ಸುರತ್ಕಲ್: ಬ್ರೈನ್ ಟ್ಯೂಮರ್‌ಗೆ ತುತ್ತಾಗಿದ್ದ ಮಹಿಳೆಗೆ ಸುರತ್ಕಲ್ ಮುಕ್ಕದ ಶ್ರೀನಿವಾಸ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಯಶಸ್ವೀ ನರ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಮರು ಜೀವ ನೀಡಲಾಗಿದೆ.
ಶಸ್ತ್ರಚಿಕಿತ್ಸೆಯ ನೇತೃತ್ವ ವಹಿಸಿದ್ದ ನರ ರೋಗ ತಜ್ಞ ಡಾ| ದೀಪಕ್ ಸುರಪರಾಜು ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. 6ರಿಂದ 8 ಸೆಂ.ಮೀ. ಗಾತ್ರದ ಗಡ್ಡೆಯನ್ನು ಹೊರತೆಗೆಯಲಾಗಿದೆ. ಮಹಿಳೆ ಗುಣಮುಖರಾಗಿ ಕೇವಲ ಐದೇ ದಿನದಲ್ಲಿ ತಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ತೊಡಗಿದ್ದಾರೆ.
ಸುರಗಿರಿ ಬಳಿಯ ಸಾರ್ವಜನಿಕ ಸೇವಾ ಸಂಸ್ಥೆಯೊಂದು ಉಚಿತ ಶಿಬಿರ ನಡೆಸಿದಾಗ ತಪಾಸಣೆಗೆ ಬಂದಿದ್ದ ಕಿನ್ನಿಗೋಳಿ ಸುರಗಿರಿ ಸಮೀಪದ ರತ್ನಾವತಿ ಅವರನ್ನು ಶ್ರೀನಿವಾಸ ಆಸ್ಪತ್ರೆಯಲ್ಲಿ ಹೆಚ್ಚಿನ ಪರೀಕ್ಷೆಗೆ ಒಳಪಡಿಸಿದಾಗ ಬ್ರೈನ್ ಟ್ಯೂಮರ್ ಪತ್ತೆಯಾಗಿತ್ತು. ನಿದ್ರಾಹೀನತೆ, ಭಾರೀ ತಲೆನೋವು,ದೇಹದ ಬಲಭಾಗ ದುರ್ಬಲತೆಯಿಂದ ಬಳಲುತ್ತಿದ್ದರು. ಜ. 5ರಂದು ತಪಾಸಣೆಗಾಗಿ ತಪಾಸಣೆಗೆ ಒಳಪಡಿಸಿ ಜ. 7ರಂದು ಸತತ ಎಂಟು ಗಂಟೆಕಾಲ ಸಂಕೀರ್ಣವಾದ ನರ ವೈಜ್ಞಾನಿಕ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಗಡ್ಡೆಯನ್ನು ಶೇ. 100ರಷ್ಟು ತೆಗೆದುಹಾಕಲಾಗಿದ್ದು ಇನ್ನು ಒಂದು ವರ್ಷ ನಿರಂತರ ನಿಗಾಕ್ಕೆ ಮಹಿಳೆಯನ್ನು ಒಳಪಡಿಸಲಾಗುತ್ತದೆ ಎಂದರು.
ತಲೆನೋವು ಅವಗಣಿಸದಿರಿ
ಬ್ರೈನ್ ಟ್ಯೂಮರ್ ವಿವಿಧ ಹಂತದಲ್ಲಿ
ಶೇ. 80ರಷ್ಟು ಗುಣಪಡಿಸಬಹುದಾ ಗಿದೆ. ಈ ಮಹಿಳೆಯ ಬ್ರೈನ್ ಟ್ಯೂಮರ್ ಮೆದುಳಿನ ಒಳಗೆ ದೊಡ್ಡ ಗಾತ್ರದಲ್ಲಿದ್ದ ಕಾರಣ ಚಿಕಿತ್ಸೆ ಸಂಕೀರ್ಣವಾಗಿತ್ತು ಎಂದು ಹೇಳಿದರು. ತಲೆನೋವು ಬಂದಾಗ ಯಾವುದೇ ಕಾರಣಕ್ಕೂ ಅವಗಣಿಸದೆ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ ಎಂದರು.
ಮೆಡಿಕಲ್ ಆಸ್ಪತ್ರೆಯ ರಿಜಿಸ್ಟ್ರಾರ್ ಡಾ| ಅನಿಲ್, ಸೂಪರಿಂಡೆಂಟ್ ಡಾ| ಅಮರ್, ಡೀನ್ ಡಾ| ಉದಯ ಕುಮಾರ್, ಮಾಧ್ಯಮ ಸಂಪರ್ಕಾಧಿ ಕಾರಿ ಭಾಸ್ಕರ ಅರಸ್, ನವೀನ್ ಭಂಡಾರಿ, ರತ್ನಾವತಿ ಅವರ ಪತಿ ನಾರಾಯಣದಾಸ್ ಉಪಸ್ಥಿತರಿದ್ದರು.