ರಾಮನಗರ: ಒಂದೆಡೆ ಉಚಿತ ಗಣೇಶ ನೀಡುತ್ತಿಲ್ಲ, ಮತ್ತೂಂದೆಡೆ ದುಬಾರಿ ಬೆಲೆ ನೀಡಿದರೂ ಸರಿಯಾಗಿ ಗಣೇಶ ಮೂರ್ತಿ ಸಿಗುತ್ತಿಲ್ಲ. ಇದು ಜಿಲ್ಲೆಯ ಬಹುತೇಕ ಗಣೇಶೋತ್ಸವ ಸಮಿತಿಗಳ ಸಮಸ್ಯೆಯಾಗಿದೆ.
ಹೌದು.., ಕಳೆದ ಬಾರಿ ಗಣೇಶನ ಹಬ್ಬದಲ್ಲಿ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು, ಜಿದ್ದಿಗೆ ಬಿದ್ದವರಂತೆ ರಾಜಕೀಯ ಮುಖಂಡರು ಗಣೇಶ ಮೂರ್ತಿಗಳನ್ನು ವಿತರಣೆ ಮಾಡಿದ್ದರು. ಆದರೆ, ಈಬಾರಿ ಯಾರೂ ಗಣೇಶನನ್ನು ಕೊಡು ಮುಂದಾಗದ ಪರಿಣಾಮ ಗಣೇಶೋತ್ಸವ ಸಮಿತಿಗಳು ಹಣ ನೀಡಿ ಗಣೇಶ ಮೂರ್ತಿಗಳನ್ನು ತರುವುದು ಅನಿವಾರ್ಯವಾಗಿದೆ.
ಮೌನವಾದ ಮುಖಂಡರು: ಕಳೆದ ಬಾರಿ ಜಿಲ್ಲೆಯಲ್ಲಿ ಉಚಿತ ಗಣೇಶ ಮೂರ್ತಿಗಳ ವಿತರಣೆಗೆ ಮುಖಂಡರು ಪೈಪೋಟಿಗೆ ಬಿದಿದ್ದರು. ರಾಮನಗರದಲ್ಲಿ ಸಮಾಜ ಸೇವಕ ಹಾಗೂ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಮುಖಂಡ ಗೋವಿಂದರಾಜು, ಮಾಗಡಿಯಲ್ಲಿ ಬಿಜೆಪಿ ಮುಖಂಡ ಪ್ರಸಾದ್‌ಗೌಡ, ಚನ್ನಪಟ್ಟಣದಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಜೆಡಿಎಸ್ ಅಧ್ಯಕ್ಷ ಜಯಮುತ್ತು, ಅಂದಿನ ಕಾಂಗ್ರೆಸ್ ಅಭ್ಯರ್ಥಿ ಎಂದು ಬಿಂಬಿತವಾಗಿದ್ದ ಉದ್ಯಮಿ ಪ್ರಸನ್ನ ಪಿ.ಗೌಡ ಹೀಗೆ ಸಾಲು ಸಾಲು ಮುಖಂಡರು ಜಿಲ್ಲೆಯಲ್ಲಿ ಉಚಿತ ಗಣೇಶ ಮೂರ್ತಿಗಳನ್ನು ವಿತರಣೆ ಮಾಡಿದ್ದರು. ತಮಿಳುನಾಡು ಸೇರಿದಂತೆ ಹೊರರಾಜ್ಯದಿಂದ ಗಣೇಶ ಮೂರ್ತಿಗಳನ್ನು ತರಿಸಿ ಸಾವಿರಾರು ಸಂಖ್ಯೆಯಲ್ಲಿ ವಿತರಣೆ ಮಾಡಿದ್ದರು.
ಇವರು ಗಣೇಶ ಮೂರ್ತಿ ವಿತರಣೆ ಮಾಡಿದ ಪರಿಣಾಮ ಪ್ರತಿ ಗ್ರಾಮದಲ್ಲಿ ಮೂರು ನಾಲ್ಕು ಗಣೇಶೋತ್ಸವ ಸಮಿತಿಗಳು ಉತ್ಸಾಹದಿಂದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದವು. ಕೆಲ ಗ್ರಾಮಗಳಲ್ಲಿ ಗಣೇಶೋತ್ಸವಕ್ಕೆ ಸಂಬಂಧಿಸಿದಂತೆ ರಾಜಕೀಯ ಜಿದ್ದಾಜಿದ್ದಿಯೂ ಏರ್ಪಟ್ಟಿತ್ತು. ಆದರೆ, ಈ ಬಾರಿ ಯಾವ ಮುಖಂಡರು ಗಣೇಶ ಮೂರ್ತಿ ವಿತರಣೆಗೆ ಮುಂದಾಗಿಲ್ಲ. ಚುನಾವಣೆಗೆ ಮಾತ್ರವಲ್ಲದೆ ಕಳೆದ 6 ವರ್ಷಗಳಿಂದ ನಿರಂತರವಾಗಿ ಗಣೇಶ ಮೂರ್ತಿಗಳನ್ನು ವಿತರಣೆ ಮಾಡಿಕೊಂಡು ಬರುತ್ತಿದ್ದ ಚನ್ನಪಟ್ಟಣ ತಾಲೂಕು ಜೆಡಿಎಸ್ ಅಧ್ಯಕ್ಷ ಹಾಗೂ ಬಮೂಲ್ ನಿರ್ದೇಶಕ ಎಚ್.ಸಿ.ಜಯಮುತ್ತು ಸಹ ಈ ಬಾರಿ ಗಣೇಶ ಮೂರ್ತಿಗಳ ವಿತರಣೆಯಿಂದ ದೂರು ಉಳಿದಿದ್ದಾರೆ.
ದುಬಾರಿ ಬೆಲೆ ನೀಡಿದರೂ ಸಿಗುತ್ತಿಲ್ಲ ಗಣೇಶ: ಗಣೇಶ ಮೂರ್ತಿಗಳನ್ನು ಕಳೆದ ವರ್ಷ ರಾಜಕೀಯ ಪಕ್ಷದ ಮುಖಂಡರು ಉಚಿತವಾಗಿ ವಿತರಣೆ ಮಾಡಿದ ಪರಿಣಾಮ ಗಣೇಶ ಮೂರ್ತಿಗಳನ್ನು ಹಲವು ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದ ಮಾರಾಟಗಾರರು ಸಂಕಷ್ಟಕ್ಕೆ ಸಿಲುಕಿದ್ದರು. ಅವರು ತಂದ ಗಣೇಶ ಮೂರ್ತಿಗಳು ವ್ಯಾಪಾರವಾಗದೆ ಕೈಸುಟ್ಟುಕೊಂಡಿದ್ದರು. ಈ ಕಾರಣದಿಂದಾಗಿ ಈಬಾರಿ ಹೆಚ್ಚು ಗಣೇಶ ಮೂರ್ತಿಗಳನ್ನ ವ್ಯಾಪಾರಿಗಳು ತಂದಿಲ್ಲ. ಈಬಾರಿ ಉಚಿತ ಗಣೇಶ ಮೂರ್ತಿ ವಿತರಣೆ ನಿಂತು ಹೋಗಿರುವ ಪರಿಣಾಮ ಗಣೇಶೋತ್ಸವ ಸಮಿತಿಗಳು ಗಣಪತಿ ಮೂರ್ತಿಗಳ ಖರೀದಿಗೆ ಮುಂದಾಗಿವೆ.
ಇದರಿಂದಾಗಿ ಮಾರುಕಟ್ಟೆಯಲ್ಲಿ ಗಣೇಶ ಮೂರ್ತಿಗಳ ಬೆಲೆ ದುಪ್ಪಟ್ಟಾಗಿದ್ದು, ಹೆಚ್ಚು ಬೆಲೆ ನೀಡಿದರೂ ಬೇಕಾದ ಗಣೇಶ ಮೂರ್ತಿ ಸಿಗುತ್ತಿಲ್ಲ ಎಂಬ ಕೊರಗು ಸಾರ್ವಜನಿಕರದ್ದು. ಒಟ್ಟಾರೆ ಕಳೆದ ವರ್ಷ ವ್ಯಾಪಕವಾಗಿದ್ದ ಉಚಿತ ಗಣಪತಿ ವಿತರಣೆ ಕಾರ್ಯಕ್ರಮ ಈಬಾರಿ ಸಮಸ್ಯೆಯಾಗಿ ಪರಿಣಮಿಸಿದೆ. ರಾಜಕೀಯ ಲಾಭಕ್ಕಾಗಿ ಗಣೇಶ ಮೂರ್ತಿಗಳನ್ನು ವಿತರಿಸಿದ ಮುಖಂಡರು ಇದೀಗ ತಣ್ಣಗಾಗಿದ್ದು, ಕಳೆದ ಬಾರಿ ಉಚಿತ ಗಣೇಶ ಮೂರ್ತಿ ಸಿಗುತ್ತದೆ ಎಂಬಕಾರಣಕ್ಕೆ ಗಣೇಶೋತ್ಸವ ನಡೆಸಿದವರು ಈಬಾರಿ ಏನು ಮಾಡುವುದು ಎಂದು ಕೈಕೈ ಹಿಸುಕಿಕೊಳ್ಳುವಂತಾಗಿದೆ.
ಕಳೆದ ಬಾರಿ ಉಚಿತವಾಗಿ ಗಣೇಶನನ್ನು ಕೊಟ್ಟವರು ಇದೀಗ ಸುಮ್ಮನಾಗಿದ್ದಾರೆ. ಗಣೇಶ ಮೂರ್ತಿಯನ್ನು ಖರೀದಿ ಮಾಡಲು ಹೋದರೆ ದುಪ್ಪಟ್ಟು ಬೆಲೆ ಹೇಳುತ್ತಿದ್ದಾರೆ. ಅಷ್ಟು ಹಣ ನೀಡಿದರೂ ಒಳ್ಳೆಯ ಗಣೇಶ ಸಿಗುತ್ತಿಲ್ಲ. ಕಳೆದ ಬಾರಿ ಎರಡರಿಂದ ಮೂರು ಸಾವಿರಕ್ಕೆ ಸಿಗುತ್ತಿದ್ದ ಗಣೇಶ ಮೂರ್ತಿಗಳು ಈ ಬಾರಿ 5 ರಿಂದ 6 ಸಾವಿರ ರೂ. ಆಗಿದೆ. ಒಂದು ಅಡಿ ಗಣೇಶ ಮೂತಿಗೂ 800 ರೂ. ಹೇಳುತ್ತಿದ್ದಾರೆ.
– ವಸಂತ್‌ಕುಮಾರ್, ಕೋದಂಡರಾಮ ಬಡಾವಣೆ ಗಣೇಶೋತ್ಸವ ಸಮಿತಿ ಸದಸ್ಯ
– ಸು.ನಾ.ನಂದಕುಮಾರ್