ಪಡುಬಿದ್ರಿ: ಪಡುಬಿದ್ರಿಯ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿನ ಯಾವುದೇ ಸೇವೆಗಳಿಗೆ ಬೆಲೆ ಕಟ್ಟಲಾಗದು. ಇಲ್ಲಿನ ಪಾತ್ರಿಯಾಗಿ ಬಹಳ ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಪಿ.ಎಂ.ಲಕ್ಷ್ಮೀನಾರಾಯಣ ರಾಯರ ಸೇವೆ ಅನನ್ಯ ಎಂದು ಉಡುಪಿ ಶ್ರೀಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಹೇಳಿದರು.
ಅವರು ಪಡುಬಿದ್ರಿಯ ಶ್ರೀ ಖಡ್ಗೇಶ್ವರಿ ಜ್ಞಾನಮಂದಿರದಲ್ಲಿ ಮಾ. 11ರಂದು ಸನ್ನಿಧಾನದ ಪಾತ್ರಿಗಳಾಗಿ ಸುಮಾರು 41 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಪಿ.ಎಂ. ಲಕ್ಷ್ಮೀನಾರಾಯಣ ರಾಯರಿಗೆ ಶ್ರೀ ಖಡ್ಗೇಶ್ವರಿ ವನದುರ್ಗಾ ಟ್ರಸ್ಟ್ ಮತ್ತು ಬೇಂಗ್ರೆ ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರು ಆಯೋಜಿಸಿದ್ದ ಸಮ್ಮಾನ ಸಮಾರಂಭದಲ್ಲಿ ಆಶೀರ್ವಚಿಸಿದರು.
ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ವೇ| ವಿ| ಪಂಜ ಭಾಸ್ಕರ ಭಟ್ ಶುಭ ಹಾರೈಸಿದರು. ಜಾನಪದ ವಿದ್ವಾಂಸ ಕೆ.ಎಲ್. ಕುಂಡಂತಾಯ ಅವರು ಮಾನಪತ್ರ ವಾಚಿಸಿದರು. ಲಕ್ಷ್ಮೀನಾರಾಯಣ ರಾಯರನ್ನು ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಸಮ್ಮಾನಿಸಿ ಗೌರವಿಸಿದರು.
ಇದೇ ಸಂದರ್ಭ ಶ್ರೀ ಖಡ್ಗೇಶ್ವರಿ ಜ್ಞಾನಮಂದಿರದಲ್ಲಿನ ಫ್ಲೋರಿಂಗ್ ಕಾರ್ಯದಲ್ಲಿ ಸಹಕರಿಸಿದ ದಾನಿ ದುರ್ಗಾಪ್ರಸಾದ್ ಅವರನ್ನು ಶ್ರೀ ಗೌರವಿಸಿದರು.
ಗುರಿಕಾರರಾದ ಕೊರ್ನಾಯ ಶ್ರೀಪತಿ ರಾವ್, ಕೊರ್ನಾಯ ಪದ್ಮನಾಭ ರಾವ್, ಬಾಲಪ್ಪ ಶ್ರೀನಿವಾಸ ರಾವ್, ಮುರುಡಿ ಮೋಹನ ರಾವ್, ಸನ್ನಿಧಾನದ ಪಾತ್ರಿಗಳಾದ ಪಿ.ಜಿ. ನಾರಾಯಣ ರಾವ್, ಸುರೇಶ ರಾವ್, ಅರ್ಚಕರಾದ ರಾಮಕೃಷ್ಣ ಆಚಾರ್ಯ, ಕೇಶವ ಆಚಾರ್ಯ, ರಘುಪತಿ ಆಚಾರ್ಯ, ಶ್ರೀ ವನದುರ್ಗಾ ಟ್ರಸ್ಟ್ ಕೋಶಾಧಿಕಾರಿ ವೈ. ಸುರೇಶ ರಾವ್, ಟ್ರಸ್ಟ್ ಸದಸ್ಯರು ಉಪಸ್ಥಿತರಿದ್ದರು.
ಶ್ರೀ ವನದುರ್ಗಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ವೈ. ಎನ್. ರಾಮಚಂದ್ರ ರಾವ್ ಸ್ವಾಗತಿಸಿ, ವಂದಿಸಿದರು. ಸಮಾರಂಭಕ್ಕೂ ಮೊದಲು ಆಗಮಿಸಿದ ಶ್ರೀ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಶ್ರೀ ಖಡ್ಗೇಶ್ವರಿ ಸನ್ನಿಧಾನಕ್ಕೆ ತೆರಳಿ ಪ್ರಸಾದ ಸ್ವೀಕರಿಸಿದ್ದರು.