ಮೈಸೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬಾರದು ಎಂಬ ಕಾರಣಕ್ಕೆ ಸಿದ್ದರಾಮಯ್ಯ ಅವರು ಲಿಂಗಾಯತ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಒಂದು ಬುದ್ಧಿ ಇದೆ. ತನಗಲ್ಲದ್ದು ಬೇರೆಯವರಿಗೂ ಧಕ್ಕಬಾರದು ಎಂಬುದು. ಈ ಕಾರಣಕ್ಕೆ ಅವರು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬಾರದು ಎಂದು ಲಿಂಗಾಯತ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಮತ್ತೊಂದು ರೀತಿಯಲ್ಲಿ ನೋಡಿದರೆ ವರುಣಾ ಕ್ಷೇತ್ರದಲ್ಲಿ ಲಿಂಗಾಯತರು ಒಗ್ಗಟ್ಟಾಗಿದ್ದಾರೆ ಎಂಬ ಆಕ್ರೋಶ ಇರಬಹುದು. ಇಲ್ಲವೇ ಎರಡು ಕ್ಷೇತ್ರಕ್ಕೆ ಟಿಕೆಟ್ ಕೊಡಲಿಲ್ಲ ಎಂಬ ಸಿಟ್ಟೂ ಇರಬಹುದು ಎಂದರು.
ಲಿಂಗಾಯತ ಡ್ಯಾಂ ಒಡೆದಿದ್ದೇವೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿ ಕೆಗೆ ಪ್ರತಿ ಕ್ರಿ ಯಿಸಿದ ರವಿ, ಸಮಾಜ ಒಡೆಯುವುದು ಅವರ ರಾಜಕೀಯದ ಒಂದು ಭಾಗ. ಆದರೆ ನಾವು ಬಸವಣ್ಣ, ಕನಕದಾಸರು, ಕೆಂಪೇಗೌಡರು, ಸಂಗೊಳ್ಳಿ ರಾಯಣ್ಣ ಮುಂತಾದವರ ಮೂಲಕ ಡ್ಯಾಂನ ಎತ್ತರವನ್ನು ಹೆಚ್ಚಿಸಿ ಭದ್ರಗೊಳಿಸಿದ್ದೇವೆ. ಅದು ಚುನಾವಣೆ ಫಲಿತಾಂಶದಲ್ಲಿ ಗೊತ್ತಾಗುತ್ತದೆ. ಅವೆಲ್ಲವನ್ನೂ ಹಿಂದುತ್ವದ ಮೂಲಕ ಗಟ್ಟಿಗೊಳಿಸಿದ್ದೇವೆ ಎಂದು ಹೇಳಿದರು.
ಸಿ.ಟಿ.ರವಿ ರಾಜ್ಯದ ಮುಂದಿನ ಮುಖ್ಯಮಂತ್ರಿ ಎಂದು ರಾಜ್ಯದ ಉದ್ದಕ್ಕೂ ಕೂಗಿದಾಗ ನಾನೂ ಸಿಎಂ ಆಗಬೇಕು ಎಂದು ಕೇಳುತ್ತೇನೆ. ಅದುವರೆಗೆ ಕೇಳುವುದಿಲ್ಲ. ಸೋಮಣ್ಣ ರಾಜ್ಯ ನಾಯಕರು. ಬಾದಾಮಿ, ಕೋಲಾರಕ್ಕೆ ಅನ್ವಯವಾಗದ ಹೊಸಬ ಎಂಬ ಪ್ರಶ್ನೆ ವರುಣಾಕ್ಕೆ ಯಾಕೆ ಅನ್ವಯಿಸುತ್ತದೆ ಎಂದ ಅವರು, ಜನಾಭಿಪ್ರಾಯ ತಡೆಯಲು ಯಾರಿಂದಲೂ ಸಾಧ್ಯವಾಗಲಿಲ್ಲ ಎಂದು ಹೇಳಿದರು.
ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಭೋಜೇಗೌಡರು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಕೈಗೊಂಡಿದ್ದಾರೆ. ಇದು ಚುನಾವಣ ಪೂರ್ವ ಹೊಂದಾಣಿಕೆಯೋ, ರಾಜಕೀಯ ವ್ಯಭಿಚಾರವೋ ಹೇಳಬೇಕು. ಬಹಿರಂಗವಾಗಿ ಮತಯಾಚಿಸುತ್ತಿದ್ದಾರೆ. ಇದು ಹೊಂದಾಣಿಕೆಯಾದರೆ ವರಿಷ್ಠರು ಕ್ರಮ ಕೈಗೊಳ್ಳುವುದಿಲ್ಲ. ಇಲ್ಲವಾದರೆ ಶಿಸ್ತು ಕ್ರಮ ಕೈಗೊಳ್ಳುತ್ತಾರೆ. ಬಹಳ ಮಂದಿ ನನ್ನನ್ನು ಟಾರ್ಗೆಟ್ ಮಾಡಿಕೊಂಡಿದ್ದಾರೆ. ಆದರೆ ಜನ ನನ್ನ ಪರವಾಗಿದ್ದಾರೆ.
-ಸಿ.ಟಿ.ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ