ಹೊಸದಿಲ್ಲಿ: ಕಳೆದು ಹೋಗಿದ್ದ ಮಾರ್ಕ್ಸ್ ಕಾರ್ಡ್ ಸಿಕ್ಕಿದೆ ಎಂದು ಬ್ರೇಕಿಂಗ್ ನ್ಯೂಸ್ ತಲೆಬರಹದಲ್ಲಿ ಟ್ವೀಟ್‌ವೊಂದನ್ನು ಮಾಡಿರುವ ಕಾಂಗ್ರೆಸ್ ಸಾಮಾಜಿಕ ತಾಣಗಳ ವಿಭಾಗದ ಉಸ್ತುವಾರಿ ರಮ್ಯಾ ಮತ್ತೆ ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ರಿಪೋರ್ಟ್ ಕಾರ್ಡ್ ಎನ್ನುವ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಶೋಕ ಚಕ್ರದ ಚಿಹ್ನೆಯನ್ನು ಬಳಸಿ ಕೇಸರಿ ಬಣ್ಣದ ಕಾರ್ಡ್ ಪೋಸ್ಟ್ ಮಾಡಲಾಗಿದ್ದು, ಇದರಲ್ಲಿ ಪ್ರಧಾನಿ ಕೆಲಸಕ್ಕೆ ಒಟ್ಟಾರೆಯಾಗಿ ‘ಡಿ ಗ್ರೇಡ್’ ನೀಡಲಾಗಿದೆ.
ಉದ್ಯೋಗದಲ್ಲಿ ಡಿ ಗ್ರೇಡ್, ರಕ್ಷಣೆಯಲ್ಲಿ ಸಿ ಗ್ರೇಡ್, ಆರೋಗ್ಯ ಕ್ಷೇತ್ರದಲ್ಲಿ ಎಫ್ ಗ್ರೇಡ್, ಆರ್ಥಿಕಥೆಯಲ್ಲಿ ಎಫ್ ಗ್ರೇಡ್ , ಮಹಿಳಾ ಸುರಕ್ಷತೆಯಲ್ಲಿ ಸಿ ಗ್ರೇಡ್‌ನಿàಡಲಾಗಿದ್ದರೆ. ಕಥೆ ಹೇಳುವುದರಲ್ಲಿ ಮಾತ್ರ ಎ ++ ಗ್ರೇಡ್ ನೀಡಲಾಗಿದೆ.
ಇತರ ಚಟುವಟಿಕೆಗಳಲ್ಲಿ ‘ಕೋಮುವಾದ ಮತ್ತು ಹಿಂಸೆ’ ಎಂದು ಬರೆಯಲಾಗಿದೆ. ಮೌಖೀಕ ಪರೀಕ್ಷೆ (ವೈವಾ)ಗೆ ಹಾಜರಾಗಿಲ್ಲ ಎಂದು ತೋರಿಸಲಾಗಿದೆ.
ಜನರೊಂದಿಗೆ ಭಯಂಕರವಾಗಿ ವರ್ತಿಸುತ್ತಾರೆ, ದ್ವೇಷ ಹರಡುತ್ತಾರೆ ಮತ್ತು ದೇಶ ಮುನ್ನಡೆಸುವುದರಲ್ಲಿ ಅಸಮರ್ಥನಿದ್ದಾರೆ. ಸುಳ್ಳು ಕಥೆಗಳನ್ನು ಹೇಳುವುದಲ್ಲಿ ಉತ್ತಮ ಹಿಡಿತ ಹೊಂದಿದ್ದಾರೆ ಎಂದು ವ್ಯಂಗ್ಯ ಭರಿತವಾಗಿ ಟೀಕೆಗಳ ಮಳೆ ಸುರಿಸಿದ್ದಾರೆ.
ರಮ್ಯಾ ಟ್ವೀಟ್ ವಿರುದ್ಧ ಮೋದಿ ಅಭಿಮಾನಿಗಳು ವ್ಯಾಪಕ ಆಕ್ರೋಶ ಹೊರ ಹಾಕಿ ಪ್ರತ್ಯುತ್ತರಗಳನ್ನು ನೀಡುತ್ತಿದ್ದಾರೆ.