ಪುತ್ತೂರು, ನ. 30: ನಾಯಿಗಳಲ್ಲಿ ಮೆದುಳು ಜ್ವರ ವ್ಯಾಪಕವಾಗಿ ಹಬ್ಬುತ್ತಿದ್ದು, ಪುತ್ತೂರು, ಸುಳ್ಯ, ಕಡಬ ತಾಲೂಕುಗಳಲ್ಲಿ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ಇದು ಸಾಂಕ್ರಾಮಿಕ ರೋಗವಾಗಿದ್ದು, ಹರಡುವಿಕೆಯ ಪ್ರಮಾಣ ತೀವ್ರಗತಿಯಲ್ಲಿದೆ. ಈ ಕಾಯಿಲೆಯಿಂದ ಬೀದಿ ನಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದು, ಇತರ ಸಾಕು ನಾಯಿಗಳಿಗೂ ಹರಡುವ ಭೀತಿ ಎದುರಾಗಿದೆ.
ಸೂಕ್ತ ಚಿಕಿತ್ಸೆ ಅಗತ್ಯ : ವರ್ಷದ ಯಾವ ಸಮಯ ದಲ್ಲಿಯೂ ಈ ರೋಗ ನಾಯಿಗಳಿಗೆ ತಗಲಬಹುದು. ಪ್ರಾರಂಭದಲ್ಲಿ ಆಂಟಿ ಬಯೋಟಿಕ್ ಚಿಕಿತ್ಸೆಯ ಮೂಲಕ ರೋಗ ಬಾರದಂತೆ ತಡೆಯಬಹುದು. ವಾಂತಿ ಭೇದಿ ಆರಂಭವಾದಲ್ಲಿ ನಾಯಿಗಳು ಬೇಗನೆ ಸಾವಿಗೀಡಾಗುತ್ತವೆ. ನರ ದೌರ್ಬಲ್ಯ ಲಕ್ಷಣವಿರುವ ನಾಯಿಯನ್ನು ಪ್ರಾರಂಭಿಕ ಹಂತದಲ್ಲಿ ಸೂಕ್ತ ಚಿಕಿತ್ಸೆ ನೀಡಿ ರಕ್ಷಿಸಬಹುದು. ರೋಗ ಬಾರದಂತೆ ಆರಂಭದಲ್ಲಿ 60 ದಿನಗಳ ಮರಿಗಳಿಗೆ ಡಿಸ್ಟೆಂಪರ್ ಲಸಿಕೆ ನೀಡಬೇಕಾಗುತ್ತದೆ. 90 ದಿನಗಳ ಬಳಿಕ ಚುಚ್ಚುಮದ್ದು ನೀಡಿ ಅನಂತರ ಪ್ರತೀ ವರ್ಷಕ್ಕೊಮ್ಮೆ ರೋಗ ನಿರೋಧಕ ಚುಚ್ಚು ಮದ್ದು ನೀಡಿದರೆ ಮೆದುಳು ಜ್ವರದಿಂದ ನಾಯಿಗಳನ್ನು ರಕ್ಷಿಸಬಹುದು ಎನ್ನುತ್ತಾರೆ ತಜ್ಞರು.
ರೋಗ ಲಕ್ಷಣ : ರೋಗ ಪೀಡಿತ ನಾಯಿ ವಿಪರೀತ ಜ್ವರಕ್ಕೆ ಈಡಾಗುತ್ತದೆ. ತಲೆ ಮೇಲೆತ್ತಲು ಆಗದ ಸ್ಥಿತಿಗೆ ತಲುಪುತ್ತದೆ. ಎರಡು ಕೈಗಳ ಮಧ್ಯದಲ್ಲಿ ತಲೆಯನ್ನಿರಿಸಿ ನರಳಾಡುತ್ತದೆ. ಆಹಾರ ಸೇವನೆಯನ್ನು ತ್ಯಜಿಸಿ ಕ್ಷೀಣವಾಗುತ್ತದೆ. ವಾಂತಿ ಭೇದಿ, ನರ ದೌರ್ಬಲ್ಯ, ಕಣ್ಣಿನ ಪೊರೆ ಸಮಸ್ಯೆ ಈ ರೋಗದ ಮೂರು ಲಕ್ಷಣಗಳು. ನಾಯಿ ಎದ್ದು ಕುಳಿತುಕೊಳ್ಳಲು, ಓಡಾಡಲು ಅಸಾಧ್ಯ ಎನ್ನುವ ಹಂತಕ್ಕೆ ತಲುಪುತ್ತದೆ. ರೋಗ ಪೀಡಿತ ನಾಯಿ ಆಹಾರ ಸೇವನೆ ಕಡಿಮೆ ಮಾಡಿ ಕೊನೆಗೆ ನೀರನ್ನು ಮಾತ್ರ ಸೇವಿಸುತ್ತದೆ. ಬಳಿಕ ಆಹಾರವನ್ನೂ ತ್ಯಜಿಸುತ್ತದೆ.
ಪ್ರಾರಂಭದಲ್ಲಿ ಲಕ್ಷಣ ಇಲ್ಲ : ಸೋಂಕು ತಗುಲಿದರೂ ಮೊದಲ ಮೂರು ತಿಂಗಳ ಕಾಲ ನಾಯಿಗಳಲ್ಲಿ ಯಾವುದೇ ಲಕ್ಷಣ ಕಂಡುಬರುವುದಿಲ್ಲ. ಕೊನೆಯ ಎರಡು ವಾರಗಳಲ್ಲಿ ರೋಗ ಉಲ್ಬಣಿಸಿ ನಾಯಿ ಸಾವನ್ನಪುತ್ತವೆ. ಸೋಂಕಿಗೆ ತುತ್ತಾದ ನಾಯಿಗಳು ರೇಬಿಸ್ ರೋಗ ಲಕ್ಷಣಗಳನ್ನೂ ಪ್ರದರ್ಶಿಸುವುದು ಕಂಡುಬಂದಿದ್ದು, ಉಳಿದ ನಾಯಿ ಮೇಲೆ ದಾಳಿ ಮಾಡುತ್ತವೆ. ರೋಗ ಈ ಮೂಲಕವೂ ಹರಡುತ್ತದೆ. ಕೆಲವು ನಾಯಿಗಳಿಗೆ ಜ್ವರ ಹೆಚ್ಚಾಗಿ ಹುಚ್ಚು ನಾಯಿಯಂತೆ ವರ್ತಿಸುತ್ತವೆ. ಮೂಗು-ಬಾಯಿಯಿಂದ ಕೀವು ಬರಲು ಆರಂಭವಾಗುತ್ತದೆ. ಅದನ್ನು ಇತರ ನಾಯಿಗಳು ಸ್ಪರ್ಶಿಸಿದಾಗಲೂ ರೋಗ ಹರಡುತ್ತದೆ.
ಮೆದುಳು ಜ್ವರ ಬಂದ ಬಳಿಕ ಅದರ ನಿವಾರಣೆಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಕೆಲವು ಶ್ವಾನಗಳ ದೇಹ ಸಾಮರ್ಥ್ಯದ ಮೇಲೆ ರೋಗ ನಿಯಂತ್ರಣಕ್ಕೆ ಬರುವುದುಂಟು. ಅದು ಬೆರೆಳೆಣಿಕೆ ಪ್ರಕರಣ ಮಾತ್ರ. ಹೆಚ್ಚಿನ ಶ್ವಾನಗಳು ರೋಗ ತಗಲಿದ ಅನಂತರ ಸಾಯುತ್ತವೆ. ಕೆಲವು ದಿನಗಳ ಹಿಂದೆ ಇಂತಹ ಪ್ರಕರಣಗಳು ಕಂಡು ಬಂದಿದ್ದವು. 3ತಿಂಗಳಿಗೊಮ್ಮೆ ಲಸಿಕೆ ಹಾಕುವ ಮೂಲಕ ರೋಗ ಬಾರದ ಹಾಗೆ ತಡೆಗಟ್ಟಲು ಸಾಧ್ಯವಿದೆ.
– ಡಾ| ಪ್ರಸನ್ನ ಕುಮಾರ ವೈದ್ಯಾಧಿಕಾರಿ ಪಶು ವೈದ್ಯಕೀಯ ಆಸ್ಪತ್ರೆ, ಪುತ್ತೂರು