Advertisement

ಕಾಮಗಾರಿ ಪೂರ್ಣಗೊಂಡರೂ ಕಾರ್ಯಾರಂಭ ಇಲ್ಲ! ಬ್ರಹ್ಮರಕೂಟ್ಲು ಟೋಲ್‌ಫ್ಲಾಝಾದಲ್ಲಿ ಮೂರನೇ ಬೂತ್‌

01:27 AM Jun 01, 2022 | Team Udayavani |

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ. ರೋಡು ಸಮೀಪದ ಬ್ರಹ್ಮರಕೂಟ್ಲು ಟೋಲ್‌ಫ್ಲಾಝಾದಲ್ಲಿ ಹೆದ್ದಾರಿಯ ಎರಡೂ ಬದಿ ಶುಲ್ಕ ಸಂಗ್ರಹದ ತಲಾ ಎರಡೆರಡು ಬೂತ್‌ಗಳಿವೆ. ಹಲವು ವರ್ಷಗಳ ಬೇಡಿಕೆಯ ಬಳಿಕ 3ನೇ ಟೋಲ್‌ ಬೂತ್‌ನ ಕಾಮಗಾರಿ ಪೂರ್ಣಗೊಂಡಿದ್ದರೂ ಅದರ ಕಾರ್ಯಾಚರಣೆ ಇನ್ನೂ ಆರಂಭಗೊಂಡಿಲ್ಲ. ರಾ.ಹೆ. ಪ್ರಾಧಿಕಾರ (ಎನ್‌ಎಚ್‌ಎಐ)ದ ಬಳಿ ಕೇಳಿದಾಗಲೂ ಸದ್ಯ ಕಾರ್ಯಾಚರಣೆ ಆರಂಭಕ್ಕೆ ಪೂರಕ ಉತ್ತರ ಲಭಿಸಿಲ್ಲ.

Advertisement

ಹಲವು ವರ್ಷಗಳ ಹಿಂದೆ ಬ್ರಹ್ಮರಕೂಟ್ಲುನಲ್ಲಿ ಟೋಲ್‌ಫ್ಲಾಝಾ ಆರಂಭಗೊಂಡ ಬಳಿಕ ಎರಡೇ ಬೂತ್‌ಗಳಿದ್ದವು. ವರ್ಷ ಕಳೆದಂತೆ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಸಂಖ್ಯೆ ಹೆಚ್ಚಳವಾದಾಗ ಟೋಲ್‌ಫ್ಲಾಝಾದ ಮೇಲೆ ಒತ್ತಡ ಹೆಚ್ಚಾಗುತ್ತದೆ. ಹೀಗಾಗಿ ಮೂರನೇ ಬೂತ್‌ ಸ್ಥಾಪನೆಗೆ ಎನ್‌ಎಚ್‌ಎಐ ಸಿದ್ಧತೆ ನಡೆಸಿತ್ತು.

ಕಾಮಗಾರಿಯೂ ನಿಧಾನಗತಿ: ಹೆದ್ದಾರಿಯನ್ನು ವಿಸ್ತರಿಸಿ ಮೂರನೇ ಬೂತ್‌ ಸ್ಥಾಪಿಸಲು ಮೂರು ವರ್ಷಗಳ ಹಿಂದೆ ಕಾಮಗಾರಿ ಪ್ರಾರಂಭಗೊಂಡರೂ ಬಳಿಕ ಅರ್ಧಕ್ಕೆ ನಿಂತು ಬಳಿಕ ನಿಧಾನಗತಿಯಲ್ಲಿ ಸಾಗಿತ್ತು. ಪ್ರಾರಂಭದಲ್ಲಿ ತುಂಬೆ ಡ್ಯಾಮ್‌ಗೆ ಸಾಗಿರುವ ವಿದ್ಯುತ್‌ ಕಂಬಗಳ ಸ್ಥಳಾಂತರಕ್ಕಾಗಿ ವಿಳಂಬವಾಗುತ್ತಿದೆ ಎನ್ನಲಾಗಿತ್ತು.

ಹೀಗೆ ನಿಧಾನಗತಿಯಲ್ಲಿ ಸಾಗಿದ ಕಾಮಗಾರಿ ಕೊನೆಗೆ ಸುಮಾರು ಒಂದು ವರ್ಷದ ಹಿಂದೆ ಡಾಮರೀಕರಣ ನಡೆದು ಬೂತ್‌ ಸ್ಥಾಪನೆ, ಲೇನ್‌ ನಿರ್ಮಾಣವೂ ಪೂರ್ಣಗೊಂಡಿದೆ. ಆದರೆ ಬೂತ್‌ ಕಾರ್ಯಾಚರಣೆಗೆ ಇನ್ನೂ ಕಾಲ ಕೂಡಿಬಂದಿಲ್ಲ.

ತಪ್ಪದ ವಾಹನ ಸರತಿ
ಟೋಲ್‌ಫ್ಲಾಝಾಗಳಲ್ಲಿ ವಾಹನಗಳು ನಿಲ್ಲದೆ ಸುಲಲಿತವಾಗಿ ಸಾಗಬೇಕು ಎನ್ನುವ ನಿಟ್ಟಿನಲ್ಲಿ ಸರಕಾರ ಫಾಸ್ಟಾಗ್‌ ವ್ಯವಸ್ಥೆಯನ್ನು ಆರಂಭಿಸಿದೆ. ಆದರೆ ಬ್ರಹ್ಮರಕೂಟ್ಲು ಟೋಲ್‌ನಲ್ಲಿ ವಾಹನಗಳು ನಿಂತೇ ಸಾಗಬೇಕಿದೆ. ಫಾಸ್ಟಾಗ್‌ ಬಳಿಕ ಸ್ವಲ್ಪಮಟ್ಟಿಗೆ ಒತ್ತಡ ಕಡಿಮೆಯಾಗಿದ್ದರೂ ಬಹುತೇಕ ವಾಹನಗಳು ಹಣ ಪಾವತಿಸಿ ಸಾಗುವುದರಿಂದ ಬೆಳಗ್ಗೆ ಮತ್ತು ಸಂಜೆ, ಜತೆಗೆ ಹೆದ್ದಾರಿಯಲ್ಲಿ ವಾಹನಗಳ ಓಡಾಟ ಹೆಚ್ಚಿರುವಾಗ ಎರಡೂ ಬದಿ ಸರತಿಯ ಸಾಲು ಉಂಟಾಗುತ್ತದೆ.

Advertisement

ಮೂರನೇ ಬೂತ್‌ ಆರಂಭಗೊಂಡರೆ ವಾಹನಗಳು ಕಾಯದೆ ಮುಂದೆ ಸಾಗಲು ಅನುಕೂಲವಾಗುತ್ತದೆ. ಬೂತ್‌ ಕಾರ್ಯಾರಂಭದ ಕುರಿತು ಎನ್‌ಎಚ್‌ಎಐಯವರ ಬಳಿ ಕೇಳಿದರೆ ಸ್ಪಷ್ಟ ಉತ್ತರ ಲಭಿಸಿಲ್ಲ.

ಬ್ರಹ್ಮರಕೂಟ್ಲುನಲ್ಲಿ ಮೂರನೇ ಟೋಲ್‌ ಬೂತ್‌ ಆರಂಭದ ಕುರಿತು ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಕಾಮಗಾರಿ ಪೂರ್ಣಗೊಂಡಿದ್ದರೂ ಇನ್‌ಸ್ಟಾಲೇಶನ್‌ ಇನ್ನೂ ಆಗಿಲ್ಲ. ಮಂಗಳೂರಿನಲ್ಲಿ ಇತ್ತೀಚೆಗಷ್ಟೇ ಅಧಿಕಾರ ಸ್ವೀಕರಿಸಿದ್ದು, ಪೂರ್ಣ ಮಾಹಿತಿ ತಿಳಿದುಕೊಂಡು ಕಾರ್ಯಾರಂಭದ ಕುರಿತು ತೀರ್ಮಾನಿಸಲಾಗುವುದು.
ಎಚ್‌.ಆರ್‌. ಲಿಂಗೇಗೌಡ
ಯೋಜನಾ ನಿರ್ದೇಶಕರು, ಎನ್‌ಎಚ್‌ಎಐ, ಮಂಗಳೂರು

– ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next