Advertisement

Politics: ಬಹಿರಂಗ ಮಾತುಗಳಿಗೆ ಬ್ರೇಕ್‌- ಸಚಿವರು,ಶಾಸಕರಿಗೆ ಡಿಕೆಶಿ ಫ‌ರ್ಮಾನು

09:06 PM Oct 21, 2023 | Team Udayavani |

ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಸಚಿವರು, ಶಾಸಕರು ಸಿಎಂ, ಡಿಸಿಎಂ ಹುದ್ದೆ, ಅಧಿಕಾರ ಹಂಚಿಕೆ, ಜಾತಿ ಗಣತಿ ಕುರಿತು ಪರ-ವಿರೋಧ ವ್ಯಕ್ತಪಡಿಸಿದ ಹೇಳಿಕೆಗಳು, ಅಭಿಪ್ರಾಯಗಳು ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರುತ್ತಿರುವುದರ ಜತೆಗೆ ಪಕ್ಷದೊಳಗೆ ಸಾಕಷ್ಟು ಗೊಂದಲ ಹಾಗೂ ವಿವಾದ ಸೃಷ್ಟಿಸುತ್ತಿರುವುದರಿಂದ ಎಚ್ಚೆತ್ತುಕೊಂಡಿರುವ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಯಾವುದೇ ವಿಷಯದಲ್ಲಿ ಬಾಯಿ ಬಿಡದಂತೆ ಫ‌ರ್ಮಾನು ಹೊರಡಿಸಿದ್ದಾರೆ.

Advertisement

ಪಕ್ಷ ಹಾಗೂ ಸರ್ಕಾರದ ಆಂತರಿಕ ವಿಷಯಗಳ ಬಗ್ಗೆ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಮಾತನಾಡದಂತೆ ಶಿವಕುಮಾರ್‌ ಅವರು ಸೂಚನೆ ನೀಡುವ ಮೂಲಕ ಪಕ್ಷದೊಳಗೆ ಎಲ್ಲವೂ ಸರಿ ಇಲ್ಲ ಎಂಬುದು ಮತ್ತೂಮ್ಮೆ ಸಾಬೀತಾಗಿದೆ.

ಪಕ್ಷದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ, ಸಚಿವರಾದ ಸತೀಶ್‌ ಜಾರಕಿಹೊಳಿ, ಕೆ.ಎನ್‌.ರಾಜಣ್ಣ, ಲಕ್ಷ್ಮೀ ಹೆಬ್ಟಾಳ್ಕರ್‌, ಶಾಸಕರಾದ ಬಸವರಾಜ ರಾಯರೆಡ್ಡಿ, ಅಶೋಕ ಎಂ. ಪಟ್ಟಣ, ಬಿ.ಆರ್‌.ಪಾಟೀಲ್‌ ಹಾಗೂ ಜಿ.ಟಿ.ಪಾಟೀಲ ಅವರು ಇತ್ತೀಚೆಗೆ ನೀಡಿದ ಹೇಳಿಕೆಗಳು ಹಾಗೂ ಮುಖ್ಯಮಂತ್ರಿ ಅವರಿಗೆ ಬರೆದ ಪತ್ರಗಳು ಸಾಕಷ್ಟು ಗೊಂದಲ ಸೃಷ್ಟಿಸಿದ್ದವು. ಈ ಹಿನ್ನೆಲೆಯಲ್ಲಿ “ಡ್ಯಾಮೇಜ್‌ ಕಂಟ್ರೋಲ್‌’ ಗೆ ಮುಂದಾಗಿರುವ ಡಿಸಿಎಂ ಶಿವಕುಮಾರ್‌ ಅವರು ಪಕ್ಷದ ಸಚಿವರು, ಶಾಸಕರು ಪಕ್ಷ ಹಾಗೂ ಸರ್ಕಾರದ ವಿಚಾರಗಳನ್ನು ಬಹಿರಂಗವಾಗಿ ಮಾತನಾಡದಂತೆ ಸೂಚನೆ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು, ಪಕ್ಷ ಹಾಗೂ ಸರ್ಕಾರದ ಆಂತರಿಕ ವಿಚಾರಗಳು ಏನೇ ಇದ್ದರೂ ಶಾಸಕರು ಮುಖ್ಯಮಂತ್ರಿಗಳು ಹಾಗೂ ನನ್ನ ಬಳಿ ಚರ್ಚಿಸಬಹುದು, ಆದರೆ ಯಾವುದೇ ಕಾರಣಕ್ಕೂ ಮಾಧ್ಯಮಗಳ ಮುಂದೆ ಮಾತನಾಡಬಾರದು ಎಂದು ಕಟ್ಟಪ್ಪಣೆ ಹೊರಡಿಸಿದರು.

ಎರಡೂವರೆ ವರ್ಷಗಳ ನಂತರ ಸಚಿವ ಸಂಪುಟ ಪುನಾರಚನೆ ಆಗುತ್ತದೆ ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ್‌ ಪಟ್ಟಣ ಹೇಳಿಕೆ ಬಗ್ಗೆ ಗಮನ ಸೆಳೆದಾಗ, ಪಕ್ಷದಲ್ಲಿ ಆಂತರಿಕವಾಗಿ ಒಂದಷ್ಟು ವಿಚಾರಗಳು ಚರ್ಚೆಯಾಗಿರುತ್ತವೆ. ಅದನ್ನು ನಾನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಅದನ್ನು ಚರ್ಚೆ ಮಾಡಲು ನಾನು ಹೋಗುವುದಿಲ್ಲ, ನನಗೆ ಇರುವ ಮಾಹಿತಿ ಪ್ರಕಾರ ಆ ರೀತಿ ಚರ್ಚೆ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Advertisement

ತಣ್ಣಗಾಗಿದ್ದು ಮತ್ತೆ ಸ್ಫೋಟ?
ಮೂವರು ಉಪ ಮುಖ್ಯಮಂತ್ರಿಗಳನ್ನು ನೇಮಿಸುವ ಅಗತ್ಯವಿದೆ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಕೆಲ ತಿಂಗಳ ಹಿಂದೆ ನೀಡಿದ್ದ ಹೇಳಿಕೆ ಪಕ್ಷದೊಳಗೆ ಭಾರೀ ಬಿರುಗಾಳಿ ಎಬ್ಬಿಸಿತ್ತು. ಆ ನಂತದ ಇದು ಜಾತಿಗೊಂದು ಡಿಸಿಎಂ ಬೇಕು ಎಂಬ ಹಂತದವರೆಗೂ ಚರ್ಚೆ ನಡೆಯಿತು. ಇದು ಸರ್ಕಾರದ ವರ್ಚಸ್ಸಿಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರು ಮಧ್ಯಪ್ರವೇಶಿಸಿ ಯಾರೂ ಈ ಬಗ್ಗೆ ಮಾತನಾಡದಂತೆ ಆದೇಶ ಹೊರಡಿಸಿದ ಬಳಿಕ ತಣ್ಣಗಾಗಿತ್ತು.

ಆದರೆ ಸರ್ಕಾರಿ ಮುಖ್ಯ ಸಚೇತಕರೂ ಆಗಿರುವ ಬೆಳಗಾವಿ ಜಿಲ್ಲೆಯ ರಾಮದುರ್ಗ ಶಾಸಕ ಅಶೋಕ ಪಟ್ಟಣ ಅವರು ಎರಡೂವರೆ ವರ್ಷದ ಬಳಿಕ ಸಚಿವ ಸಂಪುಟದಲ್ಲಿ ಬದಲಾವಣೆ ಆಗಲಿದೆ ಎಂದು ಶುಕ್ರವಾರ ನೀಡಿದ ಹೇಳಿಕೆ ಈಗ ಕಾಂಗ್ರೆಸ್‌ ಪಕ್ಷದೊಳಗೆ ಸಾಕಷ್ಟು ಚರ್ಚೆಗೆ ಆಸ್ಪದ ಕೊಟ್ಟಿದೆ. ಈ ಮಧ್ಯೆ ಬೆಂಗಳೂರಿನ ಶಾಂತಿನಗರ ಶಾಸಕ ಎನ್‌.ಎ.ಹ್ಯಾರೀಸ್‌ ಅವರು, ನಾನು 4ನೇ ಬಾರಿಗೆ ಗೆದ್ದಿರುವ ಶಾಸಕ, ಪಕ್ಷಕ್ಕಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದೇನೆ ಎಂದು ಹೇಳುವ ಮೂಲಕ ಸಚಿವ ಸ್ಥಾನ ಸಿಗದೇ ಇರುವುದಕ್ಕೆ ನೇರವಾಗಿಯೇ ತಮ್ಮ ಆಕ್ರೋಶ ಹೊರಹಾಕಿದ್ದರು. ಹೀಗಾಗಿ ಇದು ಎರಡೂವರೆ ವರ್ಷಗಳ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಪೂರ್ಣ ಬದಲಾಗುವುದೋ ಅಥವಾ ಕೇವಲ ಸಚಿವರು ಮಾತ್ರ ಬದಲಾಗುವರೋ ಎಂಬಿತ್ಯಾದಿ ವ್ಯಾಖ್ಯಾನಗಳು ಆರಂಭವಾಗಿವೆ. ಅಶೋಕ್‌ ಪಟ್ಟಣ ಹೇಳಿಕೆಗೆ ಮತ್ತೂಬ್ಬ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಕೂಡ ದನಿಗೂಡಿಸಿದ್ದಾರೆ.

ನಾನೊಬ್ಬನೇ ಎಂದು ಹೇಳಿಲ್ಲ, ಹೇಳುವುದೂ ಇಲ್ಲ
ಪಕ್ಷವನ್ನು ನಾನೊಬ್ಬನೇ ಅಧಿಕಾರಕ್ಕೆ ತಂದಿರುವುದಾಗಿ ಯಾವತ್ತೂ ಹೇಳಿಲ್ಲ, ಹೇಳುವುದೂ ಇಲ್ಲ. ಕಾರ್ಯಕರ್ತರು ಹಾಗೂ ಜನ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು. ಶಿವಕುಮಾರ್‌ ಒಬ್ಬರೇ ಪಕ್ಷವನ್ನು ಅಧಿಕಾರಕ್ಕೆ ತಂದಿಲ್ಲ ಎಂಬ ಸಚಿವ ಸತೀಶ್‌ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯೆ ನೀಡಿದರು. ಪಕ್ಷದ ಕಾರ್ಯಕರ್ತರು, ನಾವು, ನೀವು ಸೇರಿ, ರಾಜ್ಯದ ಜನರು, ಪ್ರತಿ ಹಳ್ಳಿಯಲ್ಲಿರುವವರು ಬಡಿದಾಡಿ, ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಡಿ.ಕೆ. ಶಿವಕುಮಾರ್‌ ಒಬ್ಬನೇ ಅಧಿಕಾರಕ್ಕೆ ತಂದಿದ್ದಾನೆ ಎಂದು ಇಂದು, ನಾಳೆ, ಎಂದಿಗೂ, ಯಾವತ್ತಿಗೂ ಹೇಳುವುದಿಲ್ಲ ಎಂದರು.

ಎಲ್ಲರ ಒಗ್ಗಟ್ಟು , ಪರಿಶ್ರಮದಿಂದ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಪ್ರವಾಸಕ್ಕೆ ಹೋಗಿ ಇನ್ನೊಂದು “ಪವರ್‌ ಸೆಂಟರ್‌’ ಮಾಡಬೇಕೆಂಬ ಉದ್ದೇಶ ನಮ್ಮದಲ್ಲ.
– ಸತೀಶ್‌ ಜಾರಕಿಹೊಳಿ, ಲೋಕೋಪಯೋಗಿ ಇಲಾಖೆ ಸಚಿವ

ಅಶೋಕ್‌ ಪಟ್ಟಣ್‌ ಅವರು ಹೇಳಿರುವುದರಲ್ಲಿ ಏನು ತಪ್ಪಿದೆ? ಏನೂ ತಪ್ಪಿಲ್ಲ ಎಂದೆನಿಸುತ್ತದೆ. ಪಕ್ಷದಲ್ಲಿ ಅನೇಕ ಹಿರಿಯರಿದ್ದಾರೆ. 5 ಬಾರಿ ಗೆದ್ದವರಿದ್ದಾರೆ. ಅವರಿಗೆಲ್ಲಾ ಅವಕಾಶ ಕೊಡಬೇಕೆಂದು ಅಶೋಕ್‌ ಪಟ್ಟಣ್‌ ಹೇಳಿರುವುದು ಸರಿಯಿದೆ.
– ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ

ವಿಧಾನಸಭೆಯಲ್ಲಿ 136 ಶಾಸಕರಿದ್ದೇವೆ ಎಂದು ಬೀಗುವ ಸ್ಥಿತಿಯಿಲ್ಲ. ಲೋಕಸಭೆ ಚುನಾವಣೆಗೆ ಉದಾಸೀನ ಬರಬಾರದು. ಹೀಗಾಗಿ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಮಾತನಾಡಿದ್ದೆ. ಸಲಹೆ ಸ್ವೀಕರಿಸುವುದು ಪಕ್ಷಕ್ಕೆ ಬಿಟ್ಟದ್ದು. ಪಕ್ಷದ ಹಿತಕ್ಕೆ ಧಕ್ಕೆಯಾಗುವುದಾದರೆ ರಾಜಕಾರಣವನ್ನೇ ಮಾತನಾಡುವುದಿಲ್ಲ.
ಕೆ.ಎನ್‌. ರಾಜಣ್ಣ, ಸಹಕಾರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next