Advertisement

MAHE ಪ್ರಪ್ರಥಮ ಬಾರಿಗೆ ಘಟಿಕೋತ್ಸವದಲ್ಲಿ ನವೋದ್ಯಮಿ ಮತ್ತು ಸಂಶೋಧಕರಿಗೆ ಗೌರವ

09:49 PM Nov 18, 2023 | Team Udayavani |

ಮಣಿಪಾಲ : ಭಾರತದಲ್ಲಿ ಸಂಶೋಧನೆಗಳಿಗೆ ಆದ್ಯತೆ ನೀಡಿರುವ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದಾಗಿರುವ ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ ರಾಷ್ಟ್ರೀಯ ಶಿಕ್ಷಣ ನೀತಿ-2020 ರೊಂದಿಗೆ ಹೊಂದಿಕೊಳ್ಳುವ ಶೆಕ್ಷಣಿಕ ಪ್ರಸ್ತಾವನೆಯ ಯೋಜನೆಯ ವಿವಿಧ ಅಂಶಗಳನ್ನು ಚರ್ಚಿಸುವ ಸಮಾವೇಶವನ್ನು ಹಮ್ಮಿಕೊಳ್ಳುತ್ತಿದೆ. ಈ ಸಂವಾದದ ನೇತೃತ್ವವನ್ನು ಮಾಹೆಯ ಪ್ರೊ ಛಾನ್ಸಲರ್‌ ಡಾ. ಎಚ್‌. ಎಸ್‌. ಬಲ್ಲಾಳ್‌, ಉಪಕುಲಪತಿ ಲೆ. ಜ. ಡಾ. ಎಂ. ಡಿ. ವೆಂಕಟೇಶ್‌, ರಿಜಿಸ್ಟ್ರಾರ್ ಡಾ. ಗಿರಿಧರ್‌ ಕಿಣಿ ಪಿ. ವಹಿಸಲಿದ್ದಾರೆ. ಸಂಸ್ಥೆಯ ಭವಿಷ್ಯದ ಕಾರ್ಯನಿರ್ವಹಣೆ ಮತ್ತು ಶೈಕ್ಷಣಿಕ ಯೋಜನೆಗಳ ಬಗ್ಗೆ ಮಾಹೆಯ ಮುಖ್ಯಸ್ಥರು ರೂಪುರೇಷೆಯನ್ನು ತಯಾರಿಸಲಿದ್ದಾರೆ.

Advertisement

ಮಾಹೆಯ ಆಡಳಿತ ಮಂಡಳಿಯು 31 ನೆಯ ಘಟಿಕೋತ್ಸವದ ದಿನಾಂಕವನ್ನು ಪ್ರಕಟಿಸಿದ್ದು ಇದು ನವೆಂಬರ್‌ 18, 19, 25 ಮತ್ತು 26 ರಂದು ನಡೆಯಲಿದೆ. ನವೆಂಬರ್‌ 18 ರಂದು ಲೆ. ಜ. ಡಾ. ನರೇಂದ್ರ ಕೋತ್ವಾಲ್‌, ನಿರ್ದೇಶಕ ಮತ್ತು ಕಮಾಂಡೆಂಟ್‌, ಸೈನಿಕ ವೈದ್ಯಕೀಯ ಕಾಲೇಜುಗಳು, 19 ರಂದು ರಾಜೀವ್‌ ಸಿಂಘ್‌ ರಘುವಂಶಿ, ಡ್ರಗ್‌ ಕಂಟ್ರೋಲರ್‌ ಜನರಲ್‌ ಆಫ್‌ ಇಂಡಿಯ (ಡಿಸಿಜಿಐ), ಭಾರತ ಸರ್ಕಾರ, 25 ರಂದು ಪ್ರೊ ಡಾ. ಟಿ, ಜಿ. ಸೀತಾರಾಮ್‌, ಅಧ್ಯಕ್ಷರು, ಆಲ್‌ ಇಂಡಿಯ ಕೌನ್ಸಿಲ್‌ ಆಫ್‌ ಟೆಕ್ನಿಕಲ್‌ ಎಜುಕೇಶನ್‌ (ಎಐಸಿಟಿಇ), ಹೊಸದಿಲ್ಲಿ ಮತ್ತು ನವೆಂಬರ್‌ 26 ರಂದು ವಿನೋದ್‌ ಈಶ್ವರನ್‌, ಎಂಡಿ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಜಿಯೋ ಪೇಮೆಂಟ್ಸ್‌ ಬ್ಯಾಂಕ್‌, ಮುಂಬೈ ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಈ ನಾಲ್ಕು ದಿನಗಳ ಘಟಿಕೋತ್ಸವದಲ್ಲಿ ಮಾಹೆಯ ಸುಮಾರು 7000 ಮಂದಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ಪ್ರದಾನ ಮಾಡಲಾಗುವುದು.

ಜಾಗತಿಕವಾಗಿ ಸಂಶೋಧನೆ ಮತ್ತು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರುವ ಉದ್ದೇಶ ಮಾಹೆ ಸಂಸ್ಥೆಗೆ ಇರುವುದಾಗಿ ಸಂಸ್ಥೆಯ ಮುಖ್ಯಸ್ಥರು ಹೇಳಿದ್ದು, ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಿ, ಆ ಕ್ಷೇತ್ರದಲ್ಲಿ ನವೀನ ಆವಿಷ್ಕಾರಗಳನ್ನು ತರುವತ್ತ ಗಮನ ಹರಿಸಿರುವುದಾಗಿ ವಿವರಿಸಿದ್ದಾರೆ. ಮಾಹೆಯಲ್ಲಿ ’ರಾಷ್ಟ್ರೀಯ ಶಿಕ್ಷಣ ನೀತಿ 2000‘ಯನ್ನು ಜಾರಿಗೊಳಿಸುವುದು ಮತ್ತು ಅದರ ನಿರೀಕ್ಷಿತ ಫಲಿತಾಂಶದ ಕುರಿತು ವಿವರವಾಗಿ ಚರ್ಚಿಸಲಾಗಿದೆ. ಮಾಹೆಯು ನ್ಯಾಕ್‌ ಸಂಸ್ಥೆಯಿಂದ A++ Grade ಮಾನ್ಯತೆ ಪಡೆದಿದ್ದು, ಅದರ ತಾಂತ್ರಿಕ ಕಾರ್ಯಯೋಜನೆಗಳಿಗೆ ಎನ್‌ಬಿಎಯಿಂದ ಮಾನ್ಯತೆ ದೊರೆತಿದೆ. ಮಾಹೆಯ ಶೈಕ್ಷಣಿಕ ಉತ್ಕೃಷ್ಟತೆಯು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿ ದ್ದು ಅಂತರರಾಷ್ಟ್ರೀಯ ರ‍್ಯಾಂಕಿಂಗ್‌ ನಲ್ಲಿ ಮಾಹೆ ಸಾಕಷ್ಟು ಪ್ರಗತಿ ಸಾಧಿಸಿದೆ.

ಮುಖ್ಯ ಅತಿಥಿ, ಲೆ.ಜ.ಡಾ. ನರೇಂದ್ರ ಕೊತ್ವಾಲ್‌, ಎಸ್‌ಎಂ, ವಿಎಸ್‌ಎಂ, ಪುಣೆಯ ಸಶಸ್ತ್ರ ಮೆಡಿಕಲ್‌ ಕಾಲೇಜಿನ ಡೈರೆಕ್ಟರ್‌ ಮತ್ತು ಕಮಾಂಡೆಂಟ್‌ ಮಾತನಾಡಿ, ’ ಮಣಿಪಾಲ್‌ ಅಕಾಡೆಮಿ ಮತ್ತು ಹೈಯರ್‌ ಎಜುಕೇಶನ್‌ನ ಘಟಿಕೋತ್ಸವದಲ್ಲಿ ಭಾಗವಹಿಸುವ ಅವಕಾಶ ಅಪೂರ್ವವಾದುದು. ನಿಮ್ಮ ಜೀವನದಲ್ಲಿ ಈ ದಿನವು ಮಹತ್ವದ್ದಾಗಿದ್ದು, ಆರೋಗ್ಯ ಕ್ಷೇತ್ರದ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ನೀವು ವೃತ್ತಿಪರರಾಗಿ ಹೊರಹೊಮ್ಮುತ್ತಿದ್ದೀರಿ’ ಎಂದುಹೇಳಿದರು.

Advertisement

ದೇಶದೊಳಗೆ ಮತ್ತು ಹೊರಗೆ ಪರಿವರ್ತನೆಯ ಗಾಳಿ ಬೀಸುತ್ತಿರುವ ಈ ಸಂದರ್ಭದಲ್ಲಿ, ನಮ್ಮ ಪರಂಪರೆ ಮತ್ತು ಆತ್ಮವಿಶ್ವಾಸದ ದೆಸೆಯಿಂದ ಜಾಗತಿಕವಾಗಿ ಭಾರತದ ಸ್ಥಾನಮಾನವು ಗಮನಾರ್ಹವಾದುದಾಗಿದೆ. ‘ದೇಶ ಮೊದಲು’ ಎಂಬ ಧ್ಯೇಯವಾಕ್ಯಕ್ಕೆ ಬದ್ಧರಾಗಿ ಕೆಲಸ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಎಚ್‌. ಎಸ್‌. ಬಲ್ಲಾಳ್‌ , ಪ್ರೊ ಚಾನ್ಸಿಲರ್‌, ಮಾಹೆ ಅವರು, 1942ರಲ್ಲಿ ಸಂಸ್ಥಾಪಕರಾದ ಡಾ. ಟಿ.ಎಂ.ಎ. ಪೈ ಅವರು, ಈ ಅಕಾಡೆಮಿ ಆಫ್‌ ಜನರಲ್‌ ಎಜುಕೇಷನ್‌ ಅನ್ನು ಒಂದು ಸೊಸೈಟಿಯಾಗಿ ಸ್ಥಾಪಿಸಿ, ತಾಂತ್ರಿಕ ಮತ್ತು ವಾಣಿಜ್ಯ ಶಿಕ್ಷಣವನ್ನು ಆಸಕ್ತರಿಗೆ ಒದಗಿಸುವ ಉದ್ದೇಶ ಹೊಂದಿದ್ದರು. ಅವರು ಹಲವು ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರುವ ದೂರದೃಷ್ಟಿಯ ನಾಯಕರಾಗಿದ್ದರು. ವೈದ್ಯರಾಗಿ, ಬ್ಯಾಂಕರ್ ಆಗಿ, ಶಿಕ್ಷಣ ತಜ್ಞರಾಗಿ, ಈ ಮೂರು ಕ್ಷೇತ್ರಗಳನ್ನು ಏಕೀಕರಣಗೊಳಿಸಿ ನೋಡಬಲ್ಲವರಾಗಿದ್ದರು. ಹತ್ತನೇ ತರಗತಿ ಫೇಲಾದವರಿಗೆ ಬಡಗಿ, ಇಲೆಕ್ಟ್ರಿಕ್‌ ಕೆಲಸ, ಮೇಸ್ತ್ರಿ ಕೆಲಸ ಮುಂತಾದವುಗಳಲ್ಲಿ ವೃತ್ತಿಪರ ತರಬೇತಿನೀಡುವುದು ಅವರ ಆರಂಭಿಕ ಉದ್ದೇಶವಾಗಿತ್ತು. ಆದರೆ ದೇಶದ ಮೊತ್ತ ಮೊದಲ ಸ್ವಯಂ ಹಣಕಾಸು ಬೆಂಬಲ ಹೊಂದಿರುವ ಖಾಸಗಿ ಮೆಡಿಕಲ್‌ ಕಾಲೇಜನ್ನು ಸಾಕಷ್ಟು ವಿರೋಧಗಳ ನಡುವೆಯೇ ಅಕಾಡೆಮಿಯು 1953ರಲ್ಲಿ ಸ್ಥಾಪಿಸಿತು. ಮುಂದಕ್ಕೆ ಎಂಜಿನಿಯರಿಂಗ್‌, ಡೆಂಟಿಸ್ಟ್ರಿ, ಫಾರ್ಮಸಿ ಸೇರಿದಂತೆ ಹಲವು ಕಾಲೇಜುಗಳು ಆರಂಭವಾದವು.

ಮಾಹೆ ನೇತೃತ್ವದಲ್ಲಿ ಆರಂಭವಾದ ಮೊದಲ ಪ್ರೈವೇಟ್‌ ಕಾಲೇಜು, ಕಸ್ತೂರ್‌ಬಾ ಮೆಡಿಕಲ್‌ ಕಾಲೇಜು 1953ರಲ್ಲಿ ದೇಶದ 29ನೇ ಮೆಡಿಕಲ್‌ ಕಾಲೇಜಾಗಿತ್ತು. ಇವತ್ತು ಭಾರತದಲ್ಲಿ 600 ಮೆಡಿಕಲ್‌ ಕಾಲೇಜುಗಳಿದ್ದು, ಕಸ್ತೂರ್‌ಬಾ ಕಾಲೇಜು ಕಳೆದ 20 ವರ್ಷಗಳಲ್ಲಿ ನಿರಂತರವಾಗಿ ಟಾಪ್‌ 10 ಕಾಲೇಜುಗಳ ಪಟ್ಟಿಯಲ್ಲಿ ಹೆಸರು ಗಿಟ್ಟಿಸಿಕೊಂಡಿರುವುದು ಸಂತೋಷದ ವಿಷಯ.

ವಿಶ್ವವಿದ್ಯಾಲಯವನ್ನು ಆರಂಭಿಸುವ ಡಾ. ಟಿಎಂಎ ಪೈ ಅವರ ಕನಸು ಅವರ ಜೀವಿತಾವಧಿಯಲ್ಲಿ ನನಸಾಗಲಿಲ್ಲ. ಆದರೆ ಅವರ ಪ್ರೀತಿಯ ಮಗ ಪ್ರಸ್ತುತ ಮಾಹೆಯ ಕುಲಪತಿಗಳಾದ ಡಾ. ರಾಮ್‌ದಾಸ್‌ ಪೈ 1979ರಲ್ಲಿ ಅಧಿಕಾರ ಸೂತ್ರ ಹಿಡಿದು, 1993ರಲ್ಲಿ ಮಣಿಪಾಲ್‌ ಅಕಾಡೆಮಿಯ ಆಫ್‌ ಹೈಯರ್‌ ಎಜುಕೇಶನ್‌ ಸ್ಥಾಪಿಸಿ ಭಾರತ ಸರ್ಕಾರದ ಯುಜಿಸಿ ಕಾಯ್ದೆ 1956ರ ಅಡಿಯಲ್ಲಿ ಡೀಮ್ಡ್‌ ವಿಶ್ವವಿದ್ಯಾಲಯ ಸ್ಥಾನ ದೊರೆಯುವಂತೆ ಮಾಡಿದರು. ಡಾ. ರಾಮ್ ದಾಸ್‌ ಪೈ ಅವರು ಮಣಿಪಾಲ್‌ ಅನ್ನು ಅಂತರರಾಷ್ಟ್ರೀಯ ವಿಶ್ವವಿದ್ಯಾಲಯ ಟೌನ್‌ಶಿಪ್‌ ಅನ್ನಾಗಿ ಪರಿವರ್ತಿಸಿದರು. ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಯನ್ನು ವಿದೇಶದಲ್ಲಿಯೂ ಸ್ಥಾಪಿಸಿದರು ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಲೆ.ಜ.ಡಾ. ಎಂ.ಡಿ. ವೆಂಕಟೇಶ್‌, ವಿಎಸ್‌ಎಂ(ನಿವೃತ್ತ), ಉಪಕುಲಪತಿ, ಮಾಹೆ, ಅವರು ಮಾತನಾಡಿ, ಜಾಗತಿಕ ಮಾನದಂಡಗಳ ವಿಷಯಕ್ಕೆ ಬಂದಾಗ ಮಾಹೆಯು ಯಾವಾಗಲೂ ಸಮಯ ಬದ್ಧತೆಯೊಂದಿಗೆ ಕಾರ್ಯಯೋಜನೆಯನ್ನು ಕೈಗೆತ್ತಿಕೊಂಡು, ತನ್ನ ಉದ್ದೇಶಿತ ಗುರಿ ಸಾಧಿಸುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗಿದೆ. ಅತ್ಯುತ್ತಮ ಶೈಕ್ಷಣಿಕ ಸಂಸ್ಥೆ ಎಂದು ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಜಾಗತಿಕವಾಗಿ ಅತ್ಯುತ್ತಮವೆಂದು ಗುರುತಿಸಿಕೊಂಡ ವಿಶ್ವವಿದ್ಯಾಲಯಗಳೊಂದಿಗೆ ಕೈಜೋಡಿಸುವುದು ಸಾಧ್ಯವಾಗಿದೆ ಎಂದು ಹೇಳಿದರು.

ಡಾ. ಗಿರಿಧರ್‌ ಕಿಣಿ, ಪಿ, ಮಾಹೆಯ ಕುಲಸಚಿವರು ಮಾತನಾಡಿ, ಮುಂದಿನ ಶೈಕ್ಷಣಿಕ ವರ್ಷಗಳಲ್ಲಿ ಆಗಲಿರುವ ಬದಲಾವಣೆಗಳ ಕುರಿತು ವಿವರಿಸಿದರು. ‘ಶೈಕ್ಷಣಿಕ ಸವಾಲುಗಳನ್ನು ಎದುರಿಸಲು ಬೇಕಾಗುವ ನವೀನ ಪರಿಕಲ್ಪನೆಗಳನ್ನು ಅಳವಡಿಸಿಕೊಳ್ಳಲು ಹಾಗೂ ಸವಾಲುಗಳಿಗೆ ತಕ್ಕ ಪರಿಹಾರಗಳನ್ನು ಒದಗಿಸಲು ಮಾಹೆಯು ಸಿದ್ಧವಾಗಿದೆ. ಶಿಕ್ಷಣವು ಪರಿವರ್ತನೆಯ ಕೇಂದ್ರಬಿಂದುವಾಗಿದೆ. ಬೋಧನಾ ತಂತ್ರಗಳು ಬದಲಾಗುತ್ತಿವೆ ಮತ್ತು ಶಿಕ್ಷಣವು ತರಗತಿಯ ಪರಿಕಲ್ಪನೆಯಿಂದ ಹೊರಹೋಗಿ, ಹೆಚ್ಚು ಪ್ರಾಯೋಗಿಕ ಮತ್ತು ಅನುಭವ ಆಧಾರಿತ ಕಲಿಕೆಯಾಗಿ ಬದಲಾಗಿದೆ. ಇಂದಿನ ಉದ್ಯೋಗ ಮಾರುಕಟ್ಟೆಯಲ್ಲಿ ಹೆಚ್ಚು ಹೆಚ್ಚು ಪದವೀಧರರ ಅಗತ್ಯವಿದೆ. ಆದ್ದರಿಂದ ಆವಿಷ್ಕಾರ ಮತ್ತು ಉದ್ಯಮಶೀಲತೆಗೆ ಒತ್ತು ನೀಡಿದ ಶೈಕ್ಷಣಿಕ ಮೌಲ್ಯಮಾಪನವನ್ನು ಮಾಹೆಯು ಅಳವಡಿಸಿಕೊಳ್ಳುತ್ತಿದೆ‘ ಎಂದು ಹೇಳಿದರು.

ಡೀಮ್ಡ್‌ ವಿಶ್ವವಿದ್ಯಾಲಯವಾಗಲಿರುವ ಶ್ರೇಷ್ಠ ಸಂಸ್ಥೆ
ಗುಣಮಟ್ಟದ ಶಿಕ್ಷಣ ಮತ್ತು ಶೈಕ್ಷಣಿಕ ಸೇವಾ ಪೂರೈಕೆದಾರ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಮಾಹೆ, ಭಾರತದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅಗತ್ಯಕ್ಕೆ ತಕ್ಕನಾಗಿ ತನ್ನ ಗುಣಮಟ್ಟವನ್ನು ನಿರಂತರವಾಗಿ ವೃದ್ಧಿಸುತ್ತ ಬಂದಿರುವ ಸಂಸ್ಥೆಯಾಗಿದೆ. ಮಣಿಪಾಲ್‌ ಅಕಾಡೆಮಿಯ ಆಫ್‌ ಹೈಯರ್‌ ಎಜುಕೇಶನ್‌ ಎಂಬುದು ಮೇಧಾವಿ ಮುತ್ಸದ್ಧಿ ದಿ. ಡಾ. ಟಿ.ಎಂ.ಎ ಪೈ ಅವರ ದೂರದೃಷ್ಟಿಯ ಫಲವಾಗಿದೆ. ಅನಕ್ಷರತೆ, ಅನಾರೋಗ್ಯ ಮತ್ತು ಬಡತನವೆಂಬ ಮೂರು ತೊಡಕುಗಳನ್ನು ಸಮಾಜದಿಂದ ನಿರ್ಮೂಲನೆ ಮಾಡುವ ಉದ್ದೇಶದಿಂದ ಆರಂಭವಾದ ಸಂಸ್ಥೆ. ಆರೋಗ್ಯ, ಎಂಜಿನಿಯರಿಂಗ್‌, ಫಾರ್ಮಸಿ, ನರ್ಸಿಂಗ್‌, ಆರೋಗ್ಯ ಸೇವೆಗಳು, ಆಡಳಿತ, ಸಂವಹನ, ಜೀವ ವಿಜ್ಞಾನ, ಹೋಟೆಲ್‌ ಆಡಳಿತ ನಿರ್ವಹಣೆ ಮುಂತಾಗಿ ಹಲವಾರು ಶಿಸ್ತುಗಳ ಶೈಕ್ಷಣಿಕ ಕೋರ್ಸುಗಳನ್ನು ಒದಗಿಸುತ್ತ ಬರುತ್ತಿದ್ದು ಪದವೀಧರರನ್ನು ಮತ್ತು ಸ್ನಾತಕೋತ್ತರ ಪದವೀಧರರನ್ನು ರೂಪಿಸುತ್ತಿದೆ. ಸುಮಾರು 60ಕ್ಕೂ ಹೆಚ್ಚು ದೇಶಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸಿ ಶಿಕ್ಷಣ ಪಡೆಯುತ್ತಿದ್ದಾರೆ. ಪ್ರಸ್ತುತ 3000 ಕ್ಕೂ ಹೆಚ್ಚು ಸಿಬ್ಬಂದಿ, 10,500ಕ್ಕೂ ಹೆಚ್ಚು ಪೂರಕ ಸಿಬ್ಬಂದಿ ಮತ್ತು ಸೇವಾ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ವೈಫೈ ಇರುವ ಕ್ಯಾಂಪಸ್‌ ನಲ್ಲಿ ಕ್ರೀಡಾ ಸೌಕರ್ಯವು ಉತ್ತಮವಾಗಿದೆ. ನ್ಯಾಕ್‌ ಸಂಸ್ಥೆಯಿಂದ A++ Grade ಮಾನ್ಯತೆ ಪಡೆದಿದ್ದು, ಅದರ ತಾಂತ್ರಿಕ ಕಾರ್ಯಯೋಜನೆಗಳಿಗೆ ಎನ್‌ಬಿಎ ಯಿಂದ ಮಾನ್ಯತೆ ದೊರೆತಿದೆ.

ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ನ್ಯಾಷನಲ್‌ ಇನ್‌ಸ್ಟಿಟ್ಯೂಷನಲ್‌ ರ‍್ಯಾಂಕಿಂಗ್‌ (NIRF)-2022 ಪ್ರಕಾರ ಮಾಹೆಯು ವಿಶ್ವವಿದ್ಯಾಲಯಗಳ ವಿಭಾಗದಲ್ಲಿ 6ನೇ ರ‍್ಯಾಂಕ್‌ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next