Advertisement
ಕೆನಡಾ ಮತ್ತೆ ಎತ್ತಿರುವ ತಗಾದೆಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಕೆನಡಾ ಮಾಡುತ್ತಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದಿದೆ. ಕಳೆದ ವರ್ಷ ಕೆನಡಾದಲ್ಲಿ ನಡೆದ ನಿಜ್ಜರ್ ಕೊಲೆ ಪ್ರಕರಣದಲ್ಲಿ ಕೆನಡಾ ದಲ್ಲಿರುವ ಭಾರ ತೀಯ ರಾಜತಾಂತ್ರಿಕ ಅಧಿಕಾರಿ, ಸಿಬಂದಿ ಕೈವಾಡವಿದ್ದು, ಅವರ ವಿರುದ್ಧ ತನಿಖೆ ಕೈಗೊಳ್ಳ ಬೇಕು ಎಂದು ಕೆನಡಾ ಹೇಳಿದೆ.
ಕೆನಡಾದ ನಡೆಗೆ ಭಾರೀ ಆಕ್ರೋಶ ವ್ಯಕ್ತಪಡಿಸಿರುವ ಭಾರತ ಸರಕಾರವು ಕೆನಡಾದಲ್ಲಿರುವ ಭಾರತೀಯ ರಾಯಭಾರಿ ಸಂಜಯ್ ಕುಮಾರ್ ವರ್ಮಾ ಅವರನ್ನು ಮರಳಿ ಕರೆಸಿಕೊಳ್ಳಲು ತೀರ್ಮಾನಿಸಿದೆ. ಕೆನಡಾ ಸರಕಾರವು ಗುರಿಯಾಗಿಸಿಕೊಂಡಿರುವ ಮುಖ್ಯ ರಾಯಭಾರಿ ಸಂಜಯ್ ವರ್ಮಾ ಕೆನಡಾ ಸಹಿತ ಹಲವು ದೇಶಗಳಲ್ಲಿ ಸುಮಾರು 35 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಇಷ್ಟು ವರ್ಷಗಳ ಕಾಲ ಅವರು ಯಾವುದೇ ಅಕ್ರಮಗಳನ್ನು ಎಸಗಿಲ್ಲ. ಅಂಥವರ ವಿರುದ್ಧ ಕೆನಡಾ ರಾಜಕೀಯ ದುರುದ್ದೇಶದಿಂದ ಆರೋಪ ಹೊರಿಸಿರುವುದು ಸಮರ್ಥನೀಯವಲ್ಲ ಎಂದು ಭಾರತ ಹೇಳಿದೆ. ಕೆನಡಾ ಸರಕಾರದ ಮೇಲೆ ನಂಬಿಕೆಯಿಲ್ಲ
ನಿಜ್ಜರ್ ಹತ್ಯೆಗೆ ಸಂಬಂಧಿಸಿ ಕೆನಡಾ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಭಾರತ ಸರಕಾರವು, “ನಮಗೆ ಕೆನಡಾದಲ್ಲಿ ಆಡಳಿತ ನಡೆಸುತ್ತಿರುವ ಸರಕಾರದ ಮೇಲೆ ನಂಬಿಕೆ ಇಲ್ಲ. ಯಾವುದೇ ಹೊಸ ಸಾಕ್ಷ್ಯಗಳಿಲ್ಲದೆ ಭಾರತದ ಮೇಲೆ ಆರೋಪ ಮಾಡುವ ಕೆಲಸವನ್ನು ಅದು ಮಾಡುತ್ತಿದೆ’ ಎಂದಿದೆ.
Related Articles
ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಭಾರತ ಸರಕಾರವು ಭಾರತದಲ್ಲಿರುವ ಆರು ಕೆನಡಾ ರಾಜತಾಂತ್ರಿಕರನ್ನು ಉಚ್ಚಾಟಿಸಿದ್ದು, ಅ. 19ರ ಮಧ್ಯರಾತ್ರಿಯೊಳಗೆ ದೇಶ ತೊರೆಯುವಂತೆ ಆದೇಶಿಸಿದೆ.
Advertisement