Advertisement

ಬ್ರಹ್ಮಾವರ ಆರೋಗ್ಯ ಕೇಂದ್ರ: ಡಯಾಲಿಸಿಸ್‌ ಘಟಕ ಸ್ಥಾಪನೆಗೆ ಮನವಿ

10:33 PM May 31, 2020 | Sriram |

ಉಡುಪಿ: ಜಿಲ್ಲೆಯ ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಚಿಕಿತ್ಸೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್‌ ಕೇಂದ್ರ ಪ್ರಾರಂಭಿಸುವಂತೆ ಜಿಲ್ಲಾ ಆರೋಗ್ಯ ಇಲಾಖೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

Advertisement

ಸರಕಾರಿ ಆಸ್ಪತ್ರೆಯಲ್ಲಿನ ಡಯಾಲಿಸಿಸ್‌ ಕೇಂದ್ರಗಳು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ವರದಾನವಾಗಿವೆ. ಪ್ರಸ್ತುತ ಡಯಾಲಿಸಿಸ್‌ಗಾಗಿಯೇ ಸರಕಾರಿ ಆಸ್ಪತ್ರೆಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಜಿಲ್ಲಾಸ್ಪತ್ರೆಯ 10 ಬೆಡ್‌ಗಳ ಡಯಾಲಿಸಿಸ್‌ ಕೇಂದ್ರ ಹಾಗೂ ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿ 3 ಬೆಡ್‌, ಕಾರ್ಕಳ ಆಸ್ಪತ್ರೆಯಲ್ಲಿ 2 ಬೆಡ್‌ಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 15 ಬೆಡ್‌ಗಳಲ್ಲಿ ಡಯಾಲಿಸಿಸ್‌ ಮಾಡಲಾಗುತ್ತಿದೆ.

ವಾರಕ್ಕೆ 6,000 ರೂ.
ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವವರು ವಾರಕ್ಕೆ ಎರಡರಿಂದ ಮೂರು ಬಾರಿ ಡಯಾಲಿಸಿಸ್‌ ಮಾಡಿಸಿಕೊಳ್ಳಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಪ್ರತೀ ಡಯಾಲಿಸಿಸ್‌ಗೆ ಸುಮಾರು 1,500 ದಿಂದ 2,000ರೂ. ವೆಚ್ಚವಾಗುತ್ತದೆ. ವಾರಕ್ಕೆ 6,000ರೂ.ಗಳಂತೆ ತಿಂಗಳಿಗೆ 24,000ರೂ. ಭರಿಸುವುದು ಬಡ ಕುಟುಂಬಕ್ಕೆ ದೊಡ್ಡ ಹೊರೆಯಾಗುತ್ತದೆ.

ಹೆಚ್ಚುವರಿ 5 ಬೆಡ್‌
ಜಿಲ್ಲೆಯಲ್ಲಿ ಹೆಚ್ಚುವರಿಯಾಗಿ 63 ರೋಗಿಗಳಿಗೆ ಡಯಾಲಿಸಿಸ್‌ ಅಗತ್ಯವಿದ್ದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಗೆ ಜಿಲ್ಲೆಗೆ 5 ಬೆಡ್‌ಗಳ ಡಯಾಲಿಸಿಸ್‌ ಕೇಂದ್ರ ನೀಡಲು ಮುಂದಾಗಿದೆ. ಜಿಲ್ಲಾಸ್ಪತ್ರೆ ಆವರಣದಲ್ಲಿ ಜಾಗದ ಕೊರತೆಯಿರುವುದರಿಂದ ಹೊಸದಾಗಿ ನಿರ್ಮಿಸಿದ ಬ್ರಹ್ಮಾವರ ಸಮುದಾಯ ಆಸ್ಪತ್ರೆಗೆ 5 ಬೆಡ್‌ಗಳ ಡಯಾಲಿಸ್‌ ಕೇಂದ್ರ ಪ್ರಾರಂಭಿಸುವಂತೆ ಜಿಲ್ಲಾ ಆರೋಗ್ಯ ಇಲಾಖೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಕೇಂದ್ರದ ನಿರ್ವಹಣೆ
ರಾಜ್ಯ ಸರಕಾರ ಪಿಪಿಪಿ ಮಾದರಿಯಲ್ಲಿ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಕೇಂದ್ರವನ್ನು ಸ್ಥಾಪಿಸಿದ್ದು, ಘಟಕದ ನಿರ್ವಹಣೆ ಹೊಣೆಯನ್ನು ಬಿಆರ್‌ಎಸ್‌ ಆರೋಗ್ಯ ಮತ್ತು ಸಂಶೋಧನ ಸಂಸ್ಥೆಗೆ ಗುತ್ತಿಗೆ ನೀಡಿದೆ. ಜಿಲ್ಲೆಯಲ್ಲಿ 3 ವರ್ಷಗಳಿಂದ ಡಯಾಲಿಸಿಸ್‌ ಕೇಂದ್ರ ಕಾರ್ಯಾಚರಿಸುತ್ತಿದೆ. ಒಬ್ಬ ವ್ಯಕ್ತಿಗೆ ಡಯಾಲಿಸಿಸ್‌ ಮಾಡಲು 4 ಗಂಟೆ ಬೇಕಾಗುತ್ತದೆ. ಬೆಳಗ್ಗೆ 7ರಿಂದ ರಾತ್ರಿ 9ರ ವರೆಗೆ ಘಟಕ ಕಾರ್ಯನಿರ್ವಹಿಸುತ್ತಿದೆ.

Advertisement

ಬೇಡಿಕೆ ಹೆಚ್ಚಳ- ಹೊಸ ಕೇಂದ್ರಕ್ಕೆ ಮನವಿ
ಉಡುಪಿ ಜಿಲ್ಲಾಸ್ಪತ್ರೆಯಲ್ಲಿ 10 ಬೆಡ್‌ಗಳ‌ ಡಯಾಲಿಸಿಸ್‌ ಕೇಂದ್ರದಲ್ಲಿ 90 ಜನರು ತಿಂಗಳಿಗೆ 800 ಸರ್ಕಲ್‌ಗ‌ಳ‌ಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ ಇನ್ನೂ 50 ಮಂದಿ ವೈಟಿಂಗ್‌ ಲಿಸ್ಟ್‌ ನಲ್ಲಿದ್ದಾರೆ. ಕಾರ್ಕಳದ ಸರಕಾರಿ ಆಸ್ಪತ್ರೆಯಲ್ಲಿ 2 ಬೆಡ್‌ಗಳ‌ ಡಯಾಲಿಸಿಸ್‌ ಕೇಂದ್ರವಿದ್ದು, ಇಲ್ಲಿ 18 ಜನರಿಗೆ ಡಯಾಲಿಸಿಸ್‌ ಮಾಡಲಾಗುತ್ತಿದ್ದು, 6 ಜನರು ವೈಟಿಂಗ್‌ ಲಿಸ್ಟ್‌ನಲ್ಲಿ ಇದ್ದಾರೆ. ಕುಂದಾಪುರದಲ್ಲಿ 5 ಬೆಡ್‌ಗಳ ಡಯಾಲಿಸಿಸ್‌ ಕೇಂದ್ರವಿದ್ದು, 43 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, 7 ಜನರು ವೈಟಿಂಗ್‌ ಲೀಸ್ಟ್‌ನಲ್ಲಿದ್ದಾರೆ.

ಸರಕಾರಕ್ಕೆ ಮನವಿ ಸಲ್ಲಿಕೆ
ಜಿಲ್ಲಾಸ್ಪತ್ರೆಯಲ್ಲಿ ಈಗಾಗಲೇ 90 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 50 ಮಂದಿ ನಿರೀಕ್ಷಣಾ ಪಟ್ಟಿಯಲ್ಲಿದ್ದಾರೆ. ಬ್ರಹ್ಮಾವರ ನೂತನ ಸಮುದಾಯ ಆರೋಗ್ಯ ಕೇಂದ್ರದಲ್ಲಿ 5 ಬೆಡ್‌ಗಳ ಘಟಕ ತೆರೆಯುವಂತೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ.
– ಡಾ| ಮಧುಸೂದನ ನಾಯಕ್‌,
ಸರ್ಜನ್‌, ಜಿಲ್ಲಾಸ್ಪತ್ರೆ ಉಡುಪಿ

 

Advertisement

Udayavani is now on Telegram. Click here to join our channel and stay updated with the latest news.

Next