Advertisement

ವಿವಿ ಹಾಸ್ಟೆಲ್‌ಗ‌ಳಲ್ಲಿ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್‌

12:46 PM Apr 12, 2017 | |

ಬೆಂಗಳೂರು: ವಿಶ್ವವಿದ್ಯಾಲಯದ ಹಾಸ್ಟೆಲ್‌ಗ‌ಳಲ್ಲಿರುವ ವಿದ್ಯಾರ್ಥಿಗಳು ಶಿಸ್ತುಬದ್ಧವಾಗಿರಬೇಕು ಎಂದು ಎಷ್ಟೇ ನೀತಿ, ನಿಯಮ ರೂಪಿಸಿದರೂ ಅನುಷ್ಠಾನ ಮಾತ್ರ ಕಷ್ಟಸಾಧ್ಯವಾಗಿದೆ. ಬೆಂಗಳೂರು ವಿಶ್ವವಿದ್ಯಾಲಯ ಕೂಡ ಇದಕ್ಕೆ ಹೊರತಾಗಿಲ್ಲ. ಈ ಹಿನ್ನೆಲೆಯಲ್ಲಿ ಮಂಗಳವಾರ ಹಾಸ್ಟೆಲ್‌ ಮುಖ್ಯಸ್ಥರು, ವಾರ್ಡನ್‌ಗಳ ಸಭೆ ನಡೆಸಿರುವ ಬೆಂಗಳೂರು ವಿವಿ ಹಂಗಾಮಿ ಕುಲಪತಿಗಳು, ಶಿಸ್ತುಪಾಲನೆಗಾಗಿ ಕಠಿಣ ಕ್ರಮಗಳನ್ನು ರೂಪಿಸಿದ್ದಾರೆ.  

Advertisement

ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ವಿದ್ಯಾರ್ಥಿಗಳ ಹಾಸ್ಟೆಲ್‌ಗ‌ಳು ರಾಜಕೀಯ ಚಟುವಟಿಕೆಗಳ ಕೇಂದ್ರಗಳಾಗುವ ಜತೆಗೆ ಧೂಮಪಾನ, ಮದ್ಯಪಾನ ಹಾಗೂ ಜೂಜಾಟ (ಇಸ್ಪೀಟ್‌) ಅಡ್ಡೆಗಳಾಗಿವೆ. ಜತೆಗೆ ಹಾಸ್ಟೆಲ್‌ಗ‌ಳಲ್ಲಿ ವಿದ್ಯಾರ್ಥಿಗಳ ಗೂಂಡಾಗಿರಿ, ರ್ಯಾಗಿಂಗ್‌ ಸಹ ನಡೆಯುತ್ತಿದ್ದು, ಈ ಬಗ್ಗೆ ವಿಶ್ವವಿದ್ಯಾಲಯ ಆಡಳಿತ ಮಂಡಳಿ ತೀವ್ರ ತಲೆಬಿಸಿಮಾಡಿಕೊಂಡಿದೆ. 

ಹಾಸ್ಟೆಲ್‌ಗ‌ಳಲ್ಲಿ ಅಕ್ರಮವಾಗಿ ವಾಸವಾಗಿರುವ ವಿದ್ಯಾರ್ಥಿಗಳನ್ನು ತೆರವು ಮಾಡಲು ಕಳೆದ ಅನೇಕ ವರ್ಷದಿಂದ ವಿವಿ ಪ್ರಯತ್ನಿಸುತ್ತಿದ್ದರೂ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ, ಅಧ್ಯಯನದ ನಂತರವೂ ಹಾಸ್ಟೆಲ್‌ಗ‌ಳಲ್ಲಿ ಅಕ್ರಮವಾಗಿ ವಾಸವಾಗಿರುವ ವಿದ್ಯಾರ್ಥಿಗಳ ಬಗ್ಗೆ ವಿವಿ ವರದಿ ತರಿಸಿಕೊಂಡಿತ್ತು. ಆದರೂ, ಅವರನ್ನು ಹೊರಗಟ್ಟಲು ಈವರೆಗೂ ಸಾಧ್ಯವಾಗಿಲ್ಲ.

ಕೋಲಾರ ಸ್ನಾತಕೋತ್ತರ ಕೇಂದ್ರ ಸೇರಿ ಬೆಂಗಳೂರು ವಿಶ್ವವಿದ್ಯಾಲಯ 4 ವಿದ್ಯಾರ್ಥಿನಿಯರ ಹಾಗೂ 8 ವಿದ್ಯಾರ್ಥಿಗಳ ಹಾಸ್ಟೆಲ್‌ಗ‌ಳಿವೆ.  ಇಲ್ಲಿ ಒಟ್ಟು 2628 ವಿದ್ಯಾರ್ಥಿಗಳಿದ್ದಾರೆ. ಪ್ರತಿ ಹಾಸ್ಟೆಲ್‌ನಿಂದಲೂ ಪ್ರತಿದಿನ ಒಂದಲ್ಲೊಂದು ದೂರು ಬರುತ್ತಲೇ ಇರುತ್ತದೆ. 12 ಹಾಸ್ಟೆಲ್‌ಗ‌ಳ ಪೈಕಿ ಸೆಂಟ್ರಲ್‌ ಕಾಲೇಜು ಆವರಣದ ಮಹಿಳಾ ಹಾಸ್ಟೆಲ್‌ನಲ್ಲಿ ವಾರ್ಡನ್‌ ಇಲ್ಲ. ಉಳಿದ ಹಾಸ್ಟೆಲ್‌ಗ‌ಳಲ್ಲಿ  ವಾರ್ಡನ್‌ ಇದ್ದರೂ, ಭದ್ರತೆಯಿಲ್ಲ.  ವಿದ್ಯಾರ್ಥಿಗಳ ಹಾಸ್ಟೆಲ್‌ಗ‌ಳಲ್ಲಿ ಅಕ್ರಮ ವಾಸ ಎಗ್ಗಿಲ್ಲದೇ ಸಾಗಿದೆ.

ಅಧಿಕಾರಿಗಳ ಸಭೆ: ಅಕ್ರಮವಾಗಿ ವಾಸ ಇರುವ ವಿದ್ಯಾರ್ಥಿಗಳನ್ನು ಹೊರಗಟ್ಟುವ ವಿಚಾರಕ್ಕೆ ಸಂಬಂಸಿದಂತೆ ವಿವಿ ಹಂಗಾಮಿ ಕುಲಪತಿ ಪ್ರೊ. ಎಂ. ಮುನಿರಾಜು ಅವರು ಮಂಗಳವಾರ ವಿವಿಯ ಎಲ್ಲ ಹಾಸ್ಟೆಲ್‌ಗ‌ಳ ಮೇಲ್ವಿàಚಾರಕರ, ವಾರ್ಡನ್‌ಗಳ ಸಭೆ ಕರೆದು ಹಾಸ್ಟೆಲ್‌ಗ‌ಳಲ್ಲಿನ ಗೂಂಡಾಗಿರಿ,  ಧೂಮಪಾನ, ಮದ್ಯಪಾನ, ಜೂಜಾಟ ನಿಯಂತ್ರಿಸಲು ಕಠಿಣ ಕ್ರಮಕ್ಕೆ ತೀರ್ಮಾನಿಸಿ, ಕೆಲವೊಂದು ನಿಯಮಾವಳಿ ರೂಪಿಸಿದ್ದಾರೆ. ಇದನ್ನು ವಿವಿ ಸಿಂಡಿಕೇಟ್‌ ಮುಂದಿಟ್ಟು, ಅಂಗೀಕರಿಸಿದ ನಂತರ ಅನುಷ್ಠಾನಕ್ಕೆ ತರಲಾಗುವುದು ಎಂದು ಮೂಲಗಳು ತಿಳಿಸಿವೆ.

Advertisement

ಏನೇನು ಕ್ರಮ?
ಸದ್ಯ ವಿದ್ಯಾರ್ಥಿಗಳು ರಾತ್ರಿ 9 ಅಥವಾ 10 ಗಂಟೆಯ ನಂತರವೇ ಹಾಸ್ಟೆಲ್‌ ಬರುವ ಪರಿಪಾಠ ಹೊಂದಿದ್ದಾರೆ. ಇದನ್ನು ನಿಯಂತ್ರಿಸಲು ರಾತ್ರಿ 8 ಗಂಟೆಯ ಒಳಗೆ ವಿದ್ಯಾರ್ಥಿಗಳು ಹಾಸ್ಟೆಲ್‌ಗೆ ಬಂದಿರಬೇಕೆಂಬ ನೀರಿ ರೂಪಿಸಲಾಗುತ್ತಿದೆ. ತಡವಾದರೆ, ಅದಕ್ಕೆ ಸಕಾರಣ ನೀಡಿ, ಮುಚ್ಚಳಿಕೆ ಬರೆದುಕೊಡಬೇಕು.

ಹಾಗೆಯೇ 8 ಗಂಟೆಯ ನಂತರ ಅನಿವಾರ್ಯವಾಗಿ ಹೊರಗೆ ಹೋಗಬೇಕಾದ ಪರಿಸ್ಥಿತಿ ಎದುರಾದರೆ ವಿದ್ಯಾರ್ಥಿಯ ಗುರುತಿನ ಚೀಟಿ ನೀಡಿ ಕಾರಣ ಬರೆದುಕೊಟ್ಟು ಹೋಗಬೇಕು ಎಂದು ನೀತಿ ರೂಪಿಸಲಾಗಿದೆ.  ಹಾಸ್ಟೆಲ್‌ಗ‌ಳಲ್ಲಿ ಪದೇಪದೆ ಅಸಭ್ಯ ವರ್ತನೆ ತೋರುವ ಅಥವಾ ವಿನಾಕಾರಣ ಬೇರೆ ವಿದ್ಯಾರ್ಥಿಗಳಿಗೆ ಸಮಸ್ಯೆ ನೀಡುವವರನ್ನು ಪತ್ತೆ ಹಚ್ಚಿ, ಅವರ ಪಾಲಕರನ್ನು ಕರೆಸಿ, ವಿಭಾಗದ ಮುಖ್ಯಸ್ಥರ ಸಮ್ಮುಖದಲ್ಲಿ ಸೂಚನೆ ನೀಡುವುದು.

“ನಮ್ಮ ಮಕ್ಕಳು ಅನುಚಿತ ವರ್ತನೆ ತೋರದಂತೆ ನಿಗಾ ವಹಿಸುತ್ತೇವೆ. ಅಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳುತೇವೆ,’ ಎಂದು ಪಾಲಕರು ಸಹ ಮುತ್ಛಳಿಕೆ ಬರೆದುಕೊಡಬೇಕು. ತಪ್ಪಿತಸ್ಥ ವಿದ್ಯಾರ್ಥಿ ವಿರುದ್ಧ ಕ್ರಮ ತೆಗೆದುಕೊಳ್ಳುವ ಹೊಣೆಗಾರಿಕೆ ಆಯಾ ವಿಭಾಗದ ಮುಖ್ಯಸ್ಥರಿಗೆ ನೀಡುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.

ವಿಶ್ವವಿದ್ಯಾಲಯದ ಹಾಸ್ಟೆಲ್‌ಗ‌ಳಲ್ಲಿ ಅಕ್ರಮ ವಾಸ, ಧೂಮಪಾನ, ಮದ್ಯಪಾನ ಸೇರಿದಂತೆ ಅಕ್ರಮ ಚಟುವಟಿಕೆಗಳಿಗೆ ಇನ್ನುಮುಂದೆ ಅವಕಾಶ ಇರುವುದಿಲ್ಲ. ಭದ್ರತೆ ಬಿಗಿಗೊಳಿಸಿ, ವಿದ್ಯಾರ್ಥಿಗಳ ಶಿಸ್ತುಪಾಲನೆಗಾಗಿ ಕೆಲವು ಕ್ರಮಗಳನ್ನು ಸಭೆಯಲ್ಲಿ ತೆಗೆದುಕೊಂಡಿದ್ದೇವೆ. ಸಿಂಡಿಕೇಟ್‌ ಸಭೆಯ ಮುಂದಿಟ್ಟು, ಅಂಗೀಕಾರವಾದ ನಂತರ ಅನುಷ್ಠಾನ ಮಾಡಲಿದ್ದೇವೆ.
-ಪ್ರೊ.ಎಂ.ಮುನಿರಾಜು, ಹಂಗಾಮಿ ಕುಲಪತಿ, ಬೆಂವಿವಿ

* ರಾಜು ಖಾರ್ವಿ 

Advertisement

Udayavani is now on Telegram. Click here to join our channel and stay updated with the latest news.

Next