Advertisement

ಚರಂಡಿ ದುರಸ್ತಿಗೊಳಿಸದಿದ್ದರೆ ಬ್ರಹ್ಮಾವರ ನಗರ ನರಕ

06:10 AM May 29, 2018 | Team Udayavani |

ಬ್ರಹ್ಮಾವರ: ಬ್ರಹ್ಮಾವರ ಪೇಟೆ ಎತ್ತರದ ಪ್ರದೇಶದಲ್ಲಿದ್ದರೂ ರಾ.ಹೆ. ಚತುಷ್ಪಥ ಕಾಮಗಾರಿಯ ಅಸಮರ್ಪಕ ಚರಂಡಿಯಿಂದ ಕೃತಕ ನೆರೆ ಪರಿಸ್ಥಿತಿ ಎದುರಾಗುತ್ತಿದೆ.

Advertisement

ಬಸ್‌ಸ್ಟಾಂಡ್‌ ಹತ್ತಿರವಿರುವ  ಸರ್ವಿಸ್‌ ರಸ್ತೆ ಹೊಳೆಯಂತಾಗುತ್ತದೆ. ಚಾಂತಾರು, ನಂದಿಗುಡ್ಡೆ ಮೊದಲಾದ ಪ್ರದೇಶಗಳಲ್ಲಿ ಬಿದ್ದ ನೀರು ಚರ್ಚ್‌ ಎದುರಿನ ಮೋರಿ ಮೂಲಕ ಸಾಗಬೇಕು. ಆದರೆ ಈ ಭಾಗದಲ್ಲಿ ನೀರು ಸಮರ್ಪಕವಾಗಿ ಹರಿದು ಹೋಗದೆ ಒಂದೇ ಮಳೆಗೆ ನೆರೆ ಪ್ರದೇಶವಾಗುತ್ತಿದೆ. ವಾಹನ ಸವಾರರು ತೀವ್ರ ಕಷ್ಟ ಅನುಭವಿಸುತ್ತಿದ್ದಾರೆ.ಉಳಿದಂತೆ ಇಂದಿರಾನಗರ, ಸಾಲಿಕೇರಿ ಯಲ್ಲಿ ಚರಂಡಿ ನಿರ್ವಹಣೆಯ ಆವಶ್ಯಕತೆ ಇದೆ.

ಹಂದಾಡಿ ಗ್ರಾ.ಪಂ.
ಗ್ರಾ.ಪಂ. ವ್ಯಾಪ್ತಿಯ ಆಕಾಶವಾಣಿಯಿಂದ ದುರ್ಗಾ ಸಭಾಗೃಹದವರೆಗೆ ಚರಂಡಿ ಸಂಪೂರ್ಣ ಮುಚ್ಚಿದೆ. ಮಟಪಾಡಿಬೈಲು ತೋಡು, ಹಂದಾಡಿ ಮುಖ್ಯ ತೋಡು ಹೂಳು ತುಂಬಿಕೊಂಡು ಕೃಷಿ ಭೂಮಿಗೆ ನೀರು ನುಗ್ಗುತ್ತಿದೆ.
ಇನ್ನು ಹೃದಯ ಭಾಗ ಗಾಂಧಿಮೈದಾನ ದಲ್ಲಿ ಮಳೆಗಾಲದಲ್ಲಿ ಸಂಚರಿಸಲು ಸಾಧ್ಯವೇ ಇಲ್ಲದ ಪರಿಸ್ಥಿತಿ. ಗಾಂಧಿಮೈದಾನ ಅಯ್ಯಪ್ಪ ಸ್ವಾಮಿ ದೇವಸ್ಥಾನ ಎದುರಿನ ಮುಖ್ಯವಾದ ತೋಡು ನಿರ್ವಹಣೆ ಇಲ್ಲದೆ ಮುಚ್ಚುತ್ತಿದೆ. ಕುಮ್ರಗೋಡಿನಲ್ಲಿ ರಾ.ಹೆ. ಅಸಮರ್ಪಕ ಚರಂಡಿ ಕಾಮಗಾರಿಯಿಂದ ತೀವ್ರ ಸಮಸ್ಯೆಯಾಗಿದೆ. ಕುಮ್ರಗೋಡು ಶಾಲೆ, ಬೇಳೂರುಜಡ್ಡು ಪರಿಸರದಲ್ಲೂ ಚರಂಡಿ ನಿರ್ಮಾಣದ ಬೇಡಿಕೆ ಇದೆ.ಮಟಪಾಡಿ ಶೆಟ್ರಕುದ್ರಿನಿಂದ ನೀರು ಹರಿದು ಹೋಗಲು ಬಾರಕೂರು ರಸ್ತೆ ಅಡಿ ಸುಮಾರು 50 ವರ್ಷಗಳ ಹಿಂದೆ ಅಳವಡಿಸಿದ ಮೋರಿ ಸಂಪೂರ್ಣ ಕುಸಿದಿದೆ. ಜತೆಗೆ ಭರಣಗಳನ್ನು ಮುಚ್ಚಿರುವುದರಿಂದ ಸಮಸ್ಯೆ ಉಲ½ಣಿಸಿದೆ.

ಚಾಂತಾರು ಗ್ರಾ.ಪಂ.
ಬ್ರಹ್ಮಾವರದ ಕುಂಜಾಲು ಜಂಕ್ಷನ್‌ನಿಂದ ನಂದಿಗುಡ್ಡೆ ಕ್ರಾಸ್‌ತನಕ ಚರಂಡಿ ತುಂಬಿ ಹೋಗಿದೆ. ದೇವುಬೈಲು, ಮೂಡುಬೆಟ್ಟು, ಸುಮತಿ ಫಾರಂ ಬಳಿ, ವಿದ್ಯಾನಗರ ಮೊದಲಾದೆಡೆ ಸಮರ್ಪಕ ಚರಂಡಿಯ ಬೇಡಿಕೆ ಇದೆ. ಲಿಟ್ಲರಾಕ್‌ ಶಾಲೆಯಿಂದ ಸ್ವಲ್ಪ ಹಿಂದಿನ ರೈಲ್ವೇ ಅಂಡರ್‌ಪಾಸ್‌ ಬಳಿ ಶಾಶ್ವತ ಪರಿಹಾರ ಬೇಕಿದೆ. ಹೇರೂರು ಶಾಲೆ, ದೇವಸ್ಥಾನಬೆಟ್ಟು ಪರಿಸರ ತುರ್ತು ನಿರ್ವಹಣೆ ಅವಶ್ಯ.ಬಾರಕೂರಿನಲ್ಲಿ ಕಾಲೇಜು ಕ್ರಾಸ್‌ನಿಂದ ಆರೋಗ್ಯ ಕೇಂದ್ರದ ವರೆಗೆ ರಸ್ತೆಯೇ ಚರಂಡಿಯಾಗಿದೆ.

ಹನೆಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಮಾಸ್ತಿನಗರ ಜನತಾ ಕಾಲೋನಿ, ರಂಗನಕೆರೆ ನವಗ್ರಾಮ, ಮೂಡುತೋಟ ರಸ್ತೆ, ನಲ್ಕುದ್ರು ದಾರಿ, ಕೂರಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ರಸ್ತೆಯಲ್ಲಿ ಚರಂಡಿ ಕಾಮಗಾರಿಯ ಅಗತ್ಯವಿದೆ. ಕಂಪ ತೋಡು, ಮೂಡುತೋಟ-ನಲ್ಕುದ್ರು ತೋಡು ಹೂಳೆತ್ತಿದರೆ ಕೃಷಿ ಭೂಮಿಗೆ ಅನುಕೂಲವಾಗಲಿದೆ.

Advertisement

ಉಪ್ಪೂರು ಗ್ರಾ.ಪಂ.ನ ಜಾತಬೆಟ್ಟು ರಸ್ತೆ, ತೆಂಕಬೆಟ್ಟು ದೇವಸ್ಥಾನ ರಸ್ತೆ ಇಕ್ಕೆಲಗಳಲ್ಲಿ ಚರಂಡಿ ದುರಸ್ತಿಯಾಗಬೇಕಿದೆ.
ಕುಕ್ಕೆಹಳ್ಳಿ ಪೇಟೆಯಲ್ಲಿ ಚರಂಡಿ ನಿರ್ವಹಣೆ ಅತೀ ಅವಶ್ಯ. ಹಾವಂಜೆ ಪೇಟೆ, 5 ಸೆಂಟ್ಸ್‌ ವಠಾರ ರಸ್ತೆ ವಿಸ್ತರಿಸಲಾಗಿದೆ ಆದರೆ ಚರಂಡಿ ನಿರ್ಮಿಸದ ಪರಿಣಾಮ ತೀವ್ರ ಸಮಸ್ಯೆ ಇದೆ. ಕೆಲವು ಕಡೆ ಮನೆ ಅಂಗಳಕ್ಕೆ ನೀರು ನುಗ್ಗುತ್ತಿದೆ. ಉಜಂಗಾರು, ಇರ್ಮಾಡಿ ತೋಡು ಹೂಳೆತ್ತಿ ಬದಿಕಟ್ಟುವ ಅಗತ್ಯವಿದೆ.

ತತ್‌ಕ್ಷಣ ಕ್ರಮ
ಬ್ರಹ್ಮಾವರ-ಹೆಬ್ರಿ ಮುಖ್ಯರಸ್ತೆಯ ಚಾಂತಾರು ರೈಲ್ವೇ ಅಂಡರ್‌ಪಾಸ್‌ ಬಳಿ ಚರಂಡಿ ಸಮಸ್ಯೆ ಕುರಿತು ರೈಲ್ವೇ ಇಲಾಖೆಗೆ ಮನವಿ ಮಾಡಲಾಗಿತ್ತು. ಆದರೆ ಯಾವುದೇ ಸ್ಪಂದನೆ ದೊರೆತಿಲ್ಲ. ಆದ್ದರಿಂದ ಕ್ರಿಯಾಯೋಜನೆಯಲ್ಲಿ ಇಟ್ಟು, ತತ್‌ಕ್ಷಣ ಕ್ರಮ ಕೈಗೊಳ್ಳಲಾಗುವುದು.
– ಡಿ.ವಿ.ಹೆಗಡೆ, ಪಿಡಬ್ಲ್ಯುಡಿ  
ಸ. ಕಾರ್ಯವಾಹಕ ಎಂಜಿನಿಯರ್‌

ಅಗತ್ಯ ಇರುವಲ್ಲಿ ಕಾಮಗಾರಿ
ನೀತಿ ಸಂಹಿತೆ ಮುಗಿದ ತತ್‌ಕ್ಷಣ ಸಭೆ ಕರೆದು ಪ್ರಸ್ತಾವನೆ ಇಡುತ್ತೇವೆ. ಅಗತ್ಯ ಇರುವಲ್ಲಿ ತುರ್ತು ಕಾಮಗಾರಿ ಕೈಗೊಳ್ಳುತ್ತೇವೆ.
– ಪ್ರತಿಮಾ ಶೆಟ್ಟಿ , 
ಅಧ್ಯಕ್ಷರು ಹಂದಾಡಿ ಗ್ರಾ.ಪಂ.

– ಪ್ರವೀಣ್‌ ಮುದ್ದೂರು

Advertisement

Udayavani is now on Telegram. Click here to join our channel and stay updated with the latest news.

Next