Advertisement

ಕಿಕ್‌ಗೆ ನಲುಗಿದ ಬ್ರೆಜಿಲ್‌

03:17 AM May 25, 2020 | Sriram |

ಬ್ರೆಜಿಲಿಯಾ: ಕಿಕ್ಕಿರಿದು ತುಂಬಿದ ಆಸ್ಪತ್ರೆಗಳು, ರುದ್ರಭೂಮಿಯಲ್ಲಿ ತೆಗೆದು ಬಿಟ್ಟಿರುವ ಸಾಲು ಸಾಲು, ನೂರಾರು ಸಮಾಧಿ ಗುಂಡಿಗಳು,ಒಂದರ ಹಿಂದೆ ಒಂದರಂತೆ ಆಸ್ಪತ್ರೆಯಿಂದ ಹೊರಬಂದು, ರುದ್ರ ಭೂಮಿಯಲ್ಲಿ ಸಮಾಧಿ ಸೇರುತ್ತಿರುವ ಶವಗಳು, ಎಲ್ಲರ ಮುಖದಲ್ಲೂ ಆತಂಕ, ಆತ್ಮೀಯರ ಅಗಲಿಕೆ ತಂದ ಅಳು, ಬೇಸರ, ಆಕ್ರಂದನ…

Advertisement

ಇದು ಬ್ರೆಜಿಲ್‌ ದೇಶದ ಸದ್ಯದ ಪರಿಸ್ಥಿತಿ. ಈಗ್ಗೆ ತಿಂಗಳ ಹಿಂದೆ ಬ್ರೆಜಿಲ್‌ನಲ್ಲಿ ಕೋವಿಡ್ 19 ಸೋಂಕು ನಿಯಂತ್ರಣದಲ್ಲೇ ಇತ್ತು. ಕೇವಲ 15 ದಿನಗಳ ಹಿಂದೆ ಕೂಡ ಅಷ್ಟೇನೂ ಆತಂಕದ ವಾತಾವರಣ ಇರಲಿಲ್ಲ. ಆದರೆ ಈ ಹಿಂದಿನ ಎರಡು ವಾರಗಳಲ್ಲಿ ಲ್ಯಾಟಿನ್‌ ಅಮೆರಿಕದ ಈ ಸುಂದರ ರಾಷ್ಟ್ರದಲ್ಲಿ ಕಾಣುತ್ತಿರುವುದೆಲ್ಲವೂ ಕೋವಿಡ್ 19 ವೈರಾಣುವಿನ ರುದ್ರತಾಂಡವ. ಕಳೆದ 24 ಗಂಟೆಗಳಲ್ಲಿ 16,608 ಹೊಸ ಕೋವಿಡ್ 19 ಕೇಸುಗಳು ಪತ್ತೆಯಾಗಿದ್ದು, ಅದರ ಹಿಂದಿನ ದಿನ (ಮೇ 22) ಬರೋಬ್ಬರಿ 22,803 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಮತ್ತೂಂದು ಆತಂಕಕಾರಿ ಬೆಳವಣಿಗೆ ಏನೆಂದರೆ ಕಳೆದ ನಾಲ್ಕು ದಿನಗಳ ಪೈಕಿ ಮೂರು ದಿನ 1000ಕ್ಕೂ ಅಧಿಕ ಜೀವಗಳು ಈ ಮಾರಕ ಸೋಂಕಿಗೆ ಬಲಿಯಾಗಿವೆ. ಆದರೆ ಸರಕಾರ ನೀಡುತ್ತಿರುವ ಅಂಕಿ ಸಂಖ್ಯೆಗೂ ನೈಜ ಸೋಂಕಿ ತರು ಮತ್ತು ಮೃತರ ಸಂಖ್ಯೆಗೂ ಸಾಕಷ್ಟು ವ್ಯತ್ಯಾಸವಿದೆ ಎಂದು ಹೇಳಲಾಗುತ್ತಿದೆ.

ಸಾವಿನ ಮನೆ ಸಾವೋ ಪೌಲೊ: ಸಾವೋ ಪೌಲೊ, ಬ್ರೆಜಿಲ್‌ನಲ್ಲಿ ಅತಿ ಹೆಚ್ಚು ಸೋಂಕುಗಳು ಕಾಣಿಸಿಕೊಂಡಿ ರುವ ಮತ್ತು ಸೋಂಕಿನಿಂದ ಅತಿ ಹೆಚ್ಚು ಸಾವುಗಳು ಸಂಭವಿಸಿರುವ ರಾಜ್ಯ. ಇಲ್ಲಿ ಕೋವಿಡ್ 19 ಸೋಂಕು ಅಕ್ಷರಶಃ ಸೂತಕದ ಛಾಯೆ ಮೂಡಿಸಿದೆ. ರಾಜ್ಯದಲ್ಲಿ ಈವ ರೆಗೆ 80,558 ಕೋವಿಡ್ 19 ಪ್ರಕರಣಗಳು ಪತ್ತೆಯಾಗಿದ್ದು, 6,045 ಮಂದಿ ಸಾವಿಗೀಡಾಗಿದ್ದಾರೆ. ಸಾವೋ ಪೌಲೋದಲ್ಲಿ ಈಗಾಗಲೇ ಎಲ್ಲ ಆಸ್ಪತ್ರೆಗಳು ಭರ್ತಿಯಾಗಿವೆ. ರಾಜ್ಯದ ಜನಸಂಖ್ಯೆಯ ಶೇ.55 ಜನ ರನ್ನು ಈಗಾಗಲೇ ಐಸೋಲೇಟ್‌ ಮಾಡಿದ್ದು, ಸೋಂಕನ್ನು ನಿಯಂತ್ರಿಸಬೇಕೆಂದರೆ ಶೇ.70 ಜನರನ್ನು ಐಸೋಲೇಟ್‌ ಮಾಡಬೇಕು ಎಂದು ಅಲ್ಲಿನ ಮೇಯರ್‌ ಅಭಿ ಪ್ರಾಯ ಪಟ್ಟಿದ್ದಾರೆ.

ಚೀನದಿಂದಲೇ ಬಂದಿತ್ತು ವೈರಸ್‌!: ಜಗತ್ತಿನ ಹಲವು ರಾಷ್ಟ್ರಗಳಿಗೆ ಕೋವಿಡ್ 19 ಎಂಬ ಮಾರಣಾಂತಿಕ ವೈರಾಣು ವಲಸೆ ಹೋಗಿರುವುದು ಚೀನದಿಂದಲೇ. ಹಾಗೇ ಬ್ರೆಜಿಲ್‌ನ ಮೊದಲ ಪ್ರಕರಣ ಕಾಣಿಸಿಕೊಂಡಿದ್ದು ಕೂಡ ವೈರಸ್‌ನ ಜನ್ಮಸ್ಥಾನ ಎಂದು ನಂಬಲಾಗಿರುವ ಚೀನದ ವುಹಾನ್‌ ನಗರದಿಂದ ಬಂದ ವಿದ್ಯಾರ್ಥಿಯಲ್ಲಿ. ವುಹಾನ್‌ನಿಂದ ಬ್ರೆಜಿಲ್‌ನ ಆರನೇ ಅತಿದೊಡ್ಡ ನಗರ ಬೆಲೊ ಹಾರಿಜಾಂಟ್‌ಗೆ ಬಂದಿಳಿದ ಆ ವಿದ್ಯಾರ್ಥಿಗೆ ಜ.27ರಂದು ಸೋಂಕು ಇರುವ ಶಂಕೆ ವ್ಯಕ್ತವಾಗಿತ್ತು. ಜ.28ರಂದು ಸೋಂಕು ದೃಢಪಟ್ಟಿತ್ತು.

ವಿಡಿಯೋ ಸೃಷ್ಟಿಸಿದ ವಿವಾದ: ಮಾರಕ ಕೋವಿಡ್‌-19 ಸೋಂಕು ಇಡೀ ದೇಶವನ್ನೇ ಸಂಕಷ್ಟಕ್ಕೆ ನೂಕಿದ್ದರೂ ಇತ್ತೀಚೆಗೆ ನಡೆದ ಕ್ಯಾಬಿನೆಟ್‌ ಸಭೆಯಲ್ಲಿ ಅಧ್ಯಕ್ಷ ಜೈರ್‌ ಬೋಲ್ಸೊ ನಾರೊ ಮತ್ತು ಅವರ ಸಂಪುಟದ ಸಚಿವರು ಎಲ್ಲೋ ಒಂದೆರಡು ಬಾರಿ ಸೋಂಕಿನ ವಿಷಯ ಪ್ರಸ್ತಾಪಿಸಿರುವುದು ಮತ್ತು ಆ ಬಗ್ಗೆ ಚರ್ಚಿಸದೇ ಇರು ವುದು ಅಲ್ಲಿನ ಜನರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಫೆಡರಲ್‌ ಪೊಲೀಸ್‌ ಮುಖಸ್ಥರನ್ನು ವಜಾ ಮಾಡುವ ಮೂಲಕ ಬಲಪಂಥೀಯ ಅಧ್ಯಕ್ಷರು ಅನ್ಯಾಯ ಮಾಡಿ ದ್ದಾರೆ ಎಂಬುದಕ್ಕೆ ಸಂಬಂಧಿ ಸಿದ ತನಿಖೆಯ ಭಾಗವಾಗಿ ಈ ವಿಡಿಯೋ ಬಿಡುಗಡೆ ಮಾಡಲಾಗಿದೆ ಎನ್ನಲಾಗಿದೆ. ಇದೀಗ ಈ ವೀಡಿಯೋ ಕುರಿತಂತೆಯೂ ತನಿಖೆ ನಡೆಸಬೇಕೆಂಬ ಒತ್ತಾಯ ಕೇಳಿಬಂದಿದೆ.

Advertisement

ಎರಡನೇ ಸ್ಥಾನಕ್ಕೆ ಏರಿಕೆ
ವಾರದ ಹಿಂದೆ ಕೋವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚಿರುವ ಅಗ್ರ ಹತ್ತು ರಾಷ್ಟ್ರಗಳ ಯಾದಿಯಲ್ಲಿ ಬ್ರೆಜಿಲ್‌ ಹೆಸರಿರಲಿಲ್ಲ. ಆದರೆ ಶುಕ್ರವಾರ ಯುನೈಟೆಡ್‌ ಕಿಂಗ್ಡಮ್‌ ಅನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದ್ದ ಬ್ರೆಜಿಲ್‌, ಶನಿವಾರ ರಷ್ಯಾವನ್ನು ಓವರ್‌ಟೇಕ್‌ ಮಾಡಿ ಎರಡನೇ ಸ್ಥಾನಕ್ಕೇರಿದೆ. ಮೇ 13ರಿಂದ ಈಚೆಗೆ ಬ್ರೆಜಿಲ್‌ನಲ್ಲಿ ಪ್ರತಿದಿನ 10 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿರುವುದು ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಫುಟ್ಬಾಲ್‌ ರಾಜಕೀಯ
ಒಂದೆಡೆ ಕೋವಿಡ್ 19 ಸೋಂಕಿತರ ಸಂಖ್ಯೆ ಕ್ಷಣಕ್ಷಣಕ್ಕೂ ಹೆಚ್ಚುತ್ತಾ ಸಾಗಿದ್ದರೆ, ಅತ್ತ ಬ್ರೆಜಿಲ್‌ನ ರಾಷ್ಟ್ರೀಯ ಕ್ರೀಡೆ ಫುಟ್ಬಾಲ್‌ಗೆ ಸಂಬಂಧಿಸಿದ ಟೂರ್ನಿಗಳನ್ನು ಪುನರಾರಂಭಿಸುವ ಕುರಿತು ರಾಜಕೀಯ ವಲಯದಲ್ಲಿ ಚರ್ಚೆ ನಡೆದಿದೆ. ಸ್ವತಃ ಅಧ್ಯಕ್ಷ ಜೈರ್‌ ಬೋಲ್ಸೊನಾರೊ, ನನ್ನ ಒಂದು ಮತದಿಂದ ಫುಟ್ಬಾಲ್‌ ಪುನರಾರಂಭವಾಗುತ್ತದೆ ಎಂದಾದರೆ, ಅದಕ್ಕೆ ನನ್ನ ಸಹಮತವಿದೆ ಎಂದಿದ್ದಾರೆ. ಮಾತ್ರವಲ್ಲದೆ ದೇಶದ ಎರಡು ಪ್ರತಿಷ್ಠಿತ ಫುಟ್ಬಾಲ್‌ ಕ್ಲಬ್‌ಗಳು ತರಬೇತಿ ಪುನರಾರಂಭಿಸುವ ಆಲೋಚನೆಯಲ್ಲಿವೆ. ಈ ನಡುವೆ ಕೆಲ ಕ್ಲಬ್‌ಗಳ ನಿರ್ದೇಶಕರು ಭೋಜನ ಕೂಟದ ನೆಪದಲ್ಲಿ ಅಧ್ಯಕ್ಷರನ್ನು ಭೇಟಿಯಾಗಿ ಫುಟ್ಬಾಲ್‌ ಚಟುವಟಿಕೆಗಳನ್ನು ಆರಂಭಿಸುವ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next