Advertisement

ಬ್ರಹ್ಮಾವರ-ಜನ್ನಾಡಿ ರಸ್ತೆ: ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ದೂರು

09:06 PM Jul 14, 2023 | Team Udayavani |

ಕೋಟ: ರಾಜ್ಯ ಹೆದ್ದಾರಿಯಾಗಿದ್ದ ಬ್ರಹ್ಮಾವರ-ಜನ್ನಾಡಿ-ಸಿದ್ದಾಪುರ ರಸ್ತೆಯನ್ನು ಪುನಃ ಜಿಲ್ಲಾ ಮುಖ್ಯರಸ್ತೆಯನ್ನಾಗಿ ಕೆಳದರ್ಜೆಗಿಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ವಿರುದ್ಧ ರಾಜ್ಯ ಉಚ್ಚ ನ್ಯಾಯಲಯದಲ್ಲಿ ನ್ಯಾಯಾಂಗ ನಿಂದನೆ ದೂರು ದಾಖಲಾಗಿದೆ.

Advertisement

ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ ಈ ರಸ್ತೆಯನ್ನು ಕೆಲವೇ ತಿಂಗಳಲ್ಲಿ ಸರಕಾರ ಪುನಃ ಜಿಲ್ಲಾ ಮುಖ್ಯರಸ್ತೆಯಾಗಿ ಕೆಳದರ್ಜೆಗೆ ಇಳಿಸಿತ್ತು. ಇದು ರಾಜಕೀಯ ಒತ್ತಡದಿಂದ ನಡೆದಿದ್ದು, ಅಧಿಕ ವಾಹನ ಸಂಚಾರ ಮತ್ತು ಬಾರಕೂರು ಪೇಟೆ ಮುಂತಾದ ಕಡೆ ರಸ್ತೆ ಅಭಿವೃದ್ಧಿಯ ಅಗತ್ಯವಿದ್ದರೂ ಕೆಳದರ್ಜೆಗಿಳಿಸಿ ಅನ್ಯಾಯವೆಸಗಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಬಾರಕೂರು ಶಂಕರ್‌ಶಾಂತಿ ಎನ್ನುವರು ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ಸಾರ್ವಜನಿಕ ಹಿತಾಸಕ್ತಿ ದೂರು ದಾಖಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಲೋಕೋಪಯೋಗಿ ಇಲಾಖೆ ಕಾನೂನಿನಂತೆ ರಸ್ತೆ ಕುಂದುಕೊರತೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿತು.
|
ಆದರೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಿಲ್ಲ ಎಂದು ಶಂಕರ್‌ ಶಾಂತಿಯವರು ಮತ್ತೊಮ್ಮೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು. ಈ ಬಗ್ಗೆ ಜೂ.28ರಂದು ವಿಚಾರಣೆ ವೇಳೆ ಹಿಂದಿನ ಆದೇಶದ ಬಗ್ಗೆ ಕ್ರಮ ಕೈಗೊಳ್ಳದ ಇಲಾಖೆ ಅಧಿಕಾರಿಗಳ ಬಗ್ಗೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತೆ ಮೌಖಿಕವಾಗಿ ನ್ಯಾಯಾಧೀಶರು ಸೂಚಿಸಿದ್ದರು. ಈ ಹಿನ್ನಲೆಯಲ್ಲಿ ಉಡುಪಿ ಲೋಕೋಪಯೋಗಿ ಇಲಾಖೆಯ ಪ್ರಮುಖ ಅಧಿಕಾರಿಗಳ ವಿರುದ್ಧ ಇದೀಗ ಉಚ್ಚ ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿದೆ.

ಅರ್ಜಿದಾರರ ಪರವಾಗಿ ವಕೀಲರಾದ ರೋಹಿತ್‌ ಜೂಡ್‌ ರೋಹಿತ್‌ ಸಿಕ್ವೆರಾ ವಾದ ಮಂಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next