Advertisement

ಪಿಒಪಿ ಗಣೇಶಗೆ ಬ್ರೇಕ್‌

04:48 PM Sep 07, 2018 | |

ಚಿತ್ರದುರ್ಗ: ಪರಿಸರಕ್ಕೆ ಮಾರಕವಾಗಲಿರುವ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಿಂದ (ಪಿಒಪಿ) ತಯಾರಿಸಿ ರಾಸಾಯನಿಕ ಬಣ್ಣ ಲೇಪಿತವಾದ ಗಣೇಶ ಮೂರ್ತಿಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯನ್ನು ಪರಿಸರ ಇಲಾಖೆ ನಿಷೇಧಿಸಿದೆ. 

Advertisement

ಜಿಲ್ಲೆಯಲ್ಲಿ ಪಿಒಪಿ ಮೂರ್ತಿಗಳ ಉತ್ಪಾದನೆ ಮಾಡುತ್ತಿಲ್ಲವಾದರೂ ಹೊರ ರಾಜ್ಯಗಳಿಂದ ಪಿಒಪಿ ವಿಗ್ರಹಗಳ ಪೂರೈಕೆ ಆಗುವ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತ ಹದ್ದಿನ ಕಣ್ಣಿಟ್ಟಿದೆ.

ಈ ಬಾರಿ ಪಿಒಪಿ ಗಣೇಶ ಮೂರ್ತಿಗಳ ಮಾರಾಟಕ್ಕೆ ಸಂಪೂರ್ಣ ನಿಷೇಧ ಹೇರಿರುವ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಈಗಾಗಲೇ ಗಣೇಶ ಮೂರ್ತಿಗಳ ತಯಾರಕರು ಹಾಗೂ ಮಾರಾಟಗಾರರಿಗೆ ಪಿಒಪಿ ಗಣೇಶ
ಮೂರ್ತಿ ತರಿಸಿ ಮಾರಾಟ ಮಾಡದಂತೆ ಎಚ್ಚರಿಕೆ ನೀಡಿದೆ. ಪಿಒಪಿ ಗಣೇಶ ವಿಗ್ರಹಗಳು ಹೊರಗಡೆಯಿಂದ ಪೂರೈಕೆಯಾಗದಂತೆ ಜಿಲ್ಲಾಡಳಿತ ಎಚ್ಚರ ವಹಿಸಿದೆ. ಹೊರ ಜಿಲ್ಲೆಗಳಿಂದ ಪಿಒಪಿ ಮೂರ್ತಿಗಳ ಪೂರೈಕೆ ತಡೆಗೆ ಮಾಲಿನ್ಯ ನಿಯಂತ್ರಣ ಮಂಡಳಿ, ಪೊಲೀಸ್‌, ಮಾಲಿನ್ಯ ನಿಯಂತ್ರಣ ಮಂಡಳಿ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳನೊಳಗೊಂಡ ತಂಡ ರಚಿಸಲಾಗಿದೆ.

ಶಾಲಾ-ಕಾಲೇಜುಗಳ ಮಕ್ಕಳಿಗೆ ಮಣ್ಣಿನ ಗಣೇಶ ಮೂರ್ತಿಯನ್ನೇ ಬಳಸುವಂತೆ ಪರಿಸರವಾದಿಗಳು ಸಾಕಷ್ಟು ಅರಿವು ಮೂಡಿಸುತ್ತಿದ್ದಾರೆ. ಇಷ್ಟಾದರೂ ಪಿಒಪಿ ಹಾಗೂ ರಸಾಯನಿಕ ವಿಗ್ರಹಗಳು ಜಿಲ್ಲೆಯ ಮಾರುಕಟ್ಟೆಗೆ ಬರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಒಂದು ವೇಳೆ ಪಿಒಪಿ ಹಾಗೂ ರಾಸಾಯನಿಕ ಬಣ್ಣ ಲೇಪಿತ ವಿಗ್ರಹಗಳ ಮಾರಾಟ ನಡೆದು ದಾಳಿ ಮಾಡಿ ವಶಪಡಿಸಿಕೊಂಡರೆ ಎಲ್ಲಿ, ಹೇಗೆ ಪಿಒಪಿ ಮೂರ್ತಿಗಳನ್ನು ಶೇಖರಿಸಿ ನಾಶ ಮಾಡಬೇಕು ಎನ್ನುವ ಚಿಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಾಡುತ್ತಿದೆ. ಅಕ್ರಮವಾಗಿ ಪಿಒಪಿ ಮೂರ್ತಿಗಳು ಬಂದಿಳಿದರೆ ಸೂಕ್ತ ಮಾಹಿತಿ ನೀಡುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ, ನಗರಸಭೆ, ಪೊಲೀಸ್‌ ಇಲಾಖೆಗೆ ದೂರು ನೀಡುವಂತೆ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಜಿಲ್ಲೆಯ ಹೊರಕೆದೇವಪುರ ಗ್ರಾಮದ ಕೆಲವೇ ಕುಟುಂಬಗಳು ಗಣಪತಿ ಮೂರ್ತಿ ತಯಾರಿಸುತ್ತವೆ. ಹತ್ತಾರು ಸಾವಿರ ಗಣೇಶ ಮೂರ್ತಿಗಳ ಬೇಡಿಕೆ ಇದ್ದು ಇಷ್ಟೊಂದು ಪ್ರಮಾಣದಲ್ಲಿ ಮಣ್ಣಿನ ಮೂರ್ತಿಗಳ ತಯಾರಿ ಕಷ್ಟವಾಗುತ್ತಿದೆ.
ಮಾನವ ಸಂಪನ್ಮೂಲ ಕೊರತೆ, ಸತತ ಬರದಿಂದಾಗಿ ಹದವಾದ ಕೆರೆ ಮಣ್ಣಿನ ಅಲಭ್ಯತೆ ಮತ್ತಿತರ ಕಾರಣಗಳಿಂದಾಗಿ ಪರಿಸರ ಸ್ನೇಹಿ ಗಣಪತಿ ಮೂರ್ತಿ ಪೂರೈಕೆ ಕಷ್ಟ ಎಂಬ ಮಾತು ಕೇಳಿ ಬರುತ್ತಿದೆ

Advertisement

ಪಿಒಪಿ ಗಣೇಶ ಮೂರ್ತಿ ನಿಷೇಧ ಮಾಡಿದ್ದರೂ ಜಿಲ್ಲಾ ಕೇಂದ್ರದಿಂದ 20-30 ಕಿಮೀ ದೂರದ ಹಳ್ಳಿಗಳಲ್ಲಿ ಪಿಒಪಿ ಮೂರ್ತಿಗಳು ಮಾರಾಟಕ್ಕಿವೆ. ಹಾಗಾಗಿ ನಾವು ಹೆಚ್ಚು ಮಣ್ಣಿನ ಮೂರ್ತಿಗಳನ್ನು ತಯಾರಿಸುತ್ತಿಲ್ಲ. ಯಾರು ಮುಂಗಡ ಬುಕ್ಕಿಂಗ್‌ ಕೊಟ್ಟಿದ್ದಾರೋ ಅಂಥವರಿಗೆ ಮತ್ತು ಒಂದಿಷ್ಟು ಚಿಕ್ಕ ಚಿಕ್ಕ ಮೂರ್ತಿಗಳನ್ನು ತಯಾರಿಸುತ್ತಿದ್ದೇವೆ.
 ಗುರುಮೂರ್ತಿ, ಗಣಪತಿ ಮೂರ್ತಿ ತಯಾರಕ, ಹೊರಕೆದೇವಪುರ.

ಹೈಕೋರ್ಟ್‌ ಆದೇಶದ ಮೇರೆಗೆ ಪಿಒಪಿ ಗಣೇಶ ಮೂರ್ತಿ ಉತ್ಪಾದನೆ, ಮಾರಾಟ ನಿಷೇಧಿಸಲಾಗಿದೆ. ಈ ಕುರಿತು ಕಳೆದ ಒಂದು ತಿಂಗಳಿಂದ ಶಾಲಾ-ಕಾಲೇಜು ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಈ ತನಕ ಪಿಒಪಿ ಮೂರ್ತಿಗಳು ಕಂಡು ಬಂದಿಲ್ಲ. ಮಣ್ಣಿನ ಗಣೇಶ ಮೂರ್ತಿಗಳನ್ನೇ ತಯಾರಿಸುವಂತೆ ತಯಾರಕರಿಗೆ ಮನವಿ ಮಾಡಿಕೊಳ್ಳಲಾಗಿದೆ.
 ಮುರಳೀಧರ ರಾವ್‌, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ.

ಚಿತ್ರದುರ್ಗ ನಗರಕ್ಕೆ ಪಿಒಪಿ ಗಣೇಶ ಮೂರ್ತಿಗಳು ಹೊರ ಜಿಲ್ಲೆಗಳಿಂದ ಬರುತ್ತವೆ. ಈಗಾಗಲೇ ಎಲ್ಲ ಗಣೇಶ ಮೂರ್ತಿ ಮಾರಾಟಗಾರರಿಗೆ ಸೂಚನೆ ನೀಡಲಾಗಿದ್ದು, ಯಾವುದೇ ಕಾರಣಕ್ಕೂ ಪಿಒಪಿ ಗಣಪತಿ ಮಾರಾಟ ಮಾಡದಂತೆ ಎಚ್ಚರಿಸಲಾಗಿದೆ. ನಗರಸಭೆ ಮೂರ್ತಿ ತಯಾರಕರು, ಮಾರಾಟಗಾರರ ನಿಗಾ ಇಟ್ಟಿದೆ.
 ಸಿ. ಚಂದ್ರಪ್ಪ, ನಗರಸಭೆ ಆಯುಕ್ತರು.

ಪಿಒಪಿ ಗಣಪತಿ ಮಾರಾಟ ತಡೆಯಲು ಪರಿಸರ ಮಾಲಿನ್ಯ ಮಂಡಳಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ಯಾವುದೇ ಕಾರಣಕ್ಕೂ ಪಿಒಪಿ ಮೂರ್ತಿಗಳನ್ನು ಖರೀದಿಸಿ ತಂದು ಮಾರಾಟ ಮಾಡದಂತೆ ಎಚ್ಚರ ವಹಿಸಲಾಗಿದೆ. ಇದನ್ನೂ
ಮೀರಿ ಮಾರಾಟ ಮಾಡಿದರೆ ವಶಪಡಿಸಿಕೊಳ್ಳಲಾಗುತ್ತದೆ. ಪಿಒಪಿ ಗಣಪನ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ.
 ಶ್ರೀನಾಥ್‌ ಜೋಶಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ.

„ಹರಿಯಬ್ಬೆ ಹೆಂಜಾರಪ್ಪ

Advertisement

Udayavani is now on Telegram. Click here to join our channel and stay updated with the latest news.

Next