Advertisement
“ಥ್ಯಾಂಕ್ಸ್ ಟು ವಿಜಯಪ್ರಸಾದ್ …’ಹಾಗೆಂದು ಹೇಳಿ ನಕ್ಕರು ಮೋಹನ್. ವಿಜಯಪ್ರಸಾದ್ ಅವರಿಗೂ ಮೋಹನ್‌ಗೂ ಸಂಬಂಧವೇನು ಮತ್ತು ಮೋಹನ್ ಯಾಕೆ ವಿಜಯಪ್ರಸಾದ್‌ಗೆ ಥ್ಯಾಂಕ್ಸ್ ಹೇಳಬೇಕು ಎಂಬ ಪ್ರಶ್ನೆ ಬರುವುದು ಸಹಜ. ಉತ್ತರ ಏನೆಂದರೆ, ವಿಜಯಪ್ರಸಾದ್‌ರಿಂದ ಮೋಹನ್ ಸಾಕಷ್ಟು ಕಲಿತಿದ್ದಾರಂತೆ. ಅದೇ ಕಾರಣಕ್ಕೆ ಅವರು ವಿಜಯಪ್ರಸಾದ್‌ಗೆ ಧನ್ಯವಾದ ಸಲ್ಲಿಸುತ್ತಾರೆ.
Related Articles
Advertisement
“ಬಿಗ್ ಬಾಸ್’ ಮುಗಿದ ಮೇಲೆ ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲರೂ, ಚಾನಲ್‌ನಲ್ಲೇ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ಬಿಝಿಯಾದರು. ಮೋಹನ್ ಮಾತ್ರ ಆಗಲಿಲ್ಲ. ಏನು ಕಾರಣ? “ಅದು ಕೆಲವರಿಗೆ ಅವಶ್ಯಕತೆ ಇತ್ತು. ನನಗೆ ಇಲ್ಲ. ನಾನು ಕಾರ್ಯಕ್ರಮಕ್ಕೆ ಹೋಗುವಾಗಲೇ ಮೋಹನ್ ಆಗಿಯೇ ಹೋಗಿದ್ದೆ. ನನಗೆ ಆ್ಯಂಕರಿಂಗ್ ಮಾಡುವುದಕ್ಕೆ ಇಷ್ಟವಿಲ್ಲ. ಸಿನಿಮಾ ನಿರ್ದೇಶನ ಮಾಡಬಹುದು, ಸೀರಿಯಲ್ ನಿರ್ದೇಶನ ಮಾಡುವುದು ಹಿಂಸೆ. ಹಾಗಾಗಿ ನಾನು ಆ ಕಡೆ ಹೋಗಲಿಲ್ಲ, ಸ್ಕ್ರಿಪ್ಟ್ ಕೆಲಸದಲ್ಲಿ ಕೂತೆ. ಈಗ ನನ್ನ ಬಳಿ ಮೂರ್‍ನಾಲ್ಕು ಕಥೆಗಳಿವೆ. ಬೇರೆ ಬೇರೆ ಜಾನರ್‌ಗಳ ಕಥೆ. ನನಗೆ ನಾನೇ ಚಿತ್ರ ಮಾಡಿಕೊಂಡರೆ ಕಾಮಿಡಿ ಚಿತ್ರ ಮಾಡಿಕೊಳ್ಳುತ್ತೀನಿ. ಬೇರೆಯವರಿಗೆ ನಿರ್ದೇಶನ ಮಾಡಬೇಕೆಂದರೂ, ನನ್ನ ಬಳಿ ಕಥೆ ಇದೆ. “ಮುಧೋಳ’ ಎಂಬ ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಕಥೆ ಇದೆ. “ಶತಾಯ’ ಎಂಬ ಇನ್ನೊಂದು ಕಥೆ ಸಿದ್ಧವಿದೆ. ಸೆಪ್ಟೆಂಬರ್‌ನಲ್ಲಿ “ಮನೆಗೊಬ್ಬ ಮನೆಹಾಳ’ ಶುರುವಾಗಲಿದೆ. ಅಲ್ಲಿಯವರೆಗೂ ಯಾಕೆ ಕಾಯಬೇಕು ಎಂದು ಇದು ಶುರು ಮಾಡಿದೆ. ನನ್ನ ಐಡಿಯಾ ಪ್ರಕಾರ, ಮೂರು ತಿಂಗಳುಗಳಲ್ಲಿ ಚಿತ್ರ ಮಾಡಿ ಬಿಡುಗಡೆ ಮಾಡಬೇಕು’ ಎಂದು ಗುರಿ ಇಟ್ಟುಕೊಂಡಿದ್ದಾರೆ ಮೋಹನ್.
“ಬಿಗ್ ಬಾಸ್’ ನಂತರ ಕಿರುತೆರೆಯಲ್ಲಿ ಮೋಹನ್ ತೊಡಗಿಸಿಕೊಳ್ಳದಿದ್ದರೂ, ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ ತಮ್ಮ ಜನಪ್ರಿಯತೆ ಇನ್ನಷ್ಟು ಹೆಚ್ಚಾಯಿತು ಎನ್ನುತ್ತಾರೆ ಮೋಹನ್. “ಇತ್ತೀಚೆಗೆ ಕೆಲವು ಸೋಲುಗಳು ಮತ್ತು ಗ್ಯಾಪ್‌ನ ನಂತರ ಜನಪ್ರಿಯತೆ ಕಡಿಮೆಯಾಗಿತ್ತು. “ಬಿಗ್ ಬಾಸ್’ ಮನೆಗೆ ಹೋಗಿ ಬಂದಿದ್ದೇ ಬಂದಿದ್ದು, ಸ್ಕೂಲ್ ಮಕ್ಕಳು ಸಹ ಗುರುತಿಸುತ್ತಾರೆ. ಎಷ್ಟೋ ಮಕ್ಕಳು ಮನೆಗೆ ಬಂದು ಫೋಟೋ ತೆಗೆಸಿಕೊಂಡು ಹೋಗಿದ್ದಾರೆ. ಇದುವರೆಗೂ ಚೆನ್ನಾಗಿ ಬರೀತೀರಿ, ಚೆನ್ನಾಗಿ ನಟನೆ ಮಾಡ್ತೀರಿ ಅಂತ ಎಷ್ಟೋ ಜನ ಕಾಂಪ್ಲಿಮೆಂಟ್ ಕೊಟ್ಟಿದ್ದಾರೆ. ಆದರೆ, ಅನಾಗರಿಗರ ಜೊತೆಗೆ ನಾಗರಿಕರ ತರಹ ಇದ್ದು ಬಂದಿದ್ದೀರಿ ಎಂಬ ದೊಡ್ಡ ಪ್ರಶಂಸೆ ಸಿಕ್ಕಿದೆ. “ಬಿಗ್ ಬಾಸ್’ ಮನೆಯಲ್ಲಿ ಇರುವುದು ಅಷ್ಟು ಸುಲಭವಲ್ಲ. ಮನೆಯವರ ಜೊತೆಗೇ ಒಂದಿಷ್ಟು ಸಮಯ ಕಳೆಯೋದು ಕಷ್ಟ. ಹಾಗಿರುವಾಗ ಅಪರಿಚಿತರ ಜೊತೆಗೆ ನೂರು ದಿನಗಳ ಕಾಲ ನಡೆಯೋದು ಎಷ್ಟು ಕಷ್ಟ ಯೋಚಿಸಿ. ಸಂಯಮ, ಎನರ್ಜಿ ಎಲ್ಲಾ ಪರೀಕ್ಷೆ ಆಗುತ್ತೆ ಅಲ್ಲಿ. ಅಂತಹ ಕಡೆ ಮರ್ಯಾದೆ ಹೆಚ್ಚಿಸಿಕೊಂಡು ಬರುವುದು ಅಷ್ಟು ಸುಲಭವಲ್ಲ. ಆ ಕೆಲಸ ಮಾಡಿದ್ದೀನಿ ಅಂತ ಖುಷಿ ನನಗೆ ಇದೆ’ ಎನ್ನುತ್ತಾರೆ ಮೋಹನ್.
ನೂರು ದಿನಗಳಲ್ಲಿ ಕಲಿಯೋಕಾಗುತ್ತಾ?“ಬಿಗ್ ಬಾಸ್’ ಮನೆಯಿಂದ ಹೊರಬರುವವರೆಲ್ಲಾ, ಅಲ್ಲಿದ್ದಾಗ ಬಹಳ ಕಲಿತಿದ್ದಾಗಿ ಹೇಳುತ್ತಾರೆ. “ಬಿಗ್ ಬಾಸ್’ ಮನೆಯಿಂದ ಬಂದಿರುವ ಮೋಹನ್, ಅಲ್ಲಿದ್ದಾಗ ಏನು ಕಲಿತರು ಎಂದರೆ, “40 ವರ್ಷಗಳಲ್ಲಿ ಕಲಿಯೋಕೆ ಆಗದ್ದು, 100 ದಿನಗಳಲ್ಲಿ ಕಲಿಯೋಕೆ ಸಾಧ್ಯವಾ?’ ಎನ್ನುತ್ತಾರೆ. “ಅಲ್ಲಿ ಕಲಿಯೋದು, ಗಿಲಿಯೋದು ಎಲ್ಲಾ ಸುಳ್ಳು. ಮ್ಯಾನೇಜ್ ಮಾಡೋದು ಗೊತ್ತಿದ್ದರೆ, ಅಲ್ಲಿ ಇದ್ದು ಬರಬಹುದು. ನಾನು ಕಾಲೇಜ್ ದಿನಗಳಿಂದ ವರ್ಕ್‌ಶಾಪ್ ಎಲ್ಲಾ ಮಾಡಿದ್ದರಿಂದ ಮ್ಯಾನೇಜ್ ಮಾಡುವುದು ಸುಲಭವಾಯ್ತು. ಮೇಲಾಗಿ ನನಗೆ ಇಗೋ ಇಲ್ಲ. ಹಾಗಾಗಿ ಗಲಾಟೆ ಆಗುವುದಕ್ಕೆ ಆಸ್ಪದ ಇಲ್ಲ. ಆದರೂ ಅಲ್ಲಲ್ಲಿ ಆಯ್ತು. ಏಕೆಂದರೆ, ಆ ತರಹದ ಕಾರ್ಯಕ್ರಮಗಳಿಗೆ ರಿಫ್ಟ್ ಬಹಳ ಮುಖ್ಯ. ನಾನು ಸಾಧ್ಯವಾದಷ್ಟು ಎಲ್ಲವನ್ನೂ ಮ್ಯಾನೇಜ್ ಮಾಡಿಕೊಂಡೇ ಬಂದೆ’ ಎನ್ನುತ್ತಾರೆ ಅವರು. ಚೇತನ್; ಚಿತ್ರಗಳು: ಮನು