ಮುಂಬೈ: ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಬ್ರಾಡ್‌ಕಾಸ್ಟರ್ ಸ್ಟಾರ್ ಸ್ಪೋರ್ಟ್ಸ್ ತಮ್ಮ ಖಾಸಗಿತನವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ್ದಾರೆ.
ತನ್ನ ವಿನಂತಿಯ ಹೊರತಾಗಿಯೂ, ಸ್ಟಾರ್ ಸ್ಪೋರ್ಟ್ಸ್ ತನ್ನ ತಂಡದ ಸಹ ಆಟಗಾರರು ಮತ್ತು ಸಹೋದ್ಯೋಗಿಗಳೊಂದಿಗೆ ಆಡಿದ ವೈಯಕ್ತಿಕ ಮಾತುಕತೆಗಳ ಆಡಿಯೊ ಮತ್ತು ತುಣುಕನ್ನು ಹಂಚಿಕೊಳ್ಳುವುದನ್ನು ಮುಂದುವರೆಸಿದೆ ಎಂದು ರೋಹಿತ್ ಹೇಳಿದ್ದಾರೆ.
ಕೆಲವು ಹೆಚ್ಚುವರಿ ಕ್ಲಿಕ್‌ಗಳು ಮತ್ತು ಸಾಮಾಜಿಕ ಮಾಧ್ಯಮದ ಎಂಗೇಜ್ ಮೆಂಟ್ ಪಡೆಯಲು ಪ್ರಸಾರಕರು ಕ್ರಿಕೆಟಿಗರ ಗೌಪ್ಯತೆಗೆ ಅಡ್ಡಿಪಡಿಸುವುದನ್ನು ಮುಂದುವರಿಸುತ್ತಿದ್ದಾರೆ; ಸ್ವಲ್ಪವಾದರೂ ಸಾಮಾನ್ಯ ಜ್ಞಾನವು ಇರಬೇಕು ಎಂದು ರೋಹಿತ್ ಒತ್ತಾಯಿಸಿದರು.
ಕ್ರಿಕೆಟಿಗರ ಜೀವನವು ಎಷ್ಟು ಗೊಂದಲವಾಗಿದೆ ಎಂದರೆ, ಈಗ ನಾವು ನಮ್ಮ ಸ್ನೇಹಿತರು ಮತ್ತು ಸಹೋದ್ಯೋಗಿಗಳೊಂದಿಗೆ, ತರಬೇತಿ ಅಥವಾ ಪಂದ್ಯದ ದಿನಗಳಲ್ಲಿ ಗೌಪ್ಯವಾಗಿ ನಡೆಸುವ ಪ್ರತಿಯೊಂದು ಹೆಜ್ಜೆ ಮತ್ತು ಸಂಭಾಷಣೆಯನ್ನು ಕ್ಯಾಮೆರಾಗಳು ರೆಕಾರ್ಡ್ ಮಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿರುವ ರೋಹಿತ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಕೆಲ ದಿನಗಳ ಹಿಂದೆ ಕೆಕೆಆರ್ ಸಹಾಯಕ ಕೋಚ್ ಅಭಿಷೇಕ್ ನಾಯರ್ ಜತೆ ಮಾತನಾಡುತ್ತಿದ್ದಾಗ ಅದನ್ನು ರೆಕಾರ್ಡ್ ಮಾಡಿ ಪ್ರಸಾರ ಮಾಡಲಾಗಿತ್ತು. ಇದಾದ ಬಳಿಕ ಧವಳ್ ಕುಲಕರ್ಣಿ ಅವರೊಂದಿಗೆ ಮಾತಾಡುತ್ತಿದ್ದಾಗ ಪ್ರಸಾರಕರು ರೆಕಾರ್ಡ್ ಮಾಡುತ್ತಿದ್ದಾಗ, ರೋಹಿತ್ ಅವರು ‘ದಯವಿಟ್ಟು ಆಡಿಯೋ ಪ್ರಸಾರ ಮಾಡಬೇಡಿ’ ಎಂದಿದ್ದರು. ಆದರೆ ಪ್ರಸಾರಕರು ಅದನ್ನೂ ಪ್ರಸಾರ ಮಾಡಿದ್ದರು.