Advertisement
ಮನಸ್ಸು ಸೂಕ್ಷ್ಮ. ಭೇದಿಸಿದರೆ ಒಡೆದುಹೋಗುತ್ತದೆ. ವೇಗ ಒಡೆಯುತ್ತದೆ ಮತ್ತು ಒಡೆಸುತ್ತದೆ. ಅವರಿವರೆನ್ನದೆ ಎಲ್ಲರೂ ಎಲ್ಲರಿಗೂ ಸ್ಪೀಡ್ ಅನ್ನುವ ಸ್ಥಿತಿಯನ್ನು ಬೋಧಿಸುತ್ತಿದ್ದಾರೆ. ವೇಗ ಇಲ್ಲದೇ ಹೋದರೆ ಬದುಕುವುದು ಕಷ್ಟ ಅನ್ನುವ ವ್ಯಂಗ್ಯ. ನಿಧಾನಕ್ಕೆ ಬೆಲೆಯೇ ಇಲ್ಲ. ಬಾವಿಗಳಿಗಿಂತ ರಭಸದಿಂದ ಓಡುವ ನದಿಯೇ ಸೆಳೆಯುತ್ತದೆ. ಗೊತ್ತಿಧ್ದೋ ಗೊತ್ತಿಲ್ಲದೆಯೋ ಹುಟ್ಟಿಕೊಂಡ ವೇಗ ಅನ್ನುವ ಕಾಯಿಲೆ ವ್ಯಾಪಿಸುತ್ತಾ ಹೋಗುತ್ತಿದೆ. ಎಲ್ಲವೂ ಈಗ ಫಾಸ್ಟ್‌ಫುಡ್!
Related Articles
Advertisement
ಹೀಗೆ ಎಲ್ಲವೂ ವೇಗವಾದರೆ ತುಂಬಾ ಪ್ರೀತಿಯಿಂದ ಕಿಟಕಿ ಬಳಿ ನಿಂತು ಮಳೆ ನೋಡುವ ಖುಷಿಯನ್ನು ಅನುಭವಿಸುವುದು ಯಾವಾಗ? ವೇಗವಾಗಿ ಧಾವಿಸಿ ಗುರಿ ಮುಟ್ಟುವುದೇ ಸಾಧನೆಯಾದರೆ ಬಸ್ಸಿನ ಕಿಟಕಿಯಿಂದ ಹಿಂದೆ ಸಾಗುವ ಗಿಡಮರಗಳ ಚೆಲುವನ್ನು ಬೆರಗುಗಣ್ಣಿನಿಂದ ಅನುಭವಿಸುವುದು ಯಾವಾಗ? ಎಲ್ಲವನ್ನೂ ಕಿತ್ತುಕೊಳ್ಳುತ್ತದೆ. ಟೆಕ್ನಾಲಜಿ ಯುಗದಲ್ಲಿರುವ ಜನರು ನಿಧಾನ ಅನ್ನುವುದನ್ನೇ ದ್ವೇಷಿಸಲು ಆರಂಭ ಮಾಡಿದ ಬಳಿಕ ನಿಧಾನ ಎನ್ನುವುದು ಎಲ್ಲರಿಗೂ ಮರೆತುಹೋಗಿದೆ. ನಿಧಾನವೇ ಪ್ರಧಾನ ಎನ್ನುವ ಮಾತು ಅರ್ಥ ಕಳೆದುಕೊಂಡಿದೆ.
ಒತ್ತಡ ಸೃಷ್ಟಿಯಾಗಿದೆ. ಒತ್ತಡವಿರುವ ಬಲೂನು ಒಂದಲ್ಲ ಒಂದು ದಿನ ಒಡೆಯಲೇ ಬೇಕು. ಇದು ಅರ್ಥವಾದರೆ ವೇಗ ತಗ್ಗುತ್ತದೆ. ವೇಗ ತಗ್ಗಿದರೆ ನಿಯಂತ್ರಣ ಸಿಗುತ್ತದೆ.
ಶಹರದಲ್ಲಿ ಎಸಿ ಚೇಂಬರ್‌ನಲ್ಲಿ ಕುಳಿತು ಕೆಲಸ ಮಾಡುವ ಸಾಫ್ಟ್ವೇರ್ ಎಂಜಿನಿಯರ್ ಹುಡುಗ ಹುಟ್ಟೂರಿಗೆ ಹೋಗಿದ್ದ. ಮನೆಯಲ್ಲೂ ಮೊಬೈಲ್ ಹಿಡಿದುಕೊಂಡು ಕೂತವನಿಗೆ ಒಂದೆರಡು ಬಾರಿ ಅಮ್ಮ ಕರೆದದ್ದೇ ಕೇಳಲಿಲ್ಲ. ಅಮ್ಮನಿಗೆ ಆತ ಏನು ಮಾಡುತ್ತಿದ್ದಾನೆ ಅನ್ನುವುದೂ ಗೊತ್ತಿರಲಿಲ್ಲ. ಅವನು ಮಾತಾಡುತ್ತಿರಲಿಲ್ಲ. ಎರಡನೇ ದಿನ ಬೆಳಿಗ್ಗೆ ಅವನಿಗೊಂದು ಫೋಟೋ ಸಿಕ್ಕಿತು. ಅಮ್ಮ ಅವನಿಗೆ ಸ್ಲೇಟಿನಲ್ಲಿ ಏನೋ ಬರೆಯಿಸುವ ಕಪ್ಪು ಬಿಳುಪು ಫೋಟೋ. ಅಂದು ಅವನು ಮೊಬೈಲ್ ಬದಿಗಿಟ್ಟವನು ಮನೆಯಿಂದ ಹೊರಗೆ ಕಾಲಿಡುವವರೆಗೆ ಹೊರತೆಗೆಯಲಿಲ್ಲ.
•ಪುಣ್ಯಾತ್ಮಾನಂದ