Advertisement

ಪಳ್ಳಿ ಶ್ರೀ ಉಮಾಮಹೇಶ್ವರ- ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ

06:25 PM Mar 24, 2023 | Team Udayavani |

ಅಲ್ಲಿರುವುದು ಕೃಷಿಯಾಧಾರಿತ ಭೂಮಿ, ಅದು ದೇವ ಭೂಮಿ, ಹಸಿರು ಉಡುಗೆ ತೊಟ್ಟು ನಿಂತಿರುವ ಭೂಮಾತೆಯ ಗರ್ಭದಲ್ಲಿ ಅದೆಷ್ಟೋ ಕಾಲವಿದ್ದ ಶ್ರೀ ಉಮಾಮಹೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನಗಳು ದೈವ ಪ್ರೇರಣೆಯಂತೆ ಸುಮಾರು 25 ವರ್ಷಗಳ ಹಿಂದೆ ಜೀರ್ಣೋದ್ಧಾರಗೊಂಡು ಇಂದು ಸಾವಿರಾರು ಭಕ್ತರನ್ನು ತನ್ನೆಡೆಗೆ ಸೆಳೆಯುತ್ತಿರುವುದರ ಹಿನ್ನೆಲೆಯೂ ರೋಚಕವಾಗಿದೆ. ಹೌದು ಭಕ್ತರೇ ನಾವು ನಿಮಗೆ ಹೇಳಲು ಹೊರಟಿರುವುದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮದ ಅಡಪಾಡಿ ಕೋಡಿ ಎಂಬಲ್ಲಿನ ಗ್ರಾಮೀಣ ಪ್ರಕೃತಿಯ ಮಡಿಲಲ್ಲಿರುವ ದೇವಸ್ಥಾನದ ಬಗ್ಗೆ ಶ್ರೀ ಉಮಾಮಹೇಶ್ವರ ದುರ್ಗಾಪರಮೇಶ್ವರಿ ಪ್ರಧಾನ ದೇವರುಗಳ ಜೊತೆಗೆ ಸುಮಾರು 36 ಪರಿವಾರ ಶಕ್ತಿಗಳನ್ನು ಹೊಂದಿರುವ ಈ ಕ್ಷೇತ್ರ ಇದೀಗ ಮತ್ತೊಮ್ಮೆ ಭಗವದ್ಭಕ್ತರ ಗಮನವನ್ನು ಸೆಳೆಯುತ್ತಿದೆ.

Advertisement

ಇಲ್ಲಿಯ ವೈಶಿಷ್ಟ್ಯವೇನೆಂದರೆ ಎಲ್ಲಾ ವರ್ಗದ ಭಕ್ತರು ಇಲ್ಲಿ ವಿಶೇಷ ಹರಕೆ ಹೊತ್ತು ತಮ್ಮ ಮನದ ಕೋರಿಕೆಗಳನ್ನು ಈಡೇರಿಸಿಕೊಂಡು ನೆಮ್ಮದಿಯಿಂದ ಬಾಳುವುದು ಹಾಗೂ ಈ ಕ್ಷೇತ್ರದಲ್ಲಿ ವಿಶ್ವಾಸವನ್ನಿಟ್ಟುಕೊಂಡು ಪ್ರತಿ ವಿಶೇಷ ಆಚರಣೆಗಳಲ್ಲಿ ಪಾಲ್ಗೊಳ್ಳುತ್ತಾ ಬಂದಿರುವುದು. ದೇವಸ್ಥಾನದಲ್ಲಿ ಪ್ರತಿ ವರ್ಷವೂ ನವರಾತ್ರಿಯ ಹತ್ತು ದಿನಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ಚಂಡಿಕಾ ಹವನಗಳು ಜರುಗುತ್ತದೆ. ಈ ಕಾಲದಲ್ಲಿ ಹರಕೆ ಪೂಜೆಗಳೇ ಜಾಸ್ತಿಯಾಗಿರುತ್ತದೆ. ಭಾದ್ರಪದ ಗಣೇಶೋತ್ಸವವು ವಿಜೃಂಭಣೆಯಿಂದ ಸಾಗುತ್ತದೆ. ವಿಶೇಷವಾಗಿ ಶಿವರಾತ್ರಿಯ ಪರ್ವಕಾಲದಲ್ಲಿ ಶ್ರೀ ಕ್ಷೇತ್ರದಲ್ಲಿ ಮೂರು ದಿನಗಳ ಉತ್ಸವ ಹಾಗೂ ಪರಿವಾರ ಧರ್ಮದೈವಗಳಿಗೆ ಧರ್ಮ ನೇಮೋತ್ಸವವು ವಿಜೃಂಭಣೆಯಿಂದ ಭಕ್ತರ ಪಾಲ್ಗೊಳ್ಳುವಿಕೆಯಿಂದ ನಡೆಯುತ್ತದೆ.

ಅಂದಾಜು 500ಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ ಅಡಪ್ಪ ಎಂಬ ತೌಳವ ಜೈನ ಅರಸನ ಆಳ್ವಿಕೆಯ ಕಾಲದ ನಂತರ ಕಾರಣಾಂತರಗಳಿಂದ ಭೂಗರ್ಭದಲ್ಲಿ ಅಡಗಿ ಹೋಗಿದ್ದ ತುಳುನಾಡಿನಲ್ಲಿ ವೈಶಿಷ್ಟ್ಯವಾಗಿ ಆರಾಧನೆಗೊಂಡು ಬಂದಿರುವ ಆಲಡೆ, ದೈವ ಪ್ರೇರಣೆಯಂತೆ ಆಲಡೆಯನ್ನು ಪುನಶ್ಚೇತನಗೊಳಿಸಿ ನೂತನ ಆಲಡೆ (ದೇವಸ್ಥಾನ) ನಿರ್ಮಾಣಕ್ಕೆ ನಿಶ್ಚಯಿಸಿ ಇದೀಗ ಶ್ರೀ ಉಮಾಮಹೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನದ ವಾಯುವ್ಯ ಭಾಗದಲ್ಲಿರುವ ಪಿಂಗಾರ ಪಾಡಿಯಲ್ಲಿ ನೂತನ ಆಲಯದಲ್ಲಿ ಆಲಡೆ ಶಕ್ತಿಗಳಾದ ಶ್ರೀ ವೀರಭದ್ರ, ಬ್ರಹ್ಮ, ನಾಗ, ಕುಮಾರ, ಅಬ್ಬಗ ದಾರಗ ಮೊದಲಾದ ಸಿರಿ ಶಕ್ತಿಗಳನ್ನು ಪುನಃಪ್ರತಿಷ್ಠಾಪಿಸಿ ನೂತನ ಶಿಲಾಮಯ ಗರ್ಭಗ್ರಹ ಉತ್ಸರ್ಗ ಹಾಗೂ ಸುತ್ತು ಪೌಳಿಯನ್ನು ನಿರ್ಮಿಸಿ ಆಲಡೆಯ ಸಿರಿವಂತಿಕೆಯನ್ನು ಪುನರ್ ನಿರ್ಮಾಣಗೊಳಿಸುವ ಬಗ್ಗೆ ಶ್ರೀ ದೇವರು ನಡೆಸಿಕೊಂಡು ಬಂದಿರುತ್ತಾರೆ.

ದೇವಸ್ಥಾನ ಎಂದರೆ ಸಾತ್ವಿಕ ಕಂಪನವಿರುವ ಸ್ಥಳ. ಯಾವುದೇ ಒಂದು ದೇವಸ್ಥಾನ ಪ್ರತಿಷ್ಠಾಪನೆ ಆಗಬೇಕಾದರೆ ಅಲ್ಲಿ ಸಾತ್ವಿಕ ಶಕ್ತಿಯ ವೃದ್ಧಿಗಾಗಿ ನಿರಂತರವಾಗಿ ಲೋಕೋದ್ಧಾರ ಯಾಗಗಳು ನಡೆದಿರಬೇಕು. ಅದರಂತೆ ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಹಾಗೂ ಸಹಸ್ರ ಚಂಡಿಕಾ ಮಹಾಯಾಗವು ಮಾರ್ಚ್ 22 ಬುಧವಾರದಿಂದ ಆರಂಭಗೊಂಡಿದ್ದು ಮಾರ್ಚ್ 28 ಮಂಗಳವಾರದವರೆಗೆ ನಡೆಯಲಿರುವುದು.

ಭಗವದ್ಭಕ್ತರು ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ದೇವಳದ ಧರ್ಮದರ್ಶಿಗಳು, ಅರ್ಚಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next