ಬೆಂಗಳೂರು: ರಂಜಾನ್ ಹಿನ್ನೆಲೆಯಲ್ಲಿ ಯುವಕರ ಬೈಕ್ ವೀಲ್ಹಿಂಗ್‌ಗೆ ಬ್ರೇಕ್ ಹಾಕಲು ಕಾರ್ಯಾಚರಣೆ ನಡೆಸಿದ ಬೆಂಗಳೂರು ಸಂಚಾರ ಪೊಲೀಸರು ಕಳೆದೆರಡು ದಿನಗಳಲ್ಲಿ 38 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಬಾಣಸವಾಡಿ ಮತ್ತು ಪೀಣ್ಯ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಮಧ್ಯಾಹ್ನದಿಂದ ಆರಂಭವಾದ ಕಾರ್ಯಾಚರಣೆಯಲ್ಲಿ ವೀಲ್ಹಿಂಗ್ ಮಾಡಿಕೊಂಡು, ಇತರೆ ಸವಾರರಿಗೆ ತೊಂದರೆಕೊಡುತ್ತಿದ್ದ ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ವಿಪರ್ಯಾಸವೆಂದರೆ ವೀಲ್ಹಿಂಗ್ ಮಾಡುತ್ತಿದ್ದ ಯುವಕರು ಪೊಲೀಸರನ್ನು ಕಂಡ ಕೂಡಲೇ ಬೈಕ್ ಬಿಟ್ಟು ಪರಾರಿಯಾಗುತ್ತಿದ್ದರು. ಇಂತಹ ಬೈಕ್‌ಗಳಲ್ಲಿ ನಂಬರ್ ಪ್ಲೇಟ್‌ಗಳಾಗಲಿ, ಚಾರ್ಸಿ ನಂಬರ್‌ಗಳಾಗಲಿ ಸ್ಪಷ್ಟವಾಗಿಲ್ಲ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಆದರೆ, ವೀಲ್ಹಿಂಗ್ ಮಾಡುತ್ತಿದ್ದ ಬೈಕ್‌ಗಳನ್ನು ಮೂಲ ಮಾದರಿಯಿಂದ ಮಾರ್ಪಾಡು ಮಾಡಲಾಗಿದೆ. ಅಲ್ಲದೇ, ಸೈಲೆನ್ಸರ್ ಮತ್ತು ಹ್ಯಾಂಡಲ್‌ಗಳನ್ನು ಬದಲಿಸಿ, ವೀಲ್ಹಿಂಗ್‌ಗೆ ಸಹಕಾರಿಯಾಗುವಂತೆ ಬೈಕ್‌ಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಂದ ದೂರು ಬರುತ್ತಿತ್ತು. ಕೂಡಲೇ ಕಾರ್ಯಾಚರಣೆ ನಡೆಸಿ ಹೊರವರ್ತುಲ ರಸ್ತೆ ಮತ್ತು ಒಳ ವರ್ತುಲ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ವೀಲ್ಹಿಂಗ್ ಮಾಡುತ್ತಿದ್ದವರಿಗೆ ಬ್ರೇಕ್ ಹಾಕಲಾಗಿದೆ.
ದಂಡ ಕಟ್ಟಿಸಿಕೊಂಡು ಬೈಕ್ ಬಿಡುತ್ತಿಲ್ಲ: ವೀಲ್ಹಿಂಗ್ ಮಾಡುತ್ತಿದ್ದ ವೇಳೆ ಯುವಕರನ್ನು ಹಿಡಿಯುವ ಗೋಜಿಗೆ ಹೋಗುತ್ತಿರಲಿಲ್ಲ. ಈ ವೇಳೆ ಅಪಘಾತವಾಗಿ ಯುವಕರ ಪ್ರಾಣಕ್ಕೆ ಅಪಾಯವಾಗಬಹುದು ಎಂಬ ಹಿನ್ನೆಲೆಯಲ್ಲಿ ಬೈಕ್‌ಗಳ ನಂಬರ್‌ಗಳನ್ನಷ್ಟೇ ಬರೆದುಕೊಳ್ಳುತ್ತಿದ್ದೆವು. ನಂತರ ಸಾರಿಗೆ ಇಲಾಖೆ ಮೂಲಕ ಮಾಲೀಕರ ಮಾಹಿತಿ ಪತ್ತೆ ಹಚ್ಚಿ ಬೈಕ್‌ಗಳನ್ನು ವಶಕ್ಕ ಪಡೆಯಲಾಗಿದೆ. ಕೇವಲ ದಂಡ ಕಟ್ಟಿಸಿಕೊಂಡು ಬೈಕ್ ಬಿಡುತ್ತಿಲ್ಲ.
ಬದಲಿಗೆ ನ್ಯಾಯಾಲಯದಲ್ಲೇ ನಿಗದಿತ ದಂಡ ಕಟ್ಟಿ ಅಲ್ಲಿಂದಲೇ ಬಿಡುಗಡೆ ಆದೇಶ ಪಡೆಯುವಂತೆ ಬೈಕ್‌ಗಳ ಮಾಲೀಕರಿಗೆ ಸೂಚಿಸಲಾಗಿದೆ. ತನ್ಮೂಲಕ ವಾಹನದ ಮಾಲೀಕರು ನ್ಯಾಯಾಲಯಕ್ಕೆ ಹಾಜರಾಗಿ ನ್ಯಾಯಾಧೀಶರಿಂದ ತಿಳಿವಳಿಕೆ ಪಡೆಯಲಿ ಎಂಬುದು ನಮ್ಮ ಉದ್ದೇಶ ಎಂದು ಸಂಚಾರ ವಿಭಾಗ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ದಾಖಲೆಗಳು ಹೊಂದಾಣಿಕೆ ಇಲ್ಲ: ವೀಲ್ಹಿಂಗ್ ಮಾಡುವ ಬೈಕ್‌ಗಳ ದಾಖಲೆಗಳು ಪರಸ್ಪರ ಹೊಂದಾಣಿಕೆ ಆಗುತ್ತಿಲ್ಲ. ಹಲವು ಬೈಕ್‌ಗಳಿಗೆ ನೊಂದಣಿ ಸಂಖ್ಯೆಯೇ ಇಲ್ಲ. ಜತೆಗೆ ದಾಖಲೆಗಳಲ್ಲಿ ಇರುವ ಸಂಖ್ಯೆಗೂ ಚಾರ್ಸಿಯಲ್ಲಿರುವ ಸಂಖ್ಯೆಗೂ ತಾಳೆ ಆಗುತ್ತಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ವಾಹನದ ಮಾಲೀಕರನ್ನು ಕರೆಯಿಸಿ ಅವರಿಂದ ಹೇಳಿಕೆ ಪಡೆದುಕೊಳ್ಳಲಾಗುವುದು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.