ಬಂಟ್ವಾಳ : ಪ್ರಪಂಚದ ಆದಿಯಿಂದಲೇ ಸನಾತನ ಧರ್ಮವು ಪ್ರಸ್ತಾಪದಲ್ಲಿ ಇತ್ತು. ಕಾಲಕ್ರಮೇಣ ಮಸುಕಾಗಿದ್ದ ಅದರ ನಿಜ ಸತ್ವವನ್ನು ಈಶ್ವರೀಯ ವಿದ್ಯಾಲಯ ಸಮರ್ಪಕವಾಗಿ ಪ್ರಪಂಚದ ಮುಂದೆ ಪ್ರಸ್ತುತಪಡಿಸಿದೆ. ಶಿವರಾತ್ರಿಯ ಸಂದರ್ಭದಲ್ಲಿ ಮನಸ್ಸಿನ ಕಲ್ಮಶವನ್ನು ತೆಗೆದುಹಾಕಿ ಈಶ್ವರೀಯ ತತ್ವವನ್ನು ಅಳವಡಿಸಿಕೊಂಡು ಜೀವನ ಪೂರ್ತಿ ಸದ್ಗುಣವಂತರಾಗುವ ಸಂಕಲ್ಪ ಮಾಡಬೇಕು ಎಂದು ಬಂಟ್ವಾಳ ಸರಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಸರಸ್ವತಿ ಹೇಳಿದರು.
ಅವರು ಫೆ. 24ರಂದು ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರಿಯ ವಿಶ್ವವಿದ್ಯಾಲಯ ಆಶ್ರಯದ ಶಿವಜ್ಯೋತಿ ಭವನ ಬಿ.ಸಿ. ರೋಡ್‌ನಲ್ಲಿ ನಡೆದ ಶಿವರಾತ್ರಿ ಜಾಗರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿ ಎಸ್‌ವಿಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾಗಿರಿ ಮುಖ್ಯಶಿಕ್ಷಕ ಸೋಮನಾಥ ಭಟ್ ಮಾತನಾಡಿ, ಮಾನವನಲ್ಲಿ ಆರು ಬಗೆಯ ದೌರ್ಬಲ್ಯಗಳು ಇವೆ. ಅದನ್ನು ಅರಿಷಡ್‌ವೈರಿ ಎಂದು ಋಷಿಮುನಿಗಳು ವಿಶ್ಲೇಷಿಸಿದ್ದಾರೆ. ನಾವು ದೌರ್ಬಲ್ಯಗಳನ್ನು ಮೀರಿ ನಿಲ್ಲಬೇಕು ಎಂದು ಹೇಳಿದರು.
ಒಳ್ಳೆಯತನಕ್ಕೆ ಒಳ್ಳೆಯ ಫಲಿತಾಂಶ
ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲಾ ಮುಖ್ಯಶಿಕ್ಷಕ ಪರಮೇಶ್ವರ ಹೆಗ್ಡೆ ಮಾತನಾಡಿ, ನಾವು ಒಳ್ಳೆಯತನ ಪ್ರದರ್ಶಿಸಿದಾಗ ಇನ್ನೊಬ್ಬ ಅದನ್ನು ಸ್ವೀಕರಿಸಬಹುದು. ಸ್ವೀಕರಿಸದೇ ಇರಬಹುದು. ನಮ್ಮ ಒಳ್ಳೆಯ ತನಕ್ಕೆ ಒಮ್ಮೆ ಬೆಲೆ ಸಿಕ್ಕದೇ ಹೋದರೂ ಫಲಿತಾಂಶದಲ್ಲಿ ಒಳ್ಳೆಯದೇ ಆಗುತ್ತದೆ. ದುಷ್ಟರು ಶಿಷ್ಟರಾಗುವುದು ಶಿಷ್ಟರ ಶಿಷ್ಟಾಚಾರದಿಂದ ಎಂಬುದು ಅನೇಕ ದಾರ್ಶನಿಕರ ಉದಾಹರಣೆಯಿಂದ ಕಾಣ ಬಹುದು ಎಂದರು.
ಬ್ರಹ್ಮಕುಮಾರೀ ಈಶ್ವರೀಯ ವಿದ್ಯಾಲಯದ ಸಂಚಾಲಕಿ ಬಿ.ಕೆ. ಸಾವಿತ್ರಿ ಮಾತನಾಡಿ, ಇವನಾರು ಎಂದು ಕೇಳುವ ಬದಲು, ಅಕ್ಕಮಹಾದೇವಿ ಅವರ ವಚನದಂತೆ “ಇವ ನಮ್ಮವ’ ಎಂಬ ಭಾತೃತ್ವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಸಂಯೋಜಕ ಬ್ರಹ್ಮಕುಮಾರ್ ಗಣಪತಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಶಿವರಾತ್ರಿ ಮಾನವನಲ್ಲಿರುವ ವಿಕಾರಗಳನ್ನು ಮುಕ್ತಗೊಳಿಸಿ ಒಳಿತನ್ನು ನೀಡಲಿ ಎಂದರು.