ಬ್ರಹ್ಮಾವರ: ಕರ್ಜೆ ಗ್ರಾ.ಪಂ. ವ್ಯಾಪ್ತಿಯ ಕುರ್ಪಾಡಿಯಲ್ಲಿ ಮಂಗಳವಾರ ರಾತ್ರಿ ಬೀಸಿದ ಸುಂಟರ ಗಾಳಿಗೆ ಸುಮಾರು 36 ಮನೆಗಳಿಗೆ ಹಾನಿಯಾಗಿದೆ.
ಮಾಡಿನ ಹೆಂಚು, ತಗಡುಗಳು ಹಾರಿ ಹೋಗಿವೆ. ಮರಗಳು ಉರುಳಿ ಬಿದ್ದಿವೆ. ವಿದ್ಯುತ್ ಕಂಬಗಳು ಧರಾಶಾಯಿಯಾಗಿವೆ. ದನದ ಕೊಟ್ಟಿಗೆಗೆ ಹಾನಿಯಾಗಿದೆ. ಕೆಲವು ಮನೆಗಳ ಮೇಲ್ಛಾವಣಿ ಸಂಪೂರ್ಣ ಜಖಂಗೊಂಡಿದೆ.
ಗ್ರಾಮದ ಸೋಮಯ್ಯ, ಜಗದೀಶ್, ಶೇಖರ ಸೇರ್ವಗಾರ್, ಲತಾ, ಸರಸ್ವತಿ, ಉಷಾ, ಜಯಪ್ರಕಾಶ್ ಕೆ., ಸಂತೋಷ್ ಸಾವಂತ್, ಶಾಲಿನಿ, ಸುನೀತಾ, ಸದಾನಂದ ನಾಯಕ್, ಯಶೋದಾ, ರೋಹಿಣಿ, ಜಯರಾಮ, ಶುಭಾ, ದುಗ್ಗಪ್ಪ ಸೇರ್ವೆಗಾರ್, ಸುರೇಶ್ ಸೇರ್ವೆಗಾರ್, ಪಾರ್ವತಿ, ವಿಶ್ವನಾಥ, ಆಶಾ, ಪುನೀತ್, ನಾಗೇಶ್ ನಾಯಕ್, ಸುರೇಶ್ ನಾಯಕ್, ರಾಜೀವಿ, ಕಲ್ಯಾಣಿ, ಉಷಾ, ನಾಗೇಶ್, ರಾಘವೇಂದ್ರ, ಕಮಲಾವತಿ ಭಟ್, ಲಲಿತಾ, ಗುಲಾಬಿ, ಮಾಲತಿ, ಲಕ್ಷ್ಮಣ ಸೇರ್ವೆಗಾರ್, ಗೋಪಾಲ ಸಾವಂತ, ಶ್ರೀಮತಿ, ನಾಗೇಶ್ ಸೇರ್ವೆಗಾರ್ ಮತ್ತಿತರರ ಮನೆ, ಕೊಟ್ಟಿಗೆಗಳಿಗೆ ಹಾನಿಯಾಗಿದೆ.
ಏಕಾಏಕಿ ಬೀಸಿದ ಗಾಳಿಗೆ ಹೆಂಚುಗಳು ಮುರಿದು ಬಿದ್ದ ಪರಿಣಾಮ ಪಾತ್ರೆ ಪಗಡಿ, ಉಪಕರಣಗಳ ಸಹಿತ ವಸ್ತುಗಳು ಜಖಂಗೊಂಡಿವೆ.
ಮಧ್ಯರಾತ್ರಿಯ ಅನಿರೀಕ್ಷಿತ ಘಟನೆಯಿಂದ ಜನರು ಕಂಗಾಲಾದರು. ಒಂದೆಡೆ ಗಾಳಿ, ಇನ್ನೊಂದೆಡೆ ಮಳೆಯಿಂದ ಸಂತ್ರಸ್ತರು ತತ್ತರಿಸಿದರು. ಕಂದಾಯ ಇಲಾಖೆ, ಮೆಸ್ಕಾಂ, ಅಗ್ನಿಶಾಮಕ ದಳದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
ಗರಿಷ್ಠ ಪರಿಹಾರಕ್ಕೆ ಸೂಚನೆ: ಮನೆ ಹಾನಿಯಾದ ಸಂತ್ರಸ್ತರಿಗೆ ಗರಿಷ್ಠ ಪರಿಹಾರ ಶೀಘ್ರ ಕಲ್ಪಿಸುವಂತೆ ಶಾಸಕ ಯಶಪಾಲ್ ಸುವರ್ಣ ಅವರು ಜಿಲ್ಲಾಧಿಕಾರಿ ಜತೆಗೆ ಚರ್ಚಿಸಿದ್ದಾರೆ. ಪೂರ್ವ ನಿಗದಿ ಕಾರ್ಯಕ್ರಮದ ಹಿನ್ನಲೆ ಬೆಂಗಳೂರಿನಲ್ಲಿರುವ ಕಾರಣ ಶುಕ್ರವಾರ ಬೆಳಗ್ಗೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.