Advertisement

ಬ್ರಹ್ಮಾವರ ಕೃಷಿ ಕಾಲೇಜು: ಪ್ರಸ್ತಾವನೆ ಪರಿಣಿತರ ಸಭೆಗೂ ಹೋಗಿಲ್ಲ !

01:19 AM Mar 03, 2022 | Team Udayavani |

ಉಡುಪಿ: ಬ್ರಹ್ಮಾವರ ಕೃಷಿ ಕಾಲೇಜು ಸ್ಥಾಪನೆಗೆ ಸರಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆ, ಇನ್ನೂ ಶಿಫಾರಸು ನೀಡುವ ಪರಿಣಿತರ ಸಮಿತಿಗೆ ತಲುಪಿಲ್ಲ.

Advertisement

ರಾಜ್ಯದಲ್ಲಿ ಕೃಷಿ ವಿಶ್ವವಿದ್ಯಾನಿಲಯಗಳ ಬಲವರ್ಧನೆ ಹಾಗೂ ಹೊಸ ಕೃಷಿ ಕಾಲೇಜುಗಳ ಸ್ಥಾಪನೆ, ಅವುಗಳ ಅಭಿವೃದ್ಧಿಗೆ ಸಂಬಂಧಿಸಿ ಪರಿಶೀಲಿಸಲು ಸರಕಾರವು ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಪ್ರಸ್ತಾವನೆಯು ಈ ಸಮಿತಿಯ ಮುಂದಿಟ್ಟು, ಸಭೆ ಯಲ್ಲಿ ಚರ್ಚೆ ನಡೆಸಿ ಅಂತಿಮಗೊಳಿಸಿ, ಸರಕಾರಕ್ಕೆ ಕಳುಹಿಸಲಾಗುತ್ತದೆ.

ಉತ್ತಮ ಸೌಲಭ್ಯ
ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅವಶ್ಯವಾದ 6 ತರಗತಿ ಕೊಠಡಿ, 12 ಪ್ರಯೋಗಾಲಯ, ಪರೀಕ್ಷೆಗಳಿಗೆ ವಿಶಾಲ ವಾದ ಕೋಣೆ, 150 ವಿದ್ಯಾರ್ಥಿಗಳ ಆಸನಕ್ಕೆ ಅನುಕೂಲವಾಗುವ ಸೆಮಿನರ್‌ ಹಾಲ್‌, ವಸ್ತು ಪ್ರದರ್ಶನ ಕೊಠಡಿ, ಬೋಧಕ, ಬೋಧಕೇತರ ಸಿಬಂದಿ ಹೀಗೆ ಎಲ್ಲವೂ ಇರಬೇಕು ಎಂಬ ನಿಯಮ ಇದೆ. ಸರಕಾರ ಸೂಚಿಸಿರುವ ನಿಯಮದಲ್ಲಿ ಬಹುಪಾಲು ಸೌಲಭ್ಯ ಈಗಾಗಲೇ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿದೆ. ಹುಡುಗಿಯರಿಗೆ 10 ಹಾಗೂ ಹುಡುಗರಿಗೆ 20 ಕೊಠಡಿ ಇರುವ ಹಾಸ್ಟೆಲ್‌ ವ್ಯವಸ್ಥೆ ಇಲ್ಲಿದೆ. ಪ್ರತಿ ಕೊಠಡಿಯಲ್ಲೂ 5 ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಬಹುದಾದ ವ್ಯವಸ್ಥೆ ಇದೆ ಎಂದು ಪ್ರಾಧ್ಯಾಪಕರೊಬ್ಬರು ಮಾಹಿತಿ ನೀಡಿದರು.

ಪ್ರಸ್ತಾವನೆಯೇ ದುಬಾರಿ?
ಕೃಷಿ ಕಾಲೇಜು ಸ್ಥಾಪನೆಗೆ 140 ಕೋಟಿಯ ಪ್ರಸ್ತಾವನೆಯನ್ನು ಸ್ಥಳೀಯ ಶಾಸಕರ ಗಮನಕ್ಕೆ ಬಾರದೆ ಸರಕಾರಕ್ಕೆ ಕೃಷಿ ವಿವಿಯಿಂದ ಸಲ್ಲಿಸಲಾಗಿದೆ. ಈ ಸಂಬಂಧ ಶಾಸಕರು ಮುಖ್ಯಮಂತ್ರಿಗಳ ಜತೆ ಮಾತುಕತೆ ಮಾಡುವ ಸಂದರ್ಭದಲ್ಲಿ 140 ಕೋ. ರೂ. ಒಂದು ಕಾಲೇಜಿಗೆ ಅನುದಾನವಾಗಿ ನೀಡುವುದು ಕಷ್ಟವಾಗುತ್ತದೆ ಎಂಬ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಕೃಷಿ ಪದವಿ ಕರಾವಳಿಯಲ್ಲಿಲ್ಲ
ಬ್ರಹ್ಮಾವರದಲ್ಲಿ ಕೃಷಿ ಡಿಪ್ಲೊಮಾ ಮಹಾವಿದ್ಯಾ ನಿಲಯ ವಿದ್ದು, 25 ವಿದ್ಯಾರ್ಥಿಗಳಿದ್ದಾರೆ. ಕೃಷಿ ವಿಜ್ಞಾನ ದಲ್ಲಿ ಬಿ.ಎಸ್ಸಿ. ಪದವಿ ನೀಡುವ ಸರಕಾರಿ ಕಾಲೇಜು ಕರಾವಳಿಯಲ್ಲಿಲ್ಲ. ಹೀಗಾಗಿ ಬ್ರಹ್ಮಾವರದಲ್ಲಿ ಎಲ್ಲ ವ್ಯವಸ್ಥೆ ಇರುವುದರಿಂದ ಇಲ್ಲಿಯೇ ಪದವಿ ಕಾಲೇಜು ಆರಂಭಿಸಲು ಅನುಮತಿ ನೀಡಬೇಕು ಎಂಬ ಆಗ್ರಹ ಇದೆ. ಸಿಬಂದಿ ಕೊರತೆಯನ್ನು ಈಗಿರುವ ಸಂಶೋಧನ ಸಿಬಂದಿ ಮೂಲಕ ಸರಿದೂಗಿಸಿಕೊಳ್ಳಬಹುದು.

Advertisement

ಸರಕಾರಕ್ಕೆ ಹಲವು ಬಾರಿ ಪ್ರಸ್ತಾವನೆ ಸಲ್ಲಿಸಿದ್ದೇವೆ. ಆದರೆ, ಕೃಷಿ ವಿವಿಯಿಂದ 140 ಕೋಟಿ ರೂ. ಅಗತ್ಯವಿರುವ ಪ್ರಸ್ತಾವನೆ ಕಳುಹಿಸಿರುವ ಮಾಹಿತಿ ಗಮನಕ್ಕೆ ಬಂದಿರಲಿಲ್ಲ. ಹಣಕಾಸಿನ ಕಾರಣದಿಂದ ಅನುಮತಿ ಸಿಕ್ಕಿಲ್ಲ. ಈ ಬಜೆಟ್‌ನಲ್ಲೇ ಅನುಮತಿ ಪಡೆಯಲು ಪ್ರಯತ್ನಿಸಲಾಗುವುದು.
-ಕೆ. ರಘುಪತಿ ಭಟ್‌, ಶಾಸಕ, ಉಡುಪಿ

ಕೃಷಿ ಕಾಲೇಜು ಆರಂಭಿಸಲು ಬೇಕಾದ ಸೌಲಭ್ಯ ಇದೆ. ಸರಕಾರ ಆರಂಭಿಕ ಅನುದಾನದೊಂದಿಗೆ ಅನುಮತಿ ನೀಡಿದರೆ, ಪ್ರವೇಶ ಪ್ರಕ್ರಿಯೆ ಆರಂಭಿಸಿ ತರಗತಿ ನಡೆಸಬಹುದು.
ಡಾ| ಕೆ.ಎಸ್‌. ಕಾಮತ್‌, ಪ್ರಾಂಶುಪಾಲರು,
ಕೃಷಿ ಡಿಪ್ಲೊಮಾ ಮಹಾವಿದ್ಯಾಲಯ.

ಬ್ರಹ್ಮಾವರ ಕೃಷಿ ಕಾಲೇಜು ಆರಂಭಿಸುವ ಕುರಿತ ಪ್ರಸ್ತಾವನೆಯನ್ನು ಈ ಸಮಿತಿಯ ಮುಂದಿಡ ಬೇಕಾಗಿದ್ದು, ಸಮಿತಿಯ ಸಭೆಯ ಶಿಫಾರಸಿನಂತೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು.
ಬಿ.ಸಿ. ಪಾಟೀಲ್‌, ಕೃಷಿ ಸಚಿವ

- ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next