ಮತ್ತು ಕೋ-ಆರ್ಡಿನೇಟರ್‌, ಸೆಂಟರ್‌ ಫಾರ್‌ ಇಂಡಿಜಿನಸ್‌ ಪಾಪ್ಯುಲೇಶನ್‌ ಕೆ.ಎಂ.ಸಿ., ಮಾಹೆ, ಮಣಿಪಾಲ

-ಡಾ| ಅಶ್ವಿ‌ನಿ ಕುಮಾರ್‌ ಗೋಪಾಡಿ ಪ್ರೊಫೆಸರ್‌ ಹಾಗೂ ಮುಖ್ಯಸ್ಥರು, ಕಮ್ಯುನಿಟಿ ಮೆಡಿಸಿನ್‌, ಕೆ.ಎಂ.ಸಿ., ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಓಂಕಾಲಜಿ ವಿಭಾಗ, ಕೆಎಂಸಿ, ಮಾಹೆ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next