ಲಕ್ನೋ: ಮದುವೆಯ ನಂತರದ ಅದ್ದೂರಿಯ ಆರತಕ್ಷತೆ ಸಮಾರಂಭದ ವೇಳೆ ವಧು ಮತ್ತು ವರನ ಸಂಬಂಧಿಕರ ನಡುವೆ ಮಾರಾಮಾರಿ ನಡೆದಿರುವ ಘಟನೆ ಉತ್ತರಪ್ರದೇಶದ ಲಕ್ನೋದಲ್ಲಿ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:Crime: ಸುಪಾರಿ ಕೊಟ್ಟು ಪತ್ನಿಯ ಕೊಂದು ಶವವನ್ನು ನೇಣುಬಿಗಿದಿದ್ದ ಪತಿ!
ಆರತಕ್ಷತೆಯ ಸಮಾರಂಭದಲ್ಲಿ ವಧು ಮತ್ತು ವರನ ಸಂಬಂಧಿಗಳು ಕುರ್ಚಿಯನ್ನು ಎತ್ತಿ ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಈ ಸಂದರ್ಭದಲ್ಲಿ ಕೆಲವು ಮಹಿಳೆಯರು ಮಧ್ಯಪ್ರವೇಶಿಸಿ ಹೊಡೆದಾಟ ತಪ್ಪಿಸಲು ಯತ್ನಿಸುತ್ತಿರುವುದು ವಿಡಿಯೋದಲ್ಲಿದೆ.
ಬುದ್ಧಲಾಲ್ ಬದ್ಲು ಪ್ರಸಾದ್ ಧರ್ಮಶಾಲಾ ಪ್ರದೇಶದ ಅಮೀನಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಗುಂಬೆ ನವಾಬ್ ಪಾರ್ಕ್ ಸಮೀಪ ಈ ಹೊಡೆದಾಟ ನಡೆದಿರುವುದಾಗಿ ವರದಿ ವಿವರಿಸಿದೆ.
ಶುಕ್ರವಾರ (ಫೆ,09) ರಾತ್ರಿ ಆರತಕ್ಷತೆ ಸಮಾರಂಭದಲ್ಲಿ ಡಿಜೆ ಅಬ್ಬರದ ನಡುವೆ ಉಭಯ ಕುಟುಂಬ ಸದಸ್ಯರ ನಡುವೆ ಮಾರಾಮಾರಿ ನಡೆದಿದ್ದು, ಘಟನೆಯಲ್ಲಿ ಮೂವರು ಗಾಯಗೊಂಡಿರುವುದಾಗಿ ವರದಿ ತಿಳಿಸಿದೆ.
ಘಟನೆ ಬಗ್ಗೆ ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ವಧು ಮತ್ತು ವರನ ಸಂಬಂಧಿಕರನ್ನು ಸಮಾಧಾನಪಡಿಸಿ, ನಂತರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ಆದರೆ ಘಟನೆ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ದೂರು ದಾಖಲಾದ ನಂತರ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.