Advertisement

ಸ್ಟ್ರೀಟ್‌ ಪಬ್ಲಿಸಿಟಿಗೆ ಬ್ರೇಕ್‌ ಹಿನ್ನೆಲೆ: ಡಿಜಿಟಲ್‌ ಪ್ರಮೋಶನ್‌

06:00 AM Dec 21, 2018 | Team Udayavani |

ಅದೊಂದು ಕಾಲವಿತ್ತು. ಹಳ್ಳಿಯ ಟೆಂಟ್‌ನಲ್ಲಿ ಈಸ್ಟ್‌ಮನ್‌ ಕಲರ್‌ನ ಒಂದು ಸಿನಿಮಾ ಬಿಡುಗಡೆಯಾಗುತ್ತಿದೆ ಅಂದರೆ, ಹಳ್ಳಿ ಜನರಿಗೆ ಹಬ್ಬ. ಅಷ್ಟೇ ಅಲ್ಲ, ಬಿಡುಗಡೆಯಾಗುವ ಚಿತ್ರದ ಪೋಸ್ಟರ್‌ ಅನ್ನು ದಪ್ಪನೆ ಹಲಗೆಯೊಂದಕ್ಕೆ ಅಂಟಿಸಿಕೊಂಡು, ತಮಟೆ ಸದ್ದಿನೊಂದಿಗೆ ಊರ ತುಂಬ ಎತ್ತಿನ ಬಂಡಿಯಲ್ಲಿ ಪ್ರಚಾರ ಮಾಡಲಾಗುತ್ತಿತ್ತು. ಜನರು ಹೊಸ ಸಿನಿಮಾ ಬಂದಿದೆ ಅಂತ ಟೆಂಟ್‌ ಕಡೆ ಮುಖ ಮಾಡುತ್ತಿದ್ದರು. ಅದೆಲ್ಲಾ ಹಳೆಯ ನೆನಪು. ಈಗ ಕಾಲ ಬದಲಾಗಿದೆ. ಫೇಸ್‌ಬುಕ್‌, ವಾಟ್ಸಾಪ್‌ ಮತ್ತು ಟ್ವಿಟ್ಟರ್‌ ಯುಗವಾಗಿದೆ. ಜಗತ್ತಿನ ಎಲ್ಲಾ ಚಿತ್ರಗಳ ಮಾಹಿತಿಗಳೂ ಕ್ಷಣಾರ್ಧದಲ್ಲೇ ಅಂಗೈಯಲ್ಲಿರುವ ಮೊಬೈಲ್‌ನಲ್ಲೇ ಲಭ್ಯವಾಗುತ್ತಿರುವಾಗ, ಚಿತ್ರದ ಪೋಸ್ಟರ್‌, ಬ್ಯಾನರ್‌ಗಳಿಗೆ ಈಗೆಲ್ಲುಂಟು ಬೆಲೆ?

Advertisement

ಹೌದು, ಇದು ಕಣ್ಮುಂದೆ ಕಾಣುವ ಸತ್ಯ. ಬೆಂಗಳೂರಲ್ಲಿ ಈಗ ಎಲ್ಲೂ ಪೋಸ್ಟರ್‌ ಆಗಲಿ, ಬ್ಯಾನರ್‌ ಆಗಲಿ ಕಾಣಿಸುತ್ತಿಲ್ಲ. ಹಾಗೇನಾದರೂ ರಸ್ತೆ ಬದಿಯ ಅಂಗಡಿ, ಗೋಡೆ, ಕಾಂಪೌಂಡ್‌ ಮೇಲೆ ಚಿತ್ರಗಳ ಪೋಸ್ಟರ್‌ ಅಂಟಿಸಿದರೆ ದಂಡ ಕಟ್ಟಬೇಕು. ಇದು ಕಾನೂನು. ಬಿಬಿಎಂಪಿ ಕಟ್ಟುನಿಟ್ಟಿನ ನಿರ್ಧಾರವನ್ನು ಗಂಭೀರವಾಗಿ ತೆಗೆದುಕೊಂಡ ಹಿನ್ನೆಲೆಯಲ್ಲಿ, ಎಲ್ಲೆಂದರಲ್ಲಿ ಪೋಸ್ಟರ್‌, ಬ್ಯಾನರ್‌ಗಳೇ ಕಾಣುತ್ತಿದ್ದ ನಗರದಲ್ಲೀಗ ಎಲ್ಲೂ ಸಹ ಚಿತ್ರದ ಪೋಸ್ಟರ್‌, ಬ್ಯಾನರ್‌ ಕಾಣುತ್ತಿಲ್ಲ. ಇದು ಚಿತ್ರರಂಗಕ್ಕೆ ಬಿದ್ದ ದೊಡ್ಡ ಪೆಟ್ಟು ಎಂಬುದನ್ನು ಪ್ರತ್ಯೇಕವಾಗಿ ಹೇಳುವಂತಿಲ್ಲ.

ಅಂಗಡಿ, ಹೋಟೆಲ್‌ ಗೋಡೆಗಳ ಹಿಂದೆ, ಮುಂದೆ ಕಾಂಪೌಂಡ್‌ ಮೇಲೆ, ಮೆಟ್ರೋ ಕಂಬಗಳ ಮೇಲೆ ಹೀಗೆ ಇನ್ನುಳಿದ ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿತ್ರಗಳ ಪೋಸ್ಟರ್‌ ಈಗ ಕಾಣೆಯಾಗಿವೆ. ಅದಕ್ಕೆ ಕಾರಣ, ಬಿಬಿಎಂಪಿ ಆದೇಶ. ಇದರಿಂದ ನಿರ್ಮಾಪಕರಿಗಷ್ಟೇ ಅಲ್ಲ, ಚಿತ್ರಮಂದಿರ ಮಾಲೀಕರಿಗೂ ದೊಡ್ಡ ನಷ್ಟ ಎಂಬುದು ಸುಳ್ಳಲ್ಲ. ಈ ಆದೇಶದಿಂದಾಗಿ, ಚಿತ್ರಮಂದಿರಗಳು ಬರುವ ಆದಾಯದಲ್ಲಿ ಶೇ.60 ರಷ್ಟು ಪೆಟ್ಟು ತಿಂದಿವೆ. ನಿರ್ಮಾಪಕರಂತೂ ಪ್ರಚಾರ ಮೂಲಕ ಚಿತ್ರವನ್ನು ತಲುಪಿಸಲಾಗದೆ ಪರಿತಪಿಸಬೇಕಾದಂತಹ ಸ್ಥಿತಿ ಬಂದೊದಗಿದೆ. ನಿಜಕ್ಕೂ ಇದು ಚಿತ್ರರಂಗದ ಪಾಲಿಗೆ ಮಾರಕವೇ ಸರಿ ಎಂಬ ಮಾತು ಗಾಂಧಿನಗರದೆಲ್ಲೆಡೆ ಜೋರಾಗಿಯೇ ಕೇಳಿಬರುತ್ತಿದೆ.

ಹಿಂದೆಲ್ಲಾ ಒಂದು ಚಿತ್ರ ತೆರೆಗೆ ಬರುತ್ತಿದೆ ಅಂದಾಕ್ಷಣ, ರಾತ್ರೋ ರಾತ್ರಿ, ಬೆಂಗಳೂರಿನಾದ್ಯಂತ ಇರುವ ಕೆಲವು ಸ್ಥಳಗಳಲ್ಲಂತೂ ಚಿತ್ರಗಳ ಪೋಸ್ಟರ್‌, ಬ್ಯಾನರ್‌ಗಳು ರಾರಾಜಿಸುತ್ತಿದ್ದವು. ಯಾವ ಚಿತ್ರ ಬಿಡುಗಡೆಯಾಗುತ್ತಿದೆ, ಯಾವ ಚಿತ್ರಮಂದಿರದಲ್ಲಿ ಯಾವ ಚಿತ್ರವಿದೆ ಎಂಬ ಮಾಹಿತಿ ಸಿನಿ ಪ್ರೇಮಿ ಸೇರಿದಂತೆ ಎಲ್ಲರಿಗೂ ಗೊತ್ತಾಗುತ್ತಿತ್ತು. ಆದರೆ, ಸ್ಟ್ರೀಟ್‌ ಪಬ್ಲಿಸಿಟಿಗೆ ಬ್ರೇಕ್‌ ಬಿದ್ದ ನಂತರ ಚಿತ್ರರಂಗಕ್ಕೆ “ಶಾಕ್‌’ ಆಗಿದಂತೂ ಸತ್ಯ. ಈ ಹಿಂದೆ ಪೋಸ್ಟರ್‌, ಬ್ಯಾನರ್‌, ಫ್ಲೆಕ್ಸ್‌ ಕಾಣಿಸಿಕೊಳ್ಳುವ ಸಂದರ್ಭದಲ್ಲಿ ವಾರಕ್ಕೆ ಏಳೆಂಟು ಚಿತ್ರಗಳು ಬಿಡುಗಡೆಯಾಗುತ್ತಿದ್ದವು. ಆಗ ಯಾವ ಚಿತ್ರ ಬಿಡುಗಡೆಯಾಗುತ್ತಿದೆ, ಯಾವ ಚಿತ್ರಮಂದಿರದಲ್ಲಿ ಯಾವ ಚಿತ್ರವಿದೆ ಎಂಬ ಗೊಂದಲ ಸಹಜವಾಗಿಯೇ ಇರುತ್ತಿತ್ತು. ಈಗ ಪೋಸ್ಟರ್‌ ಅಂಟಿಸುವಂತಿಲ್ಲ. ಇನ್ನು ಸಿನಿಮಾ ಬಿಡುಗಡೆ ಬಗ್ಗೆ ತಿಳಿದುಕೊಳ್ಳುವ ಮಾತೆಲ್ಲಿ? ಈ ಅಳಲು ಬಹುತೇಕ ನಿರ್ಮಾಪಕ, ನಿರ್ದೇಶಕ ಸೇರಿದಂತೆ ಚಿತ್ರಮಂದಿರದ ಮುಖ್ಯಸ್ಥರಲ್ಲೂ ಇದೆ.

ಇಂಥದ್ದೊಂದು ನಿಯಮ ಬಂದಿದ್ದೇ ತಡ, ಚಿತ್ರ ನಿರ್ಮಾಪಕರು ಸಾಮಾಜಿಕ ಜಾಲ ತಾಣಕ್ಕೆ ಮೊರೆ ಹೋಗಿದ್ದು ನಿಜ. ಆದರೆ, ಸೋಶಿಯಲ್‌ ಮೀಡಿಯಾ ಎಷ್ಟರಮಟ್ಟಿಗೆ ಜನರನ್ನು ತಲುಪುತ್ತೆ ಅಂತ ಹೇಳುವುದು ಕಷ್ಟ. ಸೋಶಿಯಲ್‌ ಮೀಡಿಯಾದಲ್ಲಿ ಸದಾ ಚುರುಕಾಗಿರುವ ಸಿನಿಮಾ ಆಸಕ್ತರಿಗೆ ಮಾತ್ರ ಅದು ತಲುಪುತ್ತದೇ ವಿನಃ, ಉಳಿದಂತೆ ಯಾವ ಚಿತ್ರ, ಎಲ್ಲಿ, ಬಿಡುಗಡೆಯಾಗುತ್ತಿದೆ ಎಂಬ ಮಾಹಿತಿ ಅಸ್ಪಷ್ಟ. ಇದರಿಂದ ಎಷ್ಟೋ ಚಿತ್ರಗಳು ಬಂದುಹೋಗಿದ್ದೇ ಗೊತ್ತಾಗಿಲ್ಲ. ಅಷ್ಟೇ ಅಲ್ಲ, ಚಿತ್ರಮಂದಿರಗಳಲ್ಲೂ ನೋಡುಗರ ಸಂಖ್ಯೆ ತೀರಾ ವಿರಳ ಎಂಬುದು ಅಷ್ಟೇ ಸತ್ಯ. ಹೀಗಾಗಿ ಸಿನಿಮಾಗಳ ಗೆಲುವಿಗಿಂತ ಸೋಲಿನ ಪಾಲೇ ಹೆಚ್ಚಾಯ್ತು ಎಂಬುದನ್ನು ನಂಬಲೇಬೇಕು. ಜನರು ಚಿತ್ರಮಂದಿರಕ್ಕೆ ಬರದೇ ಇರದ ಕಾರಣ, ಸ್ಟ್ರೀಟ್‌ ಪಬ್ಲಿಸಿಟಿಗೆ ಬ್ರೇಕ್‌ ಬಿದ್ದದ್ದೂ ದೊಡ್ಡ ಕಾರಣ.

Advertisement

ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಲೇ ಇದ್ದ ಕೆಲವು ಚಿತ್ರಮಂದಿರಗಳ ಮುಖ್ಯಸ್ಥರು, ಜನರನ್ನು ಚಿತ್ರಮಂದಿರಕ್ಕೆ ಸೆಳೆಯುವ ಸಣ್ಣ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಅದು ಎಷ್ಟರಮಟ್ಟಿಗೆ ಸಫ‌ಲವಾಗಿದೆಯೋ ಗೊತ್ತಿಲ್ಲ. ಆದರೂ, ನಿರ್ಮಾಪಕರ ಹಾಗು ಚಿತ್ರರಂಗದ ಹಿತದೃಷ್ಟಿಯಿಂದ ಅಂಥದ್ದೊಂದು ಪ್ರಯತ್ನಕ್ಕೆ ಮುಂದಾಗಿದ್ದಾರೆ. ಕೆಲವರು ತಮ್ಮ ಚಿತ್ರಮಂದಿರಗಳ ಮುಂಭಾಗದಲ್ಲೊಂದು ಬೋರ್ಡ್‌ ಹಾಕಿ, ಅಲ್ಲೊಂದು ವಾಟ್ಸಾಪ್‌ ನಂಬರ್‌ ಕೊಟ್ಟಿದ್ದಾರೆ. ಆ ನಂಬರ್‌ಗೆ ಸಂದೇಶ ಕಳುಹಿಸಿದವರ ವಾಟ್ಸಾಪ್‌ ನಂಬರ್‌ಗೆ ಯಾವ ಚಿತ್ರ ಪ್ರದರ್ಶನವಿದೆ, ಎಷ್ಟು ಸಮಯಕ್ಕೆ ಶುರುವಾಗುತ್ತೆ, ಎಷ್ಟು ಪ್ರದರ್ಶನಗಳಿವೆ ಎಂಬಿತ್ಯಾದಿ ಮಾಹಿತಿಯನ್ನು ವಾಟ್ಸಾಪ್‌ ಮೂಲಕ ಕಳುಹಿಸಿಕೊಡುವ ಜಾಣತನ ಪ್ರದರ್ಶಿಸುತ್ತಿದ್ದಾರೆ. ಅದು ಕೆಲವು ಚಿತ್ರಮಂದಿರಕ್ಕೆ ವಕೌìಟ್‌ ಕೂಡ ಆಗಿದೆ. ರಸ್ತೆ ಬದಿ, ಗೋಡೆ ಮೇಲೆ ಪೋಸ್ಟರ್‌ ಅಂಟಿಸಬಾರದು ಎಂಬ ನಿಯಮದಿಂದ ಪೆಟ್ಟು ತಿಂದ ಪರಿಣಾಮ, ಎಲ್ಲರೂ ಈಗ ಆನ್‌ಲೈನ್‌ ಮೊರೆ ಹೋಗುತ್ತಿರುವುದು ಸ್ಪಷ್ಟವಾಗಿದೆ. ಇದು ಎಷ್ಟರಮಟ್ಟಿಗೆ ಸಕ್ಸಸ್‌ ಆಗುತ್ತೋ ಗೊತ್ತಿಲ್ಲ. ಆದರೆ, ಇಂಥದ್ದೊಂದು ಶುರುವಿಗೆ ಈಗಾಗಲೇ ಕೆಲ ಚಿತ್ರಮಂದಿರಗಳ ಮುಖ್ಯಸ್ಥರು ಮುಂದಾಗಿದ್ದಾರೆ.

ಈ ಕುರಿತು ವಿವರಿಸುವ ಚಿತ್ರಮಂದಿರ ಮಾಲೀಕರಾದ ಕೆ.ವಿ.ಚಂದ್ರಶೇಖರ್‌, “ಈಗ ಸ್ಟ್ರೀಟ್‌ನಲ್ಲಿ ಚಿತ್ರಗಳ ಪೋಸ್ಟರ್‌, ಬ್ಯಾನರ್‌ ಹಾಕುವಂತಿಲ್ಲ ಎಂಬ ನಿಯಮ ಬಂದಿದೆ. ಇದು ಚಿತ್ರಗಳಿಗಷ್ಟೇ ಅಲ್ಲ, ಹುಟ್ಟುಹಬ್ಬಕ್ಕೆ ಶುಭಕೋರುವುದಿರಲಿ, ಅಗಲಿದವರಿಗೆ ಶ್ರದ್ಧಾಂಜಲಿ ಸಲ್ಲಿಸುವುದಿರಲಿ, ಪೋಸ್ಟರ್‌, ಫ್ಲೆಕ್ಸ್‌, ಬ್ಯಾನರ್‌ ಹಾಕುವಂತಿಲ್ಲ. ಇದರಿಂದ ಹೆಚ್ಚು ಪೆಟ್ಟು ಬಿದ್ದಿರೋದು ಚಿತ್ರರಂಗಕ್ಕೆ. ಅದರಲ್ಲೂ ನಿರ್ಮಾಪಕರ ನೋವನ್ನಂತೂ ಹೇಳತೀರದು. ಮೊದಲೇ ಚಿತ್ರಮಂದಿರಗಳಲ್ಲಿ ನೋಡುಗರ ಸಂಖ್ಯೆ ಕಡಿಮೆ. ಅದರಲ್ಲೂ ಪ್ರಚಾರವಿಲ್ಲದಿದ್ದರೆ, ಜನ ಚಿತ್ರಮಂದಿರಕ್ಕೆ ಬರುವುದಾದರೂ ಹೇಗೆ? ಚಿತ್ರೋದ್ಯಮಕ್ಕೆ ವ್ಯವಹಾರ ವಹಿವಾಟು ಆಗಬೇಕಾದರೆ, ಮೊದಲು ಪ್ರಚಾರ ಅಗತ್ಯ. ಅದಕ್ಕೇ ಇಲ್ಲಿ ಬ್ರೇಕ್‌ ಬಿದ್ದರೆ, ನಿರ್ಮಾಪಕರ ಗತಿ ಏನು? ಇಲ್ಲಿ ನಿರ್ಮಾಪಕರು, ವಿತರಕರು, ಪ್ರದರ್ಶಕರಿಗಷ್ಟೇ ಅಲ್ಲ, ಪೋಸ್ಟರ್‌ ಅಂಟಿಸುತ್ತಿದ್ದ ಕಾರ್ಮಿಕರು ಕೂಡ ಕೆಲಸವಿಲ್ಲದೆ ಪರಿತಪಿಸುವಂತಹ ಸ್ಥಿತಿ ಬಂದೊದಗಿದೆ. ಇನ್ನು, ಹಿಂದೆಲ್ಲಾ ಚಿತ್ರಮಂದಿರದಲ್ಲಿ ಹಳೆಯ ಚಿತ್ರಗಳ ಬ್ಯಾನರ್‌, ಫ್ಲೆಕ್ಸ್‌ಗಳನ್ನು ಕೇಳಿ ಪಡೆದು, ಗೂಡಂಗಡಿಗಳ ಮೇಲೆ ಬಿಸಿಲು, ಮಳೆ ತಡೆಯಲು ಬಳಸುತ್ತಿದ್ದ ಅದೆಷ್ಟೋ ಮಂದಿಗೂ ಈಗ ಬ್ಯಾನರ್‌, ಫ್ಲೆಕ್ಸ್‌ ಸಿಗುತ್ತಿಲ್ಲ. ಈ ಕುರಿತು ವಾಣಿಜ್ಯ ಮಂಡಳಿ ಸರ್ಕಾರದ ಗಮನ ಸೆಳೆದಿದೆ. ಕಳೆದ 6 ತಿಂಗಳಿನಿಂದಲೂ ಮನವಿ ನೀಡಿದೆ. ಸರ್ಕಾರ ಗಮನಹರಿಸಿದರೆ, ಇದಕ್ಕೊಂದು ಪರಿಹಾರ ಸಿಗುವುದು ಕಷ್ಟವೇನಲ್ಲ. ಒಂದು ಸಿನಿಮಾಗೆ ಬೇಸಿಕ್‌ ಪ್ರಚಾರವೂ ಇಲ್ಲವೆಂದ ಮೇಲೆ, ಸಿನಿಮಾ ನೋಡುಗರಿಗೆ ಗೊತ್ತಾಗುವುದಾದರೂ ಹೇಗೆ? ಸರ್ಕಾರಕ್ಕೆ ಚಿತ್ರರಂಗದಿಂದ ತೆರಿಗೆ ಹೋಗುತ್ತದೆ. ಚಿತ್ರರಂಗದವರ ಕಷ್ಟ ಆಲಿಸಬೇಕಾದ್ದು ಸರ್ಕಾರದ ಕೆಲಸ’ ಎನ್ನುತ್ತಾರೆ ಕೆ.ವಿ.ಚಂದ್ರಶೇಖರ್‌.

 - ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next