“ಬ್ರಾಂಡ್ ಹಿಂದೆ ಹೋದವರ ಗತಿ ಏನಾಗುತ್ತದೆಂಬ ಸಂದೇಶ ಕೂಡಾ ಈ ಸಿನಿಮಾದಲ್ಲಿದೆ’
– ಹೀಗೆ ಹೇಳಿಕೊಂಡರು ಪ್ರಶಾಂತ್ ಕೆ ಶೆಟ್ಟಿ. ಯಾರು ಈ ಪ್ರಶಾಂತ್ ಎಂದರೆ “ಬ್ರಾಂಡ್’ ಸಿನಿಮಾವನ್ನು ತೋರಿಸಬೇಕು. ಆ ಸಿನಿಮಾದಲ್ಲಿ ನಾಯಕರಾಗಿ ನಟಿಸುವ ಜೊತೆಗೆ ಸಿನಿಮಾವನ್ನು ನಿರ್ದೇಶಿಸಿದ್ದು ಕೂಡಾ ಪ್ರಶಾಂತ್ ಶೆಟ್ಟಿ. ಇತ್ತೀಚೆಗೆ ಆ ಚಿತ್ರದ ಆಡಿಯೋ ಹಾಗೂ ಟ್ರೇಲರ್ ಬಿಡುಗಡೆಯಾಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ಮಾಜಿ ವಿಧಾನಪರಿಷತ್ ಸದಸ್ಯ ಹಸನಬ್ಬ ಸೇರಿ ಚಿತ್ರದ ಆಡಿಯೋ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭಕೋರಿದರು.
“ಚಿತ್ರರಂಗ ಯುವಕರನ್ನು ಬೇಗನೇ ಆಕರ್ಷಿಸುತ್ತದೆ. ಹಾಗಂತ ತಮಗೆ ಟ್ಯಾಲೆಂಟ್ ಇದೆ ಎಂದು ಹಿಂದೆ ಮುಂದೆ ನೋಡದೇ ಚಿತ್ರರಂಗಕ್ಕೆ ಬರಬಾರದು. ಟ್ಯಾಲೆಂಟ್ ಜೊತೆಗೆ ಸಾಮರ್ಥ್ಯ ಕೂಡ ಮುಖ್ಯವಾಗುತ್ತದೆ. ಆಲೋಚಿಸಿ ಒಳ್ಳೆಯ ಸಿನಿಮಾ ಮಾಡಬೇಕು’ ಎಂದು ಹೊಸಬರ ತಂಡಕ್ಕೆ ಶುಭಕೋರಿದರು.
ಅಷ್ಟಕ್ಕೂ ಈ “ಬ್ರಾಂಡ್’ ಎಂದರೇನು, ಚಿತ್ರಕ್ಕೂ ಟೈಟಲ್‌ಗೂ ಏನಾದರೂ ಸಂಬಂಧವಿದೆಯಾ ಎಂದು ನೀವು ಕೇಳಬಹುದು. ಅದಕ್ಕೆ ಪ್ರಶಾಂತ್ ಶೆಟ್ಟಿ ಉತ್ತರಿಸುತ್ತಾರೆ. “ಇದು ಕಾರ್ ಡೀಲರ್ ಹಾಗೂ ಬಾರ್ ಡ್ಯಾನ್ಸರ್ ನಡುವೆ ನಡೆಯುವ ಕಥೆ. ಜೊತೆಗೆ ಬ್ರಾಂಡ್ ಹಿಂದೆ ಹೋದವರ ಗತಿ ಏನಾಗುತ್ತದೆ ಎಂಬ ಅಂಶವನ್ನು ಕೂಡಾ ಇಲ್ಲಿ ಹೇಳಲು ಹೊರಟಿದ್ದೇನೆ. ಕಾರ್‌ನಿಂದ ಹಿಡಿದು ಹುಡುಗಿ ಕೂಡಾ ಬ್ರಾಂಡೆಡ್ ಆಗಿರಬೇಕೆಂದು ಬಯಸುವ ವ್ಯಕ್ತಿಯೊಬ್ಬನ ಜೀವನದಲ್ಲಿ ಏನೆಲ್ಲಾ ನಡೆಯುತ್ತದೆ ಎಂಬ ಅಂಶವನ್ನು ಹೇಳಲಾಗಿದೆ’ ಎನ್ನುವುದು ಪ್ರಶಾಂತ್ ಮಾತು. ಕೇವಲ ಕಮರ್ಷಿಯಲ್ ಸಿನಿಮಾವನ್ನಷ್ಟೇ ಮಾಡಬಾರದು, ಅದರಲ್ಲೊಂದು ಸಂದೇಶ ಕೂಡಾ ಇರಬೇಕು ಎಂಬುದು ಚಿತ್ರದ ನಿರ್ಮಾಪಕ ಕುಮಾರ್ ಎನ್ ಬಂಗೇರ ಅವರ ಆಸೆಯಾಗಿತ್ತಂತೆ. ಅದರಂತೆ ಚಿತ್ರದ ಕೊನೆಯಲ್ಲೊಂದು ಸಂದೇಶ ಕೂಡಾ ಇದೆ ಎಂಬುದು ಪ್ರಶಾಂತ್ ಮಾತು.
ಚಿತ್ರದಲ್ಲಿ ಸೌಮ್ಯ ಹಾಗೂ ರಚಿತಾ ಎನ್ನುವವರು ಪ್ರಮುಖ ಪಾತ್ರ ಮಾಡಿದ್ದಾರೆ. ಸಂಚಾರಿ ವಿಜಯ್ ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ. ಪ್ರಶಾಂತ್ ಅವರ ಸಿನಿಮಾ ಪ್ರೀತಿಗೆ ಮೆಚ್ಚಿ ತಾನು ಈ ಸಿನಿಮಾದಲ್ಲಿ ನಟಿಸಿದ್ದಾಗಿ ಹೇಳಿಕೊಂಡರು ಸಂಚಾರಿ ವಿಜಯ್. ಚಿತ್ರಕ್ಕೆ ವಿನು ಮನಸು ಸಂಗೀತ ನೀಡಿದ್ದಾರೆ. ಹಾಡುಗಳು ಜನರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸ ಅವರಿಗಿದೆ.