ಗಂಗಾವತಿ: ತಾಲೂಕಿನ ಆನೆಗೊಂದಿ ವಿರೂಪಾಪೂರಗಡ್ಡಿ, ಸಾಣಾಪೂರ, ಜಂಗ್ಲಿ, ಹನುಮನಹಳ್ಳಿ ಸೇರಿ ಸುತ್ತಲಿನ ಪ್ರದೇಶದಲ್ಲಿರುವ ರೆಸಾರ್ಟ್‌ಗಳಲ್ಲಿ ಹೊಸವರ್ಷಾಚರಣೆಯ ಮೋಜು ಮಸ್ತಿಗೆ ಪೊಲೀಸ್ ಇಲಾಖೆ ನಿರ್ಬಂಧ ಹೇರಿದೆ. ಡಿ. 31ರ ರಾತ್ರಿ ಸರಿಯಾಗಿ 10 ಗಂಟೆಗೆ ರೆಸಾರ್ಟ್ ಬಂದ್ ಮಾಡುವಂತೆ ಡಂಗುರ ಹಾಕಿಸಿ ಮುನ್ನೆಚ್ಚರಿಕೆ ನೀಡಲಾಗಿದೆ. ಮಂಗಳವಾರ ಬೆಳಗಿನಿಂದ ವಿರೂಪಾಪೂರಗಡ್ಡಿಗೆ ಹೋಗುವ ಮಾರ್ಗವನ್ನು ಬ್ಯಾರಿಕೇಡ್ ಮೂಲಕ ಬಂದ್ ಮಾಡಲಾಗುತ್ತಿದೆ.
ಇಲ್ಲಿರುವ ರೆಸಾರ್ಟ್‌ಗಳ ರೂಂಗಳು ಈಗಾಗಲೇ ಭರ್ತಿಯಾಗಿದ್ದು, ರೂಂಗಳು ಖಾಲಿ ಇಲ್ಲ ಎಂದು ರೆಸಾರ್ಟ್‌ನವರು ಬಂದವರಿಗೆ ವಾಪಸ್ ಕಳುಹಿಸುತ್ತಿದ್ದಾರೆ. ಪ್ರತಿ ವರ್ಷ ಹೊಸ ವರ್ಷ ಆಚರಿಸಲು ದೇಶ, ವಿದೇಶದ ಸಾವಿರಾರು ಪ್ರವಾಸಿಗರು ವಿರೂಪಾಪೂರಗಡ್ಡಿ ಹಾಗೂ ಕಿಷ್ಕಿಂದಾ ರೆಸಾರ್ಟ್‌ಗಳ ರೂಂ ಪಡೆದು ಮೋಜು ಮಸ್ತಿ ಮಾಡಿ ಮಧ್ಯರಾತ್ರಿ ಕೇಕ್ ಕತ್ತರಿಸುವುದು ವಾಡಿಕೆಯಾಗಿದೆ.
ಈ ಭಾರಿ ಪೊಲೀಸ್ ಇಲಾಖೆ ಮೋಜು ಮಸ್ತಿ ಮಾಡುವುದಕ್ಕೆ ನಿರ್ಬಂಧ ವಿಧಿಸಿದೆ. ಆನೆಗೊಂದಿ ಭಾಗದಲ್ಲಿರುವ ಎಲ್ಲಾ ರೆಸಾರ್ಟ್
ಮಾಲೀಕರ ಸಭೆ ಕರೆದು ಮದ್ಯ ಮಾರಾಟ ಮಾಡದಂತೆ ಪೊಲೀಸರು ಸೂಚನೆ ನೀಡಿದ್ದು, ನಿಯಮ ಉಲ್ಲಂಘನೆ ಮಾಡುವ ಮಾಲೀಕರು ಮತ್ತು ರೆಸಾರ್ಟ್ ಲೀಜ್ ಪಡೆದವರ ವಿರುದ್ಧ ಕೇಸ್ ಹಾಕುವುದಾಗಿ ಸೂಚನೆ ನೀಡಿದ್ದಾರೆ. ಅಶ್ಲೀಲ ನೃತ್ಯ, ಡಿಜೆ ಸೌಂಡ್ ಹಾಕದಂತೆ ಮೌಖೀಕ ಆದೇಶ ನೀಡಲಾಗಿದೆ.
ಸಿಗದ ರೂಂಗಳು: ಹೊಸವರ್ಷ ಆಚರಣೆ ಮಾಡಲು ವಿದೇಶಿ ಪ್ರವಾಸಿಗರ ಸಂಖ್ಯೆ ಈ ಭಾರಿ ಕಡಿಮೆ ಇದ್ದು, ಬೆಂಗಳೂರು, ಹೈದ್ರಾಬಾದ್, ಪುಣೆ, ಗೋವಾ, ಅನಂತಪುರ, ಬಳ್ಳಾರಿ, ರಾಯಚೂರು ಸೇರಿ ರಾಜ್ಯದ ವಿವಿಧೆಡೆಯ ಪ್ರವಾಸಿಗರು ವಿರೂಪಾಪೂರ ಗಡ್ಡಿಯಲ್ಲಿರುವ ರೆಸಾರ್ಟ್‌ಗಳ ರೂಂ ಗಳನ್ನು ಮೂರು ದಿನಗಳಿಗೆ ಮುಂಚಿತವಾಗಿ ಕಾಯ್ದಿರಿಸಿದ್ದಾರೆ. ಸಾಣಾಪೂರ, ಜಂಗ್ಲಿ, ಹನುಮನಹಳ್ಳಿ, ಆನೆಗೊಂದಿಯಲ್ಲಿ ಸಣ್ಣಪುಟ್ಟ ರೆಸಾರ್ಟ್‌ಗಳ ರೂಂಗಳಿಗೆ ಬೇಡಿಕೆ ಹೆಚ್ಚಾಗಿದೆ. ಇನ್ನೂ ಕೆಲ ಹೊಟೇಲ್ ಮಾಲೀಕರು ಬಟ್ಟೆಯ ಟೆಂಟ್ ಹಾಕಿ ಅಧಿಕ ಮೊತ್ತದ ಹಣಕ್ಕೆ ಬಾಡಿಗೆ ನೀಡಿದ್ದಾರೆ.
-ಕೆ. ನಿಂಗಜ್ಜ