Advertisement
ಬ್ರಹ್ಮಾವರ: ಇಲ್ಲಿನ ಪ್ರಾದೇಶಿಕ ಪಾಸ್‌ಪೋರ್ಟ್ ಸೇವಾ ಕೇಂದ್ರದ ಬಳಕೆ ದಾರರು ದಿನೇದಿನೆ ಹೆಚ್ಚುತ್ತಿದ್ದು, ಜಿಲ್ಲೆಯವ ರಲ್ಲದೇ ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಪಾಸ್‌ಪೋರ್ಟ್ ಆಕಾಂಕ್ಷಿಗಳೂ ಆಗಮಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಖಾಯಂ ಸಿಬಂದಿ ಕೊರತೆ ಕಾಡತೊಡಗಿದೆ.
ಜು. 23ರ ವರೆಗೆ 3,995 ಮಂದಿಯ ಸಂದರ್ಶನ ಪ್ರಕ್ರಿಯೆ ಪೂರ್ಣಗೊಂಡಿದೆ. 3,102 ದಾಖಲೆಗಳು ಬೆಂಗಳೂರು ಕೇಂದ್ರ ಕಚೇರಿಗೆ ರವಾನೆ ಯಾಗಿದ್ದು, ಸುಮಾರು 2,460 ಮಂದಿಗೆ ಪಾಸ್‌ಪೋರ್ಟ್ ಕೈ ಸೇರಿದೆ ಎಂದು ಅಂದಾಜಿಸಲಾಗಿದೆ. ಪಾಸ್‌ಪೋರ್ಟ್‌ಗೆ ಆನ್‌ಲೈನ್‌ನಲ್ಲಿ 1,500 ರೂ. ಶುಲ್ಕ ಪಾವತಿಸಬೇಕು. ಆದರೆ ಮಧ್ಯವರ್ತಿಗಳು ಹೆಚ್ಚು ಹಣ ವಸೂಲು ಮಾಡುತ್ತಿರುವ ಆರೋಪವಿದೆ. ವಿದ್ಯಾವಂತರು, ಅಂತರ್ಜಾಲ ಬಳಕೆದಾರರೂ ಏಜೆನ್ಸಿಗಳ ಮೊರೆ ಹೋಗುತ್ತಿದ್ದಾರೆ ಎಂಬುದು ಕಂಡುಬಂದಿರುವ ಅಂಶ.
Related Articles
ಕೇಂದ್ರದಲ್ಲೀಗ ಓರ್ವ ಅಧಿಕಾರಿ, ಇಬ್ಬರು ಅಂಚೆ ಕಚೇರಿ ಸಿಬಂದಿ ಇದ್ದಾರೆ. ಈ ಇಬ್ಬರಲ್ಲಿ ಓರ್ವರನ್ನು ತುರ್ತು ಕಾರ್ಯ ನಿಮಿತ್ತ ಬೇರೆಡೆಗೆ ಕಳುಹಿಸಿದರೆ ಆ ದಿನ ಸಂದರ್ಶನ ವಿಳಂಬವಾಗುತ್ತದೆ. ಆದ್ದರಿಂದ ಮೂವರು ಸಿಬಂದಿ ಖಾಯಂ ಸೇವೆಗೆ ಒದಗಿಸಲು ಸಂಸದರು ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹ. ಇದರೊಂದಿಗೆ ಕೇಂದ್ರದ ಪರಿಸರದಲ್ಲಿ ವ್ಯವಸ್ಥಿತ ವಾಹನ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲೂ ಸಂಬಂಧಪಟ್ಟ ಇಲಾಖೆ ಹಾಗೂ ಸ್ಥಳೀಯಾಡಳಿತ ಗಮನ ಹರಿಸಬೇಕಿದೆ.
Advertisement
ಕಾರ್ಯ ಚಟುವಟಿಕೆಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ಮತ್ತು ಅಂಚೆ ಇಲಾಖೆ ಸಹಯೋಗದಲ್ಲಿ ಈ ಕೇಂದ್ರ ನಿತ್ಯವೂ ಬೆಳಗ್ಗೆ 9.30ರಿಂದ ಸಂಜೆ 6ರ ವರೆಗೆ ಕಾರ್ಯ ನಿರ್ವಹಿಸುತ್ತಿದೆ. ರವಿವಾರ ರಜೆ. ಪಾಸ್‌ಪೋರ್ಟ್‌ಗೆ ಅರ್ಜಿ:
ಹೀಗೆ ಮಾಡಿ
ಪ್ರಾರಂಭದಲ್ಲಿ www.passportindia.gov.in ವೆಬ್‌ಸೈಟ್‌ಗೆ ತೆರಳಿ ರೀಜನ್ ಬೆಂಗಳೂರು ಆಯ್ಕೆ ಮಾಡಬೇಕು.
ಅನಂತರ ನ್ಯೂ ಯೂಸರ್ ಲಾಗ್ ಇನ್ ಮಾಡಿ ಮೂಲ ಮಾಹಿತಿ ನೀಡಬೇಕು.
ಆಗ ಯೂಸರ್ ಐಡಿ ಹಾಗೂ ಪಾಸ್‌ವರ್ಡ್ ಲಭ್ಯ ವಾಗುತ್ತದೆ. ಬಳಿಕ ಆನ್‌ಲೈನ್‌ನಲ್ಲೇ ಶುಲ್ಕ ಪಾವತಿಸಬೇಕು.
ಅನಂತರ ದೊರೆಯುವ ಆಯ್ಕೆಗಳಲ್ಲಿ ಉಡುಪಿ (ಬ್ರಹ್ಮಾವರ) ಕೇಂದ್ರವನ್ನು ಆರಿಸಬೇಕು. ಎಆರ್‌ಎನ್ ನಂಬರ್ ಹಾಗೂ ಸಂದರ್ಶನ ಸಮಯ ದೊರೆಯುತ್ತದೆ.
ಆಗ ದಾಖಲೆಗಳ ಜೆರಾಕ್ಸ್ ಹಾಗೂ ಮೂಲ ಪ್ರತಿಯೊಂದಿಗೆ ಬ್ರಹ್ಮಾವರಕ್ಕೆ ಹಾಜರಾಗಬೇಕು.
ಸಂಬಂಧಪಟ್ಟ ದಾಖಲೆಗಳನ್ನು ನೀಡಿದ ಬಳಿಕ ಪೊಲೀಸ್ ವೆರಿಫಿಕೇಶನ್‌ಗೆ ಕಳುಹಿಸಲಾಗುತ್ತದೆ. ಮಾಹಿತಿಗಳು ಸರಿಯಾಗಿದ್ದಲ್ಲಿ ತಿಂಗಳೊಳಗೆ ಪಾಸ್‌ಪೋರ್ಟ್ ದೊರೆಯುತ್ತದೆ.
ಬೇಕಾದ ದಾಖಲೆಗಳು
ಎಸ್‌ಎಸ್‌ಎಲ್‌ಸಿ ಅಥವಾ ಅನಂತರದ ಅಂಕಪಟ್ಟಿ, ವಿಳಾಸ ಹಾಗೂ ಜನನ ದಿನಾಂಕ ಸರಿಯಾಗಿ ಇರುವ ಆಧಾರ್ ಕಾರ್ಡ್ ಮುಖ್ಯ ದಾಖಲೆಗಳು.
ಕೇಂದ್ರದ ಸಂಪರ್ಕ ಸಂಖ್ಯೆ : 0820-2987020 *ಪ್ರವೀಣ್ ಮುದ್ದೂರು