Advertisement

Brahmin Mahasabha: ಗಾಯತ್ರಿ ಮಂತ್ರದ ಅನುಷ್ಠಾನದಲ್ಲಿ ಸಮಾಜ ಒಂದಾಗಲಿ: ಪೇಜಾವರ ಶ್ರೀ

02:17 AM Oct 28, 2024 | Team Udayavani |

ಸುರತ್ಕಲ್‌: ರಾಷ್ಟ್ರವನ್ನು ಒಂದುಗೂಡಿಸುವ ರಾಷ್ಟ್ರ ಗೀತೆ ಇರುವಂತೆ ಬ್ರಾಹ್ಮಣ ಸಮುದಾಯಕ್ಕೆ ಗಾಯತ್ರಿ ಮಂತ್ರವೇ ಒಂದು ಗೀತೆ. ವಿಪ್ರ ಸಮಾಜವಿಡೀ ಗಾಯತ್ರಿ ಮಂತ್ರದ ಅನುಷ್ಠಾನದಲ್ಲಿ ಒಂದಾಗಬೇಕು. ದಿಯೋ ಯೋನಾ ಪ್ರಚೋದಯಾತ್‌ ಎನ್ನುವಂತೆ ಸ್ವಾರ್ಥವಿಲ್ಲದೆ ಎಲ್ಲರಿಗೂ ಸದ್ಬುದ್ಧಿ ಸತ್‌ ಚಿಂತನೆ ಕೊಡು ಎಂದು ಪ್ರಾರ್ಥಿಸುವುದೇ ಆಗಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ನುಡಿದರು.

Advertisement

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕೇಂದ್ರ ಸಮಿತಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಘಟಕವು ಚಿತ್ರಾಪುರ ಮಠದ ಸಹಕಾರದೊಂದಿಗೆ ಎರಡು ದಿನಗಳ ಕಾಲ ಆಯೋಜಿಸಿದ ಗಾಯತ್ರಿ ಸಂಗಮ ಸಾಂಘಿಕ ಕೋಟಿ ಗಾಯತ್ರಿ ಜಪಯಜ್ಞದ ಧರ್ಮ ಸಭೆಯಲ್ಲಿ ಅವರು ಆಶೀರ್ವವಚನ ನೀಡಿದರು. ಬ್ರಾಹ್ಮಣರು ಅನುಸರಿಸಬೇಕಾದ ಹಲವು ಅನುಷ್ಠಾನಗಳಿವೆ. ಕನಿಷ್ಠ ಗಾಯತ್ರಿಯನ್ನು ಮಾಡದೇ ಹೋದಲ್ಲಿ ನಾವು ಬ್ರಾಹ್ಮಣರು ಎನಿಸಿಕೊಳ್ಳಲು ಯಾವುದೇ ಅರ್ಹತೆ ಉಳಿಯಲಾರದು. ಋಷಿಗಳು, ಸಾಧಕ ಹಿರಿಯರಿಂದ ಬಂದ ಅನುಷ್ಠಾನವನ್ನು ನಾವು ಮಾಡುತ್ತ ಬಂದಿದ್ದೇವೆ. ಇದು ಮುಂದಿನ ಪೀಳಿಗೆಗೂ ಮುಂದುವರಿಯಬೇಕಿದೆ ಎಂದರು.

ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ಮಾತನಾಡಿ, ಬ್ರಾಹ್ಮಣ ಸಮುದಾಯದ ಉದ್ದಾರವನ್ನು ಸ್ವತಃ ಮಾಡಿಕೊಳ್ಳುವ ಮೂಲಕ ಮಕ್ಕಳಲ್ಲಿಯೂ ಈ ಸಂಸ್ಕಾರವನ್ನು ಬಿತ್ತಬೇಕು. ನಿತ್ಯವೂ 108 ಗಾಯತ್ರಿ ಮಂತ್ರವನ್ನು ಅನುಷ್ಠಾನಿಸಿ ಬ್ರಾಹ್ಮಣತ್ವದ ಶಕ್ತಿ ವೃದ್ಧಿಸಿಕೊಳ್ಳಬೇಕು ಎಂದರು.
ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು ಮಾತನಾಡಿ, ಸಮಾಜದ ಏಳಿಗೆಗಾಗಿ ಇಂತಹ ವಿಪ್ರ ಸಂಗಮ ನಿರಂತರವಾಗಿ ಮುಂದುವರಿಯುವ ಮೂಲಕ ನಮ್ಮ ಗೌರವ, ಸ್ಥಾನಮಾನವನ್ನು ಉಳಿಸಿಕೊಳ್ಳಬೇಕಿದೆ ಎಂದರು.

ಮಹಾಸಭಾದ ಕೇಂದ್ರ ಸಮಿತಿ ಅಧ್ಯಕ್ಷ ಅಶೋಕ ಹಾರನಹಳ್ಳಿ ಮಾತನಾಡಿ, ಜಾತಿ ಜನಗಣತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಎಲ್ಲ ಸಮುದಾಯದಲ್ಲೂ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವವರ ಆಧ್ಯಯನ ನಡೆಸಿ ಅವರಿಗೆ ಬೇಕಾದ ಸೌಲಭ್ಯ ಒದಗಿಸಬೇಕಿದೆ ಹೊರತು, ಜಾತಿ ಜನಗಣತಿಯಲ್ಲ. ಇದರಿಂದ ಯಾವುದೇ ಪ್ರಯೋಜನವೂ ಇಲ್ಲ ಎಂದು ಅಭಿಪ್ರಾಯಪಟ್ಟರು.

24 ಕೋಟಿ ಜಪಯಜ್ಞ
ಬ್ರಾಹ್ಮಣ ಸಮಾಜ ಒಗ್ಗಟ್ಟಿನಿಂದ ಇರಲು ಜನವರಿಯಲ್ಲಿ ಬೆಂಗಳೂರಿನಲ್ಲಿ 24 ಕೋಟಿ ಗಾಯತ್ರಿ ಜಪಯಜ್ಞ ಮಾಡಲು ನಿರ್ಧರಿಸಲಾಗಿದೆ. ದ.ಕ. ಸಮಿತಿ ಆಯೋಜಿಸಿದ ಈ ಯಶಸ್ವಿ ಕಾರ್ಯಕ್ರಮ ಮುಂದೆ ಪ್ರೇರಕವಾಗಿ ಕೆಲಸ ಮಾಡಲು ಸಹಾಯಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಟೀಲು ಕ್ಷೇತ್ರದ ಹಿರಿಯ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಹಾಗೂ ದಾನಿ, ವಸಂತ ಪಾಠ ಶಿಬಿರದ ರುವಾರಿ ಸುರೇಶ್‌ ರಾವ್‌ ಕಟೀಲು ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.

Advertisement

ಗಣ್ಯರಾದ ಡಾ| ಬಿ.ಎಸ್‌ ರಾಘವೇಂದ್ರ ಭಟ್‌, ವೇ| ಮೂ| ಸೂರ್ಯನಾರಾಯಣ ಭಟ್‌ ಕಶೆಕೋಡಿ, ಹರಿನಾರಾಯಣ ದಾಸ ಆಸ್ರಣ್ಣ, ಸಂಚಾಲಕ ಸುರೇಶ್‌ ರಾವ್‌ ಚಿತ್ರಾಪುರ, ಕೃಷ್ಣ ಭಟ್‌ ಕದ್ರಿ, ಎಂ.ಟಿ. ಭಟ್‌, ಸುಬ್ರಹ್ಮಣ್ಯ ಕೋರಿಯರ್‌ ಮುಂತಾದವರು ಉಪಸ್ಥಿತರಿದ್ದರು. ಗಾಯತ್ರಿ ಸಂಗಮ ಅಧ್ಯಕ್ಷ ಮಹೇಶ್‌ ಕಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್‌.ಡಿ. ಶಾಸ್ತ್ರಿ ನಿರೂಪಿಸಿದರು. ಶ್ರೀಧರ ಹೊಳ್ಳ ವಂದಿಸಿದರು.

ಹೇಳಿಕೆಗೆ ಖಂಡನೆ
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಕುರಿತಾಗಿ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್‌ ನೀಡಿರುವ ಹೇಳಿಕೆಯನ್ನು ಧರ್ಮ ಸಭೆಯಲ್ಲಿ ಖಂಡಿಸಿ ನಿರ್ಣಯ ಕೈಗೊಳ್ಳಲಾಯಿತು ಮತ್ತು ಪ್ರತಿಭಟಿಸಲು ನಿರ್ಧರಿಸಲಾಯಿತು. ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶೋಕ ಹಾರನಹಳ್ಳಿ ನಿರ್ಣಯ ಮಂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next