ದೇವದುರ್ಗ: ತಾಲೂಕಿನ ಅಂಚೆಸುಗೂರು ಬಳಿಯ ನಾರಾಯಣಪುರ ಬಲದಂಡೆ ಕಾಲುವೆ ಡಿಸ್ಟ್ರಿಬ್ಯೂಟರ್ 15ರ ಬಿ.ಡಿ. 5ರ ಕಾಲುವೆ ಮಂಗಳವಾರ ತಡರಾತ್ರಿ ಒಡೆದು ಅಪಾರ ಪ್ರಮಾಣದ ನೀರು ಹೊಲಗಳಿಗೆ ನುಗ್ಗಿ ಬೆಳೆ ಹಾನಿಯಾಗಿದೆ.
ಕಾಲುವೆ ಒಡೆದು ಅಪಾರ ಪ್ರಮಾಣದ ನೀರು ಹೊಲಕ್ಕೆ ನುಗ್ಗಿದ್ದರಿಂದ ಅಂಚೆಸುಗೂರು ಗ್ರಾಮದ ರೈತ ರಾಮಣ್ಣ ಅವರ ಹೊಲದಲ್ಲಿನ ಹತ್ತಿ, ಮೆಣಸಿನಕಾಯಿ ಬೆಳೆ ನೀರಲ್ಲಿ ನಿಂತಿದೆ. ಘಟನೆಗೆ ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ರೈತ ದೂರಿದ್ದಾರೆ.
ಅಧಿಕಾರಿಗಳ ಬೇಜವಾಬ್ದಾರಿ: ಕಾಲುವೆಯಲ್ಲಿ ಬೋಂಗಾ ಬಿದ್ದಿದ್ದು, ಒಡೆದರೆ ಸುತ್ತಲಿನ ರೈತರು ಬೆಳೆನಷ್ಟ ಎದುರಿಸಬೇಕಾಗುತ್ತದೆ. ಕೂಡಲೇ ದುರಸ್ತಿಗೊಳಿಸಬೇಕು ಎಂದು ತಾಲೂಕು ಮಟ್ಟದ ಅಧಿಕಾರಿಗಳು, ಜಿಲ್ಲಾಧಿಕಾರಿ ಮತ್ತು ನೀರಾವರಿ ಸಚಿವರಿಗೆ ಆರೇಳು ತಿಂಗಳ ಹಿಂದೆಯೇ ರೈತರು ಮನವಿ ಸಲ್ಲಿಸಿದ್ದರು. ಆದರೆ ಅಧಿಕಾರಿಗಳು ಕಾಲುವೆ ದುರಸ್ತಿಗೆ ಮುಂದಾಗದ್ದರಿಂದ ಈಗ ಇಂಥ ಅವಘಡ ಸಂಭವಿಸಿದೆ ಎಂದು ರೈತರು ದೂರಿದ್ದಾರೆ.
ರೈತರ ಆಕ್ರೋಶ: ಮಂಳವಾರ ತಡರಾತ್ರಿ ಕಾಲುವೆ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿ ಜಮೀನಿಗೆ ನುಗ್ಗಿದ ಬಗ್ಗೆ ರೈತರು ದೂರವಾಣಿ ಮೂಲಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ತಕ್ಷಣ ಅಧಿಕಾರಿಗಳು ಬಾರದೇ ಬುಧವಾರ ಆಗಮಿಸಿದ್ದ ರಿಂದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರಿಹಾರಕ್ಕೆ ಆಗ್ರಹ: ಕಾಲುವೆ ನೀರು ನುಗ್ಗಿ ಬೆಳೆ ಹಾನಿಗೀಡಾದ ರೈತರಿಗೆ ಪರಿಹಾರ ವಿತರಿಸಬೇಕೆಂದು ರೈತರು ಆಗ್ರಹಿಸಿದ್ದಾರೆ. ನಾರಾಯಣಪುರ ಬಲದಂಡೆ ಕಾಲುವೆಗಳದುರಸ್ತಿ, ಜಂಗಲ್ ಕಟ್ಟಿಂಗ್‌ಗೆ ಸರ್ಕಾರ ಕೋಟ್ಯಂತರ ರೂ. ವ್ಯಯಿಸುತ್ತದೆ. ಪ್ರತಿ ವರ್ಷ ಬೇಸಿಗೆಯಲ್ಲಿ ಈ ಕಾಮಗಾರಿ ಮಾಡಲಾಗುತ್ತದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಗುತ್ತಿಗೆದಾರರು ಮಾಡುವ ಅರೆಬರೆ ಕಾಮಗಾರಿಯಿಂದ ಕಾಲುವೆಗಳು ಒಡೆಯುತ್ತಿವೆ ಮತ್ತು ಕಾಲುವೆ ಕೆಳಭಾಗದ ರೈತರ ಜಮೀನಿಗೆ ಸಮರ್ಪಕ ನೀರು ಹರಿಯುವುದಿಲ್ಲ ಎಂದು ರೈತ ಬಸಪ್ಪ ದೂರಿದ್ದಾರೆ
ಕಾಲುವೆಯಲ್ಲಿ ಬೋಂಗಾ ಬಿದ್ದಿತ್ತು. ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಲ್ಲಿ ಕಾಲುವೆ ಒಡೆದು ಬೆಳೆಗಳಿಗೆ ಹಾನಿ ಆಗುತ್ತದೆ ಎಂದು ಈ ಮುಂಚೆಯೇ ಅಧಿಕಾರಿಗಳಿಗೆ, ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಅವರು ನಿರ್ಲಕ್ಷ್ಯ ವಹಿಸಿದ್ದರಿಂದ ಈಗ ಕಾಲುವೆ ಒಡೆದು ಹೊಲಕ್ಕೆ ನೀರು ನುಗ್ಗಿದೆ.
ರಾಮಣ್ಣ , ಅಂಚೆಸುಗೂರು ರೈತ
ಮಂಗಳವಾರ ತಡರಾತ್ರಿ 2ರಿಂದ 5ರವರೆಗೆ ಗೇಟ್ ಬಂದ್ ಮಾಡಿ ಬೆಳೆಗಳಿಗೆ ನೀರು ಬಿಡಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿರುವ ಕಾರಣ ಕಾಲುವೆ ಒಡೆದಿದೆ. ಬೋಂಗ ಬಿದ್ದಲ್ಲಿ ಮರಂ ಹಾಕಿ ದುರಸ್ತಿ ಮಾಡಿಸಲಾಗಿತ್ತು.
ಶ್ರೀನಿವಾಸ ಪಿ., ಎಇಇ