Advertisement

ಬ್ರಾಹ್ಮಣರು ಶ್ರಮಜೀವಿಗಳಾಗಲಿ

12:13 PM Dec 11, 2018 | Team Udayavani |

ರಾಯಚೂರು: ಬ್ರಾಹ್ಮಣರು ಕೇವಲ ಕುಲ ವೃತ್ತಿಯನ್ನೇ ನೆಚ್ಚಿಕೊಳ್ಳದೆ ಎಲ್ಲ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಮುಂದಾಗಬೇಕು. ಅಂದಾಗ ಮಾತ್ರ ಸಮಾಜದ ಪ್ರಗತಿ ಸಾಧ್ಯವಾಗಲಿದೆ ಎಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಸಲಹೆ ನೀಡಿದರು.

Advertisement

ನಗರದ ಜೋಡು ವೀರಾಂಜನೇಯ ದೇವಸ್ಥಾನ ಆವರಣದಲ್ಲಿ ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ರವಿವಾರ ಸಂಜೆ ಹಮ್ಮಿಕೊಂಡಿದ್ದ ವಿಪ್ರೋತ್ಸವ ಕಾರ್ಯಕ್ರಮದ ನಿಮಿತ್ತ ವಿಪ್ರಶ್ರೀ ಪ್ರಶಸ್ತಿ ಪ್ರದಾನ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಪೂಜ್ಯರು ಮಾತನಾಡಿದರು. 

ನಮ್ಮ ಧರ್ಮದಲ್ಲಿ ಅವಕಾಶಗಳಿಲ್ಲ ಎಂದು ಅನ್ಯ ಧರ್ಮಕ್ಕೆ ಮತಾಂತರಗೊಳ್ಳುವುದು ಸರಿಯಲ್ಲ. ಹಿರಿಯರಿಂದ ಬಳುವಳಿಯಾಗಿ ಬಂದ ಪೌರೋಹಿತ್ಯವೊಂದೇ ನಿಮ್ಮ ಕಾಯಕ ಆಗಬಾರದು. ಸೋಮಾರಿಗಳಾಗದೆ ಶ್ರಮ ಜೀವನ ರೂಢಿಸಿಕೊಳ್ಳಿ. ಉತ್ತರಪ್ರದೇಶದಲ್ಲಿ ಬ್ರಾಹ್ಮಣರಿಗೆ ಅಧಿಕಾರ ಸಿಕ್ಕಿದೆ. ಅದರಂತೆ ತೆಲಂಗಾಣ, ಕರ್ನಾಟಕದಲ್ಲೂ ಅವಕಾಶ ದಕ್ಕಿದೆ. ಪಕ್ಷಾತೀತವಾಗಿ ಅಧಿಕಾರ ಹಂಚಿಕೆಯಾಗುತ್ತಿದೆ ಎಂದರು.

ಅದರ ಜತೆಗೆ ಸಮಾಜ ಸಂಘಟನೆಗೂ ಒತ್ತು ನೀಡಬೇಕು. ಆರ್ಥಿಕವಾಗಿ ಸಬಲರಾದಾಗ, ಅಧಿಕಾರವಂತರಾದಾಗ ಮಾತ್ರ ಉನ್ನತಿ ಸಾಧ್ಯವಾಗಲಿದೆ. ಬ್ರಾಹ್ಮಣರ ಆಚಾರ ವಿಚಾರಗಳ ಕುರಿತು ಕಿರುಹೊತ್ತಿಗೆ ತರುವ ಪ್ರಯತ್ನ ಮಠ ಮಾಡಿದೆ ಎಂದರು. 

ಮಹಾಸಭಾ ರಾಜ್ಯಾಧ್ಯಕ್ಷ ಕೆ.ಎನ್‌. ವೆಂಕಟನಾರಾಯಣ ಮಾತನಾಡಿ, ಬ್ರಾಹ್ಮಣ ಸಮಾಜ ಜನಸಂಖ್ಯೆಯಲ್ಲಿ ಚಿಕ್ಕದಾದರೂ ಎಲ್ಲರ ಜತೆಗೆ ಉತ್ತಮ ಬಾಂಧವ್ಯ ಹೊಂದಿ ಮುನ್ನಡೆದಿದೆ. ಮಕ್ಕಳ ಶಿಕ್ಷಣ, ಉದ್ಯೋಗಕ್ಕೆ ಹೆಚ್ಚು ಒತ್ತು ನೀಡಬೇಕಿದೆ. ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪಿಸಿದ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುವೆ ಎಂದರು.

Advertisement

ಕೆನರಾ ಬ್ಯಾಂಕ್‌ ನಿವೃತ್ತ ಹಿರಿಯ ಪ್ರಬಂಧಕ ಸತ್ಯನಾರಾಯಣ ಮುಜುಮದಾರ ಅವರಿಗೆ ವಿಪ್ರಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರು, ಪದವಿ ಪುರಸ್ಕೃತರನ್ನು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಮಹಾಸಭಾ ಉಪಾಧ್ಯಕ್ಷಾ ಆರ್‌.ಲಕ್ಷ್ಮೀಕಾಂತ, ವಿದ್ವಾಂಸರಾದ ಡಾ| ಅರಳು ಮಲ್ಲಿಗೆ ಪಾರ್ಥಸಾರಥಿ, ಮಂತ್ರಾಲಯದ ವಿದ್ಯಾಪೀಠದ ಪ್ರಾಚಾರ್ಯ ಎಸ್‌.ವಾದಿರಾಜ ಆಚಾರ್ಯ ಮಾತನಾಡಿದರು.

ಅಖೀಲ ಕರ್ನಾಟಕ ವಕ್ತಾರ ಮ.ಸ. ನಂಜುಂಡಸ್ವಾಮಿ, ಜಿಲ್ಲಾಧ್ಯಕ್ಷ ಡಾ| ಆನಂದ ಫಡ್ನೀಸ್‌, ನರಸಿಂಗರಾವ್‌ ದೇಶಪಾಂಡೆ, ಪ್ರಾಣೇಶ ಮುತಾಲಿಕ್‌, ಜಗನ್ನಾಥ ಕುಲಕರ್ಣಿ, ಗಿರೀಶ ಕನಕವೀಡು, ಡಾ| ಪ್ರಮೋದ ಕಟ್ಟಿ, ವೀಣಾರಾಜೇಂದ್ರ ಸೇರಿ ಸಮಾಜದ ಅನೇಕರು ಪಾಲ್ಗೊಂಡಿದ್ದರು.

ಕಾಯಕದ ಬಗ್ಗೆ ಇರುವ ಸಂಕೋಚಗಳನ್ನು ಬದಿಗೊತ್ತಿ. ಧರ್ಮಕ್ಕೆ ವಿರುದ್ಧವಾದದ್ದನ್ನು ಬಿಟ್ಟು ಎಲ್ಲ ಕೆಲಸಗಳು ಶ್ರೇಷ್ಠ. ಬ್ರಾಹ್ಮಣರು ಎಂದಾಕ್ಷಣ ನಮಗೆ ಮೀಸಲಾತಿ ಸಿಗುವುದಿಲ್ಲ, ಸೂಕ್ತ ಅವಕಾಶಗಳಿಲ್ಲ ಎಂಬ ನೆಪ ಹೇಳದೆ ಕೆಲಸ ಮಾಡಬಲ್ಲೆವು ಎಂಬ ಆತ್ಮವಿಶ್ವಾಸದಿಂದ ಮುನ್ನಡೆಯಿರಿ.
 ಶ್ರೀ ಸುಬುಧೇಂಧ್ರ ತೀರ್ಥರು, ಪೀಠಾಧಿಪತಿ, ರಾಘವೇಂದ್ರ ಸ್ವಾಮಿಗಳ ಮಠ, ಮಂತ್ರಾಲಯ

Advertisement

Udayavani is now on Telegram. Click here to join our channel and stay updated with the latest news.

Next