– ಒಂದೆರಡು ವರ್ಷಗಳ ಹಿಂದೆ ನಡೆದ “ರಿಯಲ್ ಪೊಲೀಸ್’ ಪತ್ರಿಕಾಗೋಷ್ಠಿಯಲ್ಲಿ ಸಾಯಿಕುಮಾರ್ ಹೀಗೆ ಹೇಳಿ ನಕ್ಕಿದ್ದರು. ಪೊಲೀಸ್ ಎಂದರೆ ಸಾಯಿಕುಮಾರ್, ಸಾಯಿಕುಮಾರ್ ಎಂದರೆ ಪೊಲೀಸ್ ಎನ್ನುವಷ್ಟರ ಮಟ್ಟಿಗೆ ಅವರು ಆ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಚಿತ್ರರಂಗದ ಮಂದಿ ಕೂಡಾ ಅವರಿಗೆ ಬೇರೆ ಪಾತ್ರಗಳನ್ನು ನೀಡುವ ಬಗ್ಗೆ ಚಿಂತಿಸಲೇ ಇಲ್ಲ. ಸಿನಿಮಾದಲ್ಲೊಂದು ಖಡಕ್ ಪೊಲೀಸ್ ಪಾತ್ರವಿದೆ ಎಂದರೆ ಅದಕ್ಕೆ ಸಾಯಿಕುಮಾರ್ ಇದ್ದಾರೆ ಬಿಡಿ ಎನ್ನುವ ಮಟ್ಟಕ್ಕೆ ಅವರನ್ನು ಪೊಲೀಸ್ ಪಾತ್ರಕ್ಕೆ ಬ್ರಾಂಡ್ ಮಾಡಿಬಿಟ್ಟಿದ್ದರು. ಅದು ಸಾಯಿಕುಮಾರ್‌ಗೂ ಗೊತ್ತಾಗಿತ್ತು. ತಾನು ಪೊಲೀಸ್ ಪಾತ್ರಕ್ಕೆ ಬ್ರಾಂಡ್ ಆಗಿದ್ದೇನೆ ಮತ್ತು ಆ ತರಹದ ಪಾತ್ರಗಳೇ ತನಗೆ ಬರುತ್ತವೆ ಎಂಬುದನ್ನು ಸಾಯಿಕುಮಾರ್ ಕೂಡಾ ಒಪ್ಪಿಕೊಂಡಿದ್ದರು. ಬಂದ ಪಾತ್ರಗಳಲ್ಲೇ ಒಳ್ಳೆಯ ಅಂಶಗಳಿರುವ, ಹೊಸತನದಿಂದ ಕೂಡಿರುವ ಪೊಲೀಸ್ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಸಾಯಿಕುಮಾರ್. ಕಳೆದ ವಾರ ತೆರೆಕಂಡ “ಕಿಚ್ಚು’, ತಿಂಗಳ ಹಿಂದೆ ಬಿಡುಗಡೆಯಾದ “ಹುಚ್ಚ-2′, ಅದಕ್ಕೂ ಮುನ್ನ ಬಂದ “ಪಟಾಕಿ’, “ಮಡಮಕ್ಕಿ’, “ರಿಯಲ್ ಪೊಲೀಸ್’ ಚಿತ್ರಗಳಲ್ಲೂ ಸಾಯಿಕುಮಾರ್ ಪೊಲೀಸ್.
Advertisement
ಚಿತ್ರರಂಗದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದು, ಇವತ್ತಿಗೂ ಮುಂದುವರೆಯುತ್ತಿರುವ ಒಂದು ಅಂಶವೆಂದರೆ ಅದು ಪಾತ್ರವೊಂದಕ್ಕೆ ಬ್ರಾಂಡ್ ಮಾಡಿ ಬಿಡೋದು. ಯಾವುದಾದರೂ ಒಂದು ಸಿನಿಮಾದಲ್ಲಿ ಒಬ್ಬ ನಟನ ಪಾತ್ರ ಕ್ಲಿಕ್ ಆದರೆ, ಸಿನಿಮಾಕ್ಕಿಂತ ಹೆಚ್ಚಾಗಿ ಜನ ಆ ಪಾತ್ರದ ಬಗ್ಗೆ ಮಾತನಾಡಿದರೆ, ಮೆಚ್ಚಿಕೊಂಡರೆ ಮುಂದೆ ಆತನಿಗೆ ಅಂತಹುದೇ ಪಾತ್ರ ಹುಡುಕಿಕೊಂಡು ಬರುತ್ತವೆ. ಅದು ಯಾವ ಮಟ್ಟಿಗೆ ಎಂದರೆ ಆತನಿಗೆ ಬೇರೆ ಪಾತ್ರಗಳ ಆಯ್ಕೆಗೆ ಅವಕಾಶವೇ ಇಲ್ಲದಂತೆ. ಇದೇ ಕಾರಣದಿಂದ ಚಿತ್ರರಂಗದಲ್ಲಿ ಸಾಕಷ್ಟು ಮಂದಿ ಒಂದೊಂದು ಪಾತ್ರಗಳಿಗೆ ಬ್ರಾಂಡ್ ಆಗಿದ್ದಾರೆ ಮತ್ತು ಆಗುತ್ತಿದ್ದಾರೆ. ಕೆಲವರು ಅನಿವಾರ್ಯವಾಗಿ ಬ್ರಾಂಡ್ ಆದರೆ, ಇನ್ನು ಕೆಲವರು ಜನ ಇಷ್ಟಪಟ್ಟ ಪಾತ್ರಗಳಲ್ಲೇ ಕಾಣಿಸಿಕೊಂಡು ಬ್ರಾಂಡ್ ಆಗುತ್ತಿದ್ದಾರೆ. ಇತ್ತೀಚೆಗೆ ಕೆಲವು ಕಲಾವಿದರನ್ನು ನೋಡಿದಾಗ, ಬಹುತೇಕ ಸಿನಿಮಾಗಳಲ್ಲಿ ಅವರು ಒಂದೇ ರೀತಿಯ ಮತ್ತು ಅದೇ ಶೇಡ್‌ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ಮತ್ತದೇ ಕಾರಣ ನೀಡಬೇಕಾಗುತ್ತದೆ. ಪಾತ್ರವನ್ನು ತೂಗಿಸಿಕೊಂಡು ಹೋಗುವ ಅವರ ಸಾಮರ್ಥ್ಯದಿಂದಾಗಿ ಅವರ ಪಾತ್ರಗಳು ರಿಪೀಟ್ ಆಗುತ್ತಿರುತ್ತವೆೆ. ನೀವೇ ಸೂಕ್ಷ್ಮವಾಗಿ ಗಮನಿಸಿದರೆ ಇತ್ತೀಚೆಗೆ ಸುಚೇಂದ್ರ ಪ್ರಸಾದ್, ತಬಲಾ ನಾಣಿ, ಚಿಕ್ಕಣ್ಣ, ಪದ್ಮಜಾ ರಾವ್, ಬ್ಯಾಂಕ್ ಜನಾರ್ದನ್, ಮೂಗು ಸುರೇಶ್, ಮೋಹನ್ ಜುನೇಜಾ ಸೇರಿದಂತೆ ಅನೇಕ ನಟರ ಪಾತ್ರಗಳು ಬಹುತೇಕ ಸಿನಿಮಾಗಳಲ್ಲಿ ರಿಪೀಟ್ ಆಗುತ್ತಿರುತ್ತವೆ. ಅದೇ ಕಾರಣದಿಂದ ಸಿನಿಮಾಗಳಲ್ಲಿ ಅವರ ಪಾತ್ರ ಪರಿಚಯವಾಗುತ್ತಿದ್ದಂತೆ ಈ ಹಿಂದಿನ ಸಿನಿಮಾಗಳಲ್ಲಿ ಅವರು ಮಾಡಿರುವ ಪಾತ್ರಗಳು ಕಣ್ಣ ಮುಂದೆ ಬರುತ್ತವೆ.
Related Articles
Advertisement
ಹಿರಿಯ ನಟ ಬ್ಯಾಂಕ್ ಜನಾರ್ದನ್ ಇಲ್ಲಿವರೆಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಪಾತ್ರಗಳು ಕೂಡಾ ಬಹುತೇಕ ಅಕ್ಕಪಕ್ಕವೇ ಸುತ್ತಿವೆ. ಮಾರ್ವಾಡಿ, ಪೊಲೀಸ್, ಬ್ಯಾಂಕ್ ಮ್ಯಾನೇಜರ್ … ಈ ತರಹದ ಪಾತ್ರಗಳು ಬ್ಯಾಂಕ್ ಜನಾರ್ದನ್ ಅವರಿಗೆ ಹೆಚ್ಚು ಸಿಕ್ಕಿವೆ. ನಟರಾದ ಮೂಗು ಸುರೇಶ್ ಕೂಡಾ ಪೊಲೀಸ್ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡು ಪ್ರೇಕ್ಷಕರನ್ನು ನಗಿಸಿದ್ದಾರೆ. ಉಳಿದಂತೆ ಭಿಕ್ಷುಕನ ಪಾತ್ರವೆಂದರೆ ಬಿರಾದಾರ್, ಕುಡುಕ ತಂದೆಯ ಪಾತ್ರವಾದರೆ ಮೋಹನ್ ಜುನೇಜಾ, ಸೆಂಟಿಮೆಂಟ್ ತಾಯಿಯಾದರೆ ಪದ್ಮಜಾ ರಾವ್, ಸಂಗೀತಾ, ಚಿತ್ರಾ ಶೆಣೈ, ರೌಡಿ ಪಾತ್ರಗಳಾದರೆ ಹರೀಶ್ ರೈ, ಕೋಟೆ ಪ್ರಭಾಕರ್, ತುಮಕೂರು ಮೋಹನ್, ಊರಗೌಡನಾಗಿ ಅಂಜನಪ್ಪ, ಹಳ್ಳಿ ಮಂದಿಯಾದರೆ ಹೊನ್ನವಳ್ಳಿ ಕೃಷ್ಣ, ಡಿಂಗ್ರಿ ನಾಗರಾಜ್, ಅಂತಃಕರಣದ ತಂದೆಯಾಗಿ ರಮೇಶ್ ಭಟ್ … ಹೀಗೆ ಅನೇಕ ಕಲಾವಿದರನ್ನು ಚಿತ್ರರಂಗ ಒಂದೇ ಪಾತ್ರಗಳಲ್ಲಿ ರಿಪೀಟ್ ಮಾಡುತ್ತಿವೆ.
ಏನೇ ಆದರೂ ಕಲಾವಿದರು ಆಯ್ಕೆ, ಅವಕಾಶ ಹಾಗೂ ಅನಿವಾರ್ಯತೆಯ ಜೊತೆಗೆ ಸಾಗಬೇಕಾಗುತ್ತದೆ. ಕೆಲವರಿಗೆ ಪಾತ್ರಗಳ ಆಯ್ಕೆ ಸ್ವತಂತ್ರ್ಯವಿದ್ದರೆ, ಇನ್ನು ಅನೇಕ ಕಲಾವಿದರಿಗೆ ಅವಕಾಶ ಅನಿವಾರ್ಯವಾಗಿರುತ್ತದೆ. ಈ ಮೂರು ಅಂಶಗಳ ನಡುವೆಯೇ ಸಿನಿಪಯಣ ಸಾಗಬೇಕಾಗುತ್ತದೆ. ಹಾಗಾಗಿ ಇಷ್ಟವಿದ್ದರೂ, ಇಲ್ಲದಿದ್ದರೂ ಬ್ರಾಂಡ್ ಆದ ಪಾತ್ರಗಳಿಗೇ ಸೀಮಿತವಾಗಬೇಕಾಗುತ್ತದೆ.
ರವಿಪ್ರಕಾಶ್ ರೈ