Advertisement

ವಿಶ್ವಬ್ರಾತೃತ್ವದ ಕಲ್ಪನೆಯ ಸಾಕಾರಮೂರ್ತಿ ಬ್ರಹ್ಮಶ್ರೀ ನಾರಾಯಣ ಗುರುಗಳು

04:41 PM Sep 10, 2022 | Team Udayavani |

ಈ ಜಗದ ಮಾನವರೆಲ್ಲರೂ ವಿಶ್ವ ಬಂಧುಗಳೆಂದು ಎಲ್ಲ ಧರ್ಮ ಗ್ರಂಥಗಳು ಸಾರುತ್ತಿದೆ. ಹಿಂದಿನ ದಿನಗಳಲ್ಲಿ ಜಾತಿ ವ್ಯವಸ್ಥೆಯ ಕದಂಬ ಬಾಹುಗಳು ಮನುಷ್ಯ ಕುಲಕ್ಕೆ ಶಾಪವಾಗಿ ಪರಿಣಮಿಸಿತ್ತು. ದು:ಖದ ಮಡುವಿನಲ್ಲಿ ಜೀವನ ಸಾಗಿಸುತ್ತಿದ್ದ ಆವ್ಯವಸ್ಥೆಯನ್ನು ಎದುರಿಸಲಾಗದೆ ಆಸಹಾಯಕತೆಯಿಂದ ಇದ್ದ ಲಕ್ಷಾಂತರ ಶೂದ್ರ ವರ್ಗದವರ ಬಾಳಿಗೆ ಭರವಸೆಯ ಬೆಳಕನ್ನು ಚೆಲ್ಲಿದ ಸಮಾಜ ಸುಧಾರಕ, ಧಾರ್ಶನಿಕ, ವಿಶ್ವಬ್ರಾತೃತ್ವದ ಕಲ್ಪನೆಯ ಸಾಕಾರಮೂರ್ತಿ ಬ್ರಹ್ಮಶ್ರೀ ನಾರಾಯಣಗುರುಗಳು.

Advertisement

ಒಂದೊಂದು ಕಾಲ ಘಟ್ಟದಲ್ಲಿ ವಿಶ್ವದ ಜನರು ಸಮಸ್ಯೆಯ ಕೂಪದಲ್ಲಿ ತೊಳಲುತ್ತಿದ್ದಾಗ ಯುಗಪುರುಷರು ಜನ್ಮತಾಳಿ ಸಾಂತ್ವನದ ಮಾತುಗಳನ್ನಾಡುತ್ತಾ ಬಂದಿದ್ದಾರೆ. ಅದರಂತೆ ಕೇರಳ ರಾಜ್ಯದಲ್ಲಿ ಜಾತಿಕಟ್ಟುಗಳ ಅಸ್ಪೃಶ್ಯತೆಯ ಕೂಪದಲ್ಲಿ ಇಳವರು, ಪರಯ್ಯರು, ಪುಲಯ್ಯರು ನರಳುತ್ತಿದ್ದ ಕಾಲ. ಕೊಡೆ, ಆಭರಣ ಧರಿಸಲು ಅವಕಾಶ ಇರದೆ ಶರೀರದ ಮೆಲಾºಗದ ವಸ್ತ್ರವನ್ನು ತೂಕಲು ಆಗದ ಪರಿಸ್ಥಿತಿ. ಈ ಪ್ರಪಂಚದಲ್ಲಿ ಪ್ರತಿಯೊಬ್ಬರೂ ಒಂದೊಂದು ಕಾರಣಕ್ಕೆ ಜನ್ಮ
ತಾಳಿದ್ದಾರೆ. ಗುರುಗಳು ಸಂಸಾರದಿಂದ ಮುಕ್ತಗೊಂಡು ಸನ್ಯಾಸ ದೀಕ್ಷೆ ಸ್ವೀಕರಿಸಿ ಕಾಡು-ಮೇಡುಗಳನ್ನು ಅಲೆದು ಮರುತ್ವಮಲೆಯ ತಿಲ್ಲಂಪಟ್ಟ ಗುಹೆಯಲ್ಲಿ ಐದು ವರ್ಷಗಳ ಕಾಲ ದೀರ್ಘ‌ ತಪಸ್ಸು ಮಾಡಿ ಬ್ರಹ್ಮ ಸಾಕ್ಷಾತ್ಕಾರವನ್ನು ಪಡೆದು ಬ್ರಹ್ಮಶ್ರೀಗಳಾದರು.

ಶೂದ್ರ ವರ್ಗದವರ ಬದುಕಿಗೆ ಹೊಸ ಆಯಾಮ ನೀಡಿದ ದಾರ್ಶನಿಕ ತಮ್ಮ ಜೀವಿತ ಕಾಲವನ್ನು ಸಮಾಜ ಸುಧಾರಣೆಯೆಡೆಗೆ ತೊಡಗಿಸಿಕೊಂಡ ಗುರುಗಳು ಹಿಂದುಳಿದ ವರ್ಗ, ಜಾತಿ, ಧರ್ಮ, ದೇವರ ಹೆಸರಿನಲ್ಲಿ ಶೋಷಿತರಾಗಿದ್ದ ಜನರ ಉದ್ಧಾರಕ್ಕೆ ಸಮಾಜ ಪರಿವರ್ತನೆಯ ಮೂಲಕ ಅಹಿಂಸಾತ್ಮಕ ಕ್ರಾಂತಿಯನ್ನು ಸಂಘಟಿಸಿದರು. 1886ರಲ್ಲಿ ಶಿವರಾತ್ರಿಯ ದಿನದಂದು ನೆಯ್ನಾರೆ ನದಿಯಲ್ಲಿ ಮುಳುಗಿ ಶಿವನ ಲಿಂಗದ ರೂಪದ ಶಿಲೆಯನ್ನು ತಂದು ಅರಭೀಪುರಂನಲ್ಲಿ ಪ್ರತಿಷ್ಠಾಪಿಸಿ ನಿಮ್ಮದೇ ದೇವಸ್ಥಾನ, ಇದನ್ನು ಕಟ್ಟಿಕೊಳ್ಳಲು ನೀವು ಸಮಾರ್ಥರೆಂದು ಸಂದೇಶ ಸಾರುವ ಮೂಲಕ ನಿಮ್ಮ ವರ್ಗದವರ ಬದುಕಿಗೆ ಹೊಸ ಆಯಾಮ ನೀಡಿದ ದಾರ್ಶನಿಕರು. ದೇವಾಲಯ ಎಲ್ಲರಿಗೂ ಮುಕ್ತವಾಗಿರಬೇಕು, ದೇಹ, ಮನಸ್ಸು ಶುದ್ಧವಾಗಿರಬೇಕು ಎಂಬ ತತ್ವ ಚಿಂತನೆಯನ್ನು ಮುಕ್ತವಾಗಿರಿಸಿದರು.

ಸಮಾಜ ಸುಧಾರಣೆಗೆ ಪಣ ತೊಟ್ಟವರು
ಜಾತೀಯತೆಯ ಪಿಡುಗನ್ನು ದೂರ ಮಾಡುವ ಸಂಕಲ್ಪದೊಂದಿಗೆ ಮೂಢನಂಬಿಕೆಗಳು, ಅನಗತ್ಯ ಸಂಪ್ರದಾಯಗಳು, ಧರ್ಮ, ದೇವರ ಹೆಸರಿನಲ್ಲಿ ಮಾಡಲಾಗುತ್ತಿದ್ದ ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಕರೆ ಕೊಟ್ಟರು. ಮಹಿಳೆಯರ ಶೋಷಣೆಗೆ ಮುಕ್ತಿ ಹಾಡಿದ ಗುರುಗಳು ಸರಳ ವಿವಾಹಕ್ಕೆ ಕರೆ ನೀಡಿದರು. ಬಾಲ್ಯ ವಿವಾಹ, ಬಹುಪತ್ನಿತ್ವ, ಅಂಧಕರುಣೆಯ ವಿರುದ್ಧ ಜಾಗೃತಿ ಮೂಡಿಸಿದ ಚಿಂತಕರು. ಸ್ತ್ರಿ-ಪುರುಷ ಸಮಾನ ಶಿಕ್ಷಣದ ಅಗತ್ಯತೆ ಬಗ್ಗೆ ತಿಳಿಸಿ ಹಲವಾರು ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು. 42ಕ್ಕೂ ಹೆಚ್ಚು ರಾತ್ರಿ ಶಾಲೆಗಳು, ಪ್ರಾರ್ಥನ ಮಂದಿರಗಳನ್ನು ನಿರ್ಮಿಸಿದರು.

ಸಮಾಜಕ್ಕೆ ಸತ್ಯ ಸಂದೇಶ ಸಾರಿದ ಮಹನೀಯರು
ವಿದ್ಯೆಯಿಂದ ಸ್ವತಂತ್ರರಾಗಿರಿ, ಒಗ್ಗಟ್ಟಿನಿಂದ ಕರ್ತವ್ಯಪ್ರಜ್ಞೆ ಹೊಂದಿರಿ, ನಮಗಿರುವುದು ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ತತ್ವವನ್ನು ಇಡೀ ಜಗತ್ತಿಗೆ ಸಾರಿದ ಮಹಾನುಭಾವ ಗುರುಗಳು. ಸಾಮಾಜಿಕ ಶೋಷಣೆ, ಜಾತಿ-ಮತ ಅವ್ಯವಸ್ಥೆ, ಮೌಡ್ಯಗಳ ವಿರುದ್ಧ ಶಾಂತಿಯುತವಾಗಿ ಜನರನ್ನು ಸಂಘಟಿಸಿದ್ದರು. ಶೋಷಿತರ ಬದುಕಿಗೆ ಜ್ಞಾನವನ್ನು ನೀಡಿದ ಸಮಾಜ ಸುಧಾರಕರು. ತಿಳುವಳಿಕೆ ಇಲ್ಲದವರನ್ನು ಕರುಣೆಯಿಂದ ನೋಡಬೇಕು. ದ್ವೇಷ
ಭಾವನೆ ಮಾಡಬಾರದು ಎಂಬ ಸತ್ಯ ಸಂದೇಶವನ್ನು ಸಾರಿದರು.

Advertisement

ನಿಮ್ಮ ವರ್ಗದವರಿಗೆ ದೇವಾಲಯವನ್ನು ಕಟ್ಟಿ ಕೊಟ್ಟ ಅವರ ಆತ್ಮ ಬಲಕ್ಕೆ ಬೇರೂರಿದವರು ದೇವರ ಭಯವೇ ಜ್ಞಾನೋದಯ, ಭಕ್ತಿಯಿಂದ ಜ್ಞಾನ, ಜ್ಞಾನದಿಂದ ಸಂಘಟನೆ, ಸಂಘಟನೆಯಿಂದ ಕಾರ್ಯ ಸಾಧನೆ ಇದರಿಂದ ಸ್ವಾತಂತ್ರ್ಯ ಎಂಬ ಘೋಷಣೆಯನ್ನು ಮೊಳಗಿಸಿದ ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಗಳು. ಶಿಕ್ಷಣ ಸಂಘಟನೆಗಳು, ಸ್ವಾತಂತ್ರ ಪರಿಕಲ್ಪನೆಗಳು ಜಗತ್ತಿಗೆ ಕೊಟ್ಟ ಸಂದೇಶವಾಗಿದೆ.

ದಯಾನಂದ ಡಿ., ಉಪನ್ಯಾಸಕರು,
ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next