Advertisement

ಬೇನಾಮಿ ಬ್ಯಾಂಕ್‌ ಖಾತೆಗಳಿಗೆ ಬ್ರೇಕ್‌

10:36 AM Feb 22, 2017 | Team Udayavani |

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸೇರಿದಂತೆ ಹಲವು ಇಲಾಖೆಗಳಲ್ಲಿ ಬೇನಾಮಿ ಬ್ಯಾಂಕ್‌ ಖಾತೆಗಳ ಮೂಲಕ ಸಾವಿರಾರು ಕೋಟಿ ರೂ.ಗಳ ಅವ್ಯವಹಾರ ನಡೆಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಬೇನಾಮಿ ಬ್ಯಾಂಕ್‌ ಖಾತೆಗಳಿಗೆ ಕಡಿವಾಣ ಹಾಕಲು ಮುಂದಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಬ್ಯಾಂಕ್‌ ಖಾತೆಗಳ ವಹಿವಾಟಿನ ಮೇಲೆ ಕಣ್ಗಾವಲು ಇಡಲು ಕಠಿಣ ನಿಯಮಾವಳಿಗಳನ್ನು ಜಾರಿಗೆ ತಂದಿದೆ.

Advertisement

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ, ಬಿಡಿಎ ಮತ್ತು ಕೆಲವು ಸರ್ಕಾರಿ ಅಧೀನದ ಸಂಸ್ಥೆಗಳಲ್ಲಿ ಬೇನಾಮಿ ಖಾತೆಗಳಲ್ಲಿ ಅಕ್ರಮ ಠೇವಣಿ ಇಟ್ಟು, 10 ಸಾವಿರ ಕೋಟಿ ರೂ.ಗೂ ಹೆಚ್ಚು ಅವ್ಯವಹಾರ ನಡೆದಿರುವ ಪ್ರಕರಣ ಈಚೆಗೆ ರಾಜ್ಯದಲ್ಲಿ ವರದಿಯಾಗಿತ್ತು. ಈ ಬೆನ್ನಲ್ಲೇ, ರಾಜ್ಯದ ಎಲ್ಲ ಇಲಾಖೆಗಳಲ್ಲಿ ಇರಬಹುದಾದ ಬೇನಾಮಿ ಖಾತೆಗಳ ವಹಿವಾಟುಗಳನ್ನು ಪತ್ತೆಹಚ್ಚುವ ಸಂಬಂಧ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಆಯಾ ಇಲಾಖೆಗಳಿಗೆ ಹಣಕಾಸು ಇಲಾಖೆ ಸೂಚಿಸಿದೆ.

ಸರ್ಕಾರಿ ಇಲಾಖೆಗಳು, ನಗರ ಸ್ಥಳೀಯ ಸಂಸ್ಥೆಗಳು, ಪಂಚಾಯತ್‌ರಾಜ್‌ ಸ್ಥಳೀಯ ಸಂಸ್ಥೆಗಳು, ನಿಗಮ-ಮಂಡಳಿಗಳು, ಸಹಕಾರ ಸಂಘಗಳು, ವಿಶ್ವವಿದ್ಯಾಲಯಗಳು, ರಾಜ್ಯ ಸ್ವಾಯತ್ತ ಸಂಸ್ಥೆಗಳು ಬ್ಯಾಂಕ್‌ ಖಾತೆ ತೆರೆಯಲು ಮತ್ತು ಅವುಗಳ ನಿರ್ವಹಣೆ ಮಾಡಲು ಹಲವು ಮಾರ್ಗಸೂಚಿಗಳನ್ನು ಹೊರಡಿಸಿ, ಆದೇಶದ ಕಡ್ಡಾಯ ಪಾಲನೆಗೆ ಸ್ಪಷ್ಟ ನಿರ್ದೇಶನ ನೀಡಿದೆ. ಅಲ್ಲದೆ, ಈಗಾಗಲೇ ತೆರೆದಿರುವ ಬ್ಯಾಂಕ್‌ ಖಾತೆಗಳನ್ನು ಈ ಮಾರ್ಗಸೂಚಿಯನ್ವಯ ಪರಿಷ್ಕರಿಸಬೇಕು ಎಂದು ಆದೇಶಿಸಿರುವ ಹಣಕಾಸು ಇಲಾಖೆ, ಬೇನಾಮಿ ಖಾತೆಗಳ ವಹಿವಾಟುಗಳನ್ನು ಪತ್ತೆಹಚ್ಚುವ ಸಂಬಂಧ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆಯೂ ಸೂಚಿಸಿದೆ. ಮಾರ್ಗಸೂಚಿ ಪಾಲಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಲ್ಲಿ 2008ರಿಂದ 2013ರವರೆಗೆ ಸುಮಾರು 1,100 ಕೋಟಿ ರೂ.ಗೂ ಹೆಚ್ಚು ಮೊತ್ತವನ್ನು ನೂರಾರು ಬೇನಾಮಿ ಬ್ಯಾಂಕ್‌ ಖಾತೆಗಳಲ್ಲಿಟ್ಟಿರುವುದನ್ನು ಪತ್ತೆ ಹಚ್ಚಲಾಗಿತ್ತು. ಜತೆಗೆ, ಮೂರ್ನಾಲ್ಕು ವರ್ಷದಲ್ಲಿ ವಿವಿಧ ಇಲಾಖೆಗಳ ವಿವಿಧ ಯೋಜನೆಗಳ ಹೆಸರಿನಲ್ಲಿ 10 ಸಾವಿರ ಕೋಟಿ ರೂ.ಗೂ ಹೆಚ್ಚು ಅವ್ಯವಹಾರ ನಡೆದಿರುವ ಬಗ್ಗೆಯೂ ಅನುಮಾನ ವ್ಯಕ್ತವಾಗಿತ್ತು. ಇದಕ್ಕೆ ಬ್ಯಾಂಕ್‌ ಖಾತೆಗಳ ನಿರ್ವಹಣೆಯಲ್ಲಿನ ಲೋಪವೇ ಕಾರಣ ಎಂಬ ಅಂಶ ಬಯಲಾಗಿತ್ತು. ಇದೇ ವೇಳೆ, ಮಂಡ್ಯ ಮತ್ತು ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರಿಗಳಲ್ಲೂ ಇದೇ ರೀತಿಯ ಹಗರಣಗಳು ಪತ್ತೆಯಾಗಿದ್ದು, ಸಿಬಿಐ ತನಿಖೆಗೆ ಆದೇಶಿಸಲಾಗಿತ್ತು. ಹಲವು ಅಧಿಕಾರಿಗಳ ತಲೆದಂಡವೂ ಆಗಿತ್ತು.

ಇನ್ನೊಂದೆಡೆ, ಇಲಾಖೆಗಳು ಅನಗತ್ಯವಾಗಿ ಬ್ಯಾಂಕ್‌ ಖಾತೆಗಳನ್ನು ನಿರ್ವಹಿಸುವ ಮೂಲಕ ಮತ್ತು ಆ ಖಾತೆಗಳಿಂದ ವಹಿವಾಟು ನಡೆಸುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ನಷ್ಟು ಉಂಟು ಮಾಡುತ್ತಿರುವ ಬಗ್ಗೆ ಪ್ರತಿ ಬಾರಿಯೂ ಲೆಕ್ಕ ಪರಿಶೋಧನಾ ವರದಿಯಲ್ಲಿ ಆಕ್ಷೇಪ ವ್ಯಕ್ತವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ, ಸರ್ಕಾರ ಕಠಿಣ ನಿರ್ಧಾರ ತಳೆದಿದ್ದು, ಬ್ಯಾಂಕ್‌ ಖಾತೆ ತೆರೆಯಲು ಮತ್ತು ಅವುಗಳ ನಿರ್ವಹಣೆ ಮಾಡಲು ಹಲವು ಮಾರ್ಗಸೂಚಿಗಳನ್ನು ಹೊರಡಿಸಿದೆ. ಸರ್ಕಾರದ ಕ್ರಮ ಈಗಾಗಲೇ ಬೇನಾಮಿ ಖಾತೆಯನ್ನು ತೆರೆದು, ನೂರಾರು ಕೋಟಿ ರೂ.ಠೇವಣಿ ಇಟ್ಟ ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿದೆ.

Advertisement

ಸರ್ಕಾರದ ಆದೇಶದ ಪ್ರಕಾರ, ಸರ್ಕಾರಿ ಇಲಾಖೆಗಳು, ನಗರ ಸ್ಥಳೀಯ ಸಂಸ್ಥೆಗಳು, ಪಂಚಾಯತ್‌ರಾಜ್‌ ಸ್ಥಳೀಯ ಸಂಸ್ಥೆಗಳು, ನಿಗಮ-ಮಂಡಳಿಗಳು, ಸಹಕಾರ ಸಂಘಗಳು, ವಿಶ್ವವಿದ್ಯಾಲಯಗಳು, ರಾಜ್ಯ ಸ್ವಾಯತ್ತ ಸಂಸ್ಥೆಗಳು, ಸಾರ್ವಜನಿಕ ಸ್ವಾಮ್ಯದ ಅಥವಾ ವಿಭಾಗೀಯ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಮಾತ್ರ ಖಾತೆಗಳನ್ನು ತೆರೆಯಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳು ಅಗತ್ಯವಿರುವ ಸೇವೆಗಳನ್ನು ಒದಗಿಸಲು ನಿರಾಕರಿಸಿದರೆ ಮಾತ್ರ ಆರ್ಥಿಕ ಇಲಾಖೆಯ ಸಹಮತದೊಂದಿಗೆ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದು ವರ್ಗೀಕೃತ ಬ್ಯಾಂಕ್‌ಗಳಲ್ಲಿ ಖಾತೆ ತೆರೆಯಬೇಕು. ಇಲಾಖೆಗಳಲ್ಲಿ ಅಗತ್ಯ ಸಂದರ್ಭದಲ್ಲಿ ಹೆಚ್ಚುವರಿ ಖಾತೆಗಳನ್ನು ತೆರೆದರೂ ಆ ಖಾತೆಗಳು ಮೂಲ ಖಾತೆಗಳ ಜತೆ ಸಂಪರ್ಕ ಹೊಂದಿರಬೇಕು. ಅಂದರೆ, ಹೆಚ್ಚುವರಿ ಖಾತೆಗಳಲ್ಲಿ ಏನೇ ವ್ಯವಹಾರ ನಡೆದರೂ ಅದು ಮೂಲ ಖಾತೆಯನ್ನು ನಿರ್ವಹಣೆ ಮಾಡುವವರಿಗೆ ಸಂದೇಶ ಕಳುಹಿಸುವಂತಿರಬೇಕು.

ಇ-ವ್ಯವಹಾರಕ್ಕೆ ಮಾತ್ರ ಅವಕಾಶ
ಉಳಿದಂತೆ ಇಲಾಖೆಯ ಸುರಕ್ಷತೆ ಕಾಪಾಡಿಕೊಳ್ಳುವ ಮಾದರಿಯಲ್ಲಿ ಖಾತೆಗಳನ್ನು ನಿರ್ವಹಿಸಲು ಎಲ್ಲಾ ವ್ಯವಹಾರಗಳನ್ನು ಎಲೆಕ್ಟ್ರಾನಿಕ್‌ ಮೋಡ್‌ನ‌ಲ್ಲೇ (ಆರ್‌ಟಿಜಿಎಸ್‌, ಇನ್‌ಇಎಫ್ಟಿ, ಐಎಂಪಿಎಸ್‌ ಇತ್ಯಾದಿ) ನಡೆಸಬೇಕು. ಚೆಕ್‌ಗಳ ಮೂಲಕ ಹಣ ವಿತರಿಸುವುದಿದ್ದರೆ ಇಲಾಖಾ ಮುಖ್ಯಸ್ಥರು ಒಪ್ಪಿಗೆ ನೀಡಿರಬೇಕು. ಜತೆಗೆ, ಖಾತೆ ನಿರ್ವಹಣೆಯಲ್ಲಿ ಮುಖ್ಯ ಹಣಕಾಸು ಅಧಿಕಾರಿ, ಮುಖ್ಯ ಲೆಕ್ಕಾಧಿಕಾರಿ ಅಥವಾ ಖಾತೆ ನಿರ್ವಹಿಸುವ ಮುಖ್ಯಸ್ಥರ ಜಂಟಿ ಸಹಿ ಇರುವುದನ್ನು ಕಡ್ಡಾಯಗೊಳಿಸಿದೆ.

ಬ್ಯಾಂಕ್‌ ಖಾತೆ ತೆರೆಯುವುದು ಮತ್ತು ನಿರ್ವಹಣೆ ಹೇಗೆ?
– ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಬ್ಯಾಂಕ್‌ ಖಾತೆಗಳನ್ನು ತೆರೆಯಬಾರದು. ಹಾಲಿ ಇರುವ ಖಾತೆಗಳಿಂದ ಯೋಜನೆಗಳಿಗೆ ಸಮರ್ಪಕವಾಗಿ ಹಣ ಬಿಡುಗಡೆ ಸಾಧ್ಯವಿಲ್ಲ ಎಂದು ಸ್ಪಷ್ಟವಾದ ಬಳಿಕವೇ ಹೆಚ್ಚುವರಿ ಖಾತೆಗಳನ್ನು ತೆರೆಯಲು ಸಕ್ಷಮ ಪ್ರಾಧಿಕಾರಗಳು ಅನುಮತಿ ನೀಡಬೇಕು.

– ಇಲಾಖೆಯಲ್ಲಿ ಖರ್ಚಾಗದೆ ಉಳಿದ ಹಣವನ್ನು ಬೇರೆ ಯೋಜನೆಗಳಿಗೆ ವರ್ಗಾವಣೆ ಮಾಡುವುದು, ವರ್ಷದಲ್ಲಿ ಖರ್ಚಾಗದಿದ್ದರೆ ಹಣ ವಾಪಸಾಗುತ್ತದೆ ಎಂಬ ಕಾರಣಕ್ಕೆ ಅದನ್ನು ಬೇರೆ ಕಡೆ ಇಡುವುದು, ಸಾಲ ಪಡೆಯಲು ಖಾತೆಗಳನ್ನು ತೆರೆದು ಹಣ ವರ್ಗಾವಣೆ ಮಾಡುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.

– ಎಲ್ಲಾ ಖಾತೆಗಳಿಗೆ ಮುಖ್ಯ ಹಣಕಾಸು ಅಧಿಕಾರಿ, ಮುಖ್ಯ ಲೆಕ್ಕಾಧಿಕಾರಿ ಅಥವಾ ಖಾತೆ ನಿರ್ವಹಿಸುವ ಮುಖ್ಯಸ್ಥರ ಈ-ಮೇಲ್‌ ಐಡಿ, ಮೊಬೈಲ್‌ ಸಂಖ್ಯೆಯೊಂದಿಗೆ ಸಂಪರ್ಕ ಕಲ್ಪಿಸಬೇಕು. ಎಲ್ಲಾ ವ್ಯವಹಾರಗಳ ಕುರಿತು ಈ-ಮೇಲ್‌ ಅಥವಾ ಎಸ್‌ಎಂಎಸ್‌ ಕಡ್ಡಾಯವಾಗಿರಬೇಕು.

– ಯಾವುದೇ ಅಧಿಕಾರಿ ಸರ್ಕಾರದ ಹಣವನ್ನು ಸೆಲ್ಫ್ ಚೆಕ್‌ ಮೂಲಕ ನೀಡುವುದು ಅಥವಾ ಯೋಜನೆಯ ನಿಧಿಯನ್ನು ವೈಯಕ್ತಿಕ ಖಾತೆಗೆ ವರ್ಗಾವಣೆ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಯಾವುದೇ ಒಂದು ಯೋಜನೆಗಾಗಿ ಪ್ರತ್ಯೇಕ ಖಾತೆ ತೆರೆದರೆ ಆ ಯೋಜನೆ ಮುಕ್ತಾಯವಾಗುತ್ತಿದ್ದಂತೆ ಖಾತೆಯನ್ನೂ ಬರ್ಕಾಸ್ತುಗೊಳಿಸಬೇಕು.

– ಆರ್ಥಿಕ ಅವ್ಯವಹಾರ ತಡೆಯಲು ಸರ್ಕಾರದ ದಿಟ್ಟ ಕ್ರಮ
– ಬ್ಯಾಂಕ್‌ ಖಾತೆಗಳ ವಹಿವಾಟಿನ ಮೇಲೆ ಕಣ್ಗಾವಲು
– ಸರ್ಕಾರಿ, ಸಹಕಾರ ಸಂಸ್ಥೆಗಳಿಗೆ ಬ್ಯಾಂಕ್‌ ಖಾತೆ ತೆರಯಲು ಮಾರ್ಗಸೂಚಿ

– ಪ್ರದೀಪ್‌ ಕುಮಾರ್‌ ಎಂ.

Advertisement

Udayavani is now on Telegram. Click here to join our channel and stay updated with the latest news.

Next